ಸೋಮವಾರ, ಮಾರ್ಚ್ 8, 2021
20 °C

‘ಸಮರ್ಪಕವಾಗಿ ಖಾತೆ ನಿರ್ವಹಿಸದಿದ್ದಕ್ಕಾಗಿ ರಮೇಶಗೆ ಕೊಕ್‌’: ಸತೀಶ ಜಾರಕಿಹೊಳಿ

ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ರಮೇಶ ಜಾರಕಿಹೊಳಿ ಅವರನ್ನು ಸಚಿವ ಸಂಪುಟದಿಂದ ಕೈಬಿಡುವ ತೀರ್ಮಾನವು ಪಕ್ಷದ ಹೈಕಮಾಂಡ್‌ ತೀರ್ಮಾನವಾಗಿದೆ. ಈ ತೀರ್ಮಾನವನ್ನು ಅವರು ಒಪ್ಪಿಕೊಳ್ಳಲೇಬೇಕು’ ಎಂದು ನೂತನ ಸಚಿವ, ಸಹೋದರ ಸತೀಶ ಜಾರಕಿಹೊಳಿ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

* ಸಚಿವ ಸ್ಥಾನದಿಂದ ರಮೇಶ ಅವರನ್ನು ಬದಲಾಯಿಸಲು ಕಾರಣವೇನು?
ರಮೇಶ ತಮ್ಮ ಖಾತೆಯನ್ನು ಸರಿಯಾಗಿ ನಿರ್ವಹಣೆ ಮಾಡಲಿಲ್ಲ. ಸಚಿವ ಸಂಪುಟ ಸಭೆಗಳಿಗೆ, ಪಕ್ಷದ ಸಭೆಗಳಿಗೆ ಹಾಜರಾಗುತ್ತಿರಲಿಲ್ಲ. ಇದರಿಂದ ಎಲ್ಲೋ ಒಂದು ಕಡೆ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗಿತ್ತು. ಈ ಕಾರಣಗಳಿಂದಾಗಿ ಅವರನ್ನು ಬದಲಾಯಿಸಲು ಪಕ್ಷದ ಹೈಕಮಾಂಡ್‌ ನಿರ್ಣಯ ತೆಗೆದುಕೊಂಡಿತು. ಹೊರತು, ಲಕ್ಷ್ಮಿ ಹೆಬ್ಬಾಳಕರ ಅಥವಾ ಇನ್ನಾವುದೇ ನಾಯಕರ ಜೊತೆಗೆ ಅವರು ಹೊಂದಿದ ಭಿನ್ನಾಭಿಪ್ರಾಯದಿಂದ ಅಲ್ಲ.

* ರಮೇಶ ಪಕ್ಷ ತೊರೆಯುವ ಬಗ್ಗೆ ಬೆದರಿಕೆಯೊಡ್ಡುತ್ತಿದ್ದಾರಲ್ಲವೇ?
ಒಂದೆರಡು ದಿನಗಳಲ್ಲಿ ಅವರ ಜೊತೆ ಮಾತನಾಡುತ್ತೇನೆ. ಪಕ್ಷದ ಆದೇಶವನ್ನು ಪಾಲಿಸುವಂತೆ ಹೇಳುತ್ತೇನೆ. ಹಿಂದೆ ನನ್ನನ್ನು ಬದಲಾಯಿಸಿ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆಗ, ನಾನು ಅವರಿಗೆ ಸಂಪೂರ್ಣವಾಗಿ ಸಹಕಾರ ನೀಡಿದ್ದೆ. ಅದೇ ರೀತಿ ಈಗ ನನಗೆ ಸಹಕಾರ ನೀಡುವಂತೆ ಕೋರುತ್ತೇನೆ. ಅವರು ಪಕ್ಷ ಬಿಡುವುದಿಲ್ಲ ಎನ್ನುವ ವಿಶ್ವಾಸವಿದೆ.

* ಸಚಿವ ಸ್ಥಾನ ಸಿಕ್ಕಿದ್ದಕ್ಕೆ ಅಭಿನಂದನೆಗಳು. ಆದರೆ, 2 ವರ್ಷಗಳ ನಂತರ ಸಚಿವ ಸ್ಥಾನಕ್ಕೆ ಬೇಡಿಕೆ ಸಲ್ಲಿಸುತ್ತೇನೆಂದು ಹೇಳಿದ್ದ ನೀವು, ಈಗ ತಕ್ಷಣ ಹೇಗೆ ಒಪ್ಪಿಕೊಂಡಿರಿ?
ಹೌದು. ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ. ಆದರೆ, ಪಕ್ಷದ ಹೈಕಮಾಂಡ್‌ ತೀರ್ಮಾನಿಸಿದಾಗ ಬೇಡ ಎನ್ನಲಾಗದು. ಹೈಕಮಾಂಡ್‌ ತೀರ್ಮಾನ ಒಪ್ಪಿಕೊಂಡಿದ್ದೇನೆ. ಸಚಿವ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುವೆ.

* ಈ ಸಲ ಯಾವ ಖಾತೆ ಸಿಗಬಹುದು?
ಇಂತಹದ್ದೇ ಖಾತೆಯನ್ನು ನೀಡುವಂತೆ ಕೇಳಿಲ್ಲ. ಯಾವ ಖಾತೆ ಕೊಟ್ಟರೂ ಸರಿ ನಿರ್ವಹಿಸುತ್ತೇನೆ. ಅಬಕಾರಿ ಬಿಟ್ಟು ಬೇರೆ ಖಾತೆ ನಿರ್ವಹಿಸಲು ಸಿದ್ಧನಿದ್ದೇನೆ. ಅಂದಹಾಗೆ, ಜೆಡಿಎಸ್‌ ಜೊತೆ ಮಾಡಿಕೊಳ್ಳಲಾದ ಒಪ್ಪಂದದ ಪ್ರಕಾರ, ಅಬಕಾರಿ ಖಾತೆ ಅವರಿಗಿದೆ. ಹೀಗಾಗಿ ನನಗೆ ತಲೆಬಿಸಿ ಇಲ್ಲ.

* ಹಣದ ಹೊಳೆಯೇ ಹರಿದು ಬರುವ ಅಬಕಾರಿ ಖಾತೆ ಪಡೆಯಲು ಪೈಪೋಟಿ ನಡೆಸುತ್ತಾರೆ. ಆದರೆ, ನೀವೇಕೆ ಬೇಡ ಎನ್ನುತ್ತೀರಿ?
ಹಲವು ಉದ್ಯಮಗಳಲ್ಲಿ ನಾನು ತೊಡಗಿಸಿಕೊಂಡಿದ್ದೇನೆ. ಕಷ್ಟಪಟ್ಟು ಹಣ ಗಳಿಸಿದ್ದೇನೆ. ಇಂತಹ ಸಂದರ್ಭದಲ್ಲಿ ಅಬಕಾರಿ ಖಾತೆ ತೆಗೆದುಕೊಂಡರೆ, ಜನರು ಈ ಹಣವೆಲ್ಲ ಅಬಕಾರಿ ಖಾತೆಯಿಂದಲೇ ಬಂದಿದೆ ಎಂದು ಆಡಿಕೊಳ್ಳುತ್ತಾರೆ. ಅದಕ್ಕಾಗಿ ಬೇಡ ಎಂದು ಹೇಳಿದ್ದೇನೆ.

ಇವನ್ನೂ ಓದಿ...

‘ಹೀರೋನ ವಿಲನ್ ಮಾಡ್ತೀರಿ, ವಿಲನ್‌ನ ಹೀರೋ ಮಾಡ್ತೀರಿ’: ರಮೇಶ ಜಾರಕಿಹೊಳಿ ಕಿಡಿ

ಶಮನಗೊಳ್ಳದ ಸಂಪುಟ ಬೇಗುದಿ: ಕಾಂಗ್ರೆಸ್‌ ನಾಯಕರಲ್ಲಿ ತಳಮಳ

ಅತೃಪ್ತರ ಸೆಳೆದು ಸರ್ಕಾರ ಕೆಡವಲು ಬಿಜೆಪಿ ತಂತ್ರ?

ರಾಮಲಿಂಗಾ ರೆಡ್ಡಿಗೆ ಸಚಿವ ಸ್ಥಾನ ತಪ್ಪಲು ನಾವು ಕಾರಣರಲ್ಲ: ಜಿ.ಪರಮೇಶ್ವರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು