ಮಂಗಳವಾರ, ಮಾರ್ಚ್ 31, 2020
19 °C

ಪತ್ರಿಕೆ ಮೂಲಕ ಕೊರೊನಾ ಹರಡದು: ಆರೋಗ್ಯ ತಜ್ಞರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಪತ್ರಿಕೆಗಳ ಮೂಲಕ ಕೊರೊನಾ ವೈರಸ್‌ ಪಸರಿಸುವ ಸಾಧ್ಯತೆ ಇಲ್ಲ’ ಎಂದು ವಿಜ್ಞಾನಿಗಳು ಹಾಗೂ ಆರೋಗ್ಯ ತಜ್ಞರು ಸ್ಪಷ್ಟಪಡಿಸಿದ್ದಾರೆ.

‘ಪತ್ರಿಕೆಯನ್ನು ಕೈಯಲ್ಲಿ ಹಿಡಿದರೆ ಕೊರೊನಾ ವೈರಸ್‌ ಅಂಟಿಕೊಳ್ಳುತ್ತದೆ’ ಎಂದು ಕಳೆದ ಕೆಲವು ದಿನಗಳಿಂದ ವಾಟ್ಸ್‌ಆ್ಯಪ್‌ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹರಿದಾಡುತ್ತಿದೆ. ವೈರಲ್‌ ಆಗಿರುವ ಈ ವದಂತಿಯ ಸತ್ಯಾಸತ್ಯತೆ ತಿಳಿಯಲು ಹಲವು ಮಾಧ್ಯಮ ಸಂಸ್ಥೆಗಳು ತಜ್ಞರನ್ನು ಸಂಪರ್ಕಿಸಿವೆ. ‘ಮಾನವ ಶರೀರದ ಹೊರಗೆ ಕೊರೊನಾ ವೈರಸ್‌ ಹೆಚ್ಚು ಕಾಲ ಬದುಕಿ ಉಳಿಯುವುದಿಲ್ಲ. ಆದ್ದರಿಂದ ಪ್ಯಾಕೇಜ್‌ ಮಾಡಲಾದ ವಸ್ತುಗಳ ಮೂಲಕ ಕೊರೊನಾ ವೈರಸ್‌ ಹರಡುವ ಸಾಧ್ಯತೆ ತೀರಾ ಕಡಿಮೆ’ ಎಂದು ತಜ್ಞರು ಹೇಳಿದ್ದಾರೆ.

‘ಪತ್ರಿಕೆಗಳನ್ನು ಮುಟ್ಟುವುದರಿಂದ ಅಪಾಯವಾಗುತ್ತದೆ ಎಂಬುದು ಈವರೆಗೆ ಸಾಬೀತಾಗಿಲ್ಲ’ ಎಂದು ವಾಷಿಂಗ್ಟನ್ ಮೂಲದ ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್, ಎಕನಾಮಿಕ್ಸ್ ಅಂಡ್ ಪಾಲಿಸಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ರಮಣನ್‌ ಲಕ್ಷ್ಮೀನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಪತ್ರಿಕೆಗಳ ಮೇಲೆ ಬೀಳುವ ಜೊಲ್ಲಿನ ಕಣಗಳಲ್ಲಿರುವ ವೈರಸ್‌ನ ಜೀವಿತಾವಧಿಯ ಬಗ್ಗೆ ಈವರೆಗೆ ಯಾವುದೇ ಅಧ್ಯಯನ ನಡೆದಿಲ್ಲ’ ಎಂದು ಫೋರ್ಟಿಸ್‌ ಸೆಂಟರ್‌ ಫಾರ್‌ ಡಯಾಬಿಟಿಸ್‌ನ ಅಧ್ಯಕ್ಷ ಡಾ. ಅನೂಪ್‌ ಮಿಶ್ರಾ ಹೇಳಿದ್ದಾರೆ.

‘ಪತ್ರಿಕೆಗಳಿಂದ ಸೋಂಕು ಹರಡುವುದು ಅತ್ಯಂತ ಕೊನೆಯ ಸಾಧ್ಯತೆ. ಆದರೂ ಅದರ ಭಯ ಇರುವವರು ಪತ್ರಿಕೆ ಓದಿ ಆಗುತ್ತಿದ್ದಂತೆಯೇ ಸಾಬೂನಿನಿಂದ ಕೈ ತೊಳೆದುಕೊಂಡರೆ ಸುರಕ್ಷಿತವಾಗಿರಬಹುದು’ ಎಂದು ಪುಣೆಯ ಸೂಕ್ಷ್ಮಾಣು ರೋಗಗಳನ್ನು ಕುರಿತ ರಾಷ್ಟ್ರೀಯ ಕೇಂದ್ರದ ನಿರ್ದೇಶಕ ಕಲ್ಯಾಣ್‌ ಬ್ಯಾನರ್ಜಿ ಅವರು ಸಲಹೆ ನೀಡಿದ್ದಾರೆ.

ಈಚಿನ ದಿನಗಳಲ್ಲಿ ಮುದ್ರಣ ಹಾಗೂ ಪ್ಯಾಕೇಜಿಂಗ್‌ ಮಾಧ್ಯಮವು ಬಹುತೇಕ ಸ್ವಯಂಚಾಲಿತ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಇಲ್ಲಿ ಮಾನವನ ಮಧ್ಯಪ್ರವೇಶವು ಅತಿ ಕಡಿಮೆಯಾಗಿರುತ್ತದೆ. ಪತ್ರಿಕೆಗಳ ಪುಟಗಳನ್ನು ವಿನ್ಯಾಸಕರು ತಯಾರಿಸಿ ಡಿಜಿಟಲ್‌ ಸ್ವರೂಪದಲ್ಲಿ ಮುದ್ರಣ ಕೇಂದ್ರಗಳಿಗೆ ಕಳುಹಿಸುತ್ತಾರೆ. ಸ್ವಯಂಚಾಲಿತ ಮುದ್ರಣ ಯಂತ್ರಗಳು, ಪತ್ರಿಕೆಗಳನ್ನು ಪ್ಯಾಕ್‌ ಮಾಡಿಯೇ ಕಳುಹಿಸುತ್ತವೆ.

‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ನ ಮುದ್ರಣಾಲಯದಲ್ಲಿ, ಪ್ಯಾಕ್‌ ಆಗಿ ಹೊರಬಂದ ಬಂಡಲ್‌ಗಳ ಮೇಲೆ ರೋಗನಿವಾರಕಗಳನ್ನು ಸಿಂಪಡಣೆ ಮಾಡಿ ವಿತರಕರ ಕೈಗೆ ನೀಡಲಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು