ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2024ರ ಟಿ20 ವಿಶ್ವಕಪ್‌ನಲ್ಲಿ ಆಡುವರೇ ಕೊಹ್ಲಿ?: ಸಂಜಯ್ ಬಂಗಾರ್ ಹೇಳಿದ್ದೇನು?

Published 16 ಆಗಸ್ಟ್ 2023, 12:34 IST
Last Updated 16 ಆಗಸ್ಟ್ 2023, 12:34 IST
ಅಕ್ಷರ ಗಾತ್ರ

ನವದೆಹಲಿ: ವೆಸ್ಟ್‌ ಇಂಡೀಸ್‌ ಹಾಗೂ ಯುಎಸ್‌ ಆತಿಥ್ಯದಲ್ಲಿ ನಡೆಯಲಿರುವ ಮುಂಬರುವ ಟಿ20 ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ಆಡುತ್ತಾರೆಯೇ ಎಂಬ ಬಗ್ಗೆ ಭಾರತ ಕ್ರಿಕೆಟ್ ತಂಡದ ಮಾಜಿ ಬ್ಯಾಟಿಂಗ್‌ ಕೋಚ್‌ ಸಂಜಯ್‌ ಬಂಗಾರ್‌ ಮಾತನಾಡಿದ್ದಾರೆ.

ಟೂರ್ನಿಯು 2024ರ ಜೂನ್‌ 4ರಿಂದ 30ರ ವರೆಗೆ ನಡೆಯಲಿದೆ.

'ಕ್ರಿಕೆಟ್‌ ಬಸು' ಯುಟ್ಯೂಬ್‌ ಚಾನಲ್‌ನಲ್ಲಿ ಮಾತನಾಡಿರುವ ಬಂಗಾರ್‌, 'ಶೇ 100 ರಷ್ಟು ಖಚಿತವಾಗಿ ಅವರು ಟಿ20 ತಂಡದಲ್ಲಿರಲಿದ್ದಾರೆ. ಕಳೆದ ಟಿ20 ವಿಶ್ವಕಪ್‌ನಲ್ಲಿ, ನಿಕಟ ಪೈಪೋಟಿಯಿಂದ ಕೂಡಿದ್ದ ಪಂದ್ಯಗಳಲ್ಲಿ ಅವರು ಎಂತಹ ಆಟವಾಡಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ಹಾಗೂ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ವಿರಾಟ್‌ ಆಡಬಾರದು ಎಂಬುದಕ್ಕೆ ಕಾರಣಗಳೇ ಇಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ.

'ಭಾವನಾತ್ಮಕ ಸನ್ನಿವೇಶಗಳಿಂದ ಕೂಡಿದ ಹೈಹೋಲ್ಟೇಜ್‌ ಪಂದ್ಯಗಳಲ್ಲಿ ಸಣ್ಣ ತಪ್ಪುಗಳಿಗೂ ದೊಡ್ಡ ಬೆಲೆ ತೆರಬೇಕಾಗುತ್ತದೆ. ಹಾಗಾಗಿ ಅಂತಹ ಸನ್ನಿವೇಶಗಳನ್ನು ಸಮರ್ಥವಾಗಿ ನಿಭಾಯಿಸುವ ಆಟಗಾರರು ಬೇಕಾಗುತ್ತದೆ. ಆ ನಿಟ್ಟಿನಲ್ಲಿ ಯೋಚಿಸಿದರೆ, ಬ್ಯಾಟಿಂಗ್‌ ಸ್ಟ್ರೈಕ್‌ರೇಟ್ ಅಥವಾ ಐಪಿಎಲ್‌ನಲ್ಲಿ ಏನು ಸಾಧನೆ ಮಾಡಿದ್ದೀರಿ ಎಂಬುದು ಮುಖ್ಯವಾಗುವುದಿಲ್ಲ. ದೊಡ್ಡ ಪಂದ್ಯಗಳಿಗೆ ಶ್ರೇಷ್ಠ ಆಟಗಾರರು ಬೇಕಾಗುತ್ತಾರೆ. ಅವರು (ಕೊಹ್ಲಿ) ಕಳೆದ ವರ್ಷ ಭಾರತ–ಪಾಕಿಸ್ತಾನ ಪಂದ್ಯದಲ್ಲಿ ಅಂತಹ ಆಟವಾಡಿದ್ದಾರೆ' ಎಂದು ನೆನಪು ಮಾಡಿಕೊಂಡಿದ್ದಾರೆ.

ಕ್ರಿಕೆಟ್‌ನ ಅತ್ಯುನ್ನತ ಮಟ್ಟದಲ್ಲಿ ಆಡುವಾಗ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸುವುದಷ್ಟೇ ಮುಖ್ಯವಾಗುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿರುವ ಬಂಗಾರ್, ಒಂದು ಮತ್ತು ಎರಡು ರನ್‌ ಕದಿಯುವ ವಿಚಾರದಲ್ಲಿ ಕೊಹ್ಲಿ ಯುವ ಆಟಗಾರರ ಎದುರೂ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ಎಂದಿದ್ದಾರೆ.

'ಪ್ರತಿಯೊಬ್ಬರೂ ತಮ್ಮದೇ ರೀತಿಯಯಲ್ಲಿ ರನ್‌ ಗಳಿಸುತ್ತಾರೆ. ದೊಡ್ಡ ಹೊಡೆತಗಳನ್ನು ಬಾರಿಸುವವರಷ್ಟೇ ಪಂದ್ಯ ಗೆದ್ದುಕೊಡಬಲ್ಲರು ಎಂಬುದರಲ್ಲಿ ಅರ್ಥವಿಲ್ಲ. ಅದು ನಿಜವೇ ಆಗಿದ್ದರೆ, ವೆಸ್ಟ್‌ ಇಂಡೀಸ್ ಈವರೆಗೆ ನಡೆದಿರುವ ಎಲ್ಲ ಟಿ20 ವಿಶ್ವಕಪ್‌ ಟೂರ್ನಿಯಲ್ಲೂ ಗೆಲುವು ಸಾಧಿಸಬೇಕಿತ್ತು. ಕೊಹ್ಲಿ, ಒಂದೂ ಸಿಕ್ಸ್‌ ಸಿಡಿಸದೆ ಶತಕ ಗಳಿಸುವ ಸಾಮರ್ಥ್ಯವಿರುವ ಆಟಗಾರ. ಅದನ್ನು ಅವರು ಮಾಡಿ ತೋರಿಸಿದ್ದಾರೆ. ಕಳೆದ ಐಪಿಎಲ್‌ ಟೂರ್ನಿಯಲ್ಲಿ ಗುಜರಾತ್‌ ಟೈಟನ್ಸ್ ವಿರುದ್ಧ ಅವರು ಒಂದೇಒಂದು ಸಿಕ್ಸ್‌ ಸಿಡಿಸದೆ ಶತಕ ಗಳಿಸಿದ್ದರು. ಇದು ವಿರಾಟ್‌ ಕೊಹ್ಲಿಯ ಮೌಲ್ಯವನ್ನು ಸಾರುತ್ತದೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ಕಪಿಲ್‌ ದೇವ್‌, ಸಚಿನ್‌ ತೆಂಡೂಲ್ಕರ್‌, ವಿರೇಂದ್ರ ಸೆಹ್ವಾಗ್ ಅವರಂತಹ ಆಟಗಾರರಿಂದ ವಿರಾಟ್‌ ಕೊಹ್ಲಿ ಸ್ಫೂರ್ತಿ ಪಡೆದಿದ್ದಾರೆ. ಅವರು ಫಿಟ್‌ನೆಸ್‌ನ ಮಾನದಂಡಗಳನ್ನು ಮತ್ತು ಮೈದಾನದಲ್ಲಿನ ಆಕ್ರಮಣಕಾರಿ ಆಟಕ್ಕೆ ಮರುವ್ಯಾಖ್ಯಾನ ನೀಡಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಆಸ್ಟ್ರೇಲಿಯಾದಲ್ಲಿ ಜಯ ಗಳಿಸಿದ್ದು ಭಾರತ ತಂಡದ ಪಾಲಿಗೆ ಸಾಧನೆಯೇ ಸರಿ. ಪ್ರತಿ ಹಂತದಲ್ಲಿಯೂ ಹೋರಾಟ ಮನೋಭಾವದೊಂದಿಗೆ ತಂಡ ಮುನ್ನಡೆಸುವ ಶೈಲಿ ಮತ್ತು ಬ್ಯಾಟಿಂಗ್‌ ಸಾಧನೆಗಳು ಅವರನ್ನು (ಕೊಹ್ಲಿ) ಅತ್ಯಂತ ವಿಶೇಷ ಆಟಗಾರನನ್ನಾಗಿ ಮಾಡಿವೆ' ಎಂದು ಹೇಳಿದ್ದಾರೆ.

ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಎಲ್ಲ ವಿಭಾಗದಲ್ಲಿಯೂ ಚೆನ್ನಾಗಿ ಆಡಿತ್ತು ಎಂದಿರುವ ಬಂಗಾರ್, ವಿರಾಟ್‌ ನಾಯಕತ್ವದ ಅವಧಿಯು ಭಾರತದ ಟೆಸ್ಟ್ ಕ್ರಿಕೆಟ್‌ ಪಾಲಿಗೆ ಸುವರ್ಣ ಕಾಲವಾಗಿತ್ತು ಎಂದು ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT