ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್: ಭಾರತ ತಂಡಗಳಿಗೆ ಕಂಚು

ಚೆಸ್‌ ಒಲಿಂಪಿಯಾಡ್‌; ಮುಕ್ತ ವಿಭಾಗದಲ್ಲಿ ‘ಬಿ’ ತಂಡಕ್ಕೆ ಮೂರನೇ ಸ್ಥಾನ
Last Updated 9 ಆಗಸ್ಟ್ 2022, 20:33 IST
ಅಕ್ಷರ ಗಾತ್ರ

ಮಹಾಬಲಿಪುರಂ: ವಿಶ್ವದ ಶ್ರೇಷ್ಠ ಚೆಸ್‌ ತಂಡವನ್ನು ನಿರ್ಧರಿಸಲು ನಡೆದ ಚೆಸ್‌ ಒಲಿಂಪಿಯಾಡ್‌ನ ಮುಕ್ತ ವಿಭಾಗದಲ್ಲಿ ಭಾರತ ‘ಬಿ’ ತಂಡ ಹಾಗೂ ಮಹಿಳೆಯರ ವಿಭಾಗದಲ್ಲಿ ಭಾರತ ‘ಎ’ ತಂಡಗಳು ಕಂಚಿನ ಪದಕ ಪಡೆದುಕೊಂಡವು.

ಚೆನ್ನೈ ಸಮೀಪದ ಮಹಾಬಲಿಪುರಂನಲ್ಲಿ ಆಯೋಜಿಸಲಾಗಿದ್ದ 44ನೇ ಚೆಸ್‌ ಒಲಿಂಪಿಯಾಡ್‌ಗೆ ಮಂಗಳವಾರ ತೆರೆಬಿತ್ತು.

ಮುಕ್ತ ವಿಭಾಗದಲ್ಲಿ ಉಜ್ಬೆಕಿಸ್ತಾನ ಚಿನ್ನ ಹಾಗೂ ಅರ್ಮೇನಿಯಾ ಬೆಳ್ಳಿ ಜಯಿಸಿತು. ಮಹಿಳೆಯರ ವಿಭಾಗದಲ್ಲಿ ಉಕ್ರೇನ್‌ ಚಾಂಪಿಯನ್‌ ಆದರೆ, ಜಾರ್ಜಿಯ ಎರಡನೇ ಸ್ಥಾನ ಗಳಿಸಿತು.

ಭಾರತ ‘ಬಿ’ ತಂಡ 11ನೇ ಹಾಗೂ ಕೊನೆಯ ಸುತ್ತಿನ ಪಂದ್ಯದಲ್ಲಿ 3–1 ಪಾಯಿಂಟ್‌ಗಳಿಂದ ಜರ್ಮನಿ ತಂಡವನ್ನು ಮಣಿಸಿ ಒಟ್ಟು 18 ಪಾಯಿಂಟ್‌ ಕಲೆಹಾಕಿತು. 17 ಪಾಯಿಂಟ್‌ ಸಂಗ್ರಹಿಸಿದ ಭಾರತ ‘ಎ’ ತಂಡ ನಾಲ್ಕನೇ ಸ್ಥಾನ ಪಡೆಯಿತು. ‘ಸಿ’ ತಂಡ 31ನೇ ಸ್ಥಾನ ಗಳಿಸಿತು.

ಚೆಸ್‌ ಒಲಿಂಪಿಯಾಡ್‌ನ ಮುಕ್ತ ವಿಭಾಗದಲ್ಲಿ ಭಾರತಕ್ಕೆ ಎರಡನೇ ಬಾರಿ ಕಂಚು ಲಭಿಸಿದೆ. ಈ ಹಿಂದೆ 2014 ರಲ್ಲೂ ಇದೇ ಸಾಧನೆ ಮಾಡಿತ್ತು. ಕಂಚು ಗೆದ್ದ ತಂಡದಲ್ಲಿ ನಿಹಾಲ್‌ ಸರೀನ್‌, ಡಿ.ಗುಕೇಶ್‌, ಬಿ.ಅಧಿಬನ್‌, ಆರ್‌.ಪ್ರಗ್ನಾನಂದ ಮತ್ತು ರೌನಕ್‌ ಸಾಧ್ವಾನಿ ಇದ್ದಾರೆ.

ಉಜ್ಬೆಕಿಸ್ತಾನ ಕೊನೆಯ ಸುತ್ತಿನಲ್ಲಿ 2–1 ರಲ್ಲಿ ನೆದರ್ಲೆಂಡ್ಸ್‌ಗೆ ಸೋಲುಣಿಸಿ ಅಗ್ರಸ್ಥಾನಕ್ಕೇರಿ ಅಚ್ಚರಿ ಮೂಡಿಸಿತು. ಅರ್ಮೇನಿಯ 2.5–1.5 ರಲ್ಲಿ ಸ್ಪೇನ್‌ ತಂಡವನ್ನು ಮಣಿಸಿತು. ಉಜ್ಬೆಕಿಸ್ತಾನ ಮತ್ತು ಅರ್ಮೇನಿಯಾ ತಂಡಗಳು ತಲಾ 19 ಪಾಯಿಂಟ್ಸ್‌ ಸಂಗ್ರಹಿಸಿದವು. ಆದರೆ ಟೈಬ್ರೇಕರ್‌ನಲ್ಲಿ ಚಿನ್ನ ಉಜ್ಬೆಕಿಸ್ತಾನಕ್ಕೆ ಲಭಿಸಿತು.

ಮಹಿಳೆಯರ ವಿಭಾಗದಲ್ಲಿ ಅಗ್ರಶ್ರೇಯಾಂಕ ಹೊಂದಿದ್ದ ಕೊನೇರು ಹಂಪಿ ನೇತೃತ್ವದ ಭಾರತ ‘ಎ’ ಕೊನೆಯ ಸುತ್ತಿನಲ್ಲಿ 1–3 ರಲ್ಲಿ ಅಮೆರಿಕ ಎದುರು ಪರಾಭವಗೊಂಡಿತು. ಇದರಿಂದ ಚಿನ್ನ ಗೆಲ್ಲುವ ಅವಕಾಶ ಕೈತಪ್ಪಿಹೋಯಿತು.

ಯುದ್ಧದಿಂದ ನಲುಗಿರುವ ಉಕ್ರೇನ್‌ ದೇಶದ ತಂಡ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್‌ ಆಯಿತು. ಉಕ್ರೇನ್‌ ಮತ್ತು ಜಾರ್ಜಿಯ 18 ಪಾಯಿಂಟ್ಸ್‌ ಗಳಿಸಿದವು. ಟೈಬ್ರೇಕರ್‌ನಲ್ಲಿ ಚಿನ್ನ ಉಕ್ರೇನ್‌ ಪಾಲಾಯಿತು.

ಭಾರತ, ಅಮೆರಿಕ ಮತ್ತು ಕಜಕಸ್ತಾನ ತಂಡಗಳು 17 ಪಾಯಿಂಟ್ಸ್‌ ಗಳಿಸಿದವು. ಟೈಬ್ರೇಕರ್‌ನಲ್ಲಿ ಇತರ ತಂಡಗಳನ್ನು ಹಿಂದಿಕ್ಕಿದ ಭಾರತಕ್ಕೆ ಮೂರನೇ ಸ್ಥಾನ ದೊರೆಯಿತು.

ಮಹಿಳೆಯರ ತಂಡದಲ್ಲಿ ಕೊನೇರು ಹಂಪಿ ಅಲ್ಲದೆ ಹರಿಕ ದ್ರೋನವಳಿ, ಆರ್.ವೈಶಾಲಿ, ಭಕ್ತಿ ಕುಲಕರ್ಣಿ, ತಾನಿಯಾ ಸಚ್‌ದೇವ್‌ ಅವರು ಆಡಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಭಾರತ ‘ಬಿ’ ತಂಡ ಎಂಟನೇ ಹಾಗೂ ‘ಸಿ’ ತಂಡ 17ನೇ ಸ್ಥಾನ ಪಡೆದವು.

ಚೆಸ್‌ ಒಲಿಂಪಿಯಾಡ್‌ನಲ್ಲಿ ಈ ಬಾರಿ ದಾಖಲೆ ಸಂಖ್ಯೆಯ ತಂಡಗಳು ಪಾಲ್ಗೊಂಡಿದ್ದವು. ಮುಕ್ತ ವಿಭಾಗದಲ್ಲಿ 188 ಹಾಗೂ ಮಹಿಳೆಯರ ವಿಭಾಗದಲ್ಲಿ 162 ತಂಡಗಳು ಇದ್ದವು.

‘ಎ’ ತಂಡಕ್ಕೆ 4ನೇ ಸ್ಥಾನ

ಅನುಭವಿ ಆಟಗಾರರನ್ನು ಒಳಗೊಂಡ ಭಾರತ ‘ಎ’ ತಂಡ ಮುಕ್ತ ವಿಭಾಗದಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿತು.

ಗ್ರ್ಯಾಂಡ್‌ಮಾಸ್ಟರ್‌ಗಳಾದ ವಿದಿತ್‌ ಗುಜರಾತಿ, ಪಿ.ಹರಿಕೃಷ್ಣ, ಅರ್ಜುನ್‌ ಎರಿಗೈಸಿ, ಎಸ್‌.ಎಲ್‌.ನಾರಾಯಣನ್‌ ಮತ್ತು ಕೃಷ್ಣನ್‌ ಶಶಿಕಿರಣ್‌ ಈ ತಂಡದಲ್ಲಿದ್ದರು. ‘ಎ’ ತಂಡ ಕೊನೆಯ ಪಂದ್ಯದಲ್ಲಿ ಅಮೆರಿಕ ಜತೆ 2–2 ರಲ್ಲಿ ಡ್ರಾ ಸಾಧಿಸಿತು.

ಮುಕ್ತ ವಿಭಾಗದಲ್ಲಿ ಅಗ್ರಶ್ರೇಯಾಂಕ ಹೊಂದಿದ್ದ ಅಮೆರಿಕ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿ ಐದನೇ ಸ್ಥಾನ ಗಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT