ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿಗೆ ‘ರಾಯಲ್ಸ್‌’ ಸವಾಲು, ಕ್ರಿಸ್ ಮೋರಿಸ್, ಯಜುವೇಂದ್ರ ಮೇಲೆ ಭರವಸೆ

ವಿರಾಟ್ ಕೊಹ್ಲಿ–ಸ್ಟೀವನ್ ಸ್ಮಿತ್ ಪಡೆಗಳ ಮುಖಾಮುಖಿ ಇಂದು
Last Updated 16 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ
ADVERTISEMENT
""
""

ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುರುವಾರ ಕಿಂಗ್ಸ್‌ ಇಲೆವನ್ ಪಂಜಾಬ್ ಎದುರಿನ ಪಂದ್ಯದಲ್ಲಿ ಕೆಲವು ಪ್ರಯೋಗಗಳಿಗೆ ಮುಂದಾಗಿ ಕೈಸುಟ್ಟುಕೊಂಡಿತ್ತು. ಆದರೆ ಶನಿವಾರ ಮಧ್ಯಾಹ್ನ ರಾಜಸ್ಥಾನ ರಾಯಲ್ಸ್ ಎದುರು ನಡೆಯಲಿರುವ ಪಂದ್ಯದಲ್ಲಿ ಪುಟಿದೇಳುವ ಛಲದಲ್ಲಿದೆ. ಮೊದಲ ಸುತ್ತಿನಲ್ಲಿ ರಾಯಲ್ಸ್‌ ಎದುರು ಜಯಿಸಿದ್ದ ಕೊಹ್ಲಿ ಪಡೆಯು ಈಗಲೂ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಆರ್‌ಸಿಬಿಯು ಎಂಟು ಪಂದ್ಯಗಳನ್ನು ಆಡಿ ಐದು ಪಂದ್ಯಗಳನ್ನು ಗೆದ್ದಿದೆ.

ಆದರೆ ಕಿಂಗ್ಸ್‌ ಎದುರಿನ ಪಂದ್ಯದಲ್ಲಿ ಎಬಿ ಡಿ ವಿಲಿಯರ್ಸ್‌ ಅವರನ್ನು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳಿಸಿದ್ದು ಹಿನ್ನಡೆಗೆ ಪ್ರಮುಖ ಕಾರಣವಾಯಿತು. ಮೇಲಿನ ಕ್ರಮಾಂಕದಲ್ಲಿ ಬಂದ ವಾಷಿಂಗ್ಟನ್ ಸುಂದರ್ ಅವರಿಂದ ನಿರೀಕ್ಷಿತ ಆಟ ಮೂಡಿಬಂದಿರಲಿಲ್ಲ. ವಿರಾಟ್ 48 ರನ್‌ ಮಾಡಿದ್ದರು. ಕೊನೆಯ ಹಂತದಲ್ಲಿ ಕ್ರಿಸ್ ಮೊರಿಸ್ ಚುರುಕಿನ ಬ್ಯಾಟಿಂಗ್‌ನಿಂದಾಗಿ ಹೋರಾಟದ ಮೊತ್ತ ಗಳಿಸಲು ಸಾಧ್ಯವಾಗಿತ್ತು. ಆದರೆ, ಬೌಲಿಂಗ್‌ನಲ್ಲಿ ಮಾಡಿದ ಕೆಲವು ಲೋಪಗಳು ತಂಡಕ್ಕೆ ಸೋಲಿನ ಕಹಿಯುಣಿಸಿದ್ದವು. ರಾಜಸ್ಥಾನ ತಂಡದಲ್ಲಿ ಸಂಜು ಸ್ಯಾಮ್ಸನ್, ಸ್ಟೀವ್ ಸ್ಮಿತ್, ಬೆನ್ ಸ್ಟೋಕ್ಸ್‌, ರಾಹುಲ್ ತೆವಾಟಿಯಾ ಮತ್ತು ರಿಯಾನ್ ಪರಾಗ್ ಅವರಂತಹ ಬಿರುಸಿನ ಆಟವಾಡುವ ಬ್ಯಾಟ್ಸ್‌ಮನ್‌ಗಳಿದ್ದಾರೆ. ಅವರನ್ನು ಕಟ್ಟಿಹಾಕಲು ಇಸುರು ಉಡಾನ, ಕ್ರಿಸ್ ಮೊರಿಸ್‌ ಮತ್ತು ಯಜುವೇಂದ್ರ ಚಾಹಲ್ ಅವರೊಂದಿಗೆ ಉಳಿದ ಬೌಲರ್‌ಗಳು ಜೊತೆಗೂಡಬೇಕು. ಫೀಲ್ಡಿಂಗ್ ಕೂಡ ಚುರುಕಾಗಬೇಕು.

ರಾಯಲ್ಸ್‌ನ ವೇಗಿ ಜೋಫ್ರಾ ಆರ್ಚರ್‌, ಜಯದೇವ್ ಉನದ್ಕತ್ ಮತ್ತು ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರ ಎಸೆತಗಳನ್ನು ಎದುರಿಸಿ ಉತ್ತಮ ಜೊತೆಯಾಟಗಳನ್ನು ಆಡಿದರೆ ಮಾತ್ರ ಆರ್‌ಸಿಬಿ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಬಹುದು.

ಎಂಟು ಪಂದ್ಯಗಳಲ್ಲಿ ಐದರಲ್ಲಿ ಸೋತು, ಮೂರರಲ್ಲಿ ಮಾತ್ರ ಗೆದ್ದಿರುವ ಸ್ಮಿತ್ ಬಳಗವು ಪ್ಲೇ ಆಫ್ ಹಂತಕ್ಕೆ ತಲುಪಬೇಕಾದರೆ ಉಳಿದಿರುವ ಪಂದ್ಯಗಳಲ್ಲಿ ಜಯ ಗಳಿಸುವ ಒತ್ತಡದಲ್ಲಿದೆ. ಆದ್ದರಿಂದ ತನ್ನ ಸಕಲ ಸಾಮರ್ಥ್ಯವನ್ನು ಪಣಕ್ಕೊಡ್ಡಿ ಹೋರಾಡುವುದು ಖಚಿತ. ಹೀಗಾಗಿ ರೋಚಕ ಕದನ ಏರ್ಪಡುವುದು ಕೂಡ ನಿರೀಕ್ಷಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT