ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋವಿಡ್‌–19 | ಲಾಕ್‌ಡೌನ್ ಸಡಿಲಿಕೆ: ವಿಜ್ಞಾನಿಗಳ ಎಚ್ಚರಿಕೆ ಕಡೆಗಣಿಸಿದ ಸರ್ಕಾರ

Published : 14 ಮೇ 2020, 2:30 IST
ಫಾಲೋ ಮಾಡಿ
Comments

ಮುಂಬೈ: ಕೋವಿಡ್–19ನ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳನ್ನು ಪತ್ತೆ ಮಾಡಲು ಪ್ರತಿ ಜಿಲ್ಲೆಯಲ್ಲೂ ಮನೆ–ಮನೆ ಸಮೀಕ್ಷೆ ನಡೆಸಿ. ತಪಾಸಣೆಯ ಫಲಿತಾಂಶ ಬರುವವರೆಗೂ ಕಾಯದೆ, ಕೋವಿಡ್ ಲಕ್ಷಣ ಹೊಂದಿರುವ ವ್ಯಕ್ತಿಗಳನ್ನು ಪ್ರತ್ಯೇಕವಾಸ ಮಾಡಿಸಿ. 14 ದಿನದ ಪ್ರತ್ಯೇಕವಾಸ, ಮನೆಮನೆ ಸಮೀಕ್ಷೆಯ ನಂತರ ಕೋವಿಡ್ ಪ್ರಕರಣಗಳಲ್ಲಿ ಶೇ 40ರಷ್ಟು ಇಳಿಕೆ ಕಂಡುಬಂದರೆ ಮತ್ತು ಸಂಭಾವ್ಯ ಪ್ರಕರಣಗಳನ್ನು ನಿರ್ವಹಿಸಲು ವೈದ್ಯಕೀಯ ಮೂಲಸೌಕರ್ಯ ಸಿದ್ಧವಿದ್ದರೆ ಮಾತ್ರ ಲಾಕ್‌ಡೌನ್‌ ಸಡಿಲಗೊಳಿಸಿ. ಈ ಮಾನದಂಡಗಳನ್ನು ಪೂರೈಸಿದರೆ ಮಾತ್ರ ಪ್ರತಿ ಜಿಲ್ಲೆಯಲ್ಲೂ ಲಾಕ್‌ಡೌನ್ ಸಡಿಲಗೊಳಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಸರ್ಕಾರಕ್ಕೆ ಸಲಹೆ ನೀಡಿತ್ತು.

ಲಾಕ್‌ಡೌನ್‌ ಸಡಿಲಿಕೆ, ಮುಂದುವರಿಸುವಿಕೆಗೆ ಸಂಬಂಧಿಸಿದಂತೆ ಇರುವ ಮಾರ್ಗಸೂಚಿಗಳು

ಜಗತ್ತಿನ ಅತ್ಯಂತ ಕಠಿಣ ಲಾಕ್‌ಡೌನ್‌ ಅನ್ನು ಸಡಿಲಗೊಳಿಸುವ ಮಾನದಂಡಗಳನ್ನು ಐಸಿಎಂಆರ್ ಸಿದ್ಧಪಡಿಸಿತ್ತು. ಈ ಸಂಬಂಧ ಏಪ್ರಿಲ್ ಮೊದಲ ವಾರದಲ್ಲಿ ಸರ್ಕಾರಕ್ಕೆ ಐಸಿಎಂಆರ್ ನೀಡಿದ್ದ ಪ್ರೆಸೆಂಟೇಷನ್ ಅನ್ನು‘ಆರ್ಟಿಕಲ್ 14’ ಪರಿಶೀಲಿಸಿದೆ.‘ಯಾವುದೇ ರೀತಿಯ ಕ್ರಮಗಳು ಜಾರಿಯಲ್ಲಿ ಇಲ್ಲದೇ ಇದ್ದರೆ, ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆ ಆಗುವ ಸಾಧ್ಯತೆ ಇದೆ. ಹೀಗಾಗಿ ಸ್ಥಳೀಯ ಅಂಕಿಅಂಶಗಳನ್ನು ಪರಿಶೀಲಿಸದೆ ಲಾಕ್‌ಡೌನ್‌ ಅನ್ನು ಸಡಿಲಗೊಳಿಸುವ ನಿರ್ಧಾರವನ್ನು ಪರಿಗಣಿಸಬಾರದು’ ಎಂದು ವಿಜ್ಞಾನಿಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.

ಆರು ವಾರಗಳ ಲಾಕ್‌ಡೌನ್ ಮತ್ತು 49 ದಿನಗಳವರೆಗೆ ಎರಡು ಬಾರಿ ವಿಸ್ತರಣೆಯ ಹೊರತಾಗಿಯೂ ಸರ್ಕಾರವು ಮನೆಮನೆ ಸಮೀಕ್ಷೆಯ ಕ್ರಮಾವಳಿಯನ್ನು ಆರಂಭಿಸಲಿಲ್ಲ. ಲಾಕ್‌ಡೌನ್‌ ಅನ್ನು ಸಡಿಲಗೊಳಿಸಲು ಐಸಿಎಂಆರ್ ಶಿಫಾರಸು ಮಾಡಿದ್ದ ‘ಡಿಸಿಷನ್ ಮೇಕಿಂಗ್ ಟ್ರೀ’ ಅನ್ನೂ ಸರ್ಕಾರ ಅನುಸರಿಸಲಿಲ್ಲ. ಬದಲಿಗೆ ಲಾಕ್‌ಡೌನ್‌ನ ಯಶಸ್ಸನ್ನು ಪರಿಶೀಲಿಸುವ ಮತ್ತು ದೇಶದ 700 ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಸಡಿಲಗೊಳಿಸುವ ಅಪಾರದರ್ಶಕ ಮಾನದಂಡಗಳಿಗೆ ಕೇಂದ್ರ ಸರ್ಕಾರ ಮಣೆ ಹಾಕಿತು. ಈ ಮಾನದಂಡಗಳ ವಿವರ ರಾಜ್ಯ ಸರ್ಕಾರಗಳಿಗೂ ತಿಳಿದಿಲ್ಲ.

ತಜ್ಞರ ಸಲಹೆಯನ್ನು ಕಡೆಗಣಿಸಿದ ಕಾರಣಕ್ಕೆ, ಲಾಕ್‌ಡೌನ್‌ನ ಹೊರತಾಗಿಯೂ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರುತ್ತಿದೆ.

ಕೆಂಪು ವಲಯಗಳನ್ನು ಗುರುತು ಮಾಡುವ ವಿಧಾನ

ಮಾರ್ಚ್ 24ರಂದು ಲಾಕ್‌ಡೌನ್ ಜಾರಿಯಾದಾಗ ದೇಶದಲ್ಲಿ 618 ಪ್ರಕರಣಗಳಷ್ಟೇ ಇದ್ದವು. ಮೇ 11ರ ಹೊತ್ತಿಗೆ 67,000ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಇದು ಶೇ 10,741ರಷ್ಟು ಏರಿಕೆ. ಮೇ 7ರ ಹೊತ್ತಿಗೆ ದೇಶದ ಒಟ್ಟು ಪ್ರಕರಣಗಳಲ್ಲಿಶೇ 60ರಷ್ಟು ಪ್ರಕರಣಗಳು ದೆಹಲಿ, ಮುಂಬೈ, ಚೆನ್ನೈ ಮತ್ತು ಅಹಮದಾಬಾದ್‌ ಸೇರಿದಂತೆ 15 ಪ್ರಮುಖ ನಗರಗಳಲ್ಲೇ ಪತ್ತೆಯಾಗಿದ್ದವು. ಈ ನಗರಗಳು ಲಾಕ್‌ಡೌನ್‌ನಲ್ಲೇ ಇದ್ದವು. ಆದರೂ ಪ್ರಕರಣಗಳು ಏರಿಕೆಯಾದವು. ಲಾಕ್‌ಡೌನ್‌ ಆರಂಭವಾದಾಗ ಮುಂಬೈನಲ್ಲಿ 67 ಪ್ರಕರಣಗಳಿದ್ದವು, ಈಗ 14 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಇದು ಶೇ 19,303ರಷ್ಟು ಏರಿಕೆ. ದೆಹಲಿಯಲ್ಲಿ 35ರಿಂದ 7,233ಕ್ಕೆ (ಶೇ 20,565ರಷ್ಟು) ಏರಿಕೆಯಾಗಿದೆ. ಅಹಮದಾಬಾದ್‌ನಲ್ಲಿ 14ರಿಂದ 5,818ಕ್ಕೆ (ಶೇ 41,457ರಷ್ಟು) ಏರಿಕೆಯಾಗಿದೆ.

ಆದರೆ, ಇದರ ಮಧ್ಯೆ ಮಹಾರಾಷ್ಟ್ರದ ಹಲವು ಪ್ರದೇಶಗಳಲ್ಲಿ ಸೋಂಕು ಸಮುದಾಯಕ್ಕೆ ಹರಡಿದೆ ಎಂಬುದನ್ನು ಅಲ್ಲಿನ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಒಡಿಶಾದಲ್ಲಿ ಕೋವಿಡ್–19 ಪ್ರಕರಣಗಳು ವಾರವೊಂದರಲ್ಲಿ ದುಪ್ಪಟ್ಟು ಆಗುತ್ತಿದೆ. ಮೇ 16ರ ವೇಳೆಗೆ ದೇಶದಲ್ಲಿ ಒಂದೂ ಹೊಸ ಪ್ರಕರಣ ಪತ್ತೆಯಾಗುವುದಿಲ್ಲ ಎಂದು ಏಪ್ರಿಲ್ 24ರಂದು ಸರ್ಕಾರ ಹೇಳಿತ್ತು. ಆದರೆ, ಇದು ಸುಳ್ಳು ಎಂಬುದು ಈಗ ಸಾಬೀತಾಗಿದೆ.

ನಾಲ್ಕು ಮಾನದಂಡಗಳ ಆಧಾರದಲ್ಲಿ ಜಿಲ್ಲೆಗಳನ್ನು ಕೆಂಪು ವಲಯ, ಕಿತ್ತಳೆ ವಲಯ ಮತ್ತು ಹಸಿರು ವಲಯಗಳೆಂದು ವರ್ಗೀಕರಿಸಿ ಲಾಕ್‌ಡೌನ್ ಸಡಿಲಗೊಳಿಸುವ ಆದೇಶವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಏಪ್ರಿಲ್ 30ರಂದು ಹೊರಡಿಸಿತ್ತು. ಜಿಲ್ಲೆಗಳಲ್ಲಿ ಇರುವ ಸಕ್ರಿಯ ಕೋವಿಡ್‍ಪ್ರಕರಣಗಳು, ಪ್ರಕರಣಗಳ ಸಂಖ್ಯೆ ದುಪ್ಪಟ್ಟು ಆಗಲು ತೆಗೆದುಕೊಳ್ಳುತ್ತಿರುವ ಸಮಯ, ತಪಾಸಣೆಗಳ ಸಂಖ್ಯೆ, ಸಮೀಕ್ಷೆಯ ವರದಿ. ಇವು ನಾಲ್ಕು ಮಾನದಂಡಗಳಾಗಿದ್ದವು. ಕೆಂಪು ವಲಯವು ಲಾಕ್‌ಡೌನ್‌ನ ಕಠಿಣ ನಿರ್ಬಂಧಗಳನ್ನು ಎದುರಿಸಲಿದ್ದರೆ, ಹಸಿರು ವಲಯವು ಅತ್ಯಂತ ಕಡಿಮೆ ಮಟ್ಟದ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ.

ವಲಯವನ್ನು ನಿರ್ಧರಿಸುವ ಮಾನದಂಡಗಳು ಮತ್ತು ಐಸಿಎಂಆರ್‌ನ ಸಲಹೆಗಳನ್ನು ಏಕೆ ಪಾಲಿಸಲಿಲ್ಲ ಎಂಬುದರ ಬಗ್ಗೆಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ಆರೋಗ್ಯ ಕಾರ್ಯದರ್ಶಿ ಪ್ರೀತಿ ಸುದಾನ್, ಐಸಿಎಂಆರ್ ಪ್ರಧಾನಿ ನಿರ್ದೇಶಕ ಬಲರಾಮ್ ಭಾರ್ಗವ್ ಮತ್ತು ಐಸಿಎಂಆರ್‌ನ ಸೋಂಕುರೋಗವಿಜ್ಞಾನ ವಿಭಾಗದ ಮುಖ್ಯಸ್ಥ ರಮಣ್ ಗಂಗಾಕೇಡ್ಖರ್‌ ಅವರಿಂದ ‘ಆರ್ಟಿಕಲ್ 14’ ಪ್ರತಿಕ್ರಿಯೆ ಕೇಳಿತು. ಈ ಪ್ರಶ್ನೆ ಇದ್ದ ಇ–ಮೇಲ್ ಅನ್ನು ಸಚಿವಾಲಯವು, ಸಚಿವಾಲಯದ ಇತರ ಅಧಿಕಾರಿಗಳಿಗೆ ಮತ್ತು ಐಸಿಎಂಆರ್‌ನ ಅಧಿಕಾರಿಗಳಿಗೆ ಫಾರ್ವಾರ್ಡ್ ಮಾಡಿತು. ಇದಕ್ಕೆ ಭಾರ್ಗವ್ ಮಾತ್ರ ಪ್ರತಿಕ್ರಿಯೆ ನೀಡಿದ್ದಾರೆ. ‘ಇದು ಐಸಿಎಂಆರ್‌ಗೆ ಸಂಬಂಧಿಸಿದ ವಿಷಯವಲ್ಲ. ಆರೋಗ್ಯ ಸಚಿವಾಲಯಕ್ಕೆ ಸಂಬಂಧಿಸಿದ ವಿಚಾರ’ ಎಂದು ಅವರು ಹೇಳಿದ್ದಾರೆ.

ಪೂಲ್‌ ಟೆಸ್ಟ್‌ ಬಗ್ಗೆ ಐಸಿಎಂಆರ್‌ ಮಾಡಿದ್ದ ಶಿಫಾರಸು

ಈ ನಾಲ್ಕು ಮಾನದಂಡಗಳನ್ನು ಯಾವ ರೀತಿ ಸಂಯೋಜಿಸಿ ಲಾಕ್‌ಡೌನ್ ಸಡಿಲಗೊಳಿಸಲಾಗುತ್ತದೆ ಎಂಬುದನ್ನು ಏಪ್ರಿಲ್ 30ರ ಆದೇಶದಲ್ಲಿ ರಾಜ್ಯ ಸರ್ಕಾರಗಳಿಗೆ ಸ್ಪಷ್ಟವಾಗಿ ತಿಳಿಸಿರಲಿಲ್ಲ. ‘ಕ್ಷೇತ್ರ ವರದಿ ಮತ್ತು ರಾಜ್ಯಮಟ್ಟದಲ್ಲಿ ಪೂರಕ ಪರಿಶೀಲನೆಯ ನಂತರ ರಾಜ್ಯ ಸರ್ಕಾರಗಳು ಹೆಚ್ಚುವರಿ ಜಿಲ್ಲೆಗಳನ್ನು ಈ ವಲಯಗಳಿಗೆ ಸೇರಿಸಬಹುದು. ಆದರೆ, ಸಚಿವಾಲಯವು ವರ್ಗೀಕರಿಸಿರುವ ಕೆಂಪು ಮತ್ತು ಕಿತ್ತಳೆ ವಲಯಗಳಲ್ಲಿರುವ ಯಾವ ಜಿಲ್ಲೆಗಳಲ್ಲೂ ರಾಜ್ಯ ಸರ್ಕಾರಗಳಾಗಲೀ, ಕೇಂದ್ರಾಡಳಿತ ಪ್ರದೇಶವಾಗಲೀ ನಿರ್ಬಂಧವನ್ನು ಸಡಿಲಿಸುವಂತಿಲ್ಲ’ ಎಂದಷ್ಟೇ ಸಚಿವಾಲಯವು ತನ್ನ ಆದೇಶದಲ್ಲಿ ತಿಳಿಸಿತ್ತು.

ಲಾಕ್‌ಡೌನ್‌ ಅನ್ನು ವಿಸ್ತರಿಸುವ ತನ್ನ ಮೇ 1ರ ಆದೇಶದಲ್ಲಿ ಸಚಿವಾಲಯವು ಈ ಮಾತುಗಳನ್ನು ಮತ್ತೆ ಹೇಳಿತು. ‘ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೆಂಪು ವಲಯದಲ್ಲಿರುವ ಯಾವ ಜಿಲ್ಲೆಗಳ ವಲಯವನ್ನೂ ಬದಲಿಸುವಂತಿಲ್ಲ’ ಎಂದು ಪುನರುಚ್ಚರಿಸಿತು. ಆದರೆ, ನಿರ್ಧಾರ ತೆಗೆದುಕೊಳ್ಳುವುದು ಹೇಗೆ ಎಂಬುದನ್ನು ಸ್ಪಷ್ಟಪಡಿಸಲಿಲ್ಲ.

‘ದೇಶದಲ್ಲಿ ಸೋಂಕು ಭಾರಿ ಪ್ರಮಾಣದಲ್ಲಿ ಸಮುದಾಯಕ್ಕೆ ಹರಡುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಈ ಬಿಕ್ಕಟ್ಟನ್ನು ಎದುರಿಸಲು ಅಗತ್ಯವಿರುವ ವೈದ್ಯಕೀಯ ವ್ಯವಸ್ಥೆಯನ್ನು ಮಾಡಿಕೊಳ್ಳಲು ಲಾಕ್‌ಡೌನ್‌ನ ಅವಧಿಯನ್ನು ಬಳಸಿಕೊಳ್ಳಬೇಕು’ ಎಂದು ಐಸಿಎಂಆರ್ ಏಪ್ರಿಲ್ 23ರಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು. ಈ ಅವಕಾಶಗಳನ್ನು ಸರ್ಕಾರ ಕಳೆದುಕೊಂಡಿತು ಎಂಬುದು ‘ಆರ್ಟಿಕಲ್ 14’ನ ತನಿಖೆಯಲ್ಲಿ ಪತ್ತೆಯಾಗಿದೆ.

ಮನೆಮನೆ ಸಮೀಕ್ಷೆ, ಕೋವಿಡ್ ದೃಢಪಟ್ಟ ಪ್ರತಿ ಇಬ್ಬರಲ್ಲಿ ಒಬ್ಬರನ್ನು ಸಮುದಾಯವೇ ನಿಗಾವಣೆ ಮಾಡುವುದೂ ಸೇರಿಹಲವು ವೈಜ್ಞಾನಿಕ ಕ್ರಮಗಳನ್ನುಐಸಿಎಂಆರ್ ಶಿಫಾರಸು ಮಾಡಿತ್ತು. ಈ ಕ್ರಮಗಳು ಇಲ್ಲದೇ ಇದ್ದರೆ, ದೊರೆಯಲಿರುವ ಲಾಕ್‌ಡೌನ್‌ ಲಾಭ ಕೇವಲ ತಾತ್ಕಾಲಿಕ ಎಂದು ವಿಜ್ಞಾನಿಗಳು ಸರ್ಕಾರವನ್ನು ಎಚ್ಚರಿಸಿದ್ದರು.

ದೇಶದಲ್ಲಿ ಒತ್ತಾಯಪೂರ್ವಕವಾಗಿ ಲಾಕ್‌ಡೌನ್ ಜಾರಿಗೆ ತರುವುದರ ವಿರುದ್ಧ ತಾನು ನೀಡಿದ್ದ ಎಚ್ಚರಿಕೆಯನ್ನು ಸರ್ಕಾರ ಕಡೆಗಣಿಸಿದ ನಂತರ, ಐಸಿಎಂಆರ್ ಈ ಹೊಸ ಎಚ್ಚರಿಕೆಯನ್ನು ನೀಡಿತ್ತು. ‘ಭಾರತದಲ್ಲಿ ಚೀನಾ ಸ್ವರೂಪದ ಲಾಕ್‌ಡೌನ್ ಜಾರಿಗೆ ತರಬಾರದು. ಇಂತಹ ಲಾಕ್‌ಡೌನ್‌ನಿಂದ ಸಾಮಾಜಿಕ, ಆರ್ಥಿಕ ಮತ್ತು ಜನರ ಮಾನಸಿಕ ಸ್ಥಿತಿಯ ಮೇಲೆ ದೀರ್ಘಾವಧಿ ದುಷ್ಪರಿಣಾಮ ಆಗುತ್ತದೆ’ ಎಂದು ವಿಜ್ಞಾನಿಗಳು ಫೆಬ್ರುವರಿಯಲ್ಲೇ ಸರ್ಕಾರವನ್ನು ಎಚ್ಚರಿಸಿದ್ದರು. ‘ಬದಲಿಗೆ ಸರ್ಕಾರವು ವೈದ್ಯಕೀಯ ಸವಲತ್ತುಗಳನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ಸಮುದಾಯ ಆಧರಿತ ನಿಗಾವಣೆ ವ್ಯವಸ್ಥೆ ಮತ್ತು ಪ್ರತ್ಯೇಕವಾಸದ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದ್ದರು. ಈ ಸಂಬಂಧ ‘ಆರ್ಟಿಕಲ್ 14’ ಏಪ್ರಿಲ್ 24ರಂದು ವರದಿ ಪ್ರಕಟಿಸಿತ್ತು.

ಈ ಎಚ್ಚರಿಕೆಗಳನ್ನು ಕಡೆಗಣಿಸಿದ ಸರ್ಕಾರವು, ವೈಜ್ಞಾವಿಕವಾಗಿ ಸಿದ್ಧತೆ ಮಾಡಿಕೊಳ್ಳದೆಯೇ ಮಾರ್ಚ್ 24ರಂದು ದೇಶದಾದ್ಯಂತ ಲಾಕ್‌ಡೌನ್ ಘೋಷಿಸಿತು. ಲಾಕ್‌ಡೌನ್ ಜಾರಿಯಾಗಲು ಕೇವಲ ನಾಲ್ಕು ತಾಸು ಬಾಕಿಯಿದ್ದ ಕಾರಣ, ಬಡವರು ಮತ್ತು ವಲಸೆ ಕಾರ್ಮಿಕರ ಜೀವನೋಪಾಯ ಹಾಗೂ ಊಟದ ಸಮಸ್ಯೆ ತಲೆದೋರಿತು.

ಲಾಕ್‌ಡೌನ್‌ನಿಂದಲೇ ಪರಿಸ್ಥಿತಿ ಬಿಗಡಾಯಿಸಿದ ನಂತರವೂ, ಅದನ್ನು ನಿಯಂತ್ರಿಸುವ ಹಲವು ವೈಜ್ಞಾನಿಕ ಕ್ರಮಗಳನ್ನು ಐಸಿಎಂಆರ್ ವಿಜ್ಞಾನಿಗಳು ಸರ್ಕಾರಕ್ಕೆ ಶಿಫಾರಸು ಮಾಡಿದರು.

ದೇಶದಲ್ಲಿ ಸೋಂಕು ವ್ಯಾಪಕವಾಗಿ ಹರಡಲಿದೆ (ಈಗಾಗಲೇ ಹರಡುತ್ತಿದೆ ಎಂದು ಕೆಲವು ತಜ್ಞರು ಪ್ರತಿಪಾದಿಸಿದ್ದಾರೆ). ಅದನ್ನು ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಲಾಕ್‌ಡೌನ್‌ನ ಅವಧಿಯನ್ನು ಬಳಸಿಕೊಳ್ಳಿ ಎಂದು ವಿಜ್ಞಾನಿಗಳು ಸರ್ಕಾರಕ್ಕೆ ಹೇಳಿದ್ದರು. ಅಲ್ಲದೆ, ಲಾಕ್‌ಡೌನ್‌ನಿಮದ ಹೊರಗೆ ಬರಲು ‘ಡಿಸಿಷನ್ ಮೇಕಿಂಗ್ ಟ್ರೀ’ ಅನುಸರಿಸುವಂತೆ ಸೂಚಿಸಿದ್ದರು. ಆದರೆ ಸರ್ಕಾರವು ಈ ಯಾವ ಕ್ರಮಗಳನ್ನೂ ಜಾರಿಗೆ ತರಲಿಲ್ಲ.

ಐಸಿಎಂಆರ್‌ನ ವೈಜ್ಞಾನಿಕ ಕ್ರಮಾವಳಿಗಳನ್ನು ಜಾರಿಗೆ ತರಲು ವಿಫಲವಾದ ಸರ್ಕಾರವು ಈಗ ಪ್ರತಿಕ್ರಿಯಾ ತಂತ್ರದ ಮೊರೆ ಹೋಗಿದೆ ಎಂಬುದನ್ನು ಒಂದು ತಿಂಗಳಲ್ಲಿ ಸರ್ಕಾರವು ಘೋಷಿಸಿರುವ ಆದೇಶಗಳು ಮತ್ತು ಮಾರ್ಗಸೂಚಿಗಳು ಸ್ಪಷ್ಟಪಡಿಸುತ್ತವೆ.

‘ನಿಖರ ಚಿಕಿತ್ಸೆ ಲಭ್ಯವಿಲ್ಲದೇ ಇದ್ದರೂ, ತಪಾಸಣೆ ನಡೆಸುವುದು ಅತ್ಯಂತ ಅಗತ್ಯ. ಹೀಗಾಗಿ ಇಡೀ ವಲಯದಲ್ಲಿ ಕಣ್ಗಾವಲು ನಡೆಸಬೇಕು’ ಎಂದು ಭಾರತೀಯ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ ಅಧ್ಯಕ್ಷ ಕೆ.ಶ್ರೀಕಾಂತ್ ರೆಡ್ಡಿ ಹೇಳಿದ್ದಾರೆ. ಕೇಂದ್ರ ಸರ್ಕಾರ ರಚಿಸಿರುವ ಕೋವಿಡ್–19 ಕಾರ್ಯಪಡೆಯಲ್ಲಿ ಶ್ರೀಕಾಂತ್ ಸದಸ್ಯರಾಗಿದ್ದಾರೆ.

ವೈಜ್ಞಾನಿಕ ಸಲಹೆಯಿಂದ ದೂರ

ನಿರ್ಧಾರ ಕೈಗೊಳ್ಳುವಿಕೆ ವಿಧಾನ ಹೇಗಿರಬೇಕು ಎಂದು ಐಸಿಎಂಆರ್‌ ಅಭಿವೃದ್ಧಿಪ‍ಡಿಸಿದ ಪ್ರಕ್ರಿಯೆಯನ್ನು, ನೀತಿ ಆಯೋಗದ ಸದಸ್ಯ ವಿನೋದ್‌ ಕೆ. ಪಾಲ್‌ ಅವರು ಏಪ್ರಿಲ್‌ ಮೊದಲ ವಾರದಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ವಿಜ್ಞಾನಿಗಳು ಸಲಹೆ ನೀಡಿದ ರೀತಿಯಲ್ಲಿನ ರಾಷ್ಟ್ರವ್ಯಾಪಿ ಮನೆ ಮನೆ ನಿಗಾ ಮತ್ತು ಕ್ವಾರಂಟೈನ್‌ ಕಾರ್ಯತಂತ್ರವನ್ನು ರೂಪಿಸಲು ಸರ್ಕಾರಕ್ಕೆ ಇನ್ನೊಂದು ವಾರ ಬೇಕಾಗಬಹುದು ಎಂದು ಪಾಲ್‌ ಹೇಳಿದ್ದರು.

ಪಿಡುಗು ನಿಯಂತ್ರಣದಲ್ಲಿ ಇದೆ ಎಂದು ಸರ್ಕಾರವು ಸಾರ್ವಜನಿಕವಾಗಿ ಹೇಳುತ್ತಿತ್ತು. ಆದರೆ, ವಿಷಮ ಸ್ಥಿತಿ ಇನ್ನಷ್ಟೇ ಎದುರಾಗಲಿದೆ ಎಂಬುದನ್ನು ಆಂತರಿಕ ಸಭೆಗಳಲ್ಲಿ ಒಪ್ಪಿಕೊಂಡಿತ್ತು. ‘ಭಾರತದಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ’ ಎಂದು ರಾಜ್ಯ ಸರ್ಕಾರಗಳಿಗೆ ಏಪ್ರಿಲ್‌ 14ರಂದು ಬರೆದ ಪತ್ರದಲ್ಲಿ ಐಸಿಎಂಆರ್‌ ಮಹಾ ನಿರ್ದೇಶಕ ಭಾರ್ಗವ ಹೇಳಿದ್ದರು.(ಮಾದರಿ ಸಂಗ್ರಹ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ತಪಾಸಣೆ ನಡೆಸುವುದಕ್ಕೆ ಸಂಬಂಧಿಸಿ ರಾಜ್ಯಗಳಿಗೆ ಐಸಿಎಂಆರ್‌ ಕಳುಹಿಸಲಾದ ಸಲಹಾಪತ್ರದಲ್ಲಿಯೂ ಪ್ರಕರಣಗಳ ಸಂಖ್ಯೆ ಅತಿ ವೇಗದಲ್ಲಿ ಹೆಚ್ಚುತ್ತಿದೆ ಎಂದು ಹೇಳಲಾಗಿತ್ತು. ಸೋಂಕು ದೃಢಪಟ್ಟವರ ಸಂಪರ್ಕದಿಂದ ಮಾತ್ರವೇ ಸೋಂಕು ಹರಡುತ್ತಿದೆ ಎಂದೂ ಈಗ ಹೇಳಲಾಗದು ಎಂದು ಈ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು).

ಅದೇ ದಿನ, ಅದೇ ಮೊದಲ ಬಾರಿಗೆ ಜಿಲ್ಲೆಗಳನ್ನು ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳಾಗಿ ಜಿಲ್ಲೆಗಳನ್ನು ಕೇಂದ್ರವು ವಿಂಗಡಿಸಿತ್ತು. ವಲಯಗಳನ್ನು ಗುರುತಿಸಿಲು ನಾಲ್ಕು ಮಾನದಂಡಗಳಿದ್ದರೂ ಆಗ ಅನ್ವಯ ಮಾಡಿದ್ದು ಒಂದನ್ನು ಮಾತ್ರ. ಪ್ರಕರಣಗಳ ಸಂಖ್ಯೆ ನಾಲ್ಕು ದಿನಕ್ಕಿಂತ ಕಡಿಮೆ ಅವಧಿಯಲ್ಲಿ ದ್ವಿಗುಣಗೊಳ್ಳುವ ಜಿಲ್ಲೆಗಳನ್ನು ಕೆಂಪು ವಲಯ ಎಂದು ಗುರುತಿಸುವ ಮಾನದಂಡವನ್ನು ಮಾತ್ರ ಆಗ ಅನುಸರಿಸಲಾಗಿತ್ತು.(ಏಪ್ರಿಲ್‌ ಮಧ್ಯದಲ್ಲಿ ರಾಜ್ಯಗಳ ಜತೆಗೆ ಹಂಚಿಕೊಂಡ ಪ್ರಸೆಂಟೇಷನ್‌ನಲ್ಲಿ ಹಾಟ್‌ಸ್ಪಾಟ್‌ ಮತ್ತು ಕೆಂಪು ವಲಯಗಳ ಬಗ್ಗೆ ವಿವರಣೆ ನೀಡಲಾಗಿದೆ).

28 ದಿನಗಳಲ್ಲಿ ಒಂದೂ ಹೊಸ ಪ್ರಕರಣ ವರದಿಯಾಗದ ಪ್ರದೇಶವನ್ನು ಹಸಿರು ವಲಯ ಮತ್ತು ಇತರ ಉಳಿದ ಪ್ರದೇಶವನ್ನು ಕಿತ್ತಳೆ ವಲಯ ಎಂದು ವರ್ಗೀಕರಿಸಬಹುದು. ಕೆಂಪು ವಲಯದಲ್ಲಿ 14 ದಿನಗಳಲ್ಲಿ ಹೊಸ ಪ್ರಕರಣ ವರದಿಯಾಗದೇ ಇದ್ದರೆ ಆ ಜಿಲ್ಲೆಯನ್ನು ಕಿತ್ತಳೆ ವಲಯ ಎಂದು ಗುರುತಿಸಬಹುದು. 14 ದಿನಗಳಲ್ಲಿ ಹೊಸ ಪ್ರಕರಣ ವರದಿಯಾಗದ ಕಿತ್ತಳೆ ವಲಯದ ಜಿಲ್ಲೆಯನ್ನು ಹಸಿರು ವಲಯ ಎಂದೂ ಪರಿಗಣಿಸಬಹುದು ಎಂಬುದು ನಿಯಮ.

‘ತಮ್ಮಲ್ಲಿ ಹೊಸ ಪ್ರಕರಣಗಳು ಇಲ್ಲ ಎಂದು ಹಲವು ಜಿಲ್ಲೆಗಳು ಹೇಳಿಕೊಂಡಿದ್ದವು. ಈ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಇರಲಿಲ್ಲ ಕೂಡ. ಯಾಕೆಂದರೆ, ಪ್ರಕರಣಗಳನ್ನು ಗುರುತಿಸುವುದಕ್ಕಾಗಿ ಈ ಜಿಲ್ಲೆಗಳಲ್ಲಿ ಪರೀಕ್ಷೆ ಮತ್ತು ನಿಗಾ ಅಗತ್ಯ ಪ್ರಮಾಣದಲ್ಲಿ ಇರಲಿಲ್ಲ’ ಎಂದು ಸರ್ಕಾರ ರಚಿಸಿರುವ ಕೋವಿಡ್‌–19ರ ಸಾರ್ವಜನಿಕ ಆರೋಗ್ಯ ಪರಿಣತರ ತಂಡದ ಸದಸ್ಯರೊಬ್ಬರು ಹೇಳಿದ್ದಾರೆ. ‘ಪ್ರಕರಣ ವರದಿಯಾಗಿಲ್ಲ ಎಂಬುದರ ಅರ್ಥ ಆ ಜಿಲ್ಲೆಯಲ್ಲಿ ಪ್ರಕರಣ ಇರಲಿಲ್ಲ ಎಂದಲ್ಲ’ ಎಂಬುದು ಅವರ ಅಭಿಪ್ರಾಯ.

ರಾಜ್ಯದಲ್ಲಿದ್ದ ಎರಡನೇ ಕೋವಿಡ್‌ ಬಾಧಿತ ಗುಣಮುಖರಾದ ಬಳಿಕ ಏಪ್ರಿಲ್‌ 23ರಂದು ತ್ರಿಪುರಾ ಕೋವಿಡ್‌ಮುಕ್ತ ಎಂದು ಮುಖ್ಯಮಂತ್ರಿ ಬಿಪ್ಲವ್‌‌ ದೇಬ್‌ ಘೋಷಿಸಿಕೊಂಡಿದ್ದರು. ಆದರೆ, ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಸಿಬ್ಬಂದಿಯನ್ನು ಪರೀಕ್ಷೆ ಮಾಡಲು ಆರಂಭಿಸಿದ ನಂತರ, ಮುಂದಿನ ಎರಡು ವಾರಗಳಲ್ಲಿ ರೋಗಿಗಳ ಸಂಖ್ಯೆ 62ಕ್ಕೆ ಏರಿತ್ತು. ಮೇ 10ರ ಹೊತ್ತಿಗೆ ಪ್ರಕರಣಗಳ ಸಂಖ್ಯೆ 100ಕ್ಕೆ ತಲುಪಿತ್ತು.

ರಾಷ್ಟ್ರವ್ಯಾಪಿ ಮನೆ ಮನೆ ನಿಗಾ ಮತ್ತು ಕ್ವಾರಂಟೈನ್‌ ಕಾರ್ಯತಂತ್ರ ಅನುಸರಿಸಬೇಕು ಎಂದು ಫೆಬ್ರುವರಿ ಮತ್ತು ಏಪ್ರಿಲ್‌ ಮೊದಲ ವಾರದಲ್ಲಿ ಕೇಂದ್ರಕ್ಕೆ ಐಸಿಎಂಆರ್‌ ಸಲಹೆ ನೀಡಿತ್ತು. ಆದರೆ, ಲಾಕ್‌ಡೌನ್‌ನ ಮೊದಲನೇ ವಿಸ್ತರಣೆಯ ಏಪ್ರಿಲ್‌ 15ರಿಂದ ಮೇ 1ರ ಅವಧಿಯಲ್ಲಿ ಈ ಸಲಹೆ ಕಾರ್ಯರೂಪಕ್ಕೆ ಬರಲಿಲ್ಲ. ದೇಶವ್ಯಾಪಿ, ಅಥವಾ ನಗರ ವ್ಯಾಪಿ ಮನೆಮನೆ ಸಮೀಕ್ಷೆ ಆಥವಾ ಕ್ವಾರಂಟೈನ್‌ ಕಾರ್ಯತಂತ್ರದ ಅನುಷ್ಠಾನ ಆಗಲಿಲ್ಲ.‍ಪ್ರಕರಣಗಳು ಹೆಚ್ಚಾಗಿರುವ ಕ್ಲಸ್ಟರ್‌ಗಳಲ್ಲಿ ಮಾತ್ರ ಏಪ್ರಿಲ್‌ 10ರಂದು ಈ ಕಾರ್ಯತಂತ್ರ ಜಾರಿ ಮಾಡಲಾಯಿತು.

‘ಆಂಧ್ರ ಪ್ರದೇಶ ಮತ್ತು ಕೇರಳದಲ್ಲಿ ಗ್ರಾಮ ಮಟ್ಟದ ಸ್ವಯಂ ಸೇವಕರು‍ಪ್ರತಿ ವಾರ ಮನೆಮನೆಗೆ ಭೇಟಿ ನೀಡಿ ಜನರಲ್ಲಿ ಲಕ್ಷಣಗಳೇನಾದರೂ ಇವೆಯೇ ಎಂದು ಕೇಳುತ್ತಿದ್ದರು. ಲಾಕ್‌ಡೌನ್‌ನ ಅವಧಿಯಲ್ಲಿಯೂ ಇದು ನಡೆದಿತ್ತು. ಈ ಕೆಲಸಕ್ಕೆ ವೈದ್ಯರು ಬೇಕಾಗಿಲ್ಲ, ಸ್ವಯಂ ಸೇವಕರು ಅಥವಾ ಆಶಾ ಕಾರ್ಯಕರ್ತರು ಇದನ್ನು ಮಾಡಬಹುದು’ ಎಂದು ರೆಡ್ಡಿ ಹೇಳುತ್ತಾರೆ. ಈ ಮಧ್ಯೆ, ದೇಶದಲ್ಲಿ ಪರೀಕ್ಷೆಗಳ ಪ್ರಮಾಣವನ್ನು ಹೆಚ್ಚಿಸಲಾಯಿತು. ಇದು ಸರ್ಕಾರದ ಕಾರ್ಯತಂತ್ರ ವಿಫಲವಾಗಿದೆ ಎಂಬುದರ ಸೂಚನೆ.

ಮುಂದಿನ 15 ದಿನಗಳಲ್ಲಿ, ಎರಡನೇ ಹಂತದ ಲಾಕ್‌ಡೌನ್‌ ಕೊನೆಯಾಗುವ ಹೊತ್ತಿಗೆ ಕೊರೊನಾ ಪಸರಿಸುವಿಕೆಯ ಪ್ರಮಾಣವು ಹಿಂದಿಗಿಂತ ಹೆಚ್ಚೇ ಇತ್ತು. ಏಪ್ರಿಲ್‌ 14ರಂದು 12 ಸಾವಿರ ರೋಗಿಗಳಿದ್ದರೆ, ಏಪ್ರಿಲ್‌ 30ರ ಹೊತ್ತಿಗೆ 33 ಸಾವಿರ ಸಕ್ರಿಯ ಪ್ರಕರಣಗಳಿದ್ದವು. ಮೇ 9ರ ಹೊತ್ತಿಗೆ ಇದು 60 ಸಾವಿರಕ್ಕೆ ಏರಿತ್ತು. ಲಾಕ್‌ಡೌನ್‌ ವಿಸ್ತರಣೆಯ ಆರ್ಥಿಕ ಪರಿಣಾಮಗಳು ಮುಂದುವರಿದಿದ್ದವು.ಸರ್ಕಾರವು ಮತ್ತೊಮ್ಮೆ ತನ್ನ ಕಾರ್ಯತಂತ್ರ ಬದಲಿಸಿತು.

ಹೊಸ ಮಾನದಂಡ

ನಾಲ್ಕು ಮಾನದಂಡಗಳ ಆಧಾರದಲ್ಲಿ ವಲಯಗಳ ವರ್ಗೀಕರಣ ಮಾಡಬಹುದು ಎಂಬುದನ್ನು ತಿಳಿಸುವ 12 ಪುಟಗಳ ಆದೇಶವನ್ನು ಕೇಂದ್ರ ಗೃಹ ಸಚಿವಾಲಯವು ಮೇ 1ರಂದು ಪ್ರಕಟಿಸಿತು. ‘ಜಿಲ್ಲೆಯಲ್ಲಿ ಇರುವ ಸಕ್ರಿಯ ಪ್ರಕರಣಗಳ ಒಟ್ಟು ಸಂಖ್ಯೆ, ಪ್ರಕರಣಗಳು ದುಪ್ಪಟ್ಟಾಗುವ ಅವಧಿ, ಪರೀಕ್ಷೆಗಳ ಪ್ರಮಾಣ ಮತ್ತು ನಿಗಾ ಮಾಹಿತಿಯ’ ಆಧಾರದಲ್ಲಿ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ವಲಯಗಳನ್ನು ಕೆಂಪು ಅಥವಾ ಹಾಟ್‌ಸ್ಪಾಟ್‌ ಜಿಲ್ಲೆ ಎಂದು ಗುರುತಿಸಬಹುದು ಎಂದು ಈ ಆದೇಶದಲ್ಲಿ ಹೇಳಲಾಗಿತ್ತು.

ಈ ಮಾನದಂಡಗಳನ್ನು ಯಾಕೆ ಬಳಸಲಾಗುತ್ತಿದೆ ಮತ್ತು ಲಾಕ್‌ಡೌನ್‌ ನಿರ್ಬಂಧಗಳ ತೆರವಿಗೆ ಯಾವ ವಿಚಾರಗಳನ್ನು ಪರಿಗಣಿಸಲಾಗುವುದು ಎಂದು ರಾಜ್ಯಗಳಿಗೆ ವಿವರಿಸುವ ಕೆಲಸವನ್ನು ಕೇಂದ್ರ ಮಾಡಿಲ್ಲ.

‘ಸೋಂಕು ಗರಿಷ್ಠ ಮಟ್ಟವನ್ನು ತಲುಪುವ ಹೊತ್ತಿಗೆ ಆಸ್ಪತ್ರೆಗೆ ದಾಖಲಾಗುವ ಮತ್ತು ಕ್ವಾರಂಟೈನ್‌ನಲ್ಲಿ ಉಳಿಯುವ ಅಗತ್ಯ ಇರುವ ಜನರ ಸಂಖ್ಯೆಯು ಲಭ್ಯ ಇರುವ ಸೌಲಭ್ಯಗಳ ಸಂಖ್ಯೆಗಿಂತ ಕಡಿಮೆ ಇರುವಂತೆ ನೋಡಿಕೊಳ್ಳುವುದು ಲಾಕ್‌ಡೌನ್‌ನ ಉದ್ದೇಶ. ಜಿಲ್ಲೆಗಳಲ್ಲಿ ಇರುವ ವೈದ್ಯಕೀಯ ಮತ್ತು ಕ್ವಾರಂಟೈನ್‌ ಸೌಲಭ್ಯಗಳ ಬಗೆಗೆ ಮಾಹಿತಿ ಪಡೆಯದೆ ಈ ಮಾನದಂಡಗಳನ್ನು ಅನುಸರಿಸುವುದರಲ್ಲಿ ಅರ್ಥ ಇಲ್ಲ’ ಎಂದು ವಲಯ ವರ್ಗೀಕರಣ ನೀತಿಯನ್ನು ಮರು ವಿಮರ್ಶೆಗೆ ಒಳಪಡಿಸಬೇಕು ಎಂದು ಕೇಂದ್ರವನ್ನು ಕೋರಿದ ರಾಜ್ಯವೊಂದರ ಅಧಿಕಾರಿಯೊಬ್ಬರು ವಿವರಿಸಿದ್ದಾರೆ. ತಮ್ಮ ಹೆಸರು ಅಥವಾ ರಾಜ್ಯದ ಹೆಸರನ್ನು ಪ್ರಕಟಿಸಬಾರದು ಎಂದು ಈ ಅಧಿಕಾರಿ ಕೋರಿದ್ದಾರೆ.

‘ಜಿಲ್ಲೆಯೊಂದರಲ್ಲಿ ಆಸ್ಪತ್ರೆ ಹಾಸಿಗೆ ಸಾಮರ್ಥ್ಯವು 50 ಮಾತ್ರ ಇದ್ದು ಅಲ್ಲಿ 500 ಪ್ರಕರಣಗಳು ವರದಿಯಾದರೆ, ಇದು ಅತಿ ಹೆಚ್ಚು ಎಂದು ಅರ್ಥ. ಜಿಲ್ಲೆಯಲ್ಲಿ 1000 ಆಸ್ಪತ್ರೆ ಹಾಸಿಗೆ ಇದ್ದರೆ ಮತ್ತು ದಿನವೂ ವರದಿಯಾಗುವ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೆ 500 ಪ್ರಕರಣಗಳನ್ನು ನಿಭಾಯಿಸುವುದು ಸುಲಭ. ಇಂತಹ ಸನ್ನಿವೇಶದಲ್ಲಿ ನಿರ್ಬಂಧ ಸಡಿಲಿಕೆ ಬಗ್ಗೆ ಯೋಚಿಸಬಹುದು. ಆದರೆ, ಕೇಂದ್ರದ ಹುಕುಂಗಳ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಯಾವ ಮಾನದಂಡ ಅನುಸರಿಸಿ ನಿರ್ಧಾರ ಕೈಗೊಳ್ಳಲಾಗುತ್ತಿದೆ ಗೊತ್ತಾಗುತ್ತಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಏಪ್ರಿಲ್‌ 10ರಂದು ಸರ್ಕಾರ ಹೊರಡಿಸಿದ ಆದೇಶವನ್ನು ಓದಿದರೆ, ‘ನಿಗಾ ಮಾಹಿತಿ’ ಎಂಬುದನ್ನು ಐಸಿಎಂಆರ್‌ ಶಿಫಾರಸು ಮಾಡಿದ ‘ಮನೆ ಮನೆ ನಿಗಾ’ ಎಂದು ಅರ್ಥ ಮಾಡಿಕೊಳ್ಳುವ ಸಾಧ್ಯತೆ ಇದೆ. ‘ನಿಗಾ ಮಾಹಿತಿ’ ಎಂದು ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಿರುವ ಮಾನದಂಡವು ಐಸಿಎಂಆರ್‌ ಶಿಫಾರಸಿಗೆ ಭಾಗಶಃ ಆದರೂ ಬದ್ಧವಾಗಿದೆಯೇ? ಸರ್ಕಾರದಲ್ಲಿರುವ ಮತ್ತು ಹೊರಗಿನ ತಜ್ಞರ ಪ್ರಕಾರ ಇಲ್ಲ.

ಭಾರತದ 700 ಜಿಲ್ಲೆಗಳಲ್ಲಿ ಎರಡು ವಾರಕ್ಕೊಮ್ಮೆ (biweekly) ಮನೆ ಮನೆ ಸಮೀಕ್ಷೆ ನಡೆಸಿ ಕೋವಿಡ್‌–19 ಲಕ್ಷಣಗಳು ಇರುವವರು ಇದ್ದಾರೆಯೇ ಎಂಬುದನ್ನು ಗುರುತಿಸಬೇಕು ಎಂದು ಐಸಿಎಂಆರ್‌ ಶಿಫಾರಸು ಮಾಡಿದೆ. ಕೋವಿಡ್‌ ಸೋಂಕಿಗಾಗಿ ಪರೀಕ್ಷೆ ನಡೆಸಲಾಗುವ ಆಸ್ಪತ್ರೆಗಳು, ಕ್ಲಿನಿಕ್‌ಗಳು ಮತ್ತು ಜ್ವರ ಚಿಕಿತ್ಸಾಲಯಗಳಲ್ಲಿ ‘ಸೋಂಕು ಸ್ಥಿತಿ ಬದಲಾವಣೆ’ಯನ್ನು ಗಮನಿಸಬೇಕು ಎಂದು ಐಸಿಎಂಆರ್‌ ಶಿಫಾರಸು ಮಾಡಿದೆ. ಆಯಾ ಪ್ರದೇಶದಲ್ಲಿನ ಸೋಂಕು ಪ್ರಮಾಣದ ಸ್ಥೂಲ ಚಿತ್ರಣ ಪಡೆಯಲು ಇದು ಸಹಕಾರಿ.

ಕೋವಿಡ್‌ ಪ್ರಕರಣಗಳು ಇಲ್ಲದ ಸ್ಥಳಗಳಲ್ಲಿಯೂ ‘ಸೋಂಕು ಸ್ಥಿತಿ ಬದಲಾಣೆ’ ಮೇಲಿನ ನಿಗಾದಲ್ಲಿ ಆಸ್ಪತ್ರೆಗಳಿಗೆ ಸಾಮಾನ್ಯ ತಪಾಸಣೆಗಾಗಿ ಬರುವ ಜನರಲ್ಲಿ ಕೊರೊನಾ ವೈರಾಣುವಿನಿಂದಾಗಿ ಸೃಷ್ಟಿಯಾಗಿರುವ ಪ್ರತಿಕಾಯಗಳು (ಆ್ಯಂಟಿಬಾಡಿ) ಇವೆಯೇ ಎಂಬುದನ್ನು ನೋಡಬೇಕು. ಕೋವಿಡ್‌–19 ಪ್ರಕರಣಗಳಲ್ಲಿ ಹೆಚ್ಚಳವಾಗಿದೆಯೇ ಎಂಬುದರ ಸುಳಿವನ್ನು ಇದು ನೀಡುತ್ತದೆ.

ಕನಿಷ್ಠ ಒಂದು ಪ್ರಕರಣ ಇರುವ ಕಂಟೈನ್‌ಮೆಂಟ್‌ ವಲಯಗಳಲ್ಲಿ ಮಾತ್ರ ಮನೆ ಮನೆ ಸಮೀಕ್ಷೆಯನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಇಡೀ ಜಿಲ್ಲೆಗೆ ಇದು ಅನ್ವಯ ಅಲ್ಲ ಎಂದು ಏಪ್ರಿಲ್‌ 17ರಂದು ಕೇಂದ್ರವು ನೀಡಿದ ಸೂಚನೆ ಹೇಳುತ್ತದೆ. ಕಂಟೈನ್‌ಮೆಂಟ್‌ ವಲಯವನ್ನು ಇತರ ವಲಯಗಳಿಂದ ಪ್ರತ್ಯೇಕಿಸಿ, ಅಲ್ಲಿ ಸಕ್ರಿಯ ಪ್ರಕರಣಗಳು ಇವೆಯೇ ಎಂಬುದನ್ನು ಪರೀಕ್ಷೆ ಮಾಡಬೇಕು ಎಂದು ಈ ಸೂಚನೆಯಲ್ಲಿ ಹೇಳಲಾಗಿದೆ.

ಸೋಂಕಿತರು ಇರುವ ಪ್ರದೇಶದ ಹತ್ತಿರದ ಸ್ಥಳಗಳಲ್ಲಿ ಶೋಧ ನಡೆಸುವ ಅಗತ್ಯ ಇಲ್ಲ ಎಂದು ಕೇಂದ್ರವು ಸಲಹೆ ನೀಡಿತ್ತು. ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಂಟೈನ್‌ಮೆಂಟ್‌ ವಲಯಗಳಲ್ಲಿ ಇಡೀ ನಗರವನ್ನೂ ಸೇರಿಸಿಕೊಳ್ಳಬಹುದು ಎಂದು ವ್ಯಾಖ್ಯಾನಿಸಿತ್ತು. ಆದರೆ, ಏಪ್ರಿಲ್‌ 30ರಂದು ಕಂಟೈನ್‌ಮೆಂಟ್‌ ವಲಯದ ವ್ಯಾಖ್ಯೆಯನ್ನು ಬದಲಾಯಿಸಲಾಯಿತು. ಸೋಂಕಿತರು ಇರುವ ಕಟ್ಟಡ, ನೆರೆಹೊರೆ ಪ್ರದೇಶ, ಬೀದಿ ಅಥವಾ ಪೊಲೀಸ್ ಠಾಣೆ ವ್ಯಾಪ್ತಿಯನ್ನು ಮಾತ್ರ ಕಂಟೈನ್‌ಮೆಂಟ್‌ ವಲಯ ಎಂದು ಗುರುತಿಸಬಹುದು ಎಂದು ಹೇಳಲಾಯಿತು.

‘ಐಸಿಎಂಆರ್‌ ಸಲಹೆಯನ್ನು ಅನುಸರಿಸಬಹುದಾದ ಕಾಲ ಮಿಂಚಿ ಹೋಗಿದೆ’ ಎಂದು ಐಸಿಎಂಆರ್‌ ಕಾರ್ಯಪಡೆಯ ಸದಸ್ಯರೊಬ್ಬರು ಹೇಳುತ್ತಾರೆ. ‘ಲಾಕ್‌ಡೌನ್‌ನಿಂದಾಗಿ ಎದುರಾಗುತ್ತಿರುವ ಆರ್ಥಿಕ ಸವಾಲುಗಳು ಅಪಾರ. ಪಿಡುಗನ್ನು ನಿಭಾಯಿಸುವ ವಿಚಾರದಲ್ಲಿ ಕೇಂದ್ರವು ಬೇರೆಯೇ ಧೋರಣೆಯನ್ನು ಈಗ ಅನುಸರಿಸುತ್ತಿದೆ. ಲಾಕ್‌ಡೌನ್‌ ತೆರವಿಗೆ ಮೊದಲು ಮನೆ ಮನೆ ಸಮೀಕ್ಷೆ ಪೂರ್ಣಗೊಳಿಸಬೇಕು ಮತ್ತು ಕ್ವಾರಂಟೈನ್‌ ಹಾಗೂ ಇತರ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಬೇಕು ಎಂದು ಐಸಿಎಂಆರ್‌ ನೀಡಿದ ಸಲಹೆ ಕಾರ್ಯರೂಪಕ್ಕೆ ಬರಬಹುದು ಎಂದು ಈಗ ನಿರೀಕ್ಷಿಸಲಾಗದು’ ಎಂದು ಅವರು ಹೇಳುತ್ತಾರೆ.

ಆಂಧ್ರ ಪ್ರದೇಶ, ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳು ಮನೆ ಮನೆ ಸಮೀಕ್ಷೆ ಆರಂಭಿಸಿವೆಯಾದರೂ ಯಾವುದೂ ಪೂರ್ಣಗೊಂಡಿಲ್ಲ. ದೆಹಲಿಯಲ್ಲಿ ಮನೆ ಮನೆ ಸಮೀಕ್ಷೆ ನಡೆಯುತ್ತಿದೆ ಎಂದು ಮೂಲವೊಂದು ತಿಳಿಸಿದೆ. ಲಕ್ಷಣಗಳಿರುವ ಪ್ರತಿಯೊಬ್ಬರನ್ನೂ ಕ್ವಾರಂಟೈನ್‌ ಮಾಡಬೇಕು, ಮನೆಯಲ್ಲಿಯೇ ಅವರನ್ನು ಪರೀಕ್ಷೆಗೆ ಒಳಪಡಿಸಬೇಕು ಎಂಬುದು ಐಸಿಎಂಆರ್‌ನ ಸಲಹೆ. ಆದರೆ, ದೆಹಲಿಯಲ್ಲಿ, ಗಂಭೀರವಾದ ಲಕ್ಷಣಗಳನ್ನು ಹೊಂದಿರುವವರನ್ನು ಅಥವಾ ಕೋವಿಡ್‌ ಬಾಧಿತರನ್ನು ಮಾತ್ರ ಕ್ವಾರಂಟೈನ್‌ ಮಾಡಲಾಗುತ್ತಿದೆ.

ಭಾರತದ 700 ಜಿಲ್ಲೆಗಳಲ್ಲಿ ಸೋಂಕು ತಡೆ ಕ್ರಮಗಳನ್ನು ಕೈಗೊಳ್ಳಲು ಬೇಕಾದ ಮಾಹಿತಿ ಕೇಂದ್ರ ಸರ್ಕಾರದ ಬಳಿ ಇದೆಯೇ ಎಂಬ ಬಗ್ಗೆ ಮುಂದಿನ ಭಾಗದಲ್ಲಿ ವಿವರ ನೀಡಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT