ಭಾನುವಾರ, ಆಗಸ್ಟ್ 1, 2021
25 °C
* ಪೊಲೀಸರಲ್ಲಿ ಹೆಚ್ಚುತ್ತಿರುವ ಕರೊನಾ ಸೋಂಕು * ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಸೂಚನೆ

50 ವರ್ಷ ಮೇಲ್ಪಟ್ಟ ಪೊಲೀಸ್‌ ಸಿಬ್ಬಂದಿಗೆ ರಜೆ ನೀಡಲು ಭಾಸ್ಕರ್‌ ರಾವ್‌ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೊರೊನಾ ಯೋಧ’ರಾದ ಪೊಲೀಸರಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ 50 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ರಜೆ ಕೊಟ್ಟು, ಅವರೆಲ್ಲರೂ ಮನೆಯಲ್ಲಿರುವಂತೆ ನೋಡಿಕೊಳ್ಳಲು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಸೂಚನೆ ನೀಡಿದ್ದಾರೆ.

ನಗರದ ಎಲ್ಲ ಇನ್‌ಸ್ಪೆಕ್ಟರ್‌, ‍ಪಿಎಸ್‌ಐಗಳಿಗೆ ಭಾನುವಾರ 10 ಸೂಚನೆಗಳನ್ನು ನೀಡಿರುವ ಭಾಸ್ಕರ್ ರಾವ್, ‘ಧೈರ್ಯದಿಂದ ಕೆಲಸ ಮಾಡಿ. ಸರ್ಕಾರ ಹಾಗೂ ಸಾರ್ವಜನಿಕರು ನಮ್ಮ ಮೇಲೆ ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ’ ಎಂದಿದ್ದಾರೆ.

‘ರಕ್ತದೊತ್ತಡ, ಸಕ್ಕರೆ ಖಾಯಿಲೆ ಸೇರಿದಂತೆ ಆರೋಗ್ಯ ಸಮಸ್ಯೆ ಇರುವ 50 ವರ್ಷ ಮೇಲ್ಪಟ್ಟ ಪೊಲೀಸರಿಗೆ ರಜೆ ಕೊಟ್ಟು ಮನೆಗೆ ಕಳುಹಿಸಿ. ಅವರೆಲ್ಲರೂ ಮನೆಯಲ್ಲೇ ಇರುವಂತೆ ಹೇಳಿ. ಬೆಂಗಳೂರು ಬಿಟ್ಟು ಹೋಗದಂತೆ ನೋಡಿಕೊಳ್ಳಿ. ಅವರ ದಿನನಿತ್ಯದ ಚಟುವಟಿಕೆಗಳ ಬಗ್ಗೆಯೂ ಗಮನ ಹರಿಸಿ’ ಎಂದೂ ಭಾಸ್ಕರ್ ರಾವ್ ಹೇಳಿದ್ದಾರೆ.

‘ಹೆಚ್ಚಿನ ಸಂಖ್ಯೆಯಲ್ಲಿ ವಯಸ್ಕರನ್ನು ಕರ್ತವ್ಯಕ್ಕೆ ಬಳಸಿಕೊಳ್ಳಿ. ಗೃಹ ರಕ್ಷಕ ದಳದಲ್ಲೂ ಯುವಕರಿದ್ದು, ಅವರನ್ನೂ ಅಗತ್ಯವಿರುವ ಕಡೆ ಕರ್ತವ್ಯಕ್ಕೆ ನಿಯೋಜಿಸಬೇಕು. ಯಾರೇ ಸಿಬ್ಬಂದಿ ರಜೆ ಪಡೆದರೂ ಬೆಂಗಳೂರು ಬಿಟ್ಟು ಹೊರಗೆ ಹೋಗಬಾರದು. ಉತ್ತರ ಕರ್ನಾಟಕದ ಸಿಬ್ಬಂದಿ ಸಹ  ಇಲ್ಲೇ ಇರಬೇಕು. ಈ ಎಲ್ಲ ಸೂಚನೆಗಳ ಪಾಲನೆ ಜವಾಬ್ದಾರಿಯನ್ನು ಇನ್‌ಸ್ಪೆಕ್ಟರ್‌ ಹಾಗೂ ಪಿಎಸ್‌ಐಗಳು ವಹಿಸಿಕೊಳ್ಳಬೇಕು’ ಎಂದೂ ತಿಳಿಸಿದ್ದಾರೆ.

ಕಮಿಷನರ್ ನೀಡಿದ ಪ್ರಮುಖ ಸೂಚನೆಗಳು

* ಪೊಲೀಸ್ ಠಾಣೆಯೊಳಗೆ ಅಪರಿಚಿತರನ್ನು ಬಿಡಬೇಡಿ. ಠಾಣೆ ಆವರಣದಲ್ಲೇ ಶಾಮಿಯಾನ್ ಹಾಕಿ. ಸಾರ್ವಜನಿಕರೂ ಬಂದರೆ ಅಲ್ಲಿಯೇ ದೂರು ಪಡೆದು ಕಳುಹಿಸಿ. ಆರೋಪಿಗಳು ಠಾಣೆಯೊಳಗೆ ಬರದಂತೆ ನೋಡಿಕೊಳ್ಳಿ.

* ಹೊಯ್ಸಳ, ಚೀತಾ ಗಸ್ತು ವಾಹನಗಳು ಅನಗತ್ಯವಾಗಿ ತಿರುಗಾಡುವುದು ಬೇಡ.  ನಿಗದಿತ ಸ್ಥಳದಲ್ಲಿ ಮಾತ್ರ ಇರಲಿ.

* ಮಹತ್ವದ ಪ್ರಕರಣದಲ್ಲಿ ಮಾತ್ರ ಆರೋ‍ಪಿಗಳನ್ನು ಬಂಧಿಸಿ. ಡಿಸಿಪಿ ಹಾಗೂ ಎಸಿಪಿ ಅನುಮತಿ ಇಲ್ಲದೇ ಯಾರನ್ನೂ ಬಂಧಿಸಬೇಡಿ.

* ಪ್ರತಿ ಠಾಣೆ ವ್ಯಾಪ್ತಿಯಲ್ಲೂ 25 ಜನ ಉಳಿದುಕೊಳ್ಳುವ ಸಾಮರ್ಥ್ಯದ ಹಾಗೂ ಬಿಸಿ ನೀರು ಸೇರಿ ಮೂಲ ಸೌಕರ್ಯ ಇರುವ  ಕಲ್ಯಾಣ ಮಂಟಪ ಗುರುತಿಸಬೇಕು.  ಠಾಣೆ ಸಿಬ್ಬಂದಿಗೇ ಅಲ್ಲಿಯೇ ಇರಲು ವ್ಯವಸ್ಥೆ ಮಾಡಲು ಮುಂದಿನ ದಿನಗಳಲ್ಲಿ ಅನುಕೂಲವಾಗುತ್ತದೆ.

* ಪ್ರತಿ ಠಾಣೆಯಲ್ಲೂ ಕೈ–ಕಾಲು ತೊಳೆಯಲು ಹಾಗೂ ಸ್ನಾನಕ್ಕೆ ಬಿಸಿ ನೀರು ಇರಬೇಕು. ಸೋಪು,   ಸ್ಯಾನಿಟೈಸರ್, ಮಾಸ್ಕ್ ಇರಬೇಕು. ಪ್ರತಿ ವಾಹನವನ್ನೂ ಸ್ಯಾನಿಟೈಸಿಂಗ್ ಮಾಡಬೇಕು.

* ಅಪರಾಧ ಹಿನ್ನೆಲೆಯುಳ್ಳವರ ಮೇಲೆ ತಂತ್ರಜ್ಞಾನ ಬಳಸಿಕೊಂಡು ಕಣ್ಣಿಡಿ. ನೇರವಾಗಿ ಸಂಪರ್ಕಿಸಬೇಡಿ. ಉಳಿದಂತೆ ಕಾನೂನು ಬಾಹಿರ ಚಟುವಟಿಕೆ ನಡೆಯದಂತೆಯೂ ನಿಗಾ ವಹಿಸಬೇಕು.

* ಸೋಂಕಿತ ಪೊಲೀಸರಿಗೆ ಗುಣಮಟ್ಟದ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಿ.  ಅವರಿಗೆ ನೀಡುವ ಊಟ, ಚಿಕಿತ್ಸೆ ಬಗ್ಗೆ ಕಾಲ ಕಾಲಕ್ಕೆ ವರದಿ ನೀಡಬೇಕು.

* ಶಿಸ್ತಿನ ಇಲಾಖೆ ನಮ್ಮದು. ಸಮಸ್ಯೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅಶಿಸ್ತು ಪ್ರದರ್ಶಿಸಬಾರದು.  

* ಪೊಲೀಸ್ ವಸತಿಗೃಹದ ಬಗ್ಗೆ ನಿಗಾ ವಹಿಸಬೇಕು. ಅಪರಿಚಿತರಿಗೆ ಪ್ರವೇಶ ನೀಡಬಾರದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು