ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂದೆ ಮಗಳ ಸಾವು ಕಂಡು ಮೂಕನಾದ ಜವರಾಯ: ಕಟು ಕಾನೂನಿಗೆ ಇನ್ನಾದರೂ ಬಂದೀತೇ ಕರುಣೆ

ಅಮೆರಿಕ–ಮೆಕ್ಸಿಕೊ: ವಲಸಿಗರು ಎದುರಿಸುತ್ತಿರುವ ಸಮಸ್ಯೆ, ಅಪಾಯಗಳ ಬಗ್ಗೆ ವಿಶ್ವದಾದ್ಯಂತ ಕಳವಳ
Last Updated 27 ಜೂನ್ 2019, 9:43 IST
ಅಕ್ಷರ ಗಾತ್ರ

ಹೇಗಾದರೂ ಕಷ್ಟಪಟ್ಟು ದುಡ್ಡು ಸಂಪಾದಿಸಿ ತನ್ನದಾದ ಒಂದು ಸೂರು ನಿರ್ಮಿಸಬೇಕು. ಅದಕ್ಕಾಗಿ ಅಮೆರಿಕಕ್ಕೆ ವಲಸೆ ಹೋಗಬೇಕು ಎಂದು ಮುಂದಡಿಯಿಟ್ಟ ಆ ವ್ಯಕ್ತಿಯ ಅಂತ್ಯ ಈ ರೀತಿ ಆಗಿಹೋದೀತೆಂದು ಜಗತ್ತು ಎಂದಾದರೂ ಊಹಿಸಿದ್ದೀತೇ?

ಖಂಡಿತಾ ಇರಲಾರದು. ಆದರೂ ಆಗಬಾರದ್ದು ಆಗಿ ಹೋಗಿದೆ. ಅಮೆರಿಕ–ಮೆಕ್ಸಿಕೊ ಗಡಿಯಲ್ಲಿನ ಅಕ್ರಮ ವಲಸೆ, ಕಡುಬಡತನ, ಸಾವು–ನೋವುಗಳಿಗೆ ಸಾಕ್ಷಿಯಾಗಿ; ದುರಂತದ ನೆನಪನ್ನು ಉಳಿಸಿಬಿಟ್ಟು ಇಹಲೋಕ ತ್ಯಜಿಸಿದ್ದಾರೆ ಈ ಫೋಟೊದಲ್ಲಿರುವ ಅಪ್ಪ–ಮಗಳು.

ಎಲ್‌ ಸಾಲ್ವಡಾರ್‌ನ 25 ವರ್ಷದ ಆಸ್ಕರ್‌ ಮಾರ್ಟೀನ್ಸ್‌ ರೆಮಿರೇಜ್‌ಗೆ ತನ್ನದಾದ ಒಂದು ಮನೆ ನಿರ್ಮಿಸಬೇಕು ಎಂಬ ಹಂಬಲ. ಆದರೆ ಕಡುಬಡತನ. ದುಡ್ಡು ಸಂಪಾದನೆಗಾಗಿ, ದುಡಿಯುವುದಕ್ಕಾಗಿ ಅಮೆರಿಕಕ್ಕೆ ವಲಸೆ ಹೋಗಬೇಕೆಂದು ತೀರ್ಮಾನಿಸುತ್ತಾನೆ. ತಾಯಿ ಬೇಡವೆಂದರೂ ಕೇಳದೆ ಪತ್ನಿ ಹಾಗೂ ಎರಡು ವರ್ಷದ ಹೆಣ್ಣುಮಗಳ ಜತೆ ವಲಸೆ ಹೋಗಲು ನಿರ್ಧರಿಸಿದ್ದಾನೆ. ಆದರೆ ನಿಯಮಗಳ ಪ್ರಕಾರ, ಎಲ್‌ ಸಾಲ್ವಡಾರ್‌ನವರು ಅಮೆರಿಕದ ಅಧಿಕಾರಿಗಳ ಬಳಿ ಆಶ್ರಯಕ್ಕಾಗಿ ಮನವಿ ಮಾಡುವಂತಿರಲಿಲ್ಲ. ಇದರಿಂದ ಹತಾಶನಾದ ಆತ ತನ್ನ ಕನಸನ್ನು ಸಾಕಾರಗೊಳಿಸಲು ಆಯ್ದುಕೊಂಡದ್ದು ಮೆಕ್ಸಿಕೊದ ರಿಯೋ ಗ್ರಾಂಡ್‌ ನದಿಯನ್ನು ಈಜಿ ಅಕ್ರಮವಾಗಿ ಅಮೆರಿಕಕ್ಕೆ ವಲಸೆ ಹೋಗುವ ಅಪಾಯಕಾರಿ ಮಾರ್ಗವನ್ನು.

ಪತ್ನಿ ತಾನಿಯಾ ವೆನೆಸ್ಸಾ ಅವಲೋಸ್ ಮತ್ತು ಎರಡು ವರ್ಷದ ಹೆಣ್ಣು ಮಗಳ ವೆಲೇರಿಯಾ ಜತೆ ಭಾನುವಾರ (ಜೂನ್ 23) ರಿಯೋ ಗ್ರಾಂಡ್‌ ನದಿ ದಡ ತಲುಪಿದ ಆತ ಮಗಳನ್ನು ಸುರಕ್ಷಿತವಾಗಿ ಆಚೆಯ ತೀರ ಸೇರಿಸುತ್ತಾನೆ. ವೆಲೇರಿಯಾಳನ್ನು ಒಂದೆಡೆ ಕುಳ್ಳಿರಿಸಿ ಪತ್ನಿಯನ್ನು ನದಿ ದಾಟಿಸಿ ಕರೆತರಲು ಮರಳಿ ನದಿಗೆ ಧುಮುಕಿದ್ದಾನೆ. ತನ್ನೊಬ್ಬಳನ್ನೇ ಬಿಟ್ಟು ಅಪ್ಪ ನದಿ ನೀರಿಗೆ ಧುಮುಕಿ ಮುಂದುವರಿಯುತ್ತಿರುವುದನ್ನು ನೋಡಿದ ಮುದ್ದಿನ ಮಗಳು ತಾನೂ ನೀರಿಗಿಳಿದಿದ್ದು, ಪ್ರವಾಹಕ್ಕೆ ಸಿಲುಕಿದ್ದಾಳೆ. ಕೂಡಲೇ ಮಗಳತ್ತ ಧಾವಿಸಿದ ರೆಮಿರೇಜ್‌ ಆಕೆಯನ್ನು ಹಿಡಿದೆಳೆಯುವಲ್ಲಿ ಯಶಸ್ವಿಯಾದರೂ ಪ್ರವಾಹಕ್ಕೆ ಸಿಲುಕಿದ್ದಾನೆ. ಇಬ್ಬರೂ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಈ ಘಟನೆಗೆ ತಾನಿಯಾ ವೆನೆಸ್ಸಾ ಅವಲೋಸ್ ಮೂಕ ಪ್ರೇಕ್ಷಕಳಾಗಿದ್ದಾಳೆ.

ಪತಿ ಹಾಗೂ ಮಗಳು ಪ್ರವಾಹದಲ್ಲಿ ಕೊಚ್ಚಿ ಹೋದ ಜಾಗವನ್ನು ಮೆಕ್ಸಿಕೊದ ಅಧಿಕಾರಿಗಳಿಗೆ ತೋರಿಸುತ್ತಿರುವತಾನಿಯಾ ವೆನೆಸ್ಸಾ ಅವಲೋಸ್ – ಫೋಟೊ:ಜೂಲಿಯಾ ಲೆ ಡಕ್
ಪತಿ ಹಾಗೂ ಮಗಳು ಪ್ರವಾಹದಲ್ಲಿ ಕೊಚ್ಚಿ ಹೋದ ಜಾಗವನ್ನು ಮೆಕ್ಸಿಕೊದ ಅಧಿಕಾರಿಗಳಿಗೆ ತೋರಿಸುತ್ತಿರುವತಾನಿಯಾ ವೆನೆಸ್ಸಾ ಅವಲೋಸ್ – ಫೋಟೊ:ಜೂಲಿಯಾ ಲೆ ಡಕ್

ಮನ ಕಲಕಿದ ಫೋಟೊ

ರೆಮಿರೆಜ್‌ ಮತ್ತು ಮಗಳ ಮೃತದೇಹ ಮೆಕ್ಸಿಕೊದ ತಮೌಲಿಪಾಸ್ ರಾಜ್ಯದ ಮಟಮೊರಸ್‌ ಎಂಬಲ್ಲಿ ಸೋಮವಾರ ಪತ್ತೆಯಾಗಿದೆ. ಈ ವಿಚಾರವನ್ನು ಮಂಗಳವಾರ ತಮೌಲಿಪಾಸ್ ಆಡಳಿತ ದೃಢಪಡಿಸಿದೆ. ಇಬ್ಬರ ಮೃತದೇಹಗಳೂ ತಲೆಕೆಳಕಾದ ಸ್ಥಿತಿಯಲ್ಲಿ ನದಿ ತೀರದಲ್ಲಿ ಕಂಡುಬಂದಿದೆ. ಅಪ್ಪನ ಕತ್ತಿನ ಮೇಲೆ ಮಗು ಕೈ ಇಟ್ಟು ಗಟ್ಟಿಯಾಗಿ ಹಿಡಿದುಕೊಂಡಿರುವ ಸ್ಥಿತಿಯಲ್ಲೇ ಕಾಣಸಿಕ್ಕಿರುವ ಮೃತದೇಹಗಳ ಫೋಟೊ ವಿಶ್ವದಾದ್ಯಂತ ಜನರ ಮನಕಲಕುವಂತೆ ಮಾಡಿದೆ. ವಲಸಿಗರು ಎದುರಿಸುತ್ತಿರುವ ಅಪಾಯಗಳ ಬಗ್ಗೆ ನಾಗರಿಕ ಸಮಾಜ ಕಳವಳ ವ್ಯಕ್ತಪಡಿಸಿದ್ದು, ಮಕ್ಸಿಕೋ ಸರ್ಕಾರದ ವಿರುದ್ಧ ಆಕ್ರೋಶವೂ ವ್ಯಕ್ತವಾಗಿದೆ.

ಮೆಕ್ಸಿಕೊದ ಪತ್ರಕರ್ತೆ ಜೂಲಿಯಾ ಲೆ ಡಕ್ ಅವರು ಸೆರೆಹಿಡಿದಿರುವ ಈ ಫೋಟೊ ಅಲ್ಲಿನ ಪತ್ರಿಕೆ ಲಾ ಜೋರ್ನಾಡಾದಲ್ಲಿ ಪ್ರಕಟಗೊಂಡಿದೆ.

ರೆಮಿರೆಜ್ ಮತ್ತು ಆತನ ಕುಟುಂಬ ಏಪ್ರಿಲ್ 3ರಿಂದ 2 ತಿಂಗಳ ಕಾಲ ಗ್ವಾಟೆಮಾಲಾ ಜತೆಗಿನ ಮೆಕ್ಸಿಕೊ ಗಡಿ ಪ್ರದೇಶ ತಪಚುಲಾದಲ್ಲಿ ಶೆಲ್ಟರ್‌ ಹೋಮ್‌ ಒಂದರಲ್ಲಿ ಆಶ್ರಯ ಪಡೆದಿತ್ತು ಎನ್ನಲಾಗಿದೆ. ಈ ಕುರಿತು ಆತನ ತಾಯಿ ರೋಸಾ ರೆಮಿರೆಜ್ ಮಾಹಿತಿ ನೀಡಿದ್ದಾಗಿ ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಗಳು ತಿಳಿಸಿದ್ದಾರೆ.

‘ವಲಸೆ ಹೋಗಬೇಡಿ ಎಂದು ನಾನು ಕಾಡಿಬೇಡಿ ಕೇಳಿದರೂ ಒಪ್ಪದ ಅವರು ಹೋಗಿಯೇಬಿಟ್ಟರು. ಕೆಲವು ವರ್ಷಗಳ ಕಾಲ ಅಲ್ಲಿದ್ದು ದುಡಿಯುವುದು ಅವರ ಉದ್ದೇಶವಾಗಿತ್ತು’ ಎಂದು ರೋಸಾ ರೆಮಿರೆಜ್ ತಿಳಿಸಿದ್ದಾರೆ.

ಮೊಮ್ಮಗಳ ಆಟಿಕೆಯನ್ನು ತೋರಿಸಿ ರೋಧಿಸುತ್ತಿರುವರೋಸಾ ರೆಮಿರೆಜ್ – ಫೋಟೊ:ಜೂಲಿಯಾ ಲೆ ಡಕ್
ಮೊಮ್ಮಗಳ ಆಟಿಕೆಯನ್ನು ತೋರಿಸಿ ರೋಧಿಸುತ್ತಿರುವರೋಸಾ ರೆಮಿರೆಜ್ – ಫೋಟೊ:ಜೂಲಿಯಾ ಲೆ ಡಕ್

ಕೆಲವು ದಿನಗಳ ಹಿಂದಷ್ಟೇ ಶೆಲ್ಟರ್‌ ಹೋಮ್‌ಗೆ ಬಂದಿದ್ದ ತಮೌಲಿಪಾಸ್ ವಲಸೆ ಮತ್ತು ನಾಗರಿಕ ರಕ್ಷಣಾ ಅಧಿಕಾರಿಗಳು ನದಿ ದಾಟುವ ಸಾಹಸ ಮಾಡದಂತೆ ಎಚ್ಚರಿಕೆ ನೀಡಿದ್ದರು. ಅಣೆಕಟ್ಟೆಯಿಂದ ನೀರು ಬಿಡುವ ಸಾಧ್ಯತೆಯಿದ್ದು ಪ್ರವಾಹ ಉಂಟಾಗಬಹುದು ಎಂಬ ಮುನ್ನೆಚ್ಚರಿಕೆಯನ್ನೂ ನೀಡಿದ್ದರು ಎನ್ನಲಾಗಿದೆ.

ಆದರೆ ಈ ಘಟನೆ ಕುರಿತು ಅಮೆರಿಕದ ಆಡಳಿತ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದೇ ಮೊದಲಲ್ಲ

ಅಮೆರಿಕ–ಮೆಕ್ಸಿಕೊ ಗಡಿಯಲ್ಲಿ ವಲಸೆ ಸಂಬಂಧಿ ಅವಘಡಗಳು ಫೋಟೊಗಳಿಂದಾಗಿಯೇ ವಿಶ್ವದ ಗಮನ ಸೆಳೆದದ್ದು ಇದೇ ಮೊದಲಲ್ಲ.

ಹೃದಯ ಕಲಕಿದ ಅಲನ್ ಕುರ್ದಿ

2015ರ ಸೆಪ್ಟೆಂಬರ್‌ನಲ್ಲಿ ಸಿರಿಯಾದ 3 ವರ್ಷದ ಮಗು ಅಲನ್ ಕುರ್ದಿ ಶವ ಮೆಡಿಟರೇನಿಯನ್ ಸಮುದ್ರದ ತೀರದಲ್ಲಿ ಪತ್ತೆಯಾದ ಫೋಟೊ ಮನುಕುಲದ ಮನಕಲಕಿತ್ತು. ಸಿರಿಯಾ ನಿರಾಶ್ರಿತರ ಕುಟುಂಬವು ಯುರೋಪ್‌ಗೆ ವಲಸೆ ತೆರಳುತ್ತಿದ್ದ ವೇಳೆ ಮಗು ಸಾಗರದಲ್ಲಿ ಮುಳುಗಿ ಮೃತಪಟ್ಟಿತ್ತು. ಸಮುದ್ರ ತೀರದಲ್ಲಿ ಬಿದ್ದಿದ್ದ ಮಗುವಿನ ಶವದ ಫೋಟೊವನ್ನು ನೀಲೂಫರ್ ಡೆಮಿರ್ ಎಂಬ ಪತ್ರಕರ್ತ ಸೆರೆಹಿಡಿದಿದ್ದ. ಈ ಫೋಟೊ ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.

ಟ್ರಂಪ್ ಮನಃಪರಿವರ್ತಿಸಿದ ಚಿತ್ರ

ಅಮೆರಿಕದ ಗಡಿಯಲ್ಲಿ ತನ್ನ ತಾಯಿಯ ಜೊತೆ ನಿಂತು ಅಸಹಾಯಕಳಾಗಿ ಅಳುತ್ತಿದ್ದ ಹುಡುಗಿಯ ಚಿತ್ರವೊಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನಸ್ಸನ್ನೇ ಪರಿವರ್ತಿಸಿತ್ತು. ತಾಯಿ–ಮಗಳನ್ನು ಅಮೆರಿಕದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದುಕೊಳ್ಳುವ ಸನ್ನಿವೇಶವನ್ನು ಚಿತ್ರವು ಕಟ್ಟಿಕೊಟ್ಟಿತ್ತು. ಪರಿಣಾಮವಾಗಿ ತಂದೆ–ತಾಯಿಯಿಂದ ಮಕ್ಕಳನ್ನು ಬೇರ್ಪಡಿಸುವ ಆದೇಶವನ್ನೇ ವಾಪಸ್ ಪಡೆದಿದ್ದರು. ಈ ಫೋಟೊವನ್ನು ಹಿರಿಯ ಛಾಯಾಗ್ರಾಹಕ ಜಾನ್‌ ಮೂರ್ 2018ರ ಜೂನ್‌ನಲ್ಲಿ ಸೆರೆಹಿಡಿದಿದ್ದರು. ಇದಕ್ಕಾಗಿ ಅವರು ಪ್ರತಿಷ್ಠಿತ ವಿಶ್ವ ಪ್ರೆಸ್‌ ಫೋಟೊ ಪುರಸ್ಕಾರಕ್ಕೂ ಭಾಜನರಾಗಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT