ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಮಾಣ ಕಾರ್ಯಕ್ಕೆ ಕಾರ್ಮಿಕರ ಕೊರತೆ ಆತಂಕ: ವಿಶೇಷ ರೈಲು ರದ್ದುಪಡಿಸಿದ ಸರ್ಕಾರ

ಊರಿಗೆ ಹೋಗಬೇಕು ಎನ್ನುತ್ತಿರುವ ಕಾರ್ಮಿಕರು | ಸರ್ಕಾರಕ್ಕೆ ನಿರ್ಧಾರಕ್ಕೆ ಕಾರ್ಮಿಕ ಸಂಘಟನೆಗಳ ಖಂಡನೆ
Last Updated 6 ಮೇ 2020, 1:34 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ವಲಸೆ ಕಾರ್ಮಿಕರನ್ನು ತಮ್ಮ ತವರು ರಾಜ್ಯಗಳಿಗೆ ಕಳಿಸಲು ಅಗತ್ಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದ ರಾಜ್ಯ ಸರ್ಕಾರವು ಇದೀಗ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ರೈಲ್ವೆ ಇಲಾಖೆಗೆ ಈ ಹಿಂದೆ ಕೋರಿಕೆ ಸಲ್ಲಿಸಿದ್ದ ರೈಲು ಸೇವೆಗಳನ್ನು ‘ಅಗತ್ಯವಿಲ್ಲ’ ಎಂದು ತಿಳಿಸಿದೆ.

ಬಿಲ್ಡರ್‌ಗಳು ಮತ್ತು ಗುತ್ತಿಗೆದಾರರೊಂದಿಗೆ ಮಂಗಳವಾರ ಸಂಜೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಭೆ ನಡೆಸಿದ ಕೆಲ ಗಂಟೆಗಳ ನಂತರ ‌ಕಂದಾಯ ಇಲಾಖೆಯು, ತಾನು ಈ ಹಿಂದೆ ವಿನಂತಿಸಿದ್ದ 10 ರೈಲುಗಳ ಸಂಚಾರ ರದ್ದುಪಡಿಸಲು ಕೋರಿ ಪತ್ರ ಬರೆದಿದೆ.

‘ನಾವು ದಿನಕ್ಕೆ ಎರಡು ರೈಲುಗಳಂತೆ ಐದು ದಿನಗಳ ರೈಲು ಸಂಚಾರಕ್ಕಾಗಿ (ಒಟ್ಟು 10 ರೈಲುಗಳು)ವಿನಂತಿಸಿದ್ದೆವು. ನಾಳೆಯಿಂದ ನಮಗೆ ರೈಲು ಸೇವೆಗಳ ಅಗತ್ಯವಿಲ್ಲ. ನಮ್ಮ ವಿನಂತಿಯನ್ನು ಹಿಂಪಡೆದಿದ್ದೇವೆ’ ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಅವರ ಸಹಿ ಇರುವ ಪತ್ರ ಹೇಳುತ್ತದೆ. ಈ ನಿರ್ಧಾರದ ಹಿಂದಿರುವ ಕಾರಣಗಳ ಬಗ್ಗೆ ಪತ್ರದಲ್ಲಿ ಯಾವುದೇ ಉಲ್ಲೇಖವಿಲ್ಲ.

‘ನಿರ್ಮಾಣ ಚಟುವಟಿಕೆಗಳನ್ನು ಮತ್ತೆ ಆರಂಭಿಸಲು ನಮಗೆ ಕಾರ್ಮಿಕರು ಬೇಕು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಬಿಲ್ಡರ್‌ಗಳು ವಿನಂತಿಸಿದರು. ಈ ಹಿನ್ನೆಲೆಯಲ್ಲಿ ಸರ್ಕಾರ ತನ್ನ ನಿಲುವು ಬದಲಿಸಿರಬಹುದು’ ಎಂದು ಸಭೆಯಲ್ಲಿ ಭಾಗವಹಿಸಿದ್ದಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಕಾರ್ಮಿಕರ ಹಿತ ಕಾಪಾಡುವುದಾಗಿ ಬಿಲ್ಡರ್‌ಗಳು ಸರ್ಕಾರಕ್ಕೆ ಭರವಸೆ ನೀಡಿದರು. ತಮಗೆ ಕೆಲಸವಿಲ್ಲ ಎನ್ನುವ ಕಾರಣಕ್ಕೆ ಕಾರ್ಮಿಕರು ತವರು ರಾಜ್ಯಗಳಿಗೆ ಹಿಂದಿರುಗುತ್ತಿದ್ದಾರೆ. ನಿರ್ಮಾಣ ಚಟುವಟಿಕೆಗಳನ್ನು ಆರಂಭಿಸಿದರೆ ಅವರು ಇಲ್ಲಿಯೇ ಉಳಿದುಕೊಳ್ಳುತ್ತಾರೆ’ ಎಂದು ಬಿಲ್ಡರ್‌ಗಳು ಮುಖ್ಯಮಂತ್ರಿ ಎದುರು ಅಭಿಪ್ರಾಯ ಮಂಡಿಸಿದರು ಎಂದು ತಿಳಿದುಬಂದಿದೆ.

ಎಲೆಕ್ಟ್ರಾನಿಕ್ ಸಿಟಿ ಮತ್ತು ಬನ್ನೇರುಘಟ್ಟ ರಸ್ತೆಯಲ್ಲಿ ಮೆಟ್ರೊ ಕಾಮಗಾರಿ ನಿರ್ವಹಿಸುತ್ತಿದ್ದ ಕೆಲ ಕಾರ್ಮಿಕರನ್ನು ‘ಪ್ರಜಾವಾಣಿ’ ಮಾತನಾಡಿಸಿತು. ಬಹುತೇಕ ಕಾರ್ಮಿಕರು ‘ನಮಗಿಲ್ಲಿ ಕೆಲಸ ಮುಂದುವರಿಸಲು ಇಷ್ಟವಿಲ್ಲ’ ಎಂದೇ ಪ್ರತಿಕ್ರಿಯಿಸಿದರು. ಮಧ್ಯಪ್ರದೇಶದಿಂದ ಬಂದಿದ್ದ ಕಾರ್ಮಿಕರು, ‘ನಮಗೆ ಸಂಬಳ ಕೊಡದಿದ್ದರೂ ಪರವಾಗಿಲ್ಲ. ಊರಿಗೆ ತಲುಪಿಸಿಬಿಡಿ’ ಎಂದು ವಿನಂತಿಸಿದರು. ಬಹುತೇಕರಿಗೆ ತಮ್ಮ ಪ್ರಯಾಣವನ್ನು ವಿನಂತಿಸಲು ರಾಜ್ಯ ಸರ್ಕಾರ ಪೋರ್ಟಲ್ ಆರಂಭಿಸುವ ಸಂಗತಿಯೂ ತಿಳಿದಿಲ್ಲ.

‘ಇದು ಮುಖ್ಯಮಂತ್ರಿ ತೆಗೆದುಕೊಂಡ ನಿರ್ಧಾರ’ ಎಂದು ಅಧಿಕಾರಿಗಳು ಹೇಳುತ್ತಾರೆ. ‘ಬಿಹಾರಕ್ಕೆ ಹಿಂದಿರುಗಲು 53 ಸಾವಿರ ಮಂದಿ ನೋಂದಾಯಿಸಿಕೊಂಡಿದ್ದಾರೆ. ಅವರೆಲ್ಲರೂ ವಾಪಸ್ ಹೋದರೆ ಬೆಂಗಳೂರಿನ ನಿರ್ಮಾಣ ಚಟುವಟಿಕೆಗಳ ಗತಿಯೇನು’ ಎಂದು ಅಧಿಕಾರಿಯೊಬ್ಬರು ಪ್ರಶ್ನಿಸಿದರು.

ರೈಲು ಸಂಚಾರ ಸ್ಥಗಿತಗೊಳಿಸುವ ಸರ್ಕಾರದ ನಿರ್ಧಾರವನ್ನು ಜನಪರ ಹೋರಾಟಗಾರರು ಖಂಡಿಸಿದ್ದಾರೆ.

‘ರಿಯಲ್ ಎಸ್ಟೇಟ್ ಉದ್ಯಮದ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ಕಾರ್ಮಿಕರಿಗೆ ಬಹುದೊಡ್ಡ ಅನ್ಯಾಯ ಮಾಡಿದೆ’ ಎಂದು ವಿನಯ್ ಶ್ರೀನಿವಾಸ ಹೇಳಿದರು. ‘ಸರ್ಕಾರದ ನಿರ್ಧಾರವು ಪ್ರಜೆಗಳ ಮೂಲಭೂತ ಹಕ್ಕಾಗಿರುವ ಸಂಚಾರದ ಹಕ್ಕನ್ನು ಕಿತ್ತುಕೊಂಡಿದೆ. ಒತ್ತಾಯದ ಕೆಲಸಕ್ಕೆ ಮುನ್ನುಡಿ ಬರೆದಿದೆ’ ಎಂದು ಎಐಟಿಯುಸಿ ಟೀಕಿಸಿದೆ.

ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರು ರೈಲ್ವೆ ಇಲಾಖೆಗೆ ಬರೆದಿರುವ ಪತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT