ನಾಳೆ ಸ್ವಾಮೀಜಿ ಕ್ರಿಯಾಸಮಾಧಿ, ಸರ್ಕಾರಿ ರಜೆ: ಸಿಎಂ ಕುಮಾರಸ್ವಾಮಿ ಘೋಷಣೆ

7
ಮೂರು ದಿನ ಶೋಕಾಚರಣೆ

ನಾಳೆ ಸ್ವಾಮೀಜಿ ಕ್ರಿಯಾಸಮಾಧಿ, ಸರ್ಕಾರಿ ರಜೆ: ಸಿಎಂ ಕುಮಾರಸ್ವಾಮಿ ಘೋಷಣೆ

Published:
Updated:

ತುಮಕೂರು: ಲಿಂಗೈಕ್ಯರಾಗಿರುವ ಸಿದ್ಧಗಂಗಾ ಶ್ರೀಗಳ ಕ್ರಿಯಾಸಮಾಧಿ ನಾಳೆ ನಡೆಯಲಿದೆ. ಶ್ರೀಗಳ ಗೌರವಾರ್ಥ ನಾಳೆ ರಾಜ್ಯದಾದ್ಯಂತ ಶಾಲೆ, ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ ಹಾಗೂ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ಸಿದ್ಧಗಂಗಾ ಮಠದ ಆವರಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾಡಿನ ಜನತೆಯ ಹೃಯದಲ್ಲಿ ನಡೆದಾಡುವ ದೇವರು ಎಂದೇ ಸ್ಥಾನ ಪಡೆದಿರುವ ಪರಮಪೂಜ್ಯ ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾದರು’ ಎಂದು ವೈದ್ಯರು ನೀಡಿರುವ ಮಾಹಿತಿ ಆಧರಿಸಿ ಅಧಿಕೃತವಾಗಿ ಘೋಷಿಸಿದರು.

ಇದನ್ನೂ ಓದಿ: ಇಷ್ಟಲಿಂಗ ಪ್ರಿಯ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ​

ಶ್ರೀಗಳಿಗೆ ಸಾಕಷ್ಟು ಚಿಕಿತ್ಸೆ ನೀಡಲಾಗಿತ್ತು. ನಿರೀಕ್ಷೆಗೂ ಮೀರಿ ಅವರು ಚಿಕಿತ್ಸೆಗೆ ಸ್ಪಂದಿಸಿದ್ದರು. ಹಲವು ಬಾರಿ ಪವಾಡವನ್ನೇ ತೋರಿದ್ದರು. ಆದರೂ ಇಂದು ಅವರು ನಮ್ಮೆಲ್ಲರನ್ನೂ ಅಗಲಿದ್ದಾರೆ ಎನ್ನಲು ನೋವಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.

ಲಕ್ಷಾಂತರ ಬಡ ಮಕ್ಕಳಿಗೆ ಶಿಕ್ಷಣ, ದಾಸೋಹ ನೀಡಿರುವ ಶ್ರೀಗಳು ಇಂದು ನಮ್ಮೊಂದಿಗಿಲ್ಲ ಎನ್ನುವುದು ಬೇಸರದ ಸಂಗತಿ ಎಂದು ಅವರು ಹೇಳಿದರು.

ನಾಳೆ ಮಧ್ಯಾಹ್ನದವರೆಗೆ ಅಂತಿಮ ದರ್ಶನ

ನಾಳೆ ಮಧ್ಯಾಹ್ನ ಮೂರು ಗಂಟೆಯವರೆಗೆ ಶ್ರೀಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಭಕ್ತರೂ ಶಾಂತ ರೀತಿಯಿಂದ ಅಂತಿಮ ದರ್ಶನ ಪಡೆಯಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದರು.

‘ಶಿವಕುಮಾರ ಸ್ವಾಮಿಗಳಂತಹ ಪುಣ್ಯಾತ್ಮರು ಈ ಯುಗದಲ್ಲಿ ಇನ್ನೊಬ್ಬರಿಲ್ಲ ಎಂಬುದೇ ಭಕ್ತರ ಭಾವನೆಯಾಗಿದೆ. ಶಿಕ್ಷಣ, ದಾಸೋಹದ ಮೂಲಕ ಲಕ್ಷಾಂತರ ಮಕ್ಕಳ ಬಾಳು ಬೆಳಗಿರುವ ಶ್ರೀಗಳು ನಮ್ಮನ್ನಗಲಿರುವುದು ಬೇಸರದ ಸಂಗತಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಶ್ರೀಗಳಿಗೆ ಭಾರತ ರತ್ನ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಲಾಗುವುದು ಎಂದೂ ಯಡಿಯೂರಪ್ಪ ತಿಳಿಸಿದರು.

ತುಮಕೂರಿನಲ್ಲಿ ಶಾಲೆ–ಕಾಲೇಜುಗಳಿಗೆ ಇಂದು ರಜೆ

ತುಮಕೂರಿನಲ್ಲಿ ಶಾಲೆ–ಕಾಲೇಜುಗಳಿಗೆ ಇಂದು ಮಧ್ಯಾಹ್ನದಿಂದಲೇ ರಜೆ ಘೋಷಿಸಲಾಗಿದೆ.

ಶ್ರೀಗಳಿಗೆ ‘ಭಾರತ ರತ್ನ’ ನೀಡುವಂತೆ ಉಪಮುಖ್ಯಮಂತ್ರಿ ಮನವಿ

ಆಧುನಿಕ ಬಸವಣ್ಣ, ನಡೆದಾಡುವ ದೇವರು, ತ್ರಿವಿಧ ದಾಸೋಹಿ ಶಿವಕುಮಾರ ಮಹಾಸ್ವಾಮಿಗಳು ಇಂದು ಲಿಂಗೈಕ್ಯರಾಗಿರುವುದು ಅತ್ಯಂತ ನೋವುಂಟು‌ ಮಾಡಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಸಂತಾಪ ಸೂಚಿಸಿದ್ದಾರೆ.

‘ಸಾಮಾಜಿಕ, ಧಾರ್ಮಿಕ‌ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆ ಇನ್ನಾರಿಂದಲೂ‌ ಮಾಡಲಾಗದ ದೊಡ್ಡ ಸೇವೆಯಾಗಿದೆ. 111 ವರ್ಷಗಳನ್ನು ಸಂಪೂರ್ಣ ಮಾಡಿದ್ದ ಶ್ರೀಗಳ ಆರೋಗ್ಯ ಹದಗೆಟ್ಟಿತ್ತು. ವೈದ್ಯರ ಚಿಕಿತ್ಸೆಗೆ ಸ್ಪಂದಿಸದೇ ಇಂದು ಲಿಂಗೈಕ್ಯರಾಗಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ‌ ನಾವೆಲ್ಲರು ನಡೆಯೋಣ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಲಕ್ಷಾಂತರ ಭಕ್ತಾಧಿಗಳಿಗೆ ಆ ಭಗವಂತ ನೀಡಲಿ’ ಎಂದು ಪ್ರಾರ್ಥಿಸುವೆ ಎಂದು ಪರಮೇಶ್ವರ ಹೇಳಿದರು.

ಶ್ರೀಗಳ ಸೇವೆಗೆ ಕೇಂದ್ರ ಸರಕಾರ ‘ಭಾರತ ರತ್ನ’ ಗೌರವ ನೀಡಬೇಕು ಎಂದು ಹಿಂದಿನಿಂದಲೂ ಒತ್ತಾಯಿಸುತ್ತಿದ್ದೇವೆ. ಕೇಂದ್ರ ಸರಕಾರ ಕೂಡಲೇ ಶ್ರೀಗಳಿಗೆ ಭಾರತ ರತ್ನ ಗೌರವ ನೀಡಲಿ‌ ಎಂದು ಮನವಿ ಮಾಡುತ್ತೇನೆ ಎಂದರು.

ಬರಹ ಇಷ್ಟವಾಯಿತೆ?

 • 29

  Happy
 • 1

  Amused
 • 5

  Sad
 • 0

  Frustrated
 • 0

  Angry

Comments:

0 comments

Write the first review for this !