ವಿಂಬಲ್ಡನ್ ಟೆನಿಸ್: ಜೊಕೊವಿಚ್, ಆ್ಯಂಡರ್ಸನ್ ಶುಭಾರಂಭ

ಲಂಡನ್: ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಚ್ ಹಾಗೂ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಗೆಲುವಿನ ಆರಂಭ ಕಂಡರು. ಮೊದಲ ಸುತ್ತಿನ ಪಂದ್ಯದಲ್ಲಿ ಫಿಲಿಪ್ ಕೋಲ್‌ಸ್ರೆಬರ್ ಅವರನ್ನು ಜೊಕೊವಿಚ್ 6–3, 7–5, 6–3 ಸೆಟ್ ಗಳಿಂದ ಸೋಲಿಸಿದರು. ಇನ್ನೊಂದು ಪಂದ್ಯದಲ್ಲಿ ಫ್ರಾನ್ಸ್‌ನ ಪಿಯರ್ ಹ್ಯುಜಸ್ ಹರ್ಬರ್ಟ್ ಅವರಿಗೆ 6–3, 6–4, 6–2 ಸೆಟ್‌ಗಳಿಂದ ಕೆವಿನ್ ಸೋಲಿನ ರುಚಿ ತೋರಿಸಿದರು.
ಮೊಣಕೈ ಗಾಯದ ಕಾರಣ ಈ ಋತುವಿನಲ್ಲಿ ಕೇವಲ ಮೂರು ಟೂರ್ನಿಗಳಲ್ಲಿ ಮಾತ್ರ ಆಡಿದ್ದ ಆ್ಯಂಡರ್ಸನ್, ಡಬಲ್ಸ್ ಪರಿಣತ ಆಟಗಾರನನ್ನು ಮಣಿಸುವಲ್ಲಿ ಯಶಸ್ವಿಯಾದರು. ಎರಡನೇ ಸುತ್ತಿನಲ್ಲಿ ಆ್ಯಂಡರ್ಸನ್ ಅವರು ಸರ್ಬಿಯಾದ ಜಾಂಕೊ ತಿಪ್ಸಾರೆವಿಕ್ ಅಥವಾ ಜಪಾನ್‌ನ ಯೋಶಿಹಿಟೊ ನಿಶಿಯೊಕಾ ಅವರನ್ನು ಮುಖಾಮುಖಿಯಾಗುವರು.
ಮತ್ತೊಂದು ಪಂದ್ಯದಲ್ಲಿ ಸೊಗಸಾದ ಪ್ರದರ್ಶನ ತೋರಿದ ಹಲವು ಗ್ರ್ಯಾನ್‌ಸ್ಲಾಮ್ ವಿಜೇತ ಸ್ಟ್ಯಾನ್ ವಾವ್ರಿಂಕ, ಅರ್ಹತಾ ಸುತ್ತಿನಿಂದ ಗೆದ್ದು ಬಂದ ಆಟಗಾರ ಬೆಲ್ಜಿಯಂನ ರುಬೆನ್ ಬೆಮೆಲ್‌ಮನ್ಸ್ ಅವರನ್ನು 6–3, 6–2, 6–2 ಸೆಟ್‌ಗಳಿಂದ ಮಣಿಸಿದರು.
ವಿಶ್ವ ರ‍್ಯಾಂಕಿಂಗ್‌ನಲ್ಲಿ 171ನೇ ಸ್ಥಾನದಲ್ಲಿರುವ ಬೆಮೆಲ್‌ಮನ್ಸ್ ಭಾರೀ ವೈಫಲ್ಯ ಕಂಡರು. ಬಲಿಷ್ಠ ಹೊಡೆತಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ ವಾವ್ರಿಂಕ ಅವರಿಗೆ ಗೆಲುವು ಒಲಿಯಿತು. ಮುಂದಿನ ಪಂದ್ಯದಲ್ಲಿ ಅವರು ಅಮೆರಿಕಾದ ರೇಲಿ ಒಪೆಲ್ಕಾ ಅವರ ಸವಾಲು ಎದುರಿಸುವರು.
ಮಹಿಳಾ ಸಿಂಗಲ್ಸ್‌ನಲ್ಲಿ ಮೂರನೇ ಶ್ರೇಯಾಂಕದ ಆಟಗಾರ್ತಿ ಕರೋಲಿನಾ ಪ್ಲಿಸ್ಕೊವ ಅವರು ಚೀನಾದ ಜು ಲಿನ್ ಅವರನ್ನು 6–2, 7–6 (7/4) ಸೆಟ್‌ಗಳಿಂದ ಸೋಲಿಸಿ ಎರಡನೇ ಸುತ್ತಿಗೆ ಕಾಲಿಟ್ಟರು.
ಸತತ 70ನೇ ಗ್ರ್ಯಾನ್‌ಸ್ಲಾಮ್‌ನಲ್ಲಿ ಕಾಣಿಸಿಕೊಂಡ ಫೆಲಿಸಿಯಾನೊ ಲೊಪೆಜ್: ಸ್ಪೇನ್ ಹಿರಿಯ ಆಟಗಾರ ಫೆಲಿಸಿಯಾನೊ ಲೋಪೆಜ್ ವಿಂಬಲ್ಡನ್ ಟೂರ್ನಿಯಲ್ಲಿ ಆಡುವ ಮೂಲಕ ದಾಖಲೆಯ ಸತತ 70ನೇ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಕಾಣಿಸಿಕೊಂಡರು. 37 ವರ್ಷದ ಈ ಆಟಗಾರ 2002ರ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಿಂದ ಇಲ್ಲಿಯವರೆಗೆ ಪ್ರತೀ ಗ್ರ್ಯಾನ್‌ಸ್ಲಾಮ್‌ನಲ್ಲೂ ಕಣಕ್ಕಿಳಿದಿದ್ದಾರೆ. ಫೆಡರರ್ ಸತತ 65 ಗ್ರ್ಯಾನ್‌ಸ್ಲಾಮ್‌ಗಳಲ್ಲಿ ಆಡಿದ ದಾಖಲೆ ಹೊಂದಿದ್ದರೆ, ಮತ್ತೊಬ್ಬ ಸ್ಪೇನ್ ಆಟಗಾರ ಫರ್ನಾಂಡೊ ವರ್ಡಾಸ್ಕೊ ಕೂಡ 65 ಗ್ರ್ಯಾನ್‌ಸ್ಲಾಮ್‌ಗಳಲ್ಲಿ ಪಾಲ್ಗೊಂಡ ಸಾಧನೆಗೆ ಪಾತ್ರರಾಗಿದ್ದಾರೆ.
ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಲೋಪೆಜ್ ಅವರು ಅರ್ಹತಾ ಸುತ್ತಿನಿಂದ ಗೆದ್ದುಬಂದ ಅಮೆರಿಕಾದ ಆಟಗಾರ ಮಾರ್ಕೊಸ್ ಗಿರನ್ ಅವರನ್ನು ಮಣಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.