ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀನಾಮೆ: ಗೊಂದಲದಲ್ಲಿ ಪಾಲಿಕೆ ಸದಸ್ಯರು

ಕಾದು ನೋಡುವ ತಂತ್ರ ಅನುಸರಿಸಲು ನಿರ್ಧಾರ, ಮತ್ತೆ ಕೆಲವರಲ್ಲಿ ಪಕ್ಷನಿಷ್ಠೆಯ ಸಮರ್ಥನೆ
Last Updated 9 ಜುಲೈ 2019, 19:57 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಐವರು ಶಾಸಕರು ರಾಜೀನಾಮೆ ನೀಡಿರುವುದು ಅವರ ಕ್ಷೇತ್ರದ ವ್ಯಾಪ್ತಿಯ ಪಾಲಿಕೆ ಸದಸ್ಯರಿಗೂ ಅಚ್ಚರಿಯನ್ನುಂಟುಮಾಡಿದೆ. ಶಾಸಕರ ಜೊತೆ ತಾವೂ ಪಕ್ಷ ತೊರೆಯುವುದು ಉಚಿತವೋ ಅಥವಾ ಈಗಿರುವ ಪಕ್ಷದಲ್ಲೇ ಮುಂದುವರಿಯಬೇಕೋ ಎಂಬ ಗೊಂದಲ ಅವರನ್ನು ಕಾಡುತ್ತಿದೆ.

‘ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಸದ್ಯಕ್ಕೆ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದೇವೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಕೆಲವು ಪಾಲಿಕೆ ಸದಸ್ಯರು ‘ಪ್ರಜಾವಾಣಿ’ ಜೊತೆ ಅನಿಸಿಕೆ ಹಂಚಿಕೊಂಡರು.

‘ನಮ್ಮ ಕ್ಷೇತ್ರದ ಶಾಸಕ ಬೈರತಿ ಬಸವರಾಜು ರಾಜೀನಾಮೆ ನೀಡುವ ಮುನ್ನ ನಮ್ಮ ಬಳಿ ಚರ್ಚಿಸಿರಲಿಲ್ಲ. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಅವರು ಇಂತಹ ನಿರ್ಧಾರ ಕೈಗೊಂಡಿರಬಹುದು. ಅವರ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ನೋಡೋಣ. ಮುಂದೇನಾಗುತ್ತದೋ ಯಾರಿಗೆ ಗೊತ್ತು’ ಎಂದು ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಕಾರ್ಪೊರೇಟರ್‌ ಒಬ್ಬರು ಹೇಳಿದರು.

‘ಒಂದು ವೇಳೆ ಶಾಸಕರು ಬೇರೆ ಪಕ್ಷ ಸೇರಿದರೆ ನಾವೂ ಪಕ್ಷ ತೊರೆಯಬೇಕೋ ಅಥವಾ ಕಾಂಗ್ರೆಸ್‌ನಲ್ಲೇ ಉಳಿಯಬೇಕೋ ಎಂಬ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ’ ಎಂದರು.

ಇದೇ ಕ್ಷೇತ್ರದ ಬಿಜೆಪಿ ಕಾರ್ಪೊರೇಟರ್‌ ಒಬ್ಬರು ಈ ರಾಜಕೀಯ ಬೆಳವಣಿಗೆ ಬಗ್ಗೆ ಕಳವಳ ವ್ಯಕ್ತಪಡಿಸಿದರು. ‘ನಾವು ಕಾಂಗ್ರೆಸ್‌ನವರು ನಡೆಸುತ್ತಿದ್ದ ದಬ್ಬಾಳಿಕೆ ವಿರುದ್ಧ ಹೋರಾಟ ಮಾಡುತ್ತಿದ್ದೆವು. ಈಗ ಅಂತಹವರನ್ನೇ ಪಕ್ಷಕ್ಕೆ ಬರಮಾಡಿಕೊಳ್ಳುತ್ತಾರೆ ಎಂದಾಗ ಸಹಜವಾಗಿಯೇ ಬೇಸರವಾಗುತ್ತದೆ.

ಆದರೆ ಪಕ್ಷದ ವರಿಷ್ಠರ ತೀರ್ಮಾನವನ್ನು ಒಪ್ಪದೆ ವಿಧಿ ಇಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಮಗೂ ಒಳ್ಳೆಯದೇ. ಯಾರೇ ಪಕ್ಷಕ್ಕೆ ಬರುವುದಿದ್ದರೂ ಸ್ವಾಗತ. ಪಕ್ಷದ ವರಿಷ್ಠರ ತೀರ್ಮಾನವನ್ನು ಒಪ್ಪಲೇಬೇಕಾಗುತ್ತದೆ’ ಎಂದು ವಿಜಿನಾಪುರ ವಾರ್ಡ್‌ನ ಸದಸ್ಯ ರಾಜಾ ಎಸ್‌. ಅಭಿಪ್ರಾಯಪಟ್ಟರು.

‘ನಮ್ಮ ಕ್ಷೇತ್ರದ ಶಾಸಕ ಎಸ್‌.ಟಿ.ಸೊಮಶೇಖರ್‌ ರಾಜೀನಾಮೆ ನೀಡುವ ಬಗ್ಗೆ ದಿಢೀರ್‌ ನಿರ್ಧಾರ ಕೈಗೊಂಡಿದ್ದಾರೆ. ರಾಜೀನಾಮೆ ನೀಡಿದ ಬಳಿಕವೂ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ. ಅವರ ನಿರ್ಧಾರ ನಮಗೂ ಅಚ್ಚರಿ ತಂದಿದೆ’ ಎಂದು ಪಾಲಿಕೆ ಸದಸ್ಯರೊಬ್ಬರು ತಿಳಿಸಿದರು.

‘ನಾವು ಸೋಮಶೇಖರ್‌ ಅವರ ಜೊತೆಯೇ ರಾಜಕಾರಣ ಮಾಡುತ್ತಾ ಬಂದವರು. ಆದರೆ, ಅವರು ಪಕ್ಷವನ್ನು ತೊರೆದರೆ ನಾವು ಏನು ಮಾಡಬೇಕು ಎಂಬ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ’ ಎಂದರು.

ಕಡೆಗಣನೆ ಕಾರಣ?
‘ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದ್ದಾಗ ನಮ್ಮ ಕ್ಷೇತ್ರಕ್ಕೆ ಹಾಗೂ ವಾರ್ಡ್‌ಗಳಿಗೆ ಸಾಕಷ್ಟು ಅನುದಾನ ಸಿಕ್ಕಿತ್ತು. ಆದರೆ, ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಪರಿಸ್ಥಿತಿ ಸಂಪೂರ್ಣ ಬದಲಾಯಿತು. ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಅವರು ನಮ್ಮನ್ನೆಲ್ಲ ವಿಶ್ವಾಸಕ್ಕೆ ಪಡೆಯಲಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಹತ್ತಿರವಾಗಲು ಅತೀವ ಆಸಕ್ತಿ ತೋರಿಸುತ್ತಿದ್ದ ಅವರು, ಪಕ್ಷದ ಕಾರ್ಯಕರ್ತರನ್ನು ಮತ್ತು ಸ್ಥಳೀಯ ನಾಯಕರನ್ನು ದೂರವಿಟ್ಟರು. ಪಾಲಿಕೆಗೆ ಸಂಬಂಧಿಸಿದಂತೆ ಯಾವುದೇ ತೀರ್ಮಾನ ಕೈಗೊಳ್ಳುವಾಗಲೂ ಸ್ಥಳೀಯ ನಾಯಕರ ಜೊತೆ ಸಮಾಲೋಚನೆ ನಡೆಸುತ್ತಿರಲಿಲ್ಲ. ಈ ಬಗ್ಗೆ ಶಾಸಕರಿಗೆ ಮಾತ್ರವಲ್ಲ ನಮಗೂ ಬೇಸರವಿದೆ’ ಎಂದು ಕಾಂಗ್ರೆಸ್ ಸದಸ್ಯರೊಬ್ಬರು ದೂರಿದರು.

ಪಕ್ಷಕ್ಕೆ ನನ್ನ ನಿಷ್ಠೆ: ಉಪಮೇಯರ್‌
‘ಶಾಸಕ ಕೆ.ಗೋಪಾಲಯ್ಯ ಅವರು ಯಾವ ಉದ್ದೇಶದಿಂದ ರಾಜೀನಾಮೆ ನೀಡಿದರೋ ಗೊತ್ತಿಲ್ಲ. ಈ ಬಗ್ಗೆ ಅವರು ನಮ್ಮ ಬಳಿ ಹೇಳಿಕೊಂಡೂ ಇಲ್ಲ’ ಎಂದು ಉಪಮೇಯರ್‌ ಬಿ.ಭದ್ರೇಗೌಡ ತಿಳಿಸಿದರು.

‘ಗೋಪಾಲಯ್ಯ ಅವರು ಈ ಹಿಂದೆ, ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದಾಗಲೂ ನಾವು ಅವರ ಜೊತೆ ನಿಂತಿರಲಿಲ್ಲ. ನಮ್ಮ ನಿಷ್ಠೆ ಏನಿದ್ದರೂ ಪಕ್ಷಕ್ಕೆ’ ಎಂದು ಸ್ಪಷ್ಟಪಡಿಸಿದರು.

ಮೂವರು ಶಾಸಕರ ಸೇರ್ಪಡೆ ಪ್ರತಿಪಕ್ಷ ನಾಯಕ ಮೌನ
ಯಶವಂತಪುರ ಕ್ಷೇತ್ರದ ಶಾಸಕ ಎಸ್‌.ಟಿ.ಸೋಮಶೇಖರ, ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಮುನಿರತ್ನ ಹಾಗೂ ಕೆ.ಆರ್.ಪುರ ಕ್ಷೇತ್ರದ ಶಾಸಕ ಬೈರತಿ ಬಸವರಾಜು ಅವರ ಕಾರ್ಯವೈಖರಿ ಬಗ್ಗೆ ಸುದ್ದಿಗೋಷ್ಠಿಗಳಲ್ಲಿ ಪದೇ ಪದೇ ಆರೋ‍ಪ ಮಾಡುತ್ತಿದ್ದ ಪಾಲಿಕೆಯ ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ, ಈ ಮೂವರು ಶಾಸಕರು ಬಿಜೆಪಿ ಸೇರ್ಪಡೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

'ಅವರು ಇನ್ನೂ ಬಿಜೆಪಿ ಸೇರ್ಪಡೆಯಾಗಿಲ್ಲ. ಅವರು ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ’ ಎಂದರು.

ರಾಜೀನಾಮೆ ನೀಡುವುದಿಲ್ಲ: ಹೇಮಲತಾ
‘ನನ್ನ ಪತಿ ಗೋಪಾಲಯ್ಯ ಅವರು ರಾಜೀನಾಮೆ ನೀಡಿರಬಹುದು. ಅದಕ್ಕೂ ನನಗೂ ಸಂಬಂಧ ಇಲ್ಲ. ಪಕ್ಷ ತೊರೆಯುವ ಆಲೋಚನೆಯನ್ನೇ ಮಾಡಿಲ್ಲ. ನಾನಂತೂ ರಾಜೀನಾಮೆ ನೀಡುವುದಿಲ್ಲ’ ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್‌.ಪಿ.ಹೇಮಲತಾ ತಿಳಿಸಿದರು.

ಪತಿಯ ರಾಜಕೀಯ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ‘ಅದು ದೊಡ್ಡವರ ವಿಚಾರ. ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ನಾನು ಪಾಲಿಕೆ ಸದಸ್ಯೆಯಾಗಿ ಮೊದಲ ಬಾರಿ ಆಯ್ಕೆ ಆಗಿದ್ದೇನೆ. ಇನ್ನೂ ಒಂದು ವರ್ಷ ಅಧಿಕಾರಾವಧಿ ಬಾಕಿ ಇದೆ. ಜನರ ಕೆಲಸ ಮಾಡುವುದು ನನ್ನ ಆದ್ಯತೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT