ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

US Open 2024: 2ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದು ಬೀಗಿದ ಯಾನಿಕ್ ಸಿನ್ನರ್

Published : 9 ಸೆಪ್ಟೆಂಬರ್ 2024, 1:59 IST
Last Updated : 9 ಸೆಪ್ಟೆಂಬರ್ 2024, 1:59 IST
ಫಾಲೋ ಮಾಡಿ
Comments

ನ್ಯೂಯಾರ್ಕ್: ವಿಶ್ವದ ಅಗ್ರಮಾನ್ಯ ಆಟಗಾರ ಯಾನಿಕ್‌ ಸಿನ್ನರ್‌ ಅವರು ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಆಸ್ಟ್ರೇಲಿಯಾ ಓಪನ್‌ ಹಾಲಿ ಚಾಂಪಿಯನ್‌, 23 ವರ್ಷ ವಯಸ್ಸಿನ ಸಿನ್ನರ್‌ ಅವರಿಗೆ ಇದು ಎರಡನೇ ಗ್ರ್ಯಾನ್‌ಸ್ಲಾಮ್‌ ಕಿರೀಟವಾಗಿದೆ. ಈ ಗೆಲುವಿನೊಂದಿಗೆ ಅಮೆರಿಕ ಓಪನ್‌ ಗೆದ್ದ ಇಟಲಿಯ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರವಾದರು.

ಇಲ್ಲಿನ ಆರ್ಥರ್‌ ಆ್ಯಷ್‌ ಕ್ರೀಡಾಂಗಣದಲ್ಲಿ ಭಾನುವಾರ ತಡರಾತ್ರಿ ನಡೆದ ಫೈನಲ್‌ ಹಣಾಹಣಿಯಲ್ಲಿ ಅಗ್ರ ಶ್ರೇಯಾಂಕಕ್ಕೆ ತಕ್ಕ ಆಟವಾಡಿದ ಸಿನ್ನರ್‌ 6-3, 6-4, 7-5ರ ನೇರ ಸೆಟ್‌ಗಳಿಂದ ಆತಿಥೇಯ ದೇಶದ ಯುವ ತಾರೆ ಟೇಲರ್‌ ಫ್ರಿಟ್ಜ್‌ ಅವರನ್ನು ಸೋಲಿಸಿದರು.

ಪ್ರಸಕ್ತ ಋತುವಿನಲ್ಲಿ ಅದ್ಭುತ ಲಯದಲ್ಲಿರುವ ಸಿನ್ನರ್ ಅವರಿಗೆ ಇದು 55ನೇ ಪಂದ್ಯದ ಗೆಲುವುವಾಗಿದೆ. ಆಸ್ಟ್ರೇಲಿಯಾ ಓಪನ್‌ ಪ್ರಶಸ್ತಿಯೊಂದಿಗೆ ಋತು ಆರಂಭಿಸಿದ್ದ ಅವರಿಗೆ ಇದು ಆರನೇ ಪ್ರಶಸ್ತಿಯಾಗಿದೆ. ಜೊತೆಗೆ ಒಂದೇ ವರ್ಷದಲ್ಲಿ ಎರಡು ಹಾರ್ಡ್‌ಕೋರ್ಟ್‌ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎಂಬ ಕೀರ್ತಿ ಅವರದಾಯಿತು.

ಪ್ರಸಕ್ತ ಋತುವಿನಲ್ಲಿ ಸ್ಪೇನ್‌ನ 21 ವರ್ಷ ವಯಸ್ಸಿನ ಕಾರ್ಲೋಸ್‌ ಅಲ್ಕರಾಜ್‌ ಅವರು ಫ್ರೆಂಚ್‌ ಓಪನ್‌ ಮತ್ತು ವಿಂಬಲ್ಡನ್‌ ಗೆದ್ದರೆ, ಉಳಿದ ಎರಡು ಗ್ರ್ಯಾನ್‌ಸ್ಲಾಮ್‌ ಕಿರೀಟಗಳು ಸಿನ್ನರ್‌ ‍ಪಾಲಾಗಿವೆ. ಹೀಗಾಗಿ, ಈ ಇಬ್ಬರು ಯುವ ತಾರೆಯರು ಟೆನಿಸ್‌ನ ಹೊಸಯುಗದ ಶಕ್ತಿ ಕೇಂದ್ರಗಳಾಗಿ ತಮ್ಮ ಸ್ಥಾನಗಳನ್ನು
ಭದ್ರಪಡಿಸಿಕೊಂಡಂತಾಗಿದೆ.

26 ವರ್ಷ ವಯಸ್ಸಿನ ಫ್ರಿಟ್ಜ್ ಸೋಲುವುದ ರೊಂದಿಗೆ ಅಮೆರಿಕ ಓಪನ್‌ನಲ್ಲಿ 21 ವರ್ಷಗಳ ಬಳಿಕ ತವರಿನ ಆಟಗಾರನೊಬ್ಬ ಪ್ರಶಸ್ತಿ ಗೆಲ್ಲುವ ಭರವಸೆಯೂ ಭಗ್ನಗೊಂಡಿತು. 2003ರಲ್ಲಿ ಆ್ಯಂಡಿ ರಾಡಿಕ್‌ ನಂತರ ತವರಿನ ಯಾವುದೇ ಆಟಗಾರ ಇಲ್ಲಿ ಚಾಂಪಿಯನ್‌ ಆಗಿಲ್ಲ.

ಎರಡು ವಾರಗಳ ಹಿಂದೆ ಸಿನ್ಸಿನಾಟಿ ಮಾಸ್ಟರ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಇಲ್ಲೂ ಗೆಲ್ಲುವ ಫೇವರಿಟ್‌ ಆಟಗಾರನಾಗಿ ಸಿನ್ನರ್‌ ಕಣಕ್ಕಿಳಿದಿದ್ದರು. 2 ಗಂಟೆ 16 ನಿಮಿಷ ಸಾಗಿದ ಫೈನಲ್‌ ಪಂದ್ಯವೂ ಏಕಪಕ್ಷೀಯವಾಗಿತ್ತು. ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್‌ ಟೂರ್ನಿಯೊಂದರಲ್ಲಿ ಫೈನಲ್‌ ತಲುಪಿದ್ದ 12ನೇ ಶ್ರೇಯಾಂಕದ ಫ್ರಿಟ್ಜ್‌ ಒತ್ತಡ ನಿಭಾಯಿಸುವಲ್ಲಿ ಎಡವಿದರು.

ಪಂದ್ಯದ ಮೊದಲ ಸೆಟ್‌ನಲ್ಲೇ ಆಕರ್ಷಕ ಸರ್ವ್​ಗಳೊಂದಿಗೆ ಗಮನ ಸೆಳೆದ ಸಿನ್ನರ್‌, ಫೋರ್​ಹ್ಯಾಂಡ್ ಹೊಡೆತಗಳ ಮೂಲಕ ಫ್ರಿಟ್ಜ್‌ ಮೇಲೆ ಒತ್ತಡ ಹೇರಿದರು. ಕೇವಲ 41 ನಿಮಿಷಗಳಲ್ಲಿ ಮೊದಲ ಸೆಟ್‌ ಅನ್ನು ಇಟಲಿಯ ಆಟಗಾರ ಗೆದ್ದುಕೊಂಡರು. ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಎರಡನೇ ಸೆಟ್‌ನಲ್ಲಿ ಫ್ರಿಟ್ಜ್ ಕೊಂಚ ಪ್ರತಿರೋಧ ತೋರಿದರು. ಒಂದು ಹಂತದಲ್ಲಿ 4–4ರಿಂದ ಪಂದ್ಯ ಸಾಗಿತ್ತಾದರೂ ಚುರುಕಿನ ಆಟವಾಡಿದ ಸಿನ್ನರ್‌ ಮತ್ತೆ ಮೇಲುಗೈ ಸಾಧಿಸಿದರು. ಮೂರನೇ ಸೆಟ್‌ನ ಆರಂಭದಲ್ಲಿ ಸಮಬಲದ ಹೋರಾಟ ಕಂಡುಬಂದರೂ ನಿಖರವಾದ ಡ್ರಾಪ್​ಶಾಟ್ ಮತ್ತು ಓವರ್​ಹೆಡ್ ಹೊಡೆತಗಳ ಮೂಲಕ ಸಿನ್ನರ್‌ ಪಾರಮ್ಯ ಮೆರೆದು ಪ್ರಶಸ್ತಿಗೆ ಮುತ್ತಿಕ್ಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT