ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌ಗೆ ಲೀ ವಿದಾಯ

Last Updated 13 ಜೂನ್ 2019, 20:18 IST
ಅಕ್ಷರ ಗಾತ್ರ

ಪುತ್ರಜಯ (ಮಲೇಷಿಯಾ): ಕ್ಯಾನ್ಸರ್‌ಪೀಡಿತ ಬ್ಯಾಡ್ಮಿಂಟನ್‌ ತಾರೆ ಲೀ ಚೊಂಗ್‌ ವಿ ಅವರು ಗುರುವಾರ ವಿದಾಯ ಹೇಳಿದರು. ತಮ್ಮ ಉಜ್ವಲ ವೃತ್ತಿಜೀವನದಲ್ಲಿ ಹಲವು ಗೌರವಗಳಿಗೆ ಪಾತ್ರರಾದ ಮಲೇಷಿಯಾದ ಚೊಂಗ್‌ ವಿ ಅವರಿಗೆ ಒಲಿಂಪಿಕ್‌ ಚಿನ್ನವಾಗಲಿ, ವಿಶ್ವ ಚಾಂಪಿಯನ್‌ಷಿಪ್‌ ಪ್ರಶಸ್ತಿಯಾಗಲಿ ಗಗನಕುಸುಮವಾಯಿತು.

ಒಟ್ಟು 348 ವಾರಗಳ ಕಾಲ ವಿಶ್ವದ ಅಗ್ರಮಾನ್ಯ ಆಟಗಾರನ ಪಟ್ಟ ಅಲಂಕರಿಸಿದ್ದ ಲೀ, ತಿಂಗಳುಗಳಿಂದ ಕಾಡುತ್ತಿದ್ದ ಮೂಗಿನ ಕ್ಯಾನ್ಸರ್‌ನಿಂದಾಗಿ ಪತ್ರಿಕಾಗೋಷ್ಠಿಯಲ್ಲಿ ವಿದಾಯ ಹೇಳುವಾಗ ಕಣ್ಣೀರು ಮಿಡಿದರು.

ಒಟ್ಟು ಆರು ಬಾರಿ ಒಲಿಂಪಿಕ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ ಫೈನಲ್‌ ಪ್ರವೇಶಿಸಿದರೂ, ಪ್ರಶಸ್ತಿ ಅವರಿಗೆ ಸ್ವಲ್ಪದರಲ್ಲಿ ತಪ್ಪಿಹೋಗಿತ್ತು.

‘ನಿವೃತ್ತಿ ನಿರ್ಧಾರ ತೆಗೆದುಕೊಳ್ಳುವಾಗ ಮನಸ್ಸು ತುಂಬಾ ಭಾರವೆನಿಸಿತು. ಇದು ನಾನು ಬಹುವಾಗಿ ಪ್ರೀತಿಸುವ ಆಟ. ಆದರೆ ಇಲ್ಲಿ ಕ್ಷಮತೆ ಬೇಕಾಗುತ್ತದೆ. ನನ್ನನ್ನು 19 ವರ್ಷಗಳಿಂದ ಪ್ರೋತ್ಸಾಹಿಸಿದ ಮಲೇಷಿಯನ್ನರಿಗೆ ಧನ್ಯವಾದಗಳು’ ಎಂದರು.

ಇಬ್ಬರು ಮಕ್ಕಳ ತಂದೆಯಾಗಿರುವ ಲೀ ಅವರಿಗೆ ಕಳೆದ ವರ್ಷ ಆರಂಭಿಕ ಹಂತದ ಮೂಗಿನ ಕ್ಯಾನ್ಸರ್‌ ಇರುವುದು ಪತ್ತೆಯಾಗಿತ್ತು. ತೈವಾನ್‌ನಲ್ಲಿ ಚಿಕಿತ್ಸೆಯ ನಂತರ, ಆಡಲು ಉತ್ಸುಕನಾಗಿರುವುದಾಗಿ ಹೇಳಿದ್ದರು.

ಏಪ್ರಿಲ್‌ ನಂತರ ಅವರು ತರಬೇತಿಗೆ ಇಳಿದಿರಲಿಲ್ಲ. ಸ್ಪರ್ಧಾಕಣಕ್ಕೆ ಮರಳಲು ತಾವೇ ಹಾಕಿಕೊಂಡ ಕೆಲವು ಗಡುವು ತಪ್ಪಿಸಿಕೊಂಡ ನಂತರ ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ಗೆ ಮರಳುವ ಆಸೆ ಕ್ಷೀಣವಾಗಿತ್ತು. ಈ ಹಿಂದೆ ಮೂರು ಬಾರಿ ಅವರು ಒಲಿಂಪಿಕ್ಸ್‌ ಬೆಳ್ಳಿ ಪದಕ ಪಡೆದಿದ್ದಾರೆ. ಚೀನಾದ ಬ್ಯಾಡ್ಮಿಂಟನ್‌ ಸೂಪರ್‌ಸ್ಟಾರ್ ಲಿನ್‌ ಡಾನ್‌ ಜೊತೆ ಅವರದ್ದು ದೀರ್ಘಕಾಲಿನ ಪೈಪೋಟಿ.

2016ರಲ್ಲಿ ಅವರು ಕೊನೆಯ ಬಾರಿ ರಿಯೊ ಒಲಿಂಪಿಕ್ಸ್‌ ಫೈನಲ್‌ನಲ್ಲಿ ಆಡಿದ್ದರು. ಆದರೆ ಅಲ್ಲಿ ಚೀನಾದ ಚೆನ್‌ ಲಾಂಗ್ ಎದುರು ರೋಚಕ ಹೋರಾಟದ ನಂತರ ಸೋಲನುಭವಿಸಿದ್ದರು.

‘ಟೋಕಿಯೊ ಒಲಿಂಪಿಕ್ಸ್‌ ನಂತರ ವಿದಾಯಕ್ಕೆ ನಿರ್ಧರಿಸಿದ್ದೆ. ನನಗಿನ್ನು ವಿಶ್ರಾಂತಿ ಬೇಕಾಗಿದೆ. ಇನ್ನು ಕುಟುಂಬದ ಜೊತೆ ಕಳೆಯುತ್ತೇನೆ’ ಎಂದರು.

2014ರಲ್ಲಿ ನಿಷೇಧಿತ ಮದ್ದು ಸೇವನೆಗಾಗಿ ಅವರ ಮೇಲೆ ನಿಷೇಧ ಹೇರಲಾಗಿತ್ತು. ಆದರೆ ಅರಿವಿಲ್ಲದೇ ಈ ಮದ್ದು ತೆಗೆದುಕೊಂಡಿದ್ದೆ ಎಂಬ ಲೀ ವಾದವನ್ನು ಒಪ್ಪಿದ ಅಧಿಕಾರಿಗಳು ನಿಷೇಧ ತೆರವು ಮಾಡಿದ್ದರು.

ಮಾಧ್ಯಮಗೋಷ್ಠಿಯಲ್ಲಿ ಕಣ್ಣೀರುಗರೆದ ಲೀ
ಮಾಧ್ಯಮಗೋಷ್ಠಿಯಲ್ಲಿ ಕಣ್ಣೀರುಗರೆದ ಲೀ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT