ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ನದಿಗೆ ನೀರು ಬಿಡುಗಡೆಗೆ ಆಗ್ರಹಿಸಿ ರೈತ ಸಂಘಟನೆಗಳಿಂದ ಪ್ರತಿಭಟನೆ

Last Updated 20 ಮೇ 2019, 8:01 IST
ಅಕ್ಷರ ಗಾತ್ರ

ಬೆಳಗಾವಿ: ಬತ್ತಿ ಹೋಗಿರುವ ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನೀರು ಬಿಡಿಸುವಲ್ಲಿ ವಿಫಲವಾಗುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮತ್ತು ಬಂದ್ ನಡೆಸುತ್ತಿರುವ ಅಥಣಿ ಹಾಗೂ ಕೃಷ್ಣಾ ತೀರದ ಜನತೆಯನ್ನು ಬೆಂಬಲಿಸಿ ಬೆಳಗಾವಿಯ ಕನ್ನಡ ಪರ ಮತ್ತು ರೈತ ಪರ ಸಂಘಟನೆಗಳ ಮುಖಂಡರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಮತ್ತು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

'ಕೃಷ್ಣಾ ನದಿಗೆ ಕೊಯ್ನಾ ನೀರು ಬಿಡುಗಡೆ ಮಾಡಲೇಬೇಕು' ಎಂಬ ಘೋಷಣೆಗಳನ್ನು ಹಾಕಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಬಿ. ಬೂದಪ್ಪ ಅವರಿಗೆ ಮನವಿ ಸಲ್ಲಿಸಿದರು. ಹಿಡಕಲ್ ಜಲಾಶಯದಿಂದ 94 ಕಿ.ಮೀ. ದೂರದ ಕೃಷ್ಣಾ ನದಿಗೆ ಒಂದು ಟಿಎಂಸಿ ನೀರು ಹರಿಸುವ ನಿರ್ಧಾರ ಅತ್ಯಂತ ಅವೈಜ್ಞಾನಿಕವಾಗಿದೆ. ಮುಂಜಾನೆ ಬಿಟ್ಟ ನೀರು ಕೃಷ್ಣಾ ನದಿ ತಲುಪಲು ಸಾಧ್ಯವಿಲ್ಲ. ರಾಜ್ಯದ ಮುಖ್ಯಮಂತ್ರಿ ಮಹಾರಾಷ್ಟ್ರಕ್ಕೆ ಸರ್ವಪಕ್ಷೀಯ ನಿಯೋಗ ಕಳುಹಿಸಿ ಕೊಯ್ನಾದಿಂದ ನೀರು ಬಿಡಿಸಬೇಕೇ ಹೊರತು ಇಲ್ಲಿಯೇ ಕುಳಿತು ಪತ್ರಗಳನ್ನು ಬರೆಯುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ವಿವರಿಸಿದರು.

ರೈತ ಹೋರಾಟಗಾರ ಸಿದ್ದಗೌಡ ಮೋದಗಿ ಮಾತನಾಡಿ, ಕೇವಲ ಹಿರಿಯ ಅಧಿಕಾರಿಗಳನ್ನು ಮುಂದು ಮಾಡಿದರೆ ಮಹಾರಾಷ್ಟ್ರವು ನೀರು ಬಿಡುಗಡೆ ಮಾಡುವುದಿಲ್ಲ. ಜಲ ಸಂಪನ್ಮೂಲ ಸಚಿವರು, ಶಾಸಕರನ್ನೊಳಗೊಂಡ ನಿಯೋಗವನ್ನು ಮುಂಬೈಗೆ ಕಳುಹಿಸಬೇಕು ಎಂದರು.

ಹೆಚ್ಚುವರಿ ಪ್ರಾದೇಶಿಕ ಆಯುಕ್ತ ರಮೇಶ ಕಳಸದ ಅವರನ್ನು ಮುಖಂಡರು ಭೇಟಿಯಾಗಿ ಮನವಿ ಸಲ್ಲಿಸಿದರು. ತೀವ್ರ ನೀರಿನ ಬವಣೆ ಉಂಟಾಗಿದ್ದು ಹಿಡಕಲ್ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಿರುವುದು ವ್ಯರ್ಥ ಸಾಹಸವಾಗಿದೆ ಎಂದು ಮುಖಂಡರು ಪ್ರತಿಪಾದಿಸಿದರು.

ಮುಖಂಡರಾದ ಶಿವಪ್ಪ ಶಮರಂತ, ದೀಪಕ ಗುಡಗನಟ್ಟಿ, ಸಾಗರ ಬೋರಗಲ್ಲ, ಗೌರಿ ಲಮಾಣಿ, ರಾಜು ಕುಸೋಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT