ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ದಾಖಲೆಗಳ ಸುರಿಮಳೆ: ಕನ್ನಡಿಗನದ್ದೇ ಮೊದಲ ದಾಖಲೆ

Last Updated 22 ಅಕ್ಟೋಬರ್ 2019, 8:17 IST
ಅಕ್ಷರ ಗಾತ್ರ

ಟೆಸ್ಟ್‌ ಸರಣಿ ಆಡಲು ಭಾರತಕ್ಕೆ ಬಂದಿದ್ದ ದಕ್ಷಿಣ ಆಫ್ರಿಕಾ ಹೀನಾಯವಾಗಿ ಸೋತು ಶರಣಾಗಿದೆ. 1935ರ ನಂತರ ಅತಿ ದೊಡ್ಡ ಸೋಲುಂಡಿರುವ ಹರಿಣ ಪಡೆ ಈ ಸರಣಿಯಲ್ಲಿ ಭಾರತಕ್ಕೆ ಹಲವು ದಾಖಲೆಗಳನ್ನು ಬರೆಯಲು ಅವಕಾಶ ಕಲ್ಪಿಸಿಕೊಟ್ಟಿತು. ವಿಶೇಷವೆಂದರೆ ಈ ದಾಖಲೆಗಳ ಸರಣಿ ಆರಂಭವಾಗಿದ್ದು ಕನ್ನಡಿಗ ಮಯಾಂಕ್‌ ಅಗರವಾಲ್ ಅವರ ದಾಖಲೆಯಿಂದ!

ಬೆಂಗಳೂರು ಹುಡುಗನ ದ್ವಿಶತಕ

‘ಬಂದರು ನಗರಿ’ ವಿಶಾಖಪಟ್ಟಣದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಬೆಂಗಳೂರು ಹುಡುಗ ಮಯಂಕ್ ಅಗರವಾಲ್ ಸಂತಸದ ಅಲೆಗಳನ್ನು ಎಬ್ಬಿಸಿದರು. ಟೆಸ್ಟ್‌ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿದರು. ಆರಂಭಿಕ ಆಟಗಾರನಾಗಿ ಸಫಲತೆಯ ದೋಣಿಯೇರಿದ ರೋಹಿತ್ ಶರ್ಮಾ ಅವರೊಂದಿಗೆ 317 ರನ್‌ಗಳ ಮೊದಲ ವಿಕೆಟ್ ಜೊತೆಯಾಟದ ದಾಖಲೆಯನ್ನೂ ಬರೆದರು. ಪುಣೆಯಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿಯೂ ಆರಂಭಿಕರಾಗಿ ಕಣಕ್ಕಿಳಿದ ಅವರು ಮತ್ತೆ ಶತಕ ಸಿಡಿಸಿದರು.

ಜಡೇಜ 200 ವಿಕೆಟ್‌

ದಕ್ಷಿಣ ಆಫ್ರಿಕಾದ ಮೊದಲ ಟೆಸ್ಟ್‌ನಲ್ಲಿ ಎಡಗೈ ಸ್ಪಿನ್ನರ್‌ ರವೀಂದ್ರ ಜಡೇಜ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 200 ವಿಕೆಟ್‌ ಪಡೆದ ಭಾರತದ ಎರಡನೇ ಬೌಲರ್‌ ಎಂಬ ಹಿರಿಮೆಗೆ ಪಾತ್ರರಾದರು. ಡೀನ್‌ ಎಲ್ಗರ್‌ ವಿಕೆಟ್‌ ಉರುಳಿಸುವ ಮೂಲಕ ಅವರು ಈ ಮೈಲುಗಲ್ಲು ಸ್ಥಾಪಿಸಿದರು. ಅಶ್ವಿನ್‌, ಈ ಸಾಧನೆ ಮಾಡಿದ ಮೊದಲಿಗ.

ರೋಹಿತ್‌ ಶರ್ಮಾ ಎರಡು ಇನ್ನಿಂಗ್ಸ್‌ ಶತಕ

ರೋಹಿತ್ ಶರ್ಮಾ ಅವರು ಆರಂಭಿಕನಾಗಿ ಕಣಕ್ಕಿಳಿದ ಮೊದಲ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ದಾಖಲಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಏಕದಿನ, ಟೆಸ್ಟ್‌ನಲ್ಲಿ ದ್ವಿಶತಕ

ಇದರೊಂದಿಗೆ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ ಮಾದರಿಗಳಲ್ಲಿ ದ್ವಿಶತಕ ದಾಖಲಿಸಿದ ವಿಶ್ವದ ನಾಲ್ಕನೇ ಮತ್ತು ಭಾರತದ ಮೂರನೇ ಬ್ಯಾಟ್ಸ್‌ಮನ್‌ ಆದರು. ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ವೆಸ್ಟ್ ಇಂಡೀಸ್‌ನ ಕ್ರಿಸ್‌ ಗೇಲ್ ಅವರ ನಂತರ ರೋಹಿತ್ ಈ ಸಾಧನೆ ಮಾಡಿದ್ದಾರೆ.

ಮೂವರ ದ್ವಿಶತಕ

ಈ ಸರಣಿಯ ಮೊದಲ ಟೆಸ್ಟ್‌ನಲ್ಲಿ ಮಯಂಕ್ ಅಗರವಾಲ್ ದ್ವಿಶತಕ ಸಿಡಿಸಿದ್ದರು. ಎರಡನೇ ಪಂದ್ಯದಲ್ಲಿವಿರಾಟ್ ಕೊಹ್ಲಿ ದ್ವಿಶತಕದ ಸಾಧನೆ ಮಾಡಿದ್ದರು. ಮೂರನೇ ಪಂದ್ಯದಲ್ಲಿ ರೋಹಿತ್‌ ಶರ್ಮ ದ್ವಿಶತಕ ಸಿಡಿಸಿದರು. ಇದೇ ಸಂದರ್ಭದಲ್ಲಿ ಸರಣಿಯಲ್ಲಿ ರೋಹಿತ್‌ ಒಟ್ಟು 500 ಕ್ಕಿಂತ ಹೆಚ್ಚು ರನ್‌ಗಳನ್ನು ಗಳಿಸಿದರು. ಈ ಸಾಧನೆ ಮಾಡಿದ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳ ಪಟ್ಟಿ ಸೇರಿದರು.

ಟೆಸ್ಟ್‌ ಸರಣಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ರೋಹಿತ್‌

ಟೆಸ್ಟ್‌ ಸರಣಿಯಲ್ಲಿ ರೋಹಿತ್‌ ಶರ್ಮಾ ಅವರು ಅತಿ ಹೆಚ್ಚು ಸಿಕ್ಸರ್‌ ಸಿಡಿಸಿ ದಾಖಲೆ ಬರೆದರು. ಸರಣಿಯೊಂದರಲ್ಲಿ 15 ಸಿಕ್ಸರ್‌ ಸಿಡಿಸಿದ್ದ ಬೆನ್‌ ಸ್ಟೋಕ್ಸ್‌ ಅವರು ದಾಖಲೆಯನ್ನು ತಮ್ಮ ಹೆಸರಿನಲ್ಲಿಟ್ಟುಕೊಂಡಿದ್ದರು. ಆದರೆ, ಸರಣಿಯ ಮೂರನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನ 43ನೇ ಓವರ್‌ನಲ್ಲಿ ಸರಣಿಯ 16 ಸಿಕ್ಸ್‌ ಭಾರಿಸಿದ ರೋಹಿತ್‌ ಸ್ಟೋಕ್ಸ್‌ ಅವರ ದಾಖಲೆ ಮುರಿದರು.

ವೇಗದ ಬೌಲರ್‌ನ ಶರವೇಗದ ರನ್‌ಗಳಿಕೆ

ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಉಮೇಶ್ ಯಾದವ್ ಕೇವಲ 10 ಎಸೆತಗಳಲ್ಲಿ 31 ರನ್‌ ಹೊಡೆದು ದಾಖಲೆ ಬರೆದರು. ಐದು ಸಿಕ್ಸರ್‌ಗಳನ್ನು ಎತ್ತಿದ ಅವರು 310ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದ್ದು ದಾಖಲೆಯಾಯಿತು. ವೇಗದ ಬೌಲರ್‌ ಶರವೇಗದ 30 ರನ್‌ ಪೇರಿಸಿದ ಸಾಧನೆ ಮಾಡಿದರು.

ಮುತ್ತಯ್ಯ ದಾಖಲೆ ಸರಿಗಟ್ಟಿದ ಅಶ್ವಿನ್

ಭಾರತದ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 350 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದರು. ಇದರೊಂದಿಗೆ ಶ್ರೀಲಂಕಾದ ದಿಗ್ಗಜ ಮುತ್ತಯ್ಯ ಮುರಳೀಧರನ್ ಅವರ ದಾಖಲೆಯನ್ನು ಸರಿಗಟ್ಟಿದರು. ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ತಿಯಾನಸ್ ಬ್ರಯನ್ ವಿಕೆಟ್ ಗಳಿಸಿದ ಅವರು ಈ ಸಾಧನೆ ಮಾಡಿದರು. ಮೊದಲ ಇನಿಂಗ್ಸ್‌ನಲ್ಲಿ ಅಶ್ವಿನ್ ಐದು ವಿಕೆಟ್ ಗಳಿಸಿದ್ದರು. ಒಟ್ಟು 66 ಟೆಸ್ಟ್‌ಗಳಲ್ಲಿ ಅವರು ಈ ದಾಖಲೆ ಬರೆದರು.

ಬ್ರಾಡ್ಮನ್–ಸಚಿನ್ ದಾಖಲೆ ದೂಳೀಪಟ ಮಾಡಿದ ವಿರಾಟ್‌ ಕೊಹ್ಲಿ

ಎರಡನೇ ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಏಳನೇ ದ್ವಿಶತಕ ದಾಖಲಿಸಿದರು. ಈ ಮೂಲಕ ಕ್ರಿಕೆಟ್ ದಂತಕಥೆ, ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ ಮತ್ತು ಸಚಿನ್ ತೆಂಡೂಲ್ಕರ್ ದಾಖಲೆಗಳನ್ನು ವಿರಾಟ್ ಮುರಿದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಏಳು ಸಾವಿರ ರನ್ ಪೇರಿಸಿದ ಅವರು ಬ್ರಾಡ್ಮನ್ (6996) ದಾಖಲೆಯನ್ನು ಮೀರಿ ನಿಂತರು. ಅಲ್ಲದೇ ಬ್ರಾಡ್ಮನ್ 150 ರಿಂದ 199ರೊಳಗಿನ ಮೊತ್ತಗಳನ್ನು ಎಂಟು ಬಾರಿ ಗಳಿಸಿದ್ದನ್ನೂ ಕೊಹ್ಲಿ ಮೀರಿ ನಿಂತರು.
ಆದರೆ ಬ್ರಾಡ್ಮನ್ ದ್ವಿಶತಕಗಳ ದಾಖಲೆ (12) ಮುರಿಯಲು ಕೊಹ್ಲಿ ಇನ್ನೂ ಆರು ಗಳಿಸಬೇಕು.

ದಾಖಲೆಯ ಜೊತೆಯಾಟ

ಎರಡನೇ ಟೆಸ್ಟ್‌ನಲ್ಲಿ ವೈಯಕ್ತಿಕ ದಾಖಲೆಗಳನ್ನು ಪುಡಿಗಟ್ಟಿದ ಕೊಹ್ಲಿ, ರವೀಂದ್ರ ಜಡೇಜ ಜೊತೆಗೆ ಸೇರಿ ಪಾಲುದಾರಿಕೆ ಆಟದ ದಾಖಲೆಯನ್ನೂ ಬರೆದರು. ಐದನೇ ವಿಕೆಟ್ ಜೊತೆಯಾಟದಲ್ಲಿ 225 ರನ್ ಸೇರಿಸಿದ ಇವರಿಬ್ಬರೂ 2001ರಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ (220 ರನ್) ದಾಖಲೆಯನ್ನು ಅಳಿಸಿಹಾಕಿದರು. ಇದಕ್ಕೂ ಮುನ್ನ ವಿರಾಟ್ ಅವರು ಅಜಿಂಕ್ಯ ರಹಾನೆ ಜೊತೆಗೆ ನಾಲ್ಕನೇ ವಿಕೆಟ್‌ಗೆ ಸೇರಿಸಿದ 178 ರನ್‌ಗಳು ಕೂಡ ದಾಖಲೆ ಪುಟ ಸೇರಿದವು. 1996–97ರಲ್ಲಿ ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ಅವರು ವಾಂಡರರ್ಸ್‌ ಕ್ರೀಡಾಂಗಣದಲ್ಲಿ ಗಳಿಸಿದ್ದ 145 ರನ್‌ಗಳ ಜೊತೆತಯಾಟವು ಇಲ್ಲಿಯವರೆಗಿನ ದಾಖಲೆಯಾಗಿತ್ತು.

ನಾಯಕತ್ವದ 50ನೇ ಪಂದ್ಯದಲ್ಲಿ ಪಂದ್ಯ ಪುರುಶ್ರೇಷ್ಠ

ವಿರಾಟ್‌ ಕೊಹ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಪಂದ್ಯ ಶ್ರೇಷ್ಠರೆನಿಸಿಕೊಂಡರು. ಇದು ಅವರ ನಾಯಕತ್ವದ 50ನೇ ಪಂದ್ಯವೂ ಆಗಿತ್ತು.

ತವರಿನಲ್ಲಿ ಸತತ 11ನೇ ಜಯ

ತವರಿನಲ್ಲಿ ಸತತ 11ನೇ ಟೆಸ್ಟ್‌ ಸರಣಿಯನ್ನು ಜಯಿಸಿದ ದಾಖಲೆ ಭಾರತದ ಪಾಲಾಯಿತು. ಇದರೊಂದಿಗೆ ಆಸ್ಟ್ರೆಲಿಯಾ ತಂಡವು ತನ್ನ ತವರಿನಲ್ಲಿ ಸತತವಾಗಿ ಹತ್ತು ಸರಣಿಗಳನ್ನು ಗೆದ್ದಿದ್ದ ದಾಖಲೆಯನ್ನು ಮೀರಿತು. ಈ ಹಾದಿಯಲ್ಲಿ ಒಟ್ಟು 31 ಪಂದ್ಯಗಳನ್ನು ಆಡಿರುವ ತಂಡವು 25ರಲ್ಲಿ ಜಯಿಸಿದೆ. ಐದುಪಂದ್ಯಗಳು ಡ್ರಾ ಆಗಿವೆ. ಒಂದರಲ್ಲಿ ಮಾತ್ರ ಸೋತಿದೆ. 2013ರಿಂದ ಇಲ್ಲಿಯವರೆಗಿನ ಸಾಧನೆ ಇದಾಗಿದೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡಿದ 50 ಟೆಸ್ಟ್‌ಗಳಲ್ಲಿ ಇದು 30ನೇ ಜಯವಾಗಿದೆ.

ಒಂದೇ ದಿನ ಎರಡು ಬಾರಿ ಔಟಾದರು!

ದಕ್ಷಿಣ ಆಫ್ರಿಕಾದ ಏಳು ಮಂದಿ ಆಟಗಾರರು ಒಂದೇ ದಿನ ಎರಡು ಬಾರಿ ಔಟಾದರು! ಮೂರನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಕಣಕ್ಕಿಳಿದಿದ್ದ ಜುಬೇರ್‌ ಹಮ್ಜಾ, ಫಾಫ್‌ ಡು ಪ್ಲೆಸಿ, ತೆಂಬಾ ಬವುಮಾ, ಹೆನ್ರಿಚ್‌ ಕ್ಲಾಸೆನ್‌, ಜಾರ್ಜ್‌ ಲಿಂಡ್‌, ಡೇನ್‌ ಪೀಟ್‌ ಮತ್ತು ಕಗಿಸೊ ರಬಾಡ ‌ಅವರು ಎರಡನೇ ಇನಿಂಗ್ಸ್‌ನಲ್ಲೂ ಬೇಗನೆ ಪೆವಿಲಿಯನ್‌ ಸೇರಿದರು.

1935ರ ನಂತರ ದಕ್ಷಿಣ ಆಫ್ರಿಕಾಕ್ಕೆ ಅತಿ ದೊಡ್ಡ ಸೋಲು

ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಮೂರನೇ ಟೆಸ್ಟ್‌ನಲ್ಲಿ ಇತಿಹಾಸದಲ್ಲೇ ಅತಿ ದೊಡ್ಡ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್‌ ಜತೆಗೆ 202 ರನ್‌ಗಳ ಅಂತರ ಜಯ ಸಾಧಿಸಿತ್ತು. 1935–36ರ ಸಮಯದಲ್ಲಿ ದಕ್ಷಿಣ ಆಫ್ರಿಕಾ ಸರಣಿಯೊಂದರಲ್ಲಿ ಎರಡರಿಂದ ಮೂರು ಟೆಸ್ಟ್‌ಗಳನ್ನು ಇನ್ನಿಂಗ್ಸ್‌ ಅಂತರದಲ್ಲಿ ಸೋತಿತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT