ಹುಲುನ್‌ಬುಯಿರ್ (ಚೀನಾ): ಆತಿಥೇಯ ಚೀನಾ ವಿರುದ್ಧ ಹೋರಾಡಿ 1–0 ಯಿಂದ ಗೆದ್ದ ಭಾರತ ತಂಡ, ಹೀರೊ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಮಂಗಳವಾರ ಚಾಂಪಿಯನ್ ಕಿರೀಟ ಧರಿಸಿತು. ಭಾರತ ಐದನೇ ಸಲ ಈ ಪ್ರಶಸ್ತಿ ಗೆದ್ದುಕೊಂಡಿದೆ.
ಈ ಟೂರ್ನಿಯಲ್ಲಿ ಪ್ರಾಬಲ್ಯ ಸಾಧಿಸಿ ಆಡಿದ ಎಲ್ಲಾ ಆರೂ ಪಂದ್ಯಗಳಲ್ಲಿ ಹರ್ಮನ್‌ಪ್ರೀತ್ ಪಡೆ ಜಯಶಾಲಿಯಾಯಿತು. ಡಿಫೆಂಡರ್ ಜುಗರಾಜ್ ಸಿಂಗ್ ಅಪರೂಪ ಎಂಬಂತೆ ಈ ಪಂದ್ಯದಲ್ಲಿ ಫೀಲ್ಡ್ ಗೋಲು ಗಳಿಸಿದರು. ನಾಲ್ಕನೇ ಕ್ವಾರ್ಟರ್‌ನಲ್ಲಿ (51ನೇ ನಿಮಿಷ) ಗಳಿಸಿದ ಈ ಗೋಲು ಅಂತಿಮವಾಗಿ ನಿರ್ಣಾಯಕವಾಯಿತು.
ಭಾರತಕ್ಕೆ ಗೆಲುವು ಸುಲಭವಾಗಿ ಒಲಿಯಲಿಲ್ಲ. ಮೊದಲು ಮೂರು ಕ್ವಾರ್ಟರ್ (ತಲಾ 15 ನಿಮಿಷ) ಭಾರತ, ಚೀನಾ ‘ಗೋಡೆ’ಯನ್ನು ಭೇದಿಸಲು ಆಗಿರಲಿಲ್ಲ.
ಇದು ಚೀನಾಕ್ಕೆ ಅಂತರರಾಷ್ಟ್ರೀಯ ಹಾಕಿಯಲ್ಲಿ ಕೇವಲ ಎರಡನೇ ಫೈನಲ್ ಆಗಿತ್ತು ಎಂಬುದು ಗಮನಾರ್ಹ. 2006ರ ಏಷ್ಯನ್ ಗೇಮ್ಸ್ ಫೈನಲ್‌ನಲ್ಲಿ ಚೀನಾ, ಕೊರಿಯಾ ಎದುರು 1–3 ರಿಂದ ಸೋತಿತ್ತು.
ಇದಕ್ಕೆ ಮೊದಲು ಪಾಕಿಸ್ತಾನ ತಂಡ 5–2 (ವಿರಾಮದ ವೇಳೆ 0–1) ಗೋಲುಗಳಿಂದ ಕೊರಿಯಾ ತಂಡವನ್ನು ಸೋಲಿಸಿ ಆರು ತಂಡಗಳ ಟೂರ್ನಿಯಲ್ಲಿ ಮೂರನೇ ಸ್ಥಾನ ಪಡೆಯಿತು.
ನೆಚ್ಚಿನ ತಂಡ: ಕಳೆದ ತಿಂಗಳ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತ ಫೈನಲ್‌ನಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಲೀಗ್‌ನಲ್ಲಿ ಚೀನಾ ವಿರುದ್ಧ 3–0 ಗೆಲುವೂ ಸಾಧಿಸಿತ್ತು. ಆದರೆ ಅಂತಿಮವಾಗಿ ಪಂದ್ಯ ನಿಕಟ ಪೈಪೋಟಿಯಿಂದ ಕೂಡಿತು. ಭಾರತಕ್ಕೆ ಹೆಚ್ಚು ಅವಕಾಶಗಳು ದಕ್ಕಿದರೂ, ಚೀನಾ ರಕ್ಷಣೆ ನಿರೀಕ್ಷೆಗಿಂತ ಬಲಿಷ್ಠವಾಗಿತ್ತು. ಪ್ರತಿದಾಳಿಗಳನ್ನೂ ನಡೆಸಿ, ಪ್ರಬಲ ಭಾರತಕ್ಕೆ ಸವಾಲೊಡ್ಡಿತು.
ಅಮೋಘ ಸ್ಟಿಕ್‌ವರ್ಕ್ ಪ್ರದರ್ಶಿಸಿದ ರಾಜಕುಮಾರ್ ಪಾಲ್, ಭಾರತಕ್ಕೆ 10ನೇ ನಿಮಿಷ ಮೊದಲ ಪೆನಾಲ್ಟಿ ಕಾರ್ನರ್ ಗಳಿಸಿಕೊಟ್ಟರು. ಆದರೆ ನಾಯಕ ಹರ್ಮನ್‌ಪ್ರೀತ್ ಅವರ ಪ್ರಯತ್ನ ಈ ಬಾರಿ ಕರಾರುವಾಕ್ ಆಗಿರಲಿಲ್ಲ. ಎರಡು ನಿಮಿಷಗಳ ನಂತರ ನೀಲಕಂಠ ಶರ್ಮಾ ಅವರ ಪ್ರಯತ್ನಕ್ಕೆ ಗೋಲ್ ಕೀಪರ್ ವಾಂಗ್ ತಡೆಯಾದರು.
ಮತ್ತೊಂದು ಅವಕಾಶದಲ್ಲಿ ಜುಗರಾಜ್ ಅವರಿಂದ ದೊರೆತ ಪರಿಪೂರ್ಣ ಪಾಸ್‌ನಲ್ಲಿ ಸುಖಜೀತ್ ಅವರು ಬಾಕ್ಸ್‌ನತ್ತ ಬೀಸಿದ ಚೆಂಡನ್ನು ವಾಂಗ್ ಅಷ್ಟೇ ಚುರುಕಾಗಿ ತಡೆದರು. ಮೊದಲ ಕ್ವಾರ್ಟರ್ ಕೊನೆಯ ಕ್ಷಣದಲ್ಲಿ ಚೀನಾಕ್ಕೆ ಪೆನಾಲ್ಟಿ ಕಾರ್ನರ್ ದೊರೆತರೂ, ಗೋಲಿನೆದುರು ಕಾಯುತ್ತಿದ್ದ ಕೃಷನ್ ಬಹಾದ್ದೂರ್ ಪಾಠಕ್ ಅವರು ಅವಕಾಶ ನೀಡಿಲ್ಲ.
ಎರಡನೇ ಕ್ವಾರ್ಟರ್‌ನಲ್ಲೂ ಪರಿಸ್ಥಿತಿ ಹೆಚ್ಚುಕಮ್ಮಿ ಇದೇ ರೀತಿ ಇತ್ತು. ಚೆಂಡು ಬಹುತೇಕ ಅವಧಿಯಲ್ಲಿ ಭಾರತದ ಆಟಗಾರರ ಹಿಡಿತದಲ್ಲಿತ್ತು. ಆದರೆ ಭಾರತದ ಗೋಲು ಪ್ರಯತ್ನಗಳು ಚೀನಾದ ಪ್ರಬಲ ರಕ್ಷಣೆಯಿಂದ ಫಲಪ್ರದವಾಗಲಿಲ್ಲ. ಭಾರತದ ಒತ್ತಡಕ್ಕೆ ಚೀನಾ ಅಳುಕಲಿಲ್ಲ. ಅಂಜಲೂ ಇಲ್ಲ. ಸಂಯಮದಿಂದ ಆಡಿತು. ಹೀಗಾಗಿ ವಿರಾಮದವರೆಗಿನ ಅವಧಿ ಗೋಲಿಲ್ಲದೇ ಕಳೆಯಿತು.
ಬದಿಗಳು ಬದಲಾಗುತ್ತಿದ್ದಂತೆ, ಚೀನಾ ಮೊದಲಿಗಿಂತ ಉತ್ಸಾಹದಿಂದ ಭಾರತದ ಗೋಲಿನತ್ತ ಸರಣಿ ದಾಳಿಗಳನ್ನು ನಡೆಸಿತು. 38ನೇ ನಿಮಿಷ ಎರಡನೇ ಪೆನಾಲ್ಟಿ ಕಾರ್ನರ್ ಕೂಡ ಗಿಟ್ಟಿಸಿತ್ತು. 40ನೇ ನಿಮಿಷ ಮತ್ತೊಂದು ಕಾರ್ನರ್ ಪಡೆದರೂ, ಗೋಲುಗಂಬದಡಿ ಪಾಠಕ್ ಜಾಗೃತರಾಗಿದ್ದರು.
ಈ ಹಂತದಲ್ಲಿ ನಾಯಕನ ಕೈಚಳಕ ಮತ್ತೊಮ್ಮೆ ಭಾರತದ ನೆರವಿಗೆ ಬಂತು. ಒಳ್ಳೆಯ ಲಯದಲ್ಲಿರುವ ಹರ್ಮನ್‌ಪ್ರೀತ್, ಕೌಶಲದ ನಡೆಯೊಡನೆ ಚೆಂಡನ್ನು ಚೀನಾದ ಗೋಲು ಆವರಣದ ಬಳಿ ಮುನ್ನಡೆಸಿ, ಅಲ್ಲಿ ಕಾಯುತ್ತಿದ್ದ ಜುಗರಾಜ್ ಕಡೆಗೆ ಪಾಸ್ ಮಾಡಿದರು. ಅವರು ಚೀನಾ ಗೋಲಿಯನ್ನು ವಂಚಿಸಿ ಚೆಂಡನ್ನು ಗುರಿತಲುಪಿಸಿದರು.
ಪ್ರೇಕ್ಷಕರ ಬೆಂಬಲದ ನಡುವೆ ಚೀನಾ, ಮುಕ್ತಾಯಕ್ಕೆ ನಾಲ್ಕು ನಿಮಿಷಗಳಿರುವಾಗ ಗೋಲ್ ಕೀಪರ್‌ನನ್ನು ಹೆಚ್ಚುವರಿ ಆಟಗಾರನಾಗಿ ಬಳಸಿ, ಭಾರತದ ಮೇಲೆ ಒತ್ತಡ ಹೇರುವ ತಂತ್ರಕ್ಕೆ ಮುಂದಾಯಿತು. ಆದರೆ ಭಾರತದ ರಕ್ಷಣೆ ಆಟಗಾರರೂ ಮೊದಲೇ ಅರಿತವರಂತೆ, ಅಪಾಯಕ್ಕೆ ಅವಕಾಶ ನೀಡಲಿಲ್ಲ.
India's Asian Champions Trophy heroes rewarded! 🏆🇮🇳
— Hockey India (@TheHockeyIndia) September 17, 2024
The victorious Indian Men's Hockey Team gets a well-deserved bonus for their record 5th title win! Each player will receive ₹3 lakhs, while support staff members will be awarded ₹1.5 lakhs each.
This well-deserved reward… pic.twitter.com/cvI8avkpvx
After a fiercely contested 50 minutes of non-stop action, India finally broke through the deadlock with a crucial strike from Jugraj Singh, making it 1-0. That lone goal was all it took to secure the victory, and with it, the title!
— Hockey India (@TheHockeyIndia) September 17, 2024
Congratulations to the entire squad for their… pic.twitter.com/JPAdHQcogA
ಟ್ರೋಫಿಯೊಂದಿಗೆ ಹರ್ಮನ್‌ಪ್ರೀತ್ ಸಿಂಗ್
–ಹಾಕಿ ಇಂಡಿಯಾ ಎಕ್ಸ್ ಚಿತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.