ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರತ್ವದ ಕಿಚ್ಚು: ಮಂಗಳೂರಿನಲ್ಲಿ ಗುಂಡೇಟಿಗೆ ಇಬ್ಬರು ಯುವಕರು ಬಲಿ

ಕರ್ಫ್ಯೂ ಜಾರಿ, ಇಂಟರ್‌ನೆಟ್ ಸ್ಥಗಿತ l ಬೆಂಗಳೂರು, ಕಲಬುರ್ಗಿ, ಮಂಡ್ಯದಲ್ಲೂ ಪ್ರತಿಭಟನೆ l ಲಖನೌದಲ್ಲಿ ಒಬ್ಬ ಸಾವು
Last Updated 20 ಡಿಸೆಂಬರ್ 2019, 1:15 IST
ಅಕ್ಷರ ಗಾತ್ರ

ಬೆಂಗಳೂರು/ಮಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಉತ್ತರ ಭಾರತದಲ್ಲಿ ಹೊತ್ತಿಕೊಂಡಿದ್ದ ಕಿಚ್ಚು ಗುರುವಾರ ಕರ್ನಾಟಕಕ್ಕೂ ವ್ಯಾಪಿಸಿದ್ದು, ಮಂಗಳೂರಿನಲ್ಲಿ ಪೊಲೀಸರು ಹಾರಿಸಿದ ಗುಂಡಿಗೆ ಇಬ್ಬರು ಬಲಿಯಾಗಿದ್ದಾರೆ.

ಮುಸ್ಲಿಂ ಧಾರ್ಮಿಕ ಮುಖಂಡರ ಜತೆ ಮಾಧ್ಯಮಗೋಷ್ಠಿ ನಡೆಸಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಪಿ.ಎಸ್. ಹರ್ಷ ಅವರು, ನೌಸೀನ್ (23), ಜಲೀಲ್ ಕುದ್ರೋಳಿ (49) ಮೃತಪಟ್ಟಿರುವುದನ್ನು ಖಚಿತ ಪಡಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವು
ದನ್ನು ತಡೆಯಲುಮಂಗಳೂರು ನಗರದ ಐದು ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯರಾತ್ರಿಯವರೆಗೆ ಕರ್ಫ್ಯೂ ವಿಧಿಸಲಾಗಿದೆ.

ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಯುವ ಗುಪ್ತಚರ ಮಾಹಿತಿ ಆಧರಿಸಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ 144 ನೇ ಸೆಕ್ಷನ್ ಅನ್ವಯ ಮೂರು ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಅದನ್ನು ಲೆಕ್ಕಿಸದ ಪ್ರತಿಭಟನಕಾರರು ಸಾವಿರಾರು ಸಂಖ್ಯೆಯಲ್ಲಿ ಬೀದಿಗಿಳಿದು ಕೇಂದ್ರ ಸರ್ಕಾರ ಹಾಗೂ ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಘೋಷಣೆ ಕೂಗಿದರು.

ಬೆಂಗಳೂರಿನ ಪುರಭವನದ ಎದುರು ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರಿಂದಾಗಿ ಎರಡು ಗಂಟೆಗೂ ಹೆಚ್ಚು ಹೊತ್ತು ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಈ ವೇಳೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುತ್ತಾ ನಿಂತಿದ್ದ ಇತಿಹಾಸಕಾರ ರಾಮಚಂದ್ರ ಗುಹಾ ಅವರನ್ನು ಎಳೆದೊಯ್ದ ಪೊಲೀಸರು ವಶಕ್ಕೆ ಪಡೆದರು. ಶಾಂತಿಯುತ ಪ್ರತಿಭಟನೆಗೆ ಮುಂದಾಗಿದ್ದ ಗುಹಾ ಅವರನ್ನು ವಶಕ್ಕೆ ಪಡೆದ ಪೊಲೀಸರ ಕ್ರಮಕ್ಕೆ ದೇಶದ ವಿವಿಧೆಡೆಯ ಪ್ರಗತಿಪರರು, ಪ್ರಜಾತಂತ್ರವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ರಸ್ತೆಯಲ್ಲೇ ಧರಣಿ ಕುಳಿತ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಮಧ್ಯಾಹ್ನದ ಬಳಿಕ ರಾಜಧಾನಿಯಲ್ಲಿನ ಹೋರಾಟದ ಕಾವು ತಣ್ಣಗಾಯಿತು. ಶುಕ್ರವಾರ ಪ್ರತಿಭಟನೆ ಮುಂದುವರಿಸುವುದಾಗಿ ಹೋರಾಟಗಾರರು ಎಚ್ಚರಿಸಿದ್ದಾರೆ. ಹುಬ್ಬಳ್ಳಿ, ಮೈಸೂರು, ಗದಗ, ತುಮಕೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ ಸೇರಿದಂತೆ ವಿವಿಧೆಡೆ ಆಕ್ರೋಶ ವ್ಯಕ್ತವಾಯಿತು.ಗಜೇಂದ್ರಗಡದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಹಿರಿಯ ರಂಗಕರ್ಮಿ ಪ್ರಸನ್ನ ಬಾಯಿಗೆ ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು.

ಕಡಲತಡಿ ಉದ್ವಿಗ್ನ: ಮಂಗಳೂರಿನಲ್ಲಿ ಮಧ್ಯಾಹ್ನ ಪ್ರತಿಭಟನೆಗೆ ಮುಂದಾದ ಗುಂಪಿನ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಪೊಲೀಸರ ವಿರುದ್ಧ ಕ್ರಮ ಜರುಗಿಸುವಂತೆ ಮತ್ತೆ ಪ್ರತಿಭಟನೆ ಶುರುವಾಯಿತು. ಆಗ ಪೊಲೀಸರು ಮತ್ತು ಪ್ರತಿಭಟನಕಾರರ ಮಧ್ಯೆ ಚಕಮಕಿ ನಡೆದು, ದುಷ್ಕರ್ಮಿಗಳು ಪೊಲೀಸರ ಮೇಲೆ ಕಲ್ಲು ತೂರಿದರು. ಲಾಠಿ ಪ್ರಹಾರ ನಡೆಸಿದ ಪೊಲೀಸರು ಬಳಿಕಅಶ್ರುವಾಯು ಸಿಡಿಸಿದರು. ಸಂಘರ್ಷ ಹೆಚ್ಚಾಗುತ್ತಿದ್ದಂತೆ ಗುಂಡು ಹಾರಿಸಿದರು. ಘರ್ಷಣೆಯಲ್ಲಿ 18 ಪೊಲೀಸರು ಸೇರಿ, ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಮಂಗಳೂರಿನ ಶಾಲಾ– ಕಾಲೇಜುಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿದೆ.

***

‘ಕೇರಳದವರ ಪ್ರತಿಭಟನೆ’

ನವದೆಹಲಿ: ಮಂಗಳೂರಿನಲ್ಲಿ ಕೇರಳದವರು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಮುಂದಾಗಿದ್ದ ಅವರನ್ನು ತಡೆಯಲು ಪೊಲೀಸರು ಬಲ ಪ್ರಯೋಗ ಮಾಡಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ದಿನಗಳ ಹಿಂದೆ ಮಂಗಳೂರಿಗೆ ಬಂದಿರುವ ಕೇರಳದ ಗುಂಪು, ಕಾಲೇಜು ವಿದ್ಯಾರ್ಥಿಗಳು ಮತ್ತು ನಾಗರಿಕರ ದಾರಿ ತಪ್ಪಿಸುತ್ತಿದೆ ಎಂದರು.

ಬಿ.ಆರ್‌. ಪಾಟೀಲ್‌ ಬಂಧನ: ದೆಹಲಿಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಆಳಂದದ ಮಾಜಿ ಶಾಸಕ ಬಿ.ಆರ್‌. ಪಾಟೀಲ್‌ ಅವರನ್ನು ಗುರುವಾರ ಪೊಲೀಸರು ಬಿಡುಗಡೆ ಮಾಡಿದ್ದಾರೆ.

****

ಒಡೆಯುವವರು, ಬೆಂಕಿ ಹಚ್ಚುವವರು ಬಿಜೆಪಿಯಲ್ಲಿ ಹೆಚ್ಚಾಗಿ ಇದ್ದಾರೆ. ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡದೆ ನಿಷೇಧಾಜ್ಞೆ ಜಾರಿಮಾಡಲಾಗಿದೆ
-ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕ

ಗಲಭೆ ಹಿಂದೆ ಕಾಂಗ್ರೆಸ್‌ ಮುಖಂಡರು ಹಾಗೂ ಶಾಸಕ ಯು.ಟಿ.ಖಾದರ್ ಕೈವಾಡವಿದ್ದು, ಅವರೆಲ್ಲ ಮುಂದಿನ ದಿನಗಳಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ

-ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT