ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಆರ್‌ಸಿ ಭಾರತದ ಆಂತರಿಕ ವಿಷಯ: ಸಚಿವ ಜೈಶಂಕರ್

ಢಾಕಾದಲ್ಲಿ ಜಂಟಿ ಪತ್ರಿಕಾಗೋಷ್ಠಿ
Last Updated 20 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಢಾಕಾ: ‘ಅಸ್ಸಾಂನಲ್ಲಿ ಅಕ್ರಮ ವಲಸಿಗರನ್ನು ಗುರುತಿಸಲು ನಡೆಸುತ್ತಿರುವ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪ್ರಕ್ರಿಯೆ ಭಾರತದ ಆಂತರಿಕ ವಿಷಯ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಹೇಳಿದ್ದಾರೆ.

ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಸಚಿವ ಎ.ಕೆ. ಅಬ್ದುಲ್ ಮೆಮನ್ ಅವರ ಜತೆ ಮಂಗಳವಾರ ಜೈಶಂಕರ್ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದರು. ಬಳಿಕ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ವೇಳೆ ಅವರು ಎನ್‌ಆರ್‌ಸಿ ವಿಷಯ ಪ್ರಸ್ತಾಪಿಸಿದರು.

ಇದೇ 31ರಂದು ಎನ್‌ಆರ್‌ಸಿ ಅಂತಿಮ ಪಟ್ಟಿ ಬಿಡುಗಡೆಯಾಗುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.‌

ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಿರುವ ಅಸ್ಸಾಂಗೆ ಬಾಂಗ್ಲಾ ಪ್ರಜೆಗಳು ಅಕ್ರಮವಾಗಿ ಒಳನುಸುಳಿದ್ದನ್ನು ಗುರುತಿಸುವ ಸಲುವಾಗಿ 1951ರಲ್ಲಿ ಮೊದಲ ಬಾರಿಗೆ ಎನ್‌ಆರ್‌ಸಿ ಸಿದ್ಧಪಡಿಸಲಾಗಿತ್ತು. ಎನ್ಆರ್‌ಸಿ ಕರಡು ಕಳೆದ ವರ್ಷ ಜುಲೈ 30ರಂದು ಪ್ರಕಟವಾದಾಗ, 3.29 ಕೋಟಿ ಅರ್ಜಿದಾರರಲ್ಲಿ 2.9 ಕೋಟಿ ಅರ್ಜಿದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸಲಾಗಿತ್ತು. 40.7 ಲಕ್ಷ ಜನರನ್ನು ಅಕ್ರಮ ವಲಸಿಗರು ಎಂದು ಗುರುತಿಸಿದ್ದು ಸಾಕಷ್ಟು ವಿವಾದ ಹುಟ್ಟುಹಾಕಿತ್ತು.

‘ಬಾಕಿ ಇರುವ ತೀಸ್ತಾ ನದಿ ನೀರು ಒಪ್ಪಂದ ಕುರಿತು ಭಾರತದ ನಿಲುವು ಹಾಗೂ ಬದ್ಧತೆಯಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಅವರು ಇದೇ ವೇಳೆ ಹೇಳಿದ್ದಾರೆ.

2011ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದ
ವೇಳೆ, ಈ ಒಪ್ಪಂದಕ್ಕೆ ಸಹಿ ಹಾಕಬೇಕಿತ್ತು. ಆದರೆ ಪಶ್ಚಿಮ ಬಂಗಾಳದ ಅಂದಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಕೊನೆಕ್ಷಣದಲ್ಲಿ ಇದನ್ನು ಮುಂದೂಡಲಾಗಿತ್ತು.

ಹಸೀನಾ ಭೇಟಿ: ಜೈಶಂಕರ್ ಅವರು ಪ್ರಧಾನಿ ಶೇಖ್ ಹಸೀನಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

‘ಅಕ್ಟೋಬರ್‌ನಲ್ಲಿ ಹಸೀನಾ ಅವರನ್ನು ಭಾರತಕ್ಕೆ ಆಹ್ವಾನಿಸಲಿದ್ದೇವೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ರೋಹಿಂಗ್ಯಾ ಮುಸ್ಲಿಮರ ಕುರಿತು ಚರ್ಚೆ
ರೋಹಿಂಗ್ಯಾ ಮುಸ್ಲಿಮರ ವಿಷಯ ಚರ್ಚಿಸಿದ ಜೈಶಂಕರ್ ಹಾಗೂ ಮೆಮನ್, ಶೀಘ್ರ ಹಾಗೂ ಸುರಕ್ಷಿತವಾಗಿ ಅವರನ್ನು ಮ್ಯಾನ್ಮಾರ್‌ಗೆ ವಾಪಸ್‌ ಕಳುಹಿಸುವ ಬಗ್ಗೆ ಒಮ್ಮತಕ್ಕೆ ಬಂದರು.

‘ಮ್ಯಾನ್ಮಾರ್‌ನ ರಖೈನ್‌ನಲ್ಲಿ ತೀವ್ರ ಶೋಷಣೆಗೆ ಗುರಿಯಾದ 7 ಲಕ್ಷಕ್ಕೂ ಹೆಚ್ಚು ರೋಹಿಂಗ್ಯಾ ಮುಸ್ಲಿಮರು, ಬಾಂಗ್ಲಾದೇಶಕ್ಕೆ ವಲಸೆ ಬಂದಿದ್ದಾರೆ’ ಎಂದು ವಿಶ್ವಸಂಸ್ಥೆ ಹೇಳುತ್ತದೆ. ಆದರೆ ಮ್ಯಾನ್ಮಾರ್ ಈ ಆರೋಪ ನಿರಾಕರಿಸುತ್ತಿದೆ.

*
ದ್ವಿಪಕ್ಷೀಯ ಮಾತುಕತೆ ಉತ್ತಮವಾಗಿತ್ತು. ಎಲ್ಲಾ ವಿಷಯಗಳಲ್ಲೂ ನಾವು ಬಹುತೇಕ ಒಮ್ಮತಕ್ಕೆ ಬಂದಿದ್ದೇವೆ.
-ಎ.ಕೆ. ಅಬ್ದುಲ್ ಮೆಮನ್, ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT