ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: 122 ಮಿ.ಮೀ ದಾಖಲೆ ಮಳೆ, ಕರಾವಳಿಯಲ್ಲಿ ಮುಂದುವರಿದ ವರುಣನ ಆರ್ಭಟ

Last Updated 3 ಜುಲೈ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಸೇಡಂ (ಕಲಬುರ್ಗಿ ಜಿಲ್ಲೆ):ತಾಲ್ಲೂಕಿನ ಬಿಬ್ಬಳ್ಳಿ ಗ್ರಾಮದ ಬಳಿ ಶುಕ್ರವಾರ ಕಾಗಿಣಾ ನದಿಯಲ್ಲಿ ಸಿಲುಕಿದ್ದ 8 ಜನರನ್ನು ಅದೇ ಗ್ರಾಮದ ಮೀನುಗಾರ ಶರಣು ಎಂಬುವರು ರಕ್ಷಿಸಿದ್ದಾರೆ.

ಮರಳು ತೆಗೆಯಲು ಇವರು ಬೆಳಿಗ್ಗೆ ನದಿಗೆ ಇಳಿದಿದ್ದರು. ಗುರುವಾರ ರಾತ್ರಿ ಕಾಗಿಣಾ ಪಾತ್ರದಲ್ಲಿ ಧಾರಾಕಾರ ಮಳೆಯಾದ್ದರಿಂದ ನದಿಯಲ್ಲಿ ಏಕಾಏಕಿ ನೀರಿನ ಹರಿವು ಹೆಚ್ಚಾಯಿತು. ಆಗ ಅವರೆಲ್ಲರೂ ಹೊರಬರಲಾಗದೇ ನದಿ ಮಧ್ಯದಲ್ಲಿ ಇದ್ದ ಪೊದೆಗಳ ಆಸರೆ ಪಡೆದರು.

ಅವರಲ್ಲಿದ್ದ ಒಬ್ಬ ಯುವಕ ತನ್ನ ಮೊಬೈಲ್‌ನಿಂದ ಸ್ನೇಹಿತರಿಗೆ ಕರೆ‌ ಮಾಡಿದ. ಗ್ರಾಮದ ಜನ ಪೊಲೀಸ್‌ ಕಂಟ್ರೋಲ್‌ ರೂಂ ಮತ್ತು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ಸೇಡಂನ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಬಂದರು.

ಸಿಬ್ಬಂದಿ ಮಾರ್ಗದರ್ಶನದಂತೆ ದೋಣಿ‌ ಮೂಲಕ ನದಿಗೆ ಇಳಿದ ಯುವಕ ಶರಣು, ಒಬ್ಬೊಬ್ಬರಾಗಿ ಎಲ್ಲರನ್ನೂ ದಡ ಸೇರಿಸಿದರು.

ಚಿಂಚೋಳಿ: 122 ಮಿ.ಮೀ ಮಳೆ

ಚಿಂಚೋಳಿ ಪಟ್ಟಣ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ 12ರಿಂದ ಶುಕ್ರವಾರ ನಸುಕಿನ 4ಗಂಟೆಯವರೆಗೆ 122 ಮಿ.ಮೀ. ಮಳೆ ಸುರಿದಿದೆ. ಈ ಪ್ರದೇಶದಲ್ಲಿ 2014ರಲ್ಲಿ 111 ಮಿ.ಮೀ ಮಳೆ ಸುರಿದಿತ್ತು. ಆ ನಂತರದ ದಾಖಲೆ ಪ್ರಮಾಣದ ಮಳೆ ಇದಾಗಿದೆ.

ಚಂದಾಪುರದ 25 ಮನೆಗಳಿಗೆ ನೀರು ನುಗ್ಗಿತ್ತು. ಮುರ್ಕಿ–ಹಂದರಕಿ ರಾಜ್ಯ ಹೆದ್ದಾರಿಯ ಸೇತುವೆ ಮುಳುಗಿ 5 ತಾಸು ಸಂಚಾರ ಬಂದ್‌ ಆಗಿತ್ತು.ಬಹುತೇಕ ಹೊಲಗಳಲ್ಲಿ ನೀರು ನಿಂತು ಕೆರೆಗಳಂತಾಗಿವೆ. ಒಡ್ಡುಗಳು ಒಡೆದಿವೆ.

ಕೆಳದಂಡೆ ನಾಗರಾಳ ಜಲಾಶಯಕ್ಕೆ 1 ಮೀಟರ್‌ ಹಾಗೂ ಚಂದ್ರಂಪಳ್ಳಿ ಜಲಾಶಯಕ್ಕೆ 2 ಮೀಟರ್‌ ನೀರು ಹರಿದುಬಂದಿದೆ. ಎತ್ತಿಪೋತೆ ಜಲಪಾತ ಮೈದುಂಬಿಕೊಂಡಿದೆ.

ಇದೇ 7ರವರೆಗೆ ಭಾರಿ ಮಳೆ?
ಬೆಂಗಳೂರು:
‘ರಾಜ್ಯದಲ್ಲಿ ಮುಂಗಾರು ಬಿರುಸುಗೊಂಡಿರುವುದರಿಂದ ಕರಾವಳಿ ಜಿಲ್ಲೆಗಳಲ್ಲಿ ಜುಲೈ 4ರಿಂದ 7ರ ವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ತಿಳಿಸಿದರು.

‘ಕರಾವಳಿ ಜಿಲ್ಲೆಗಳಲ್ಲಿ ಒಂದು ವಾರದಿಂದ ಭಾರಿ ಮಳೆಯಾಗಿದೆ. ಶನಿವಾರವೂ ಈ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ. ಕರಾವಳಿಯಲ್ಲಿ ವೇಗವಾದ ಗಾಳಿ ಬೀಸುತ್ತಿರುವುದರಿಂದ ಮೀನುಗಾರರು ಕಡಲಿಗೆ ಇಳಿಯಬಾರದು’ ಎಂದು ಎಚ್ಚರಿಸಿದ್ದಾರೆ.

ಎಲ್ಲೆಲ್ಲಿ ಎಷ್ಟು ಮಳೆ?: ಹೊನ್ನಾವರದಲ್ಲಿ ಶುಕ್ರವಾರ 17 ಸೆಂ.ಮೀ ಗರಿಷ್ಠ ಮಳೆಯಾಗಿದೆ. ಮಂಗಳೂರು, ಮೂಡುಬಿದಿರೆ 16, ಅಂಕೋಲಾ 13, ಕಾರ್ಕಳ, ಚಿಂಚೋಳಿ 12, ಭಟ್ಕಳ 11, ಉಪ್ಪಿನಂಗಡಿ, ಗೋಕರ್ಣ, ಕಾರವಾರ, ಕುಮಟಾ 10 ಸೆಂ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT