ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

IPL 2024 | ಚೆನ್ನೈ Vs ಗುಜರಾತ್‌: ಹೊಸ ನಾಯಕರ ಮುಖಾಮುಖಿ

Published 25 ಮಾರ್ಚ್ 2024, 13:49 IST
Last Updated 25 ಮಾರ್ಚ್ 2024, 13:49 IST
ಅಕ್ಷರ ಗಾತ್ರ

ಚೆನ್ನೈ: ತಮ್ಮ ಮೊದಲ ಪಂದ್ಯ ಗೆದ್ದುಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಮಂಗಳವಾರ ಇಲ್ಲಿ ನಡೆಯಲಿರುವ ಇಂಡಿಯನ್ ‍ಪ್ರೀಮಿಯರ್‌ ಲೀಗ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯವು ಎರಡು ಹೊಸ ನಾಯಕರಿಗೆ– ಶುಭಮನ್ ಗಿಲ್ ಮತ್ತು ಋತುರಾಜ್ ಗಾಯಕವಾಡ ಅವರಿಗೆ ಸತ್ವಪರೀಕ್ಷೆಯಾಗಿದೆ.

ಆಕರ್ಷಕ ಹೊಡೆತಗಳನ್ನು ಆಡಬಲ್ಲ ಇಬ್ಬರೂ ತಂಡದ ಆರಂಭ ಆಟಗಾರರು ಕೂಡ. ಉದ್ಘಾಟನಾ ಪಂದ್ಯಕ್ಕೆ ಮುನ್ನಾದಿನ ಎಂ.ಎಸ್‌.ಧೋನಿ ಪದತ್ಯಾಗ ಮಾಡಿದ್ದರಿಂದ ಗಾಯಕವಾಡ ಅವರಿಗೆ ನಾಯಕತ್ವ ಒಲಿಯಿತು. ಹಾರ್ದಿಕ್ ಪಾಂಡ್ಯ, ಕಳೆದ ನವೆಂಬರ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ ದಿಢೀರ್ ವರ್ಗಾವಣೆಯಾದ ಕಾರಣ, ತೆರವಾದ ಸ್ಥಾನಕ್ಕೆ ಗಿಲ್ ನಾಯಕರಾದರು. 24 ವರ್ಷದ ಗಿಲ್ ಪ್ರಸಕ್ತ ಐಪಿಎಲ್‌ನ ಅತಿ ಕಿರಿಯ ನಾಯಕ.

ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯದಲ್ಲಿ ಗಿಲ್‌ ನಾಯಕತ್ವದ ಕೌಶಲ ಪ್ರದರ್ಶಿಸಿದ್ದಾರೆ. ಹೆಡ್‌ ಕೋಚ್‌ ಆಶಿಷ್‌ ನೆಹ್ರಾ, ಅನುಭವಿ ಡೇವಿಡ್‌ ಮಿಲ್ಲರ್‌ ಮತ್ತು ನ್ಯೂಜಿಲೆಂಡ್‌ನ ನಾಯಕ ಕೇನ್‌ ವಿಲಿಯಮ್ಸನ್‌ ಅವರ ಬೆನ್ನಿಗಿದ್ದಾರೆ. ಗಾಯಕವಾಡ ಇನ್ನೊಂದೆಡೆ, ಚೆನ್ನೈ ತಂಡದ ‘ಭೀಷ್ಮ ಪಿತಾಮಹ’ ಧೋನಿ ಮಾರ್ಗದರ್ಶನದಲ್ಲಿ ಮೊದಲ ಪಂದ್ಯದಲ್ಲೇ ಗಮನಸೆಳೆದಿದ್ದಾರೆ.

ಚೆನ್ನೈ ತಂಡ ಚಿಂತೆಯಿರುವುದು ಬೌಲಿಂಗ್ ವಿಭಾಗದಲ್ಲಿ. ವೇಗಿ ತುಷಾರ್ ದೇಶಪಾಂಡೆ ತುಂಬಾ ದುಬಾರಿಯಾಗಿದ್ದರು. ಶಾರ್ದೂಲ್ ಠಾಕೂರ್ ಕೂಡ ಪರಿಣಾಮಕಾರಿ ಆಗಿರಲಿಲ್ಲ. ಹೀಗಾಗಿ ಆರ್‌ಸಿಬಿಯ ದಿನೇಶ್ ಕಾರ್ತಿಕ್ ಮತ್ತು ಅನುಜ್ ರಾವತ್‌ ಇವರೆದುರು ಬಿರುಸಿನ ಆಟವಾಡಿದ್ದರು. ಮುಸ್ತಫಿಜುರ್ ರೆಹಮಾನ್ ಒಬ್ಬರೇ ಪ್ರಭಾವಶಾಲಿಯಾಗಿ ನಾಲ್ಕು ವಿಕೆಟ್‌ ಪಡೆದಿದ್ದರು. ಹೀಗಾಗಿ ಎಡಗೈ ವೇಗಿ ಮುಖೇಶ್ ಚೌಧರಿ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಮಂಡಿರಜ್ಜು ನೋವಿನಿಂದ ಅಲಭ್ಯರಾಗಿದ್ದ ವೇಗದ ಬೌಲರ್ ಮತೀಶ ಪಥಿರಾಣ ಈ ಪಂದ್ಯದಲ್ಲಿ ಆಡುವ ನಿರೀಕ್ಷೆಯಿದೆ. ರಚಿನ್ ರವೀಂದ್ರ ಅವರೂ ಬೌಲಿಂಗ್ ಪಡೆಯಬಹುದು.

ಬ್ಯಾಟಿಂಗ್‌ನಲ್ಲಿ ಸಿಎಸ್‌ಕೆಗೆ ಅಷ್ಟೇನೂ ಸಮಸ್ಯೆಯಿಲ್ಲ. ನ್ಯೂಜಿಲೆಂಡ್ ಆಟಗಾರ ರವೀಂದ್ರ ಮೊದಲ ಪಂದ್ಯದಲ್ಲೇ ಗಮನ ಸೆಳೆದಿದ್ದಾರೆ. ಯುವ ಬ್ಯಾಟರ್ ಸಮೀರ್ ರಿಜ್ವಿ ಮೊದಲ ಪಂದ್ಯಕ್ಕೆ ಆಯ್ಕೆಯಾದರೂ ಬ್ಯಾಟಿಂಗ್ ಪಡೆದಿರಲಿಲ್ಲ. ಧೋನಿ ಸಹ ಬ್ಯಾಟಿಂಗಿಗೆ ಇಳಿದಿರಲಿಲ್ಲ.

ಇನ್ನೊಂದೆಡೆ ಜಿಟಿ ಬ್ಯಾಟರ್‌ಗಳು ಉತ್ತಮ ಆರಂಭದ ಲಾಭ ಪಡೆಯಲು ವಿಫಲರಾಗಿದ್ದರು. ಗಿಲ್ ಮತ್ತು ಹಿರಿಯ ವಿಕೆಟ್‌ ಕೀಪರ್ –ಬ್ಯಾಟರ್‌ ವೃದ್ಧಿಮಾನ್ ಸಹ ಅವರಿಂದ ಬಿರುಸಿನ ಆರಂಭ ಸಿಗಬೇಕಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಅಜ್ಮತ್‌ಉಲ್ಲಾ ಒಮರ್‌ಝೈ, ಡೇವಿಡ್‌ ಮಿಲ್ಲರ್ ಮತ್ತು ರಾಹುಲ್ ತೆವಾಟಿಯಾ ಕೂಡ ಬೀಸು ಹೊಡೆತದ ಆಟ ಆಡಬಲ್ಲವರು. ಗುಜರಾತ್‌ ತಂಡದಲ್ಲಿರುವ ಚೆನ್ನೈ ಮೂಲದ ಸಾಯಿ ಸುದರ್ಶನ್ ಉತ್ತಮ ಲಯದಲ್ಲಿದ್ದಾರೆ. ಮೊಹಮ್ಮದ್ ಶಮಿ ಗೈರಿನಲ್ಲಿ ವೇಗ–ಸ್ಪಿನ್‌ ಬೌಲರ್‌ಗಳು ಮುಂಬೈ ಎದುರು ಸಾಂಘಿಕ ಪ್ರದರ್ಶನ ನೀಡಿದ್ದರು.

ಚಿಪಾಕ್‌ನ ಮಂದಗತಿಯ ಪಿಚ್‌ನಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸಬಹುದು.

ಪಂದ್ಯ ಆರಂಭ: ರಾತ್ರಿ 7.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT