ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಪ್ರಮುಖ ಸ್ಥಾನಗಳಿಗೆ ಕದನ; ಭಾರತ ಫುಟ್‌ಬಾಲ್‌ನ ‘ಸೂಪರ್ ಸಂಡೆ’

Last Updated 28 ಫೆಬ್ರುವರಿ 2021, 7:55 IST
ಅಕ್ಷರ ಗಾತ್ರ

ಕೋವಿಡ್‌–19ರ ಸಂಕಷ್ಟದ ನಡುವೆಯೇ ದಿಟ್ಟ ನಿರ್ಧಾರ ಕೈಗೊಂಡ ಅಖಿಲ ಭಾರತ ಫುಟ್‌ಬಾಲ್ ಸಂಸ್ಥೆಗೆ (ಎಐಎಫ್‌ಎಫ್‌) ಈಗ ನಿಟ್ಟುಸಿರು ಬಿಡುವ ಕಾಲ. ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಮತ್ತು ಐ–ಲೀಗ್ ಟೂರ್ನಿಗಳು ಮುಕ್ತಾಯದ ಹಂತ ತಲುಪಿದ್ದು ಇದರೊಂದಿಗೆ ಈ ಬಾರಿಯ ಫುಟ್‌ಬಾಲ್ ಋತು ಕೂಡ ಕೊನೆಯ ಘಟ್ಟದತ್ತ ಹಜ್ಜೆ ಇರಿಸಿದೆ. ಇದೆಲ್ಲದರ ನಡುವೆ ಫೆಬ್ರುವರಿ 28 ಭಾರತ ಫುಟ್‌ಬಾಲ್‌ಗೆ ಸಂಬಂಧಿಸಿದಂತೆ ‘ಸೂಪರ್ ಸಂಡೆ’ ಆಗಿದೆ. ಯಾಕೆಂದರೆ ಎರಡೂ ಲೀಗ್‌ಗಳ ನಿರ್ಣಾಯಕ ಪಂದ್ಯಗಳಿಗೆ ಈ ದಿನ ಸಾಕ್ಷಿಯಾಗಲಿದೆ. ಎರಡೂ ಲೀಗ್‌ಗಳಲ್ಲಿ ನಡೆಯಲಿರುವ ಐದು ಪಂದ್ಯಗಳಲ್ಲಿ ಪ್ರಮುಖ ಸ್ಥಾನಗಳ ಮೇಲೆ ಕಣ್ಣಿಟ್ಟು ಒಟ್ಟು ಏಳು ತಂಡಗಳು ಭಾನುವಾರ ಕಣಕ್ಕೆ ಇಳಿಯಲಿವೆ.

ಐಎಸ್‌ಎಲ್‌ನ ಲೀಗ್ ಹಂತದ ಕೊನೆಯ ಎರಡು ಪಂದ್ಯಗಳು ಗೋವಾದಲ್ಲಿ ನಡೆಯಲಿವೆ. ಈ ಎರಡೂ ಪಂದ್ಯಗಳ ಫಲಿತಾಂಶ ನಾಲ್ಕು ತಂಡಗಳ ಮೇಲೆ ಪರಿಣಾಮ ಬೀರಲಿರುವುದರಿಂದ ರೋಚಕ ಹಣಾಹಣಿಯ ನಿರೀಕ್ಷೆ ಇದೆ. ಐಎಸ್‌ಎಲ್‌ನಲ್ಲಿ ಸಾಮಾನ್ಯವಾಗಿ ಲೀಗ್ ಹಂತದ ಕೊನೆಯ ಪಂದ್ಯ ಅಷ್ಟೊಂದು ಮುಖ್ಯವಾಗಿರುವುದಿಲ್ಲ. ಯಾಕೆಂದರೆ ಅಷ್ಟರಲ್ಲಿ ಪ್ಲೇ ಆಫ್ ಹಂತದ ತಂಡಗಳು ಮತ್ತು ‘ಲೀಗ್‌ ಚಾಂಪಿಯನ್’ ಪಟ್ಟ ನಿರ್ಧಾರವಾಗಿರುತ್ತದೆ. ಆದರೆ ಈ ಬಾರಿ ಹಾಗಾಗಿಲ್ಲ. ಪ್ಲೇ ಆಫ್ ಹಂತದ ಮೊದಲ ಮೂರು ಸ್ಥಾನಗಳನ್ನು ಕ್ರಮವಾಗಿ ಎಟಿಕೆ ಮೋಹನ್ ಬಾಗನ್‌, ಮುಂಬೈ ಸಿಟಿ ಎಫ್‌ಸಿ ಮತ್ತು ನಾರ್ತ್ ಈಸ್ಟ್ ಯುನೈಟೆಡ್ ತಮ್ಮದಾಗಿಸಿಕೊಂಡಿವೆ. ಉಳಿದ ಒಂದು ಸ್ಥಾನಕ್ಕಾಗಿ ಭಾನುವಾರ ಸಂಜೆ ಐದು ಗಂಟೆಗೆ ಎಫ್‌ಸಿ ಗೋವಾ ಮತ್ತು ಹೈದರಾಬಾದ್ ತಂಡಗಳು ಸೆಣಸಲಿವೆ. ‘ಕ್ವಾರ್ಟರ್ ಫೈನಲ್‌’ ಎಂದೇ ಹೇಳಲಾಗುವ ಈ ಪಂದ್ಯವನ್ನು ಡ್ರಾ ಮಾಡಿಕೊಂಡರೂ ಗೋವಾ ನಾಲ್ಕರ ಘಟ್ಟ ಪ್ರವೇಶಿಸಲಿದೆ. ಆದರೆ ಹೈದರಾಬಾದ್‌ಗೆ ಜಯ ಅನಿವಾರ್ಯ.

ಮುಂಬೈ ಸಿಟಿ ಎಫ್‌ಸಿ ಎದುರಿನ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್‌ ತಂಡ ಸಂದೇಶ್ ಜಿಂಗಾನ್ ಮೇಲೆ ಭರವಸೆ ಇರಿಸಿಕೊಂಡಿದೆ –ಐಎಸ್‌ಎಲ್‌ ಮೀಡಿಯಾ ಚಿತ್ರ
ಮುಂಬೈ ಸಿಟಿ ಎಫ್‌ಸಿ ಎದುರಿನ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್‌ ತಂಡ ಸಂದೇಶ್ ಜಿಂಗಾನ್ ಮೇಲೆ ಭರವಸೆ ಇರಿಸಿಕೊಂಡಿದೆ –ಐಎಸ್‌ಎಲ್‌ ಮೀಡಿಯಾ ಚಿತ್ರ

ಈ ಪಂದ್ಯದ ಮುಕ್ತಾಯದ ಬೆನ್ನಲ್ಲೇ ರಾತ್ರಿ 7.30ಕ್ಕೆ ಎಟಿಕೆ ಮೋಹನ್ ಬಾಗನ್ ಮತ್ತು ಮುಂಬೈ ಸಿಟಿ ಎಫ್‌ಸಿ ಮುಖಾಮುಖಿಯಾಗಲಿವೆ. ಕೊನೆಯ ಪಂದ್ಯ ಎಂಬ ಮಾತ್ರಕ್ಕೆ ಇದನ್ನು ಕಡೆಗಣಿಸುವಂತಿಲ್ಲ. ಯಾಕೆಂದರೆ ಅಗ್ರ ಎರಡು ಸ್ಥಾನಗಳಲ್ಲಿರುವ ಈ ತಂಡಗಳ ಪೈಕಿ ‘ಲೀಗ್ ಚಾಂಪಿಯನ್‌’ ಪಟ್ಟ ಯಾರಿಗೆ ಎಂದು ನಿರ್ಧಾರವಾಗುವುದು ಈ ಪಂದ್ಯದಲ್ಲಿ. 40 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿರುವ ಎಟಿಕೆಯನ್ನು ಹಿಂದಿಕ್ಕಬೇಕಾದರೆ ಮುಂಬೈ ಸಿಟಿ (37 ಪಾಯಿಂಟ್ಸ್‌) ಗೆಲ್ಲಲೇಬೇಕು. ಎಟಿಕೆಗೆ ಪಂದ್ಯ ಡ್ರಾ ಮಾಡಿಕೊಂಡರೂ ಸಾಕು. ಲೀಗ್ ಹಂತದಲ್ಲಿ ಅಗ್ರ ಸ್ಥಾನ ಗಳಿಸುವ ತಂಡ ಮುಂದಿನ ವರ್ಷದ ಎಎಫ್‌ಸಿ ಚಾಂಪಿಯನ್ಸ್ ಲೀಗ್‌ ಗುಂಪು ಹಂತದಲ್ಲಿ ಆಡಲು ಅರ್ಹತೆ ಪಡೆಯಲಿದೆ. ಹೀಗಾಗಿ ಈ ಪಂದ್ಯ ಇನ್ನಷ್ಟು ಮಹತ್ವ ಪಡೆದುಕೊಂಡಿದೆ.

ಮುಂಬೈ ಗೆದ್ದರೆ ಪಾಯಿಂಟ್ ಪಟ್ಟಿಯಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಲಿವೆ. ಗೋಲು ಸರಾಸರಿಯಲ್ಲೂ (15) ಎರಡು ತಂಡಗಳು ಸಮಬಲ ಸಾಧಿಸಿವೆ. ಆದ್ದರಿಂದ ಮೊದಲ ಲೆಗ್‌ನ ಫಲಿತಾಂಶದ ಮೇಲೆ ತಂಡಗಳ ಭವಿಷ್ಯ ನಿರ್ಧಾರವಾಗಲಿದೆ. ಮೊದಲ ಲೆಗ್‌ನಲ್ಲಿ ಮುಂಬೈ 1–0ಯಿಂದ ಎಟಿಕೆ ಮೋಹನ್ ಬಾಗನ್ ತಂಡವನ್ನು ಮಣಿಸಿತ್ತು. ಆದ್ದರಿಂದ ಮುಂಬೈ ಮೇಲುಗೈ ಸಾಧಿಸಲಿದೆ.

ಮುಂಬೈ ಸಿಟಿ ಎಫ್‌ಸಿ ಎದುರಿನ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್‌ ತಂಡಕ್ಕೆ ರಾಯ್ ಕೃಷ್ಣ ಬಲ ತುಂಬುವ ನಿರೀಕ್ಷೆ ಇದೆ –ಐಎಸ್‌ಎಲ್‌ ಮೀಡಿಯಾ ಚಿತ್ರ
ಮುಂಬೈ ಸಿಟಿ ಎಫ್‌ಸಿ ಎದುರಿನ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್‌ ತಂಡಕ್ಕೆ ರಾಯ್ ಕೃಷ್ಣ ಬಲ ತುಂಬುವ ನಿರೀಕ್ಷೆ ಇದೆ –ಐಎಸ್‌ಎಲ್‌ ಮೀಡಿಯಾ ಚಿತ್ರ

ಎರಡು ಸ್ಥಾನಗಳ ಮೇಲೆ ಮೂರು ತಂಡಗಳ ಕಣ್ಣು
ಕೋವಿಡ್‌–19ರಿಂದಾಗಿ ಐ–ಲೀಗ್‌ನಲ್ಲಿ ಈ ಬಾರಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಿದ್ದು ‘ಎ’ ಗುಂಪಿನಿಂದ ಅಗ್ರ ರ‍್ಯಾಂಕಿಂಗ್‌ನ ಆರು ತಂಡಗಳಿಗೆ ಮುಂದಿನ ಸುತ್ತಿನಲ್ಲಿ ಅವಕಾಶ ಸಿಗಲಿದೆ. ‘ಬಿ’ ಗುಂಪಿನಲ್ಲಿ ಐದು ತಂಡಗಳು ಇವೆ. ಚರ್ಚಿಲ್ ಬ್ರದರ್ಸ್‌ ಎಫ್‌ಸಿ, ರಿಯಲ್ ಕಾಶ್ಮೀರ್‌ ಎಫ್‌ಸಿ, ಗೋಕುಲಂ ಕೇರಳ ಎಫ್‌ಸಿ ಮತ್ತು ರೌಂಡ್ ಗ್ಲಾಸ್ ಪಂಜಾಬ್ ಎಫ್‌ಸಿ ತಂಡಗಳು ಈಗಾಗಲೇ ‘ಎ’ ಗುಂಪಿನಿಂದ ಎರಡನೇ ಹಂತಕ್ಕೆ ಅರ್ಹತೆ ಪಡೆದಿವೆ. ಉಳಿದ ಎರಡು ಸ್ಥಾನಗಳಿಗಾಗಿ ಟಿಆರ್‌ಎಯು ಎಫ್‌ಸಿ, ಮೊಹಮ್ಮಡನ್ ಎಫ್‌ಸಿ ಮತ್ತು ಐಜ್ವಾಲ್ ಎಫ್‌ಸಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಈ ಸ್ಥಾನಗಳನ್ನು ನಿರ್ಧರಿಸುವ ಪಂದ್ಯಗಳು ಭಾನುವಾರ ನಡೆಯಲಿವೆ. ಮೊಹಮ್ಮಡನ್ ತಂಡ ರಿಯಲ್ ಕಾಶ್ಮೀರವನ್ನು, ಟಿಆರ್‌ಎಯು ತಂಡ ಸುದೇವ ಡೆಲ್ಲಿಯನ್ನು ಮತ್ತು ಐಜ್ವಾಲ್ ತಂಡ ಚೆನ್ನೈ ಸಿಟಿಯನ್ನು ಎದುರಿಸಲಿದೆ. ಮೊಹಮ್ಮಡನ್ ಮತ್ತು ಟಿಆರ್‌ಎಯು ಗೆದ್ದರೆ ಸುಲಭವಾಗಿ ಮುಂದಿನ ಹಂತಕ್ಕೆ ಪ್ರವೇಶಿಸಲಿವೆ. ಆದರೆ ಐಜ್ವಾಲ್‌ಗೆ ತಾನು ಗೆದ್ದರೆ ಮಾತ್ರ ಸಾಲದು, ಟಿಆರ್‌ಎಯು ಮತ್ತು ಮೊಹಮ್ಮಡನ್ ಪೈಕಿ ಒಂದು ತಂಡ ಸೋಲಬೇಕು. ಟಿಆರ್‌ಎಯು ಮತ್ತು ಮೊಹಮ್ಮಡನ್ ತಂಡಗಳೆರಡೂ ಸೋತರೆ ಐಜ್ವಾಲ್ ಹಾದಿ ಸುಗಮವಾಗಲಿದ್ದು ಚೆನ್ನೈ ವಿರುದ್ಧ ಡ್ರಾ ಸಾಧಿಸಿದರೂ ಸಾಕು.

ಮೊದಲ ಹಂತದ ಪಂದ್ಯಗಳು ಮುಕ್ತಾಯವಾದ ನಂತರ ಅಗ್ರ ಆರು ತಂಡಗಳು ರೌಂಡ್ ರಾಬಿನ್ ಮಾದರಿಯಲ್ಲಿ ತಲಾ ಒಂದು ಬಾರಿ ಮುಖಾಮುಖಿಯಾಗಲಿವೆ. ‘ಬಿ’ ಗುಂಪಿನಲ್ಲಿರುವ ತಂಡಗಳು ಕೂಡ ರೌಂಡ್ ರಾಬಿನ್ ಮಾದರಿಯಲ್ಲಿ ಸೆಣಸಲಿದ್ದು ಅಗ್ರ ಎರಡು ತಂಡಗಳು ಮುಂದಿನ ಹಂತಕ್ಕೆ ಪ್ರವೇಶ ಪಡೆಯಲಿವೆ.

ಮುಂಬೈ ಸಿಟಿ ಎಫ್‌ಸಿ ತಂಡ ಅಗ್ರಸ್ಥಾನದ ಮೇಲೆ ಕಣ್ಣಿಟ್ಟು ಕಣಕ್ಕೆ ಇಳಿಯಲು ಸಜ್ಜಾಗಿದೆ –ಐಎಸ್‌ಎಲ್‌ ಮೀಡಿಯಾ ಚಿತ್ರ
ಮುಂಬೈ ಸಿಟಿ ಎಫ್‌ಸಿ ತಂಡ ಅಗ್ರಸ್ಥಾನದ ಮೇಲೆ ಕಣ್ಣಿಟ್ಟು ಕಣಕ್ಕೆ ಇಳಿಯಲು ಸಜ್ಜಾಗಿದೆ –ಐಎಸ್‌ಎಲ್‌ ಮೀಡಿಯಾ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT