ಶನಿವಾರ, ಫೆಬ್ರವರಿ 29, 2020
19 °C

ಸಹಾಯಕ ನಿರ್ದೇಶಕ ಹುದ್ದೆಯ 'ಬಡ್ತಿ'ಗಾಗಿ ಕಸರತ್ತು: 'ಪದವಿ'ಗಾಗಿ ಚಮತ್ಕಾರ!

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೂರು ವರ್ಷ ಅವಧಿಯ ಪದವಿ ಒಂದೇ ವರ್ಷದಲ್ಲಿ ಪೂರ್ಣ. ತಾಂತ್ರಿಕ ಶಿಕ್ಷಣ ವಿಶ್ವವಿದ್ಯಾಲಯದಿಂದ ಕಲಾ ಪದವಿ. ಭಾನುವಾರ ಮಾತ್ರ ಪರೀಕ್ಷೆ...!

-ಹೀಗೆ ತರಹೇವಾರಿ ಚಮತ್ಕಾರ ಮಾಡಿ ‘ಪದವಿ’ ಪೂರ್ಣಗೊಳಿಸಿ ಪ್ರಮಾಣಪತ್ರ ಸಲ್ಲಿಸಿದ 35ಕ್ಕೂ ಹೆಚ್ಚು ಸಹಾಯಕ ಸಾಂಖ್ಯಿಕ ನೌಕರರಿಗೆ, ಸಹಾಯಕ ನಿರ್ದೇಶಕ ಹುದ್ದೆಗೆ ಬಡ್ತಿ ನೀಡಲು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಮುಂದಾಗಿದೆ.

127 ನೌಕರರಿಗೆ ಸಹಾಯಕ ನಿರ್ದೇಶಕ ಹುದ್ದೆಗೆ ಬಡ್ತಿ ನೀಡಲು ನಿರ್ದೇಶನಾಲಯ ಇಲಾಖಾ ಪದೋನ್ನತಿ ಸಮಿತಿ (ಡಿಪಿಸಿ) ಸಭೆ ನಡೆಸಿ, ಪಟ್ಟಿಯನ್ನು ಸಿದ್ಧಪಡಿಸಿದೆ. ಆದರೆ, ಪದವಿ ಪ್ರಮಾಣಪತ್ರಗಳ ನೈಜತೆ ಪರಿಶೀಲಿಸದೇ ಬಡ್ತಿ ನೀಡಲು ಮುಂದಾಗಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

2010ರಲ್ಲಿ ತಿದ್ದುಪಡಿಯಾದ ‘ವೃಂದ ಮತ್ತು ನೇಮಕಾತಿ ನಿಯಮ’ ಪ್ರಕಾರ ಬಡ್ತಿ ಪಡೆಯಲು ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರ, ಗಣಿತ, ಕಂಪ್ಯೂಟರ್ ಸೈನ್ಸ್‌–ಈ ವಿಷಯಗಳ ಪೈಕಿ ಯಾವುದಾದರೂ ಒಂದರಲ್ಲಿ ಪದವಿ ಕಡ್ಡಾಯ. ಆದರೆ, ಈ ಅರ್ಹತೆ ಇಲ್ಲದಿರುವವರು ನಾನಾ ಮಾರ್ಗಗಳ ಮೂಲಕ ಈ ‘ವಿಷಯ’ ಇರುವ ಪದವಿ ಪಡೆದಿರುವುದಾಗಿ ಪ್ರಮಾಣಪತ್ರ ಸಲ್ಲಿಸಿದ್ದಾರೆ.

‘ಹೀಗೆ ಪದವಿ ಪಡೆದವರನ್ನು ಬಡ್ತಿ ಪಟ್ಟಿಯಿಂದ ಹೊರಗಿಟ್ಟು ಉನ್ನತಮಟ್ಟದ ತನಿಖೆಗೆ ಶಿಫಾರಸು ಮಾಡಬೇಕು’ ಎಂದು ಡಿಪಿಸಿ ಸದಸ್ಯರೂ ಆಗಿರುವ ನಿರ್ದೇಶನಾಲಯದ ಜಂಟಿ ನಿರ್ದೇಶಕ ಡಿ. ಚಂದ್ರಶೇಖರಯ್ಯ ಅವರು ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಪರೀಕ್ಷೆ ಬರೆಯಲು ಅಧಿಕೃತವಾಗಿ ರಜೆ ಪಡೆಯದವರು, ಪದವಿ ಪಡೆದ ಬಗ್ಗೆ ಸೇವಾ ಪುಸ್ತಕ ಮತ್ತು ಕಾರ್ಯನಿರ್ವಹಣಾ ವರದಿಯಲ್ಲಿ ನಮೂದಿಸದೆ ಪ್ರಮಾಣಪತ್ರ ಸಲ್ಲಿಸಿದವರು‌‌, ಸಿ.ವಿ. ರಾಮನ್‌, ಬುಂದೇಲ್‌ ಖಂಡ್‌, ಶೋಭಿತ್, ಸಿಕ್ಕಿಂ, ವಿನಾಯಕ ಮಿಷನ್, ಜೆಆರ್‌ಎನ್ (ರಾಜಸ್ಥಾನ), ಈಸ್ಟರ್ನ್ ಇನ್‌ಸ್ಟಿಟ್ಯೂಟ್ ಮುಂತಾದ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದವರು ಬಡ್ತಿ ನೀಡಲು ಸಿದ್ಧಪಡಿಸಿದ ಪಟ್ಟಿಯಲ್ಲಿದ್ದಾರೆ.

ಬಡ್ತಿಗೆ ಕಂಟಕವಾದ ನಿಯಮ!
‘ಸಹಾಯಕ ನಿರ್ದೇಶಕ ಹುದ್ದೆಗೆ ಪದವಿ ಪಡೆಯಬೇಕೆಂದು ಕಡ್ಡಾಯಗೊಳಿಸಿರುವುದರಿಂದ ಬಡ್ತಿ ಪಡೆಯಲು ಕೆಲವು ನೌಕರರಿಗೆ ತೊಂದರೆಯಾಗಿದೆ. ಸೇವೆಯನ್ನು ಮಾನದಂಡವಾಗಿ ಪರಿಗಣಿಸಿ ಒಂದು ಬಾರಿ ವಿಶೇಷ ಪ್ರಕರಣವೆಂದು ಪರಿಗಣಿಸಿ, ನೊಂದ ನೌಕರರಿಗೆ ಬಡ್ತಿ ನೀಡಬೇಕು’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ 2019ರ ಅ. 10ರಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ನಿಯಮದಲ್ಲಿ ತಿದ್ದುಪಡಿ‌ ಬಗ್ಗೆ ಪರಿಶೀಲಿಸಿ ಕಡತ ಮಂಡಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದರು. ಆದರೆ, ಈ ಪ್ರಕ್ರಿಯೆ ನಡೆದಿಲ್ಲ ಎಂದು ನಿರ್ದೇಶನಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

*
ಪ್ರಮಾಣಪತ್ರಗಳ ನೈಜತೆ ಪರಿಶೀಲಿಸಲು ವಿ.ವಿ., ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದೇವೆ. ಆರೋಪಗಳಲ್ಲಿ ಹುರುಳಿಲ್ಲ.
-ಸಿ.ಎಚ್. ವಸುಂಧರಾದೇವಿ ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು