ಭಾನುವಾರ, ಮೇ 9, 2021
26 °C
2 ಲೋಕಸಭಾ ಸ್ಥಾನಗಳಿಂದ 303ಕ್ಕೆ ತಲುಪಿಸಿದ ಪಕ್ಷದ ಸಾರಥಿಗಳು

Explainer | ಬಿಜೆಪಿ ರಾಜಕೀಯ ಪ್ರಗತಿಯ ಹಾದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತೀಯ ಜನತಾ ಪಕ್ಷಕ್ಕೆ ಇಂದಿಗೆ (ಏ.6ಕ್ಕೆ) 40 ವರ್ಷ ತುಂಬಿದೆ. ಇತ್ತೀಚೆಗಷ್ಟೇ ಹೊಸ ಅಧ್ಯಕ್ಷರಾಗಿ ಜಗತ್ ಪ್ರಕಾಶ್ ನಡ್ಡಾ ನೇಮಕಗೊಂಡಿದ್ದಾರೆ. 1980ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಪಕ್ಷವನ್ನು ಮುನ್ನಡೆಸಿದ್ದರು. ಅಲ್ಲಿಂದ ಹಲವು ಪ್ರಮುಖ ಮುಖಂಡರ ಕೈಗೆ ಪಕ್ಷದ ಚುಕ್ಕಾಣಿ ಸಿಕ್ಕಿದೆ. ಈ ಅವಧಿಯಲ್ಲಿ ಹಲವು ಏಳು ಬೀಳುಗಳನ್ನು ಪಕ್ಷ ಕಂಡಿದೆ. ಪ್ರಧಾನಿಯಾಗಿ ವಾಜಪೇಯಿ ಹಾಗೂ ಮೋದಿ ಅವರು ದೇಶವನ್ನು ಮುನ್ನಡೆಸಿದ್ದಾರೆ. 1980ರಲ್ಲಿ 2 ಲೋಕಸಭಾ ಸ್ಥಾನಗಳಿಂದ ಆರಂಭವಾದ ಬಿಜೆಪಿ ಪಯಣ 2019ರಲ್ಲಿ 303ಕ್ಕೆ ಬಂದು ನಿಂತಿದೆ.

* ಅಟಲ್ ಬಿಹಾರಿ ವಾಜಪೇಯಿ 1980–1986
ಬಿಜೆಪಿಯ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದ ವಾಜಪೇಯಿ ಅವರು ಜನಸಂಘದ ಹಿಂದೂ ರಾಷ್ಟ್ರೀಯವಾದ ಸಿದ್ಧಾಂತದಿಂದ ಗಾಂಧಿ ಸಮಾಜವಾದದ ಕಡೆಗೆ ಪಕ್ಷವನ್ನು ಹೊರಳಿಸಿದರು. ಆದರೆ ಈ ಸೈದ್ಧಾಂತಿಕ ಬದಲಾವಣೆಯು ಯಶಸ್ಸು ನೀಡಲಿಲ್ಲ. ಇಂದಿರಾಗಾಂಧಿ ಹತ್ಯೆಯ ಅನುಕಂಪದ ಅಲೆಯಿಂದ ಬಿಜೆಪಿ ಹೆಚ್ಚು ಪ್ರಭಾವ ಬೀರಲು ಆಗಲಿಲ್ಲ. ಕೇವಲ 2 ಸ್ಥಾನಗಳಿಗೆ ತೃಪ್ತಿಪಡಬೇಕಾಯಿತು. ಪ್ರಧಾನಿಯಾಗಿ ಮೂರು ಬಾರಿ ದೇಶವನ್ನು ಮುನ್ನಡೆಸಿದ ವಾಜಪೇಯಿ ಒಮ್ಮೆ ಪೂರ್ಣಾವಧಿ ಸರ್ಕಾರ ನಡೆಸಿದರು.

* ಎಲ್‌.ಕೆ. ಅಡ್ವಾಣಿ 1986–90
ವಾಜಪೇಯಿ ಬಳಿಕ ಪಕ್ಷದ ಚುಕ್ಕಾಣಿ ಹಿಡಿದ ಅಡ್ವಾಣಿ ಅವರು ಅಯೋಧ್ಯೆಯ ರಾಮಮಂದಿರ ವಿಚಾರ ಇಟ್ಟುಕೊಂಡು ಚುನಾವಣೆ ಎದುರಿಸಿದರು. 1989ರ ಚುನಾವಣೆಯಲ್ಲಿ ಅಚ್ಚರಿಯೆಂಬಂತೆ 89 ಸ್ಥಾನಗಳನ್ನು ಪಕ್ಷ ಗೆದ್ದುಕೊಂಡಿತು. ಇದೇ ಉತ್ಸಾಹದಲ್ಲಿ ರಥಯಾತ್ರೆ ಶುರು ಮಾಡಿದರು. 1991ರ ಚುನಾವಣೆಯಲ್ಲಿ ಕಾಂಗ್ರೆಸ್‌ ಬಳಿಕ ಅತಿಹೆಚ್ಚಿನ ಸ್ಥಾನಗಳನ್ನು (120) ಬಿಜೆಪಿ ಪಡೆಯಿತು. ಮೂರು ಬಾರಿ ಪಕ್ಷದ ಚುಕ್ಕಾಣಿ ಹಿಡಿದಿದ್ದ ಅಡ್ವಾಣಿ ಅವರು ದೀರ್ಘ ಕಾಲ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.

* ಮುರಳಿ ಮನೋಹರ ಜೋಷಿ 1990–1992
ಜೋಷಿ ಅವರ ಅಧ್ಯಕ್ಷಗಿರಿ ಅವಧಿಯಲ್ಲಿ ಬಿಜೆಪಿ ಮೊದಲ ಬಾರಿಗೆ ಪ್ರಮುಖ ಪ್ರತಿಪಕ್ಷದ ಸ್ಥಾನ ಪಡೆಯಿತು.

* ಎಲ್‌.ಕೆ. ಅಡ್ವಾಣಿ 1992–98 (ಎರಡನೇ ಅವಧಿ)

* ಕುಶಭಾವೂ ಠಾಕ್ರೆ 1998–2000

ಕುಶಭಾವೂ ಅವರು 1980ರಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. 1998ರಲ್ಲಿ ಪಕ್ಷದ ಅಧ್ಯಕ್ಷ ಹುದ್ದೆ ವಹಿಸಿಕೊಂಡ ಇವರು 2000ರಲ್ಲಿ ಹುದ್ದೆ ತ್ಯಜಿಸಿದರು.

* ಬಂಗಾರು ಲಕ್ಷ್ಮಣ್ 2000–2001

ಬಂಗಾರು ಲಕ್ಷ್ಮಣ್ ಅವರು ಪಕ್ಷದ ಮೊದಲ ದಲಿತ ಅಧ್ಯಕ್ಷ. ಕೇಂದ್ರ ಸಚಿವರೂ ಆಗಿದ್ದ ಲಕ್ಷ್ಮಣ್ ಭ್ರಷ್ಟಾಚಾರ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರು.

* ಜನಾ ಕೃಷ್ಣಮೂರ್ತಿ 2001–2002

ಪಕ್ಷದ ಸ್ಥಾಪಕ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದ ಕೃಷ್ಣಮೂರ್ತಿ ಅವರು ದಕ್ಷಿಣದ ರಾಜ್ಯಗಳಲ್ಲಿ ಪಕ್ಷದ ವಿಸ್ತರಣೆಗೆ ಅಡಿಪಾಯ ಹಾಕಿದರು. ಕಾಮರಾಜ್‌ ಬಳಿಕ ರಾಷ್ಟ್ರೀಯ ಪಕ್ಷವೊಂದರ ಚುಕ್ಕಾಣಿ ಹಿಡಿದ ತಮಿಳುನಾಡಿನ ಎರಡನೇ ವ್ಯಕ್ತಿ ಇವರು.

* ವೆಂಕಯ್ಯ ನಾಯ್ಡು 2002–2004
ಈಗಿನ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಜನಾ ಕೃಷ್ಣಮೂರ್ತಿ ಬಳಿಕ ಪಕ್ಷದ ಚುಕ್ಕಾಣಿ ಹಿಡಿದರು. 2004ರ ಚುನಾವಣೆಯಲ್ಲಿ ಪಕ್ಷ ಸೋತಿದ್ದರಿಂದ ರಾಜೀನಾಮೆ ನೀಡಿದರು. 2017ರಲ್ಲಿ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗುವ ಮುನ್ನ ವಾಜಪೇಯಿ ಹಾಗೂ ನರೇಂದ್ರ ಮೋದಿ ಸರ್ಕಾರಗಳಲ್ಲಿ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದಾರೆ. ರಾಜ್ಯಸಭೆಗೆ ಕರ್ನಾಟಕದಿಂದ ಇವರು ಆಯ್ಕೆಯಾಗಿದ್ದರು.

* ಎಲ್‌.ಕೆ. ಅಡ್ವಾಣಿ 2004–05 (ಮೂರನೇ ಅವಧಿ)

* ರಾಜನಾಥ್ ಸಿಂಗ್ 2005–2009
2004ರ ಸಾರ್ವತ್ರಿಕ ಚುನಾವಣೆಯ ಸೋಲು ಬಿಜೆಪಿಯನ್ನು ಪ್ರತಿಪಕ್ಷದ ಸಾಲಿನಲ್ಲಿ ಕೂರಿಸಿತು. ಅಡ್ವಾಣಿ ರಾಜೀನಾಮೆ ಮತ್ತು ಪ್ರಮೋದ್ ಮಹಾಜನ್ ಹತ್ಯೆಯ ಬಳಿಕ ಪಕ್ಷವನ್ನು ಹಿಂದುತ್ವದ ನೆಲೆಯಲ್ಲಿ ಪುನಃ ಕಟ್ಟುವ ಜವಾಬ್ದಾರಿ ರಾಜನಾಥ್ ಮೇಲಿತ್ತು. ರಾಮಮಂದಿರ ನಿರ್ಮಾಣ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಘೋಷಿಸಿದ್ದರು. 2009ರ ಚುನಾವಣೆಯಲ್ಲಿ ಪಕ್ಷ ಸೋತಿದ್ದರಿಂದ ಪದತ್ಯಾಗ ಮಾಡಿದರು.

* ನಿತಿನ್ ಗಡ್ಕರಿ 2009–2013
ಗಡ್ಕರಿ ಅವರು ಬಿಜೆಪಿ ಅಧ್ಯಕ್ಷ ಹುದ್ದೆಗೆ ಆಯ್ಕೆಯಾದವರ ಪೈಕಿ ಅತ್ಯಂತ ಕಿರಿಯ ವಯಸ್ಸಿನವರು. ಇವರು ಅಧಿಕಾರ ವಹಿಸಿಕೊಂಡಾಗ ಪಕ್ಷ ಎರಡು ಚುನಾವಣೆಗಳಲ್ಲಿ ಸತತವಾಗಿ ಸೋಲುಂಡಿತ್ತು. ಹೀಗಾಗಿ ಪಕ್ಷಕ್ಕೆ ಚೈತನ್ಯ ಬೇಕಿತ್ತು. ಗಡ್ಕರಿ ಅವರು ಅಭಿವೃದ್ಧಿ ರಾಜಕಾರಣಕ್ಕೆ ಒತ್ತು ನೀಡಿ ತಮ್ಮ ನಿಲುವು ಸ್ಪಷ್ಟಪಡಿಸಿದರು. ಜನಸಂಘದ ನಾಯಕ ದೀನ್‌ದಯಾಳ್ ಉಪಾಧ್ಯಾಯ ಅವರ ತತ್ವಗಳಾದ ಸಮಗ್ರ ಮಾನವತಾವಾದ ಹಾಗೂ ಅಂತ್ಯೋದಯಕ್ಕೆ ಒತ್ತು ನೀಡಿದರು.

* ರಾಜನಾಥ್ ಸಿಂಗ್  2013–2014 (ಎರಡನೇ ಅವಧಿ)
ನಿತಿನ್ ಗಡ್ಕರಿ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಹುದ್ದೆಗೆ ನೇಮಕಗೊಂಡ ರಾಜನಾಥ್ ಅವರು, ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಳ್ಳುವ ಸಲುವಾಗಿ ರಾಜೀನಾಮೆ ನೀಡಿದರು.

* ಅಮಿತ್ ಶಾ 2014–2020
‘ರಾಜಕೀಯ ಚಾಣಕ್ಯ’ ಎಂದು ಹೆಸರಾಗಿರುವ ಅಮಿತ್ ಶಾ ಅವರು 2014ರಲ್ಲಿ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡರು. 2016ರಲ್ಲಿ ಮರು ಆಯ್ಕೆಯಾದರು. ತಮ್ಮ ಅಧಿಕಾರದ ಅವಧಿಯಲ್ಲಿ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ವೇಗ ತುಂಬಿದರು. ಉತ್ತರ ಪ್ರದೇಶ, ಮಹಾರಾಷ್ಟ್ರ, ಹರಿಯಾಣ, ಜಮ್ಮು ಕಾಶ್ಮೀರ, ಜಾರ್ಖಂಡ್, ಅಸ್ಸಾಂ ಅಲ್ಲದೆ ಈಶಾನ್ಯ ರಾಜ್ಯಗಳಲ್ಲೂ ಪಕ್ಷವನ್ನು ಅಧಿಕಾರಕ್ಕೆ ತಂದರು. ಆದರೆ ದೆಹಲಿ, ಬಿಹಾರದಲ್ಲಿ ಹಿನ್ನಡೆ ಅನುಭವಿಸಿದರು. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಅತಿಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುವಲ್ಲಿ ಅವರ ಪಾತ್ರ ಹಿರಿದಾದುದು. 

* ಜಗತ್ ಪ್ರಕಾಶ್ ನಡ್ಡಾ 2020ರಿಂದ
ಅಮಿತ್ ಶಾ ಬಳಿಕ ಬಿಜೆಪಿ ಅಧ್ಯಕ್ಷರಾಗಿ ಜನವರಿ 20, 2020ರಂದು ಅಧಿಕಾರ ಸ್ವೀಕಾರ.


ಜೆ.ಪಿ. ನಡ್ಡಾ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದರು

ಆಧಾರ: ಬಿಜೆಪಿ ಜಾಲತಾಣ, ಇತರ ಮೂಲಗಳು

ಇದನ್ನೂ ಓದಿ... ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.‍ಪಿ.ನಡ್ಡಾ ಆಯ್ಕೆ: ಶಾ ಅಧಿಕಾರ ಹಸ್ತಾಂತರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು