ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್: ಕರ್ನಾಟಕ – ರೈಲ್ವೆಸ್ ಹಣಾಹಣಿ ಇಂದು, ನಿಕಿನ್ ಮುಂದೆ ಕಠಿಣ ಸವಾಲು

Published 1 ಫೆಬ್ರುವರಿ 2024, 23:30 IST
Last Updated 1 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಸೂರತ್: ಹದಿನೈದು ತಿಂಗಳುಗಳ ಹಿಂದಷ್ಟೇ ಕರ್ನಾಟಕ ತಂಡಕ್ಕೆ ಕಾಲಿಟ್ಟಿದ್ದ ‘ಮೈಸೂರು ಹುಡುಗ’ ನಿಕಿನ್ ಜೋಸ್ ಶುಕ್ರವಾರ ಲಾಲ್‌ಭಾಯಿ ಕ್ರೀಡಾಂಗಣದಲ್ಲಿ ಆರಂಭವಾಗುವ ರೈಲ್ವೆಸ್ ವಿರುದ್ಧದ ರಣಜಿ ಪಂದ್ಯದಲ್ಲಿ ನಾಯಕತ್ವ ವಹಿಸಲಿದ್ದಾರೆ.

ಈಚೆಗೆ ಅಗರ್ತಲಾದಿಂದ ಸೂರತ್‌ಗೆ ಪ್ರಯಾಣಿಸುವ ವಿಮಾನದಲ್ಲಿ ನಾಯಕ ಮಯಂಕ್ ಅಗರವಾಲ್ ಅವರು ನೀರೆಂದು ಭಾವಿಸಿ ರಾಸಾಯನಿಕ ದ್ರಾವಣವೊಂದನ್ನು ಕುಡಿದು ಅಸ್ವಸ್ಥರಾಗಿದ್ದರು. ಅದರಿಂದಾಗಿ ಅವರು ಅಗರ್ತಲಾದ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೆಂಗಳೂರಿಗೆ ಮರಳಿದ್ದಾರೆ. ಆದ್ದರಿಂದ ಉಪನಾಯಕರಾಗಿದ್ದ ನಿಕಿನ್ ಹೆಗಲಿಗೆ ನಾಯಕತ್ವದ ಹೊಣೆ ಬಿದ್ದಿದೆ.

ತಂಡವು ಆಡಿರುವ ಕಳೆದ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಜಯ ಸಾಧಿಸಿದೆ. ಒಂದು ಡ್ರಾ ಮತ್ತು ಇನ್ನೊಂದರಲ್ಲಿ ಸೋಲನುಭವಿಸಿದೆ. ಇದೇ ಋತುವಿನಲ್ಲಿ ಪದಾರ್ಪಣೆ ಮಾಡಿರುವ ಐವರು ಆಟಗಾರರೊಂದಿಗೆ ತನಗಿಂತಲೂ ಹಿರಿಯ ಆಟಗಾರರಾಗಿರುವ ಮನೀಷ್ ಪಾಂಡೆ ಮತ್ತು ಆರ್‌. ಸಮರ್ಥ್ ತಂಡದಲ್ಲಿದ್ದಾರೆ. ಎಲ್ಲರೊಂದಿಗೂ ಸಮನ್ವಯ ಸಾಧಿಸಿಕೊಂಡು ತಂಡವನ್ನು ಗೆಲುವಿನತ್ತ ಮುನ್ನಡೆಸುವ ಸವಾಲು 23 ವರ್ಷದ ನಿಕಿನ್ ಮುಂದಿದೆ.

13 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿರುವ ನಿಕಿನ್ ಖಾತೆಯಲ್ಲಿ 696 ರನ್‌ಗಳಿವೆ. ಇತ್ತೀಚೆಗೆ ಮೈಸೂರಿನಲ್ಲಿ ಗೋವಾ ಎದುರು ಅವರು ಶತಕ ಗಳಿಸಿದ್ದರು. ಆದರೆ ಅಗರ್ತಲಾದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. 

ಆ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಕಿಶನ್ ಬೆದರೆ ಎರಡೂ ಇನಿಂಗ್ಸ್‌ಗಳಲ್ಲಿ ಗಮನ ಸೆಳೆಯುವಂತಹ ಆಟವಾಡಿದ್ದರು. ಇದೀಗ ಮಯಂಕ್ ಅನುಪಸ್ಥಿತಿಯಲ್ಲಿ ಸಮರ್ಥ್ ಅವರೊಂದಿಗೆ ಡೇಗಾ ನಿಶ್ಚಲ್ ಅವರು ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತವಾಗಿದೆ. ಉಳಿದಂತೆ ವೇಗಿಗಳು ಉತ್ತಮ ಲಯದಲ್ಲಿದ್ದಾರೆ. ಆದರೆ ಸ್ಪಿನ್ ವಿಭಾಗದಲ್ಲಿ ಅನುಭವದ ಕೊರತೆ ಇದೆ.

ಬೌಲರ್‌ಗಳನ್ನು ಪರಿಣಾಮಕಾರಿಯಾಗಿ ದುಡಿಸಿಕೊಳ್ಳಬೇಕಾದ ಸವಾಲು ನಿಕಿನ್ ಮುಂದಿದೆ. ಏಕೆಂದರೆ ರೈಲ್ವೆಸ್ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ.

ನಾಲ್ಕು ಪಂದ್ಯಗಳಲ್ಲಿ ಆಡಿರುವ ರೈಲ್ವೆಸ್‌ ಎರಡರಲ್ಲಿ ಡ್ರಾ ಮಾಡಿಕೊಂಡಿದೆ. ಒಂದು ಸೋತಿದೆ. ಕಳೆದ ಪಂದ್ಯದಲ್ಲಿ ಗುಜರಾತ್ ವಿರುದ್ಧ ಜಯಿಸಿತ್ತು. ಅದರಲ್ಲಿ ಆಶುತೋಷ್ ಶರ್ಮಾ ಶತಕ ಹೊಡೆದಿದ್ದರು. ಯುವರಾಜ್ ಸಿಂಗ್ ಐದು ವಿಕೆಟ್ ಗಳಿಸಿದ್ದರು.  ಇದರಿಂದ ಭರ್ತಿ ಆತ್ಮವಿಶ್ವಾಸದಲ್ಲಿರುವ ತಂಡವು ಕರ್ನಾಟಕಕ್ಕೆ ಕಠಿಣ ಪೈಪೋಟಿಯೊಡ್ಡಲು ಸಿದ್ಧವಾಗಿದೆ.

ತಂಡಗಳು: ಕರ್ನಾಟಕ: ನಿಕಿನ್ ಜೋಸ್ (ನಾಯಕ) ಆರ್. ಸಮರ್ಥ್ ಮನೀಷ್ ಪಾಂಡೆ ಶರತ್ ಶ್ರೀನಿವಾಸ್ (ವಿಕೆಟ್‌ಕೀಪರ್) ಕೆ.ವಿ. ಅನೀಶ್ ವೈಶಾಖ ವಿಜಯಕುಮಾರ್ ವಿ. ಕೌಶಿಕ್ ಕೆ. ಶಶಿಕುಮಾರ್ ಸುಜಯ್ ಸತೇರಿ (ವಿಕೆಟ್‌ಕೀಪರ್) ಡಿ. ನಿಶ್ಚಲ್ ವಿದ್ವತ್ ಕಾವೇರಪ್ಪ ಎಂ. ವೆಂಕಟೇಶ್ ಕಿಶನ್ ಬೆದರೆ ಎ.ಸಿ. ರೋಹಿತ್ ಕುಮಾರ್ ಅಭಿಲಾಷ್ ಶೆಟ್ಟಿ ಹಾರ್ದಿಕ್ ರಾಜ್.

ರೈಲ್ವೆಸ್: ಪ್ರಥಮ್ ಸಿಂಗ್ (ನಾಯಕ) ಅಭಿಷೇಕ್ ಸ್ಟಾನ್ ಅಹುಜಾ (ವಿಕೆಟ್‌ಕೀಪರ್) ವಿವೇಕ್ ಸಿಂಗ್ ಅರಿಂದಮ್ ಘೋಷ್ ಮೊಹಮ್ಮದ್ ಸೈಫ್ ಕರ್ಣ ಶರ್ಮಾ ಶಿವಂ ಚೌಧರಿ ಆಶುತೋಷ್ ಶರ್ಮಾ ಹಿಮಾಂಶು ಸಂಗ್ವಾನ್ ಯುವರಾಜ್ ಸಿಂಗ್ ಆಕಾಶ್ ಪಾಂಡೆ ರಾಹುಲ್ ಶರ್ಮಾ ಕುನಾಲ್ ಯಾದವ್ ಆದರ್ಶ್ ಸಿಂಗ್ ರಾಜ್ ಚೌಧರಿ ನಿಶಾಂತ್ ಕುಶ್ವಾಹ ಸಾಹೆಬ್ ಯುವರಾಜ್.  ಪಂದ್ಯ ಆರಂಭ: ಬೆಳಿಗ್ಗೆ 9.30 (ಮಾಹಿತಿ: ಬಿಸಿಸಿಐ ಡಾಟ್ ಟಿವಿ ವೆಬ್‌ಸೈಟ್)

ಇಲ್ಲಿಯ ಪಿಚ್‌ ಸ್ಪರ್ಧಾತ್ಮಕವಾಗಿದೆ. ದಿನಗಳೆದಂತೆ ಸ್ಪಿನ್ನರ್‌ಗಳಿಗೂ ನೆರವಾಗಬಹುದು. ನಮ್ಮ ತಂಡವು ಸಮತೋಲನದಿಂದ ಕೂಡಿದೆ. ಸಮರ್ಥ್ ಮತ್ತು ನಿಶ್ವಲ್ ಇನಿಂಗ್ಸ್ ಆರಂಭಿಸುವರು.
–ಪಿ.ವಿ. ಶಶಿಕಾಂತ್ ಕರ್ನಾಟಕ ತಂಡದ ಕೋಚ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT