ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ ಶಾಕ್‌: ರಶ್ಮಿಕಾ ಮಂದಣ್ಣ ಮೇಲೆ ತೆರಿಗೆ ವಂಚನೆ ಆರೋಪ, ಅಪಾರ ಆಸ್ತಿ ಪತ್ತೆ

Last Updated 16 ಜನವರಿ 2020, 20:21 IST
ಅಕ್ಷರ ಗಾತ್ರ
ADVERTISEMENT
""
""

ಮಡಿಕೇರಿ: ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಿಂಚುತ್ತಿರುವ ಕೊಡಗಿನ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ವಿರಾಜಪೇಟೆ ಸಮೀಪದ ಕುಕ್ಲೂರಿನ ನಿವಾಸದ ಮೇಲೆ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಆದಾಯ ತೆರಿಗೆ ಇಲಾಖೆ (ಐ.ಟಿ) ಅಧಿಕಾರಿಗಳು ಗುರುವಾರ ಬೆಳಿಗ್ಗೆ ದಾಳಿ ನಡೆಸಿದ್ದು ತೆಲುಗು, ಕನ್ನಡ ಹಾಗೂ ತಮಿಳು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.

ಈ ಮೂರು ಭಾಷೆಯ ಸಿನಿಮಾದಲ್ಲೂ ರಶ್ಮಿಕಾ ಬಹುಬೇಡಿಕೆ ನಟಿಯಾಗಿದ್ದು ತೆರೆಗೆ ಬರಲು ಹಲವು ಸಿನಿಮಾಗಳು ಸಿದ್ಧವಾಗಿವೆ. ಈ ಹೊತ್ತಿನಲ್ಲಿಯೇ ದಾಳಿ ನಡೆದಿದೆ.

ಕಳೆದ ವರ್ಷದ ಜನವರಿಯಲ್ಲಿ ಸ್ಯಾಂಡಲ್‌ವುಡ್‌ ನಟರು ಹಾಗೂ ನಿರ್ಮಾಪಕರ ಮನೆಗಳ ಮೇಲೆ ದಾಳಿ ನಡೆಸಿದ್ದ ಐ.ಟಿ ಅಧಿಕಾರಿಗಳು, ಈಗ ನಟಿ ರಶ್ಮಿಕಾ ಅವರ ಕಕ್ಲೂರಿನ ಎರಡು ಅಂತಸ್ತಿನ ನಿವಾಸ, ಅವರ ತಂದೆಗೆ ಸೇರಿದ್ದ ಸೆರೆನಿಟಿ ಹಾಲ್‌ (ಮದುವೆ ಸಭಾಂಗಣ), ಬೃಹತ್‌ ವಾಣಿಜ್ಯ ಸಂಕೀರ್ಣದ ಮೇಲೆ ದಾಳಿ ನಡೆಸಲಾಗಿದೆ.

ರಶ್ಮಿಕಾ ನಿವಾಸ

ಹುಟ್ಟೂರು ಮೈತಾಡಿ ಗ್ರಾಮದಲ್ಲಿ ಕಾಫಿ ತೋಟ, ಬಿಟ್ಟಂಗಾಲದಲ್ಲಿ ಹೊಸದಾಗಿ ಖರೀದಿಸಿದ್ದ 5 ಎಕರೆ ಜಾಗವನ್ನು ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಐಷಾರಾಮಿ ಕಾರು ಸೇರಿದಂತೆ ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಅವುಗಳ ವಿವರವನ್ನು ಐ.ಟಿ ಅಧಿಕಾರಿಗಳು ಬಹಿರಂಗಪಡಿಸಿಲ್ಲ. ವಿಜಯನಗರದಲ್ಲಿದ್ದ ಮನೆಯನ್ನು ವರ್ಷದ ಹಿಂದೆ ಮಾರಾಟ ಮಾಡಿದ್ದರು. ಶುಕ್ರವಾರವೂ ದಾಖಲೆ ಪರಿಶೀಲನೆ ಮುಂದುವರಿಯುವ ಸಾಧ್ಯತೆಯಿದೆ.

ಅಭಿಮಾನಿಗಳ ಸೋಗು:ಬೆಳಿಗ್ಗೆ 7.30ರ ವೇಳೆಗೆ ರಶ್ಮಿಕಾ ಅಭಿಮಾನಿಗಳೆಂದು ಹೇಳಿಕೊಂಡ ಪ್ರವಾಸಿ ಟ್ಯಾಕ್ಸಿಯಲ್ಲಿ ಬಂದಿದ್ದ ಅಧಿಕಾರಿಗಳು, ಮನೆಯ ಒಳಹೊಕ್ಕಿ ಇಡೀ ದಿನ ದಾಖಲೆ ಪರಿಶೀಲಿಸಿದರು. ಬುಧವಾರವಷ್ಟೇ ಕನ್ನಡ ಸಿನಿಮಾವೊಂದರ ಡಬ್ಬಿಂಗ್‌ ಕೆಲಸ ಮುಗಿಸಿ ಹೈದರಾಬಾದ್‌ಗೆ ತೆರಳಿದ್ದ ರಶ್ಮಿಕಾ ತಮ್ಮ ಮನೆಯಲ್ಲಿ ಇರಲಿಲ್ಲ. ಅವರ ತಾಯಿ ಬೆಂಗಳೂರಿನಲ್ಲಿದ್ದಾರೆ. ಮನೆಯಲ್ಲಿದ್ದ ತಂದೆ ಮದನ್‌ ಮಂದಣ್ಣ ಅವರಿಂದ ವಿವಿಧ ಹೂಡಿಕೆ ಹಾಗೂ ಮಗಳ ಅವರ ಆರ್ಥಿಕ ವ್ಯವಹಾರಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಒಟ್ಟು 9 ಅಧಿಕಾರಿಗಳು ಮೂರು ಪ್ರತ್ಯೇಕ ತಂಡಗಳಾಗಿ ದಾಳಿಯಲ್ಲಿ ಪಾಲ್ಗೊಂಡಿದ್ದರು.

ಒಂದು ತಂಡವು ಪಂಜರ್‌ಪೇಟೆಯ ಮಂದಣ್ಣಗೆ ಸೇರಿದ ಸೆರೆನಿಟಿ ಹಾಲ್‌ಗೆ ತೆರಳಿ ಅಲ್ಲಿನ ಕಚೇರಿಯಲ್ಲಿ ದಾಖಲೆ ಪರಿಶೀಲಿಸಿತು. ವ್ಯವಸ್ಥಾಪಕ ವಿಕ್ಕಿ ಚಂಗಪ್ಪ ಅವರನ್ನು ಒಂದೂವರೆ ತಾಸು ವಿಚಾರಣೆ ನಡೆಸಿದ ಅಧಿಕಾರಿಗಳು, ನಿವಾಸಕ್ಕೆ ಕರೆತಂದು ಮತ್ತಷ್ಟು ಮಾಹಿತಿ ಪಡೆಯಲಾಯಿತು. ಮನೆಯಲ್ಲಿದ್ದ ಅಡುಗೆ ಸಿಬ್ಬಂದಿಯ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಸಲಾಗಿತ್ತು. ಸಂಜೆಯ ವೇಳೆಗೆ ಮದನ್‌ ಮಂದಣ್ಣ ಅವರನ್ನು ಐ.ಟಿ ಅಧಿಕಾರಿಗಳು ಕಾರಿನಲ್ಲಿ ಕರೆದೊಯ್ದು ಅವರ ಸಮ್ಮುಖದಲ್ಲಿ ಅವರ ಆಸ್ತಿಯ ಮಾಹಿತಿ ಪಡೆಯಲಾಯಿತು.

ತೆರಿಗೆ ವಂಚನೆ ಆರೋಪ:ರಶ್ಮಿಕಾ ಅವರು ತೆಲುಗು ಹಾಗೂ ತಮಿಳಿನ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ದೊಡ್ಡ ಪ್ರಮಾಣದ ಸಂಭಾವನೆಯನ್ನು ನಗದು ರೂಪದಲ್ಲಿ ಪಡೆದುಕೊಂಡು ತೆರಿಗೆ ವಂಚಿಸಿದ್ದಾರೆ ಎಂಬ ಆರೋಪದ ಮೇಲೆ ಈ ದಾಳಿ ನಡೆದಿದೆ. ದೊಡ್ಡಮೊತ್ತ ನೀಡಿ ಖರೀದಿಸಿದ್ದ 5 ಎಕರೆ ಜಾಗದಲ್ಲಿ ವಸತಿ ಶಾಲೆ ಹಾಗೂ ಪೆಟ್ರೋಲ್‌ ಬಂಕ್‌ ತೆರೆಯಲು ರಶ್ಮಿಕಾ ಸಿದ್ಧತೆ ನಡೆಸಿದ್ದರು. ಆ ಜಾಗವನ್ನು ಸಮತಟ್ಟು ಮಾಡಲಾಗಿದೆ.

ಖಾಲಿ ನಿವೇಶನ

ನೋಟಿಸ್‌ ಜಾರಿ:ರಶ್ಮಿಕಾ ಮನೆಯಲ್ಲಿ ಇರದ ಕಾರಣ ತಕ್ಷಣವೇ ಐ.ಟಿ ಎದುರು ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಲಾಗಿದೆ. ಅವರು ಶುಕ್ರವಾರ ಐ.ಟಿ ಅಧಿಕಾರಿಗಳ ಎದುರು ಹಾಜರಾಗುವ ಸಾಧ್ಯತೆಯಿದೆ.

ಯಾವ್ಯಾವ ಸಿನಿಮಾಗಳು?:ರಶ್ಮಿಕಾ ‘ಕಿರಿಕ್‌ ಪಾರ್ಟಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದರು. ಈ ಸಿನಿಮಾ ಹಿಟ್‌ ಆಗಿತ್ತು. ನಂತರ, ಕನ್ನಡದಲ್ಲಿ ‘ಯಜಮಾನ’, ‘ಅಂಜನಿಪುತ್ರ’, ‘ಚಮಕ್‌’ನಲ್ಲಿ ನಟಿಸಿದ್ದಾರೆ. ‘ಪೊಗರು’ ಬಿಡುಗಡೆಗೆ ಸಿದ್ಧವಾಗಿದೆ. ತೆಲುಗಿನ ‘ಗೀತಾ ಗೋವಿಂದಂ’ ಹೆಸರು ತಂದುಕೊಟ್ಟಿದ್ದ ಚಿತ್ರ. ತೆಲುಗು ಹಾಗೂ ತಮಿಳಿನ ಸ್ಟಾರ್‌ ನಟರೊಂದಿಗೆ ನಟಿಸಿರುವ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ.

ಐ.ಟಿ ಅಧಿಕಾರಿಗಳ ದಾಳಿ ವೇಳೆ ಸ್ಥಳೀಯ ಪೊಲೀಸರು ಭದ್ರತೆ ಒದಗಿಸಿದ್ದರು. ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮಧ್ಯಾಹ್ನ ಮನೆಗೆ ಹೋಟೆಲ್‌ನಿಂದ ಊಟ ತರಿಸಿಕೊಂಡು ಅಲ್ಲೇ ಸೇವಿಸಿದರು.

ಕಾಂಗ್ರೆಸ್ ನಾಯಕರ ನಂಟು?
ಮದನ್‌ ಮಂದಣ್ಣ ಅವರು ವಿರಾಜಪೇಟೆ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ. ಈ ಹಿಂದೆ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿದ್ದರು. ಮದನ್‌ ಅವರೊಂದಿಗೆ ಕಾಂಗ್ರೆಸ್‌ನ ಇಬ್ಬರು ಪ್ರಭಾವಿ ನಾಯಕರು ಆತ್ಮೀಯರಾಗಿದ್ದು, ಒಬ್ಬರ ಮನೆಯ ಮೇಲೆ ಇತ್ತೀಚೆಗಷ್ಟೇ ಐ.ಟಿ ದಾಳಿ ನಡೆದಿತ್ತು. ಅವರ ಬೇನಾಮಿ ಹೆಸರಿನ ಹೂಡಿಕೆ, ಆರ್ಥಿಕ ವ್ಯವಹಾರಗಳ ಕುರಿತು ಐ.ಟಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

***
ನಮ್ಮ ಯಜಮಾನ್ರು ಒಳ್ಳೆಯವರು. ಏಕೆ ಹೀಗಾಯಿತೋ ಗೊತ್ತಿಲ್ಲ. ಅಭಿಮಾನಿಗಳು ಎಂದಿದ್ದಕ್ಕೆ ನಾನೇ ಗೇಟ್‌ ತೆರೆದು ಕಾರನ್ನು ಒಳಕ್ಕೆ ಬಿಟ್ಟೆ.
– ಲಕ್ಷ್ಮಣ್‌, ಸಿಬ್ಬಂದಿ

***
ಮದನ್‌ ಮಂದಣ್ಣ ಅವ್ಯವಹಾರ ನಡೆಸಿಲ್ಲ. ರಾಜಕೀಯ ಮುಖಂಡರ ನಂಟು ಇಲ್ಲ. ವಿರಾಜಪೇಟೆಯಲ್ಲಿದ್ದ ಒಂದು ಮನೆಯನ್ನೂ ಇತ್ತೀಚೆಗೆ ಮಾರಾಟ ಮಾಡಿದ್ದರು.
– ಹರೀಶ್‌, ಮಂದಣ್ಣ ಸ್ನೇಹಿತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT