ಮಂಗಳವಾರ, ನವೆಂಬರ್ 24, 2020
22 °C

PV Web Exclusive | ಐಪಿಎಲ್ ಅಂಗಳದ 'ನವದುರ್ಗೆ' ನವನೀತಾ ಗೌತಮ್

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

'ಮೂರು ವರ್ಷಗಳ ಹಿಂದೆ ನಾನು ಭಾರತಕ್ಕೆ ತೆರಳಿ ಕ್ರೀಡಾ ಮಸಾಜ್ ಥೆರಪಿ ವೃತ್ತಿ ಮತ್ತು ಉನ್ನತ ವ್ಯಾಸಂಗ ಮಾಡುತ್ತೇನೆಂದು ಹೊರಟಾಗ. ಅಪ್ಪ–ಅಮ್ಮನಿಗೆ ಭಯವಿತ್ತು. ಅಲ್ಲಿ ಸಾಂಸ್ಕೃತಿಕ ತಲ್ಲಣ ಎದುರಿಸಬೇಕಾದೀತು. ಪುರುಷ ಕ್ರೀಡಾಪಟುಗಳಿಗೆ ಮಹಿಳಾ ಮಸಾಜ್ ತಜ್ಞೆಯಾಗಿ ಕಾರ್ಯನಿರ್ವಹಿಸುವುದು ಅಷ್ಟು ಸುಲಭವಾಗಲಿಕ್ಕಿಲ್ಲ ಎಂದು ಎಚ್ಚರಿಸಿದ್ದರು. ಆದರೆ ನಾನು ಇಲ್ಲಿಗೆ ಬಂದೆ. ನಿಧಾನವಾಗಿ ಎಲ್ಲ ಸವಾಲುಗಳನ್ನು ಮೀರಿ ನಿಂತು. ಒಂದು ಗೌರವಯುತ ಸಮೂಹದಲ್ಲಿದ್ದೇನೆ...'

– ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್‌ ತಂಡದ ಮಸಾಜ್ ತಜ್ಞೆಯಾಗಿ ಕಾರ್ಯನಿರ್ವಹಿಸುತ್ತಿರುವ ನವನೀತಾ ಗೌತಮ್ ಅವರ ಮನದಾಳದ ಮಾತುಗಳಿವು.

ಕೆನಡಾದಲ್ಲಿ ಜನಿಸಿದ್ದ, ಅಲ್ಲಿಯೇ ವಿದ್ಯಾಭ್ಯಾಸ ಮಾಡಿದ ನವನೀತಾ ಇದೇ ಮೊದಲ ಸಲ ಐಪಿಎಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ಧಾರೆ. ಆದರೆ ಅವರು ಮೂರು ವರ್ಷಗಳಿಂದ ಭಾರತದ ಬೇರೆ ಬೇರೆ ನಗರಗಳಲ್ಲಿ ಕೆಲಸ ಮಾಡಿರುವ ಅನುಭವಿ. ಐಪಿಎಲ್ ಇತಿಹಾಸದಲ್ಲಿ ತಂಡವೊಂದರ ನೆರವು ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ಮೂರನೇಯ ಮತ್ತು ಭಾರತೀಯ ಮೂಲದ ಮೊದಲ ಮಹಿಳೆಯೂ ಇವರಾಗಿದ್ದಾರೆ. 

ಡೆಕ್ಕನ್ ಚಾರ್ಜರ್ಸ್‌ ತಂಡದಲ್ಲಿ ಆ್ಯಷ್ಲೀ ಜಾಯ್ಸ್‌ (2008) ಮತ್ತು ಪೆಟ್ರಿಸಿಯಾ ಜೆಂಕಿನ್ಸ್‌ (2009) ಮಸಾಜ್ ತಜ್ಞೆಯಾಗಿ ಕಾರ್ಯನಿರ್ವಹಿಸಿದ್ದರು.  ಇದೀಗ ನವನೀತಾ ಆರ್‌ಸಿಬಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಕ್ರಿಕೆಟ್‌‍ ಪ್ರೀತಿ, ವೃತ್ತಿಜೀವನದ ಅನುಭವವನ್ನು ’ಪ್ರಜಾವಾಣಿ‘ಯೊಂದಿಗೆ ಹಂಚಿಕೊಂಡಿದ್ದಾರೆ.

* ಭಾರತಕ್ಕೆ ಬಂದ ಮೇಲೆ ಇಲ್ಲಿಯ ಸಾಂಸ್ಕೃತಿಕ ಭಿನ್ನಾಭಿಪ್ರಾಯಗಳ ಸವಾಲನ್ನು ಯಾವ ರೀತಿ ನಿಭಾಯಿಸಿದಿರಿ? ಎದುರಾದ ಸವಾಲುಗಳೇನು?

– ಭಾರತ ಒಂದು ಅದ್ಭುತವಾದ ದೇಶ. ಇಲ್ಲಿಯೇ ನನ್ನ ವೃತ್ತಿಯಲ್ಲಿ ಯಶಸ್ಸು ಸಾಧಿಸುವ ಗಟ್ಟಿ ನಿರ್ಧಾರದೊಂದಿಗೆ  ಇಲ್ಲಿ ಬಂದಿದ್ದೆ. ಆದ್ದರಿಂದಲೇ ಕೆಲವು ವಿಷಯಗಳಲ್ಲಿ ರಾಜಿ ಮಾಡಿಕೊಂಡೆ. ಆದರೆ, ನನ್ನ ವೈಯಕ್ತಿಕ ಶಿಸ್ತು ಮತ್ತು ನಿಯಮಗಳಿಗೆ ಬದ್ಧಳಾಗಿದ್ದೆ. ಆದ್ದರಿಂದ ಇಲ್ಲಿ ಹೊಂದಿಕೊಳ್ಳಲು ಸ್ವಲ್ಪ ಹೆಚ್ಚು ಸಮಯ ಬೇಕಾಯಿತು. ಆದರೆ, ಈಗ ಎಲ್ಲವೂ ಸರಿಯಾಗಿದೆ. ಸಹಭಾಳ್ವೆ. ಸಹೋದರತ್ವದ ವಾತಾವರಣದಲ್ಲಿದ್ದೇನೆ. ಸುಮಾರು 20 ಮಂದಿ ಸಹೋದರರು ನನ್ನ ಸುತ್ತಮುತ್ತಲಿದ್ದಾರೆ ಎಂಬ ಭಾವ ಕಾರ್ಯಕ್ಷೇತ್ರದಲ್ಲಿದೆ. ಆರೋಗ್ಯ, ಕೌಟುಂಬಿಕ ಮೌಲ್ಯಗಳು, ಆಹಾರ ವೈವಿಧ್ಯತೆಗಳೆಲ್ಲ ಬಹಳ ಪ್ರಿಯವಾಗಿವೆ. ಈ ದೇಶವನ್ನು ಬಿಟ್ಟು ಹೋಗುವುದಿಲ್ಲ ಎಂಬ ನಿರ್ಧಾರ ಮನದಲ್ಲಿ ಗೂಡುಕಟ್ಟುತ್ತಿದೆ.

ಇನ್ನು ಲಿಂಗ ಸಮಾನತೆಯಂತಹ ವಿಷಯಗಳಲ್ಲಿ ಕೆಲವು ಸವಾಲುಗಳಿದ್ದವು. ಪುರುಷರ ತಂಡದಲ್ಲಿ ಕಾರ್ಯನಿರ್ವಹಿಸುವಾಗ ಮಹಿಳೆಯೊಂದಿಗೆ ಹೊಂದಿಕೊಳ್ಳಲು ಅವರಿಗೇ ಹೆಚ್ಚು ಮುಜುಗರ  ಇರುತ್ತದೆ. ಆದರೆ ವೃತ್ತಿಪರ ಮೌಲ್ಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸ್ನೇಹಯುತ ಮತ್ತು ಗೌರವಯುತ ಸಂಬಂಧ ಬೆಳೆಯುತ್ತದೆ. ಆಗ ವಾತಾವರಣವು ಎಲ್ಲರಿಗೂ ಸಹನೀಯವಾಗುತ್ತದೆ. ಇದರಿಂದ ಕೆಲಸದಲ್ಲಿ ಅಚ್ಚುಕಟ್ಟುತನ ಮತ್ತು ಯಶಸ್ಸು ಖಚಿತ.

* ಕೆನಡಾದಲ್ಲಿ ಕ್ರಿಕೆಟ್‌ ಚಟುವಟಿಕೆಗಳು ಹೆಚ್ಚು ನಡೆಯುವುದಿಲ್ಲ. ಆದರೂ ನಿಮಗೆ ಕ್ರಿಕೆಟ್‌ನಲ್ಲಿ ಆಸಕ್ತಿ ಮೂಡಿದ್ದು ಹೇಗೆ?

– ನನ್ನ ತಂದೆ ಬಹಳ ದೊಡ್ಡ ಕ್ರಿಕೆಟ್ ಅಭಿಮಾನಿ. ತಮ್ಮ ವಿದ್ಯಾರ್ಥಿದೆಸೆಯಲ್ಲಿ ಆಡಿದ್ದವರು. 1989ರಲ್ಲಿ ವೃತ್ತಿಗಾಗಿ ಕೆನಡಾಕ್ಕೆ ತಮ್ಮ ಕುಟುಂಬ ತೆರಳಬೇಕಾಯಿತು. ಅಪ್ಪ ಅಲ್ಲಿ ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಟಿ.ವಿ.ಯಲ್ಲಿ ಕ್ರಿಕೆಟ್‌ ಪಂದ್ಯಗಳನ್ನು ವೀಕ್ಷಿಸುತ್ತಿದ್ದರು. ನಾನೂ ಅಪ್ಪನೊಂದಿಗೆ ಪಂದ್ಯಗಳನ್ನು ನೋಡುತ್ತಿದ್ದೆ. ಬಹುಬೇಗ ಕ್ರಿಕೆಟ್ ನನಗೆ ಪ್ರಿಯವಾಯಿತು. ಬಾಲ್ಯದಲ್ಲಿಯೇ ಕ್ರಿಕೆಟ್ ಪ್ರೀತಿ ಬೆಳೆಯಲು ಅಪ್ಪನೇ ಕಾರಣವಾದರು. ಪ್ರತಿಯೊಬ್ಬ ಆಟಗಾರನ ಬ್ಯಾಟಿಂಗ್, ಬೌಲಿಂಗ್ ಶೈಲಿಗಳ ವೈವಿಧ್ಯತೆ, ಪ್ರತಿಯೊಂದು ಪಂದ್ಯದಲ್ಲಿ ಹೊರಹೊಮ್ಮುವ ವಿಭಿನ್ನ ಫಲಿತಾಂಶ ಇತ್ಯಾದಿಗಳು ಅಪಾರವಾಗಿ ಆಕರ್ಷಿಸಿದವು.

* ಮಸಾಜ್ (ಅಂಗಮರ್ದನ) ಚಿಕಿತ್ಸಾ ವೃತ್ತಿಯನ್ನು  ಆಯ್ಕೆ ಮಾಡಿಕೊಂಡಿದ್ದು ಏಕೆ?

–ನನಗೆ ಮೊದಲಿನಿಂದಲೂ ಮಾನವನ ಮಾಂಸಖಂಡ, ಸ್ನಾಯುಗಳ ರಚನೆ, ಕಾರ್ಯಶೈಲಿಗಳ ಬಗ್ಗೆ ಬಹಳಷ್ಟು ಕುತೂಹಲವಿತ್ತು. ಕ್ರೀಡಾಪಟುಗಳಲ್ಲಿ ಈ ಅಂಗಗಳು ಯಾವ ರೀತಿ ಕಾರ್ಯನಿರ್ವಹಿಸುತ್ತವೆ ಎಂಬುದು ಬಹಳ ಅಸಕ್ತಿಕರ ವಿಷಯ. ಬದಲಾಗುತ್ತಿರುವ ಆಧುನಿಕ ಕ್ರೀಡಾ ಜಗತ್ತಿನಲ್ಲಿ ಬರೀ ಆಟೋಟ, ವ್ಯಾಯಾಮದಿಂದ ಮಾತ್ರ ಸಾಮರ್ಥ್ಯವೃದ್ಧಿಯಾಗುವುದಿಲ್ಲ. ಕ್ರೀಡಾಪಟುವಿನ ಸಮಗ್ರ  ಅಭಿವೃದ್ಧಿಗೆ ಮಸಾಜ್ ಥೆರಪಿ ಮತ್ತು ಮನೋವೈದ್ಯಕೀಯ ಚಿಕಿತ್ಸೆಯೂ ಅಗತ್ಯವಾಗಿದೆ. ಕೆನಡಾದಲ್ಲಿ ಅಥ್ಲೆಟಿಕ್ ಮಸಾಜ್ ಥೆರಪಿಯಲ್ಲಿ ವಿದ್ಯಾಭ್ಯಾಸ ಮಾಡಿ ಪ್ರಮಾಣಪತ್ರ ಗಳಿಸಿದ್ದೇನೆ. ಕಿನ್ಸಿಯಾಲಜಿ (ಅಂಗಚಲನಾ ವಿಜ್ಞಾನ) ಯಲ್ಲಿ ಪದವಿ ಗಳಿಸಿದ್ದೇನೆ.

* ಆರ್‌ಸಿಬಿಯಲ್ಲಿ ನಿಮ್ಮ ವೃತ್ತಿಜೀವನದ ಅನುಭವ ಹೇಗಿದೆ?

– ಪ್ರಾಮಾಣಿಕವಾಗಿ ಹೇಳುತ್ತೇನೆ. ಇಲ್ಲಿ ನಾನು ಉತ್ತಮ ಕೇಳುಗಳಾಗಿದ್ದೇನೆ. ಆಟಗಾರರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಅವರ ಸ್ನಾಯುಗಳ ನೋವು ಮತ್ತು ಸ್ಥಿಮಿತತೆ ಕುರಿತು ಚಿಕಿತ್ಸೆ ನೀಡುತ್ತೇನೆ. ಮುಖ್ಯ ಫಿಸಿಯೊ ಇವಾನ್, ಸಹಾಯಕ ಫಿಸಿಯೊ ಸಬ್ಯಾ ಮತ್ತು ಸ್ಟ್ರೆಂಥ್–ಕಂಡಿಷನಿಂಗ್ ಕೋಚ್ ಬಸು ಅವರೊಂದಿಗೆ ಮಾತನಾಡಿ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತೇನೆ. ಪ್ರತಿಯೊಬ್ಬ ಆಟಗಾರನ ಮಾಂಸಖಂಡಗಳ ಸಾಮರ್ಥ್ಯ, ಇತಿಮಿತಿಗಳನ್ನು ತಿಳಿದು ನೆರವಾಗುತ್ತೇನೆ. ಅದರಿಂದಾಗಿ ಅವರ ಆಟದಲ್ಲಿ ಸುಧಾರಣೆಯಾಗುತ್ತಿದೆ. ಪಂದ್ಯಕ್ಕೂ ಮುನ್ನ ಮತ್ತು ನಂತರದ ದೈಹಿಕ ಸ್ಥಿತಿಯಲ್ಲಿ ವ್ಯತ್ಯಾಸವಿರುತ್ತದೆ. ಅದನ್ನು ಅರಿತು ಚಿಕಿತ್ಸೆ ನೀಡಲಾಗುತ್ತದೆ. ಆರ್‌ಸಿಬಿಯಲ್ಲಿರುವ ನೆರವು ಸಿಬ್ಬಂದಿ ಅತ್ಯಂತ ಪರಿಣತರು. ಅವರಿಂದ ಬಹಳಷ್ಟು  ಉಪಯುಕ್ತ ವಿಷಯಗಳನ್ನು ಕಲಿಯುತ್ತಿದ್ದೇನೆ. ವಿಶ್ವಶ್ರೇಷ್ಠ ಕ್ರಿಕೆಟಿಗರಾದ ವಿರಾಟ್, ಎಬಿ ಅಂತಹ ಆಟಗಾರರು ತಂಡದಲ್ಲಿದ್ದಾರೆ. ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸುತ್ತ, ಎಲ್ಲರ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವುದು ನಿಜಕ್ಕೂ ದೊಡ್ಡ ಕೆಲಸ.

ಈ ಹಿಂದೆ ಟೊರಾಂಟೊ ಟ್ವೆಂಟಿ20 ಟೂರ್ನಿಯಲ್ಲಿ ಕಾರ್ಯನಿರ್ವಹಿಸಿದ್ದೆ. ಅಲ್ಲಿ ಯುವರಾಜ್ ಸಿಂಗ್, ಕೋಮಲ್ ಅಗರವಾಲ್ ಅವರ ಜೊತೆಗೆ ಇದ್ದೆ.  ಆ ಅನುಭವವು ಇಲ್ಲಿ ನೆರವಾಯಿತು.

* ನಿಮ್ಮ ವ್ಯಕ್ತಿತ್ವ ರೂಪಿಸುವುದರಲ್ಲಿ ತಂದೆಯ ಪಾತ್ರದ ಬಗ್ಗೆ ಹೇಳಿ.

ನನಗೆ ಮೊದಲಿನಿಂದಲೂ ಅಪ್ಪನೇ ಗುರು. ಜೀವನದ ಪ್ರತಿಯೊಂದು ಹಂತದಲ್ಲಿಯೂ ಬೆಂಬಲವಾಗಿ ನಿಂತಿದ್ದಾರೆ. ನಿನಗೆ ನೀನು ಪ್ರಾಮಾಣಿಕವಾಗಿರು. ಸತ್ಯದ ಪರ ಎಂದು ಹೇಳುತ್ತಾರೆ. ಅವರಿಗೆ ನನ್ನ ಮೇಲೆ ಅಪಾರ ವಿಶ್ವಾಸವಿದೆ. ಅದನ್ನು ನಾನೆಂದೂ ಹುಸಿಗೊಳಿಸಿಲ್ಲ. ಕುಟುಂಬದಿಂದ ದೂರ ಇದ್ದು ಕಾರ್ಯನಿರ್ವಹಿಸುವುದು ಕೂಡ ಕಠಿಣ ಸವಾಲು. ಅದನ್ನು ನಿಭಾಯಿಸಲು ನನ್ನ ನಚ್ಚಿನ ಹವ್ಯಾಸಗಳಾದ ಬ್ಯಾಸ್ಕೆಟ್‌ಬಾಲ್, ಓಟ ಮತ್ತು ಪುಸ್ತಕಗಳ ಓದು ಸಹಾಯಕವಾಗುತ್ತಿವೆ.


ನವನೀತಾ ಗೌತಮ್

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು