ಗುರುವಾರ , ಸೆಪ್ಟೆಂಬರ್ 23, 2021
26 °C

Tokyo Olympics: ನಾಲ್ಕು ದಶಕಗಳ ಬಳಿಕ ಹಾಕಿಯಲ್ಲಿ ಪದಕ ಗೆದ್ದ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಕಿಯೊ: ಬರೋಬ್ಬರಿ ನಾಲ್ಕು ದಶಕಗಳ ಬಳಿಕ ಒಲಿಂಪಿಕ್ಸ್ ಪುರುಷ ಹಾಕಿ ವಿಭಾಗದಲ್ಲಿ ಭಾರತ ಪದಕ ಗೆದ್ದ ಸಾಧನೆ ಮಾಡಿದೆ. ಇದು ರಾಷ್ಟ್ರೀಯ ಕ್ರೀಡೆ ಹಾಕಿ ಪಾಲಿಗೆ ಐತಿಹಾಸಿಕ ಕ್ಷಣವಾಗಿದೆ. 

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಗುರುವಾರ ನಡೆದ ಮೂರನೇ ಸ್ಥಾನಕ್ಕಾಗಿ ಹೋರಾಟದಲ್ಲಿ ಭಾರತ ತಂಡವು ಜರ್ಮನಿ ವಿರುದ್ಧ 5-4 ಗೋಲುಗಳ ಅಂತರದ ಭರ್ಜರಿ ಗೆಲುವು ದಾಖಲಿಸಿ ಕಂಚಿನ ಪದಕ ಜಯಿಸಿತು.  

ಗೋಲುಗಳ ಸುರಿಮಳೆಯೇ ನಡೆದ ಪಂದ್ಯದಲ್ಲಿ ಭಾರತೀಯ ಆಟಗಾರರು ಅದ್ಭುತ ಪ್ರದರ್ಶನ ನೀಡುವ ಮೂಲಕ ಅರ್ಹ ಗೆಲುವು ದಾಖಲಿಸಲು ನೆರವಾದರು. 

 

1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಭಾರತ ಚಿನ್ನದ ಪದಕ ಜಯಿಸಿತ್ತು. ಈಗ 41 ವರ್ಷಗಳ ಬಳಿಕ ಮತ್ತೆ ಪದಕ ಗೆದ್ದ ಸಾಧನೆ ಮಾಡಿದೆ. 

ಪಂದ್ಯ ಕೊನೆಗೊಳ್ಳಲು ಕೇವಲ ಆರು ಸೆಕೆಂಡುಗಳು ಮಾತ್ರ ಬಾಕಿ ಉಳಿದಿರುವಾಗ ಜರ್ಮನಿಗೆ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ತಡೆ ಹಿಡಿದ ಭಾರತದ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಮಗದೊಮ್ಮೆ ಶ್ರೀರಕ್ಷೆಯಾದರು. 

ಇದಕ್ಕೂ ಮೊದಲು 1-3 ಗೋಲುಗಳ ಹಿನ್ನಡೆ ಅನುಭವಿಸಿದ ಭಾರತ ಭರ್ಜರಿ ಪ್ರದರ್ಶನ ನೀಡುವ ಮೂಲಕ ತಿರುಗೇಟು ನೀಡಿತು. ಅಲ್ಲದೆ 5-3 ಗೋಲುಗಳ ಮುನ್ನಡೆ ದಾಖಲಿಸಿತು. ಕೊನೆಯ ಕ್ವಾರ್ಟರ್‌ನಲ್ಲಿ ಜರ್ಮನಿ ಸರ್ವ ಪ್ರಯತ್ನವನ್ನು ಮಾಡಿ ಅಂತರವನ್ನು 4-5ಕ್ಕೆ ತಗ್ಗಿಸಿದರೂ ಭಾರತದ ಭದ್ರಕೋಟೆಯ ಮುಂದೆ ಏನು ಮಾಡಲು ಸಾಧ್ಯವಾಗದೇ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. 

ಭಾರತದ ಪರ ಸಿಮ್ರಾನ್‌ಜೀತ್ ಎರಡು ಮತ್ತು ಹಾರ್ದಿಕ್ ಸಿಂಗ್ ಹರ್ಮನ್‌ಪ್ರೀತ್ ಹಾಗೂ ರೂಪಿಂದರ್ ಪಾಲ್ ಸಿಂಗ್ ತಲಾ ಒಂದು ಗೋಲು ಬಾರಿಸಿ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. 

ಇದನ್ನೂ ಓದಿ: 

ಐತಿಹಾಸಿಕ ದಿನ...ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ...

ಭಾರತದ ಪರ ಗೋಲು ದಾಖಲಿಸಿದ ಆಟಗಾರರ ಪಟ್ಟಿ:
ಸಿಮ್ರಾನ್‌ಜೀತ್ ಸಿಂಗ್ (17ನೇ ಹಾಗೂ 34ನೇ ನಿಮಿಷ),
ಹಾರ್ದಿಕ್ ಸಿಂಗ್ (27ನೇ ನಿಮಿಷ),
ಹರ್ಮನ್‌ಪ್ರೀತ್ ಸಿಂಗ್ (29ನೇ ನಿಮಿಷ)
ರೂಪಿಂದರ್ ಪಾಲ್ ಸಿಂಗ್ (31ನೇ ನಿಮಿಷ)

ಪುರುಷ ಹಾಕಿಯಲ್ಲಿ ಮೂರನೇ ಕಂಚಿನ ಪದಕದ ಸಾಧನೆ:
ಈ ಹಿಂದೆ 1968ರ ಮೆಕ್ಸಿಕೋ ಸಿಟಿ ಹಾಗೂ 1972ರ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲೂ ಕಂಚಿನ ಪದಕ ಜಯಿಸಿತ್ತು.

ಅಂದ ಹಾಗೆ ಪುರುಷ ಹಾಕಿಯಲ್ಲಿ ಭಾರತ ಒಟ್ಟು ಎಂಟು ಚಿನ್ನದ ಪದಕಗಳನ್ನು ಜಯಿಸಿದೆ.

ಗೆಲುವಿನ ರೋಚಕ ಕ್ಷಣ:

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು