ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೋಬೋಟ್‌ಗೊಂದು ‘ವಿಶಾಲಾಕ್ಷಿ’ ಕ್ಯಾಮೆರಾ

Published 28 ಮೇ 2024, 23:30 IST
Last Updated 28 ಮೇ 2024, 23:30 IST
ಅಕ್ಷರ ಗಾತ್ರ

ಹಂಪಿಯ ವಿರೂಪಾಕ್ಷ ದೇವಸ್ಥಾನಕ್ಕೂ ರೋಬೋಟ್‌ ಕಣ್ಣಿಗೂ ಸಂಬಂಧ ಇದೆಯೇ? ಇಮಾಂ ಸಾಬಿ ಹಾಗೂ ರಾಮಾಯಣದ ಕಥೆಯಂತಲ್ಲ; ಇದು ವಾಸ್ತವ. ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿ ನಾವು ಕಾಣುವ ಬೆರಗುಗೊಳಿಸುವ ವಿದ್ಯಮಾನವೊಂದನ್ನೇ ರೋಬೋಟಿಗೆ ವಿಶಾಲವಾದ ದೃಷ್ಟಿಯನ್ನು ನೀಡಲು ಬಳಸಬಹುದಂತೆ. ಹೀಗೆಂದು ಚೀನಾದ ಹಾಂಕಾಂಗ್ ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ ತಂತ್ರಜ್ಞ ಶಿಯಾನ್ ಫಾನ್ ಮತ್ತು ಸಂಗಡಿಗರು ವರದಿ ಮಾಡಿದ್ದಾರೆ. ಇವರ ತಂಡ ನೊಣಗಳಂತೆ ವಿಶಾಲವಾದ ದೃಷ್ಟಿ ಸಾಮರ್ಥ್ಯ ಇರುವ ರೋಬೋಟ್‌ ಕಣ್ಣುಗಳನ್ನು ನೂರಾರು ಪಿನ್ಹೋಲ್ ಕ್ಯಾಮೆರಾಗಳನ್ನು ಬಳಸಿ ಸೃಷ್ಟಿಸಿದೆ ಎಂದು ‘ಸೈನ್ಸ್ ರೋಬಾಟಿಕ್ಸ್’ ಪತ್ರಿಕೆ ವರದಿ ಮಾಡಿದೆ.

ಹಂಪಿಯ ವಿರೂಪಾಕ್ಷ ದೇವಾಲಯಕ್ಕೆ ಭೇಟಿ ನೀಡಿದಾಗ ಗೈಡುಗಳು ಒಂದು ಕತ್ತಲೆ ಕೋಣೆಗೆ ಕರೆದೊಯ್ಯುವುದು ವಾಡಿಕೆ. ಅಲ್ಲಿ ಗೋಡೆಯ ಮೇಲೆ ದೇವಾಲಯದ ಉತ್ತರದ ಗೋಪುರದ ಬಿಂಬವೊಂದು ತಲೆಕೆಳಗಾಗಿ ಮೂಡಿರುವುದನ್ನು ತೋರಿಸಿ, ನೀವು ಬೆರಗುಗೊಳ್ಳುವಂತೆ ಮಾಡುತ್ತಾರೆ. ಈ ಬಿಂಬ ದೇವಾಲಯದ ಗೋಡೆಯಲ್ಲಿರುವ ಕಿಂಡಿಯಿಂದಾಗಿ ರೂಪುಗೊಂಡಿದ್ದು, ಪಿನ್ಹೋಲ್ ಕ್ಯಾಮೆರಾ ಎನ್ನುವ ಭೌತವಿಜ್ಞಾನದ ನಿಯಮದ ಫಲ. ಪುಟ್ಟದೊಂದು ರಂಧ್ರವು ಮಸೂರದಂತೆ ವರ್ತಿಸಿ, ಎದುರಿಗಿರುವ ದೃಶ್ಯದ ತಲೆಕೆಳಗಾದ ಬಿಂಬವನ್ನು ಮೂಡಿಸುತ್ತದೆ ಎನ್ನುತ್ತದೆ, ಈ ನಿಯಮ.

ಪಿನ್ಹೋಲ್ ಕ್ಯಾಮೆರಾ ನಿಯಮಗಳನ್ನೇ ಬಳಸಿಕೊಂಡು ಮಸೂರಗಳೇ ಇಲ್ಲದ ರೋಬೋಟ್‌ ಕಣ್ಣುಗಳನ್ನು ರೂಪಿಸಬಹುದು ಎಂದು ತರ್ಕಿಸಿದ ಫಾನ್ ತಂಡ ಅದಕ್ಕಾಗಿ ನೊಣದ ಕಣ್ಣುಗಳನ್ನು ಮಾದರಿಯಾಗಿ ಇಟ್ಟುಕೊಂಡಿತು. ನೊಣಗಳು ವಾಸ್ತವದಲ್ಲಿ ಸಹಸ್ರಾಕ್ಷಗಳು. ಅವುಗಳ ಕಣ್ಣಿನಲ್ಲಿ ನಮ್ಮ ಕಣ್ಣಿನಲ್ಲಿ ಇರುವಂತೆ ಒಂದೇ ಒಂದು ಮಸೂರವಿರುವುದಿಲ್ಲ. ಸಾವಿರಾರು ಮಸೂರಗಳಿರುವ ಪುಟ್ಟ, ಪುಟ್ಟ ಕಣ್ಣುಗಳು ಕೂಡಿಕೊಂಡಿರುತ್ತವೆ. ಇವು ಪ್ರತಿಯೊಂದನ್ನೂ ‘ಒಮಟೀಡಿಯ’ ಎನ್ನುತ್ತಾರೆ. ಇವೆಲ್ಲವೂ ಚೆಂಡಿನಂತಹ ಆಕಾರದಲ್ಲಿ ಜೋಡಣೆಯಾಗಿರುವುದರಿಂದ ನೊಣಗಳಿಗೆ ವಿಶಾಲವಾದ ದೃಷ್ಟಿ ಇದೆ. ಸಾಮಾನ್ಯವಾಗಿ ನಾವು ನಮ್ಮ ಮುಂದೆ ಇರುವ 180 ಡಿಗ್ರಿ ಅರೆ ವರ್ತುಲ ದೃಶ್ಯವನ್ನೂ ಪೂರ್ತಿಯಾಗಿ, ಸ್ಪಷ್ಟವಾಗಿ ನೋಡಲಾರೆವು. ಹೀಗಾಗಿಯೇ ಎಡ ಅಥವಾ ಬಲ ಬದಿಯನ್ನಾಗಲಿ, ಹಿಂಬದಿಯನ್ನಾಗಲಿ ಕಾಣುವುದು ಕಷ್ಟ. ಆದರೆ ನೊಣಗಳು ಹಾಗಲ್ಲ; ಅವು ತಮ್ಮ ಮುಂದಿನ ದೃಶ್ಯವನ್ನಲ್ಲದೆ ಬೆನ್ನ ಮೇಲಿನ ದೃಶ್ಯವನ್ನೂ ಕಾಣಬಲ್ಲವು. ಮನುಷ್ಯರಿಗೆ ಇದು ಅಸಾಧ್ಯ.

ರೋಬೋಟ್‌ಗಳಿಗೂ ನೊಣಗಳ ವಿಶಾಲ ದೃಷ್ಟಿಯನ್ನು ಒದಗಿಸಬಹುದೇ? ಅವುಗಳ ಕಣ್ಣುಗಳನ್ನೂ ನೊಣಗಳ ಕಣ್ಣುಗಳಂತೆಯೇ ನೂರಾರು ಪುಟ್ಟ ಒಮಟೀಡಿಯಗಳಿಂದ ಸೃಷ್ಟಿಸಿದರೆ ಆಗದೇ? ಇದು ವಿಜ್ಞಾನಿಗಳ ಆಸೆ. ಇದಕ್ಕಾಗಿ ಹಲವಾರು ಪ್ರಯತ್ನಗಳು ನಡೆದಿವೆಯಾದರೂ, ಅವು ಸ್ಪಷ್ಟವಾದ, 180 ಡಿಗ್ರಿಗಳಿಗಿಂತಲೂ ವಿಶಾಲವಾದ ದೃಷ್ಟಿ ಕೋನವನ್ನು ಒದಗಿಸಿಲ್ಲ. ಕಾರಣ: ಮಸೂರಗಳು. ಬಿಂಬವನ್ನು ಮೂಡಿಸಲು ಮಸೂರಗಳನ್ನು ಅಥವಾ ಲೆನ್ಸುಗಳನ್ನು ಬಳಸಿದಾಗ ಒಂದು ಸಮಸ್ಯೆ ಎದುರಾಗುತ್ತದೆ. ಬಿಂಬದ ಅಂಚು ಮಸುಕಾಗಿ ಮೂಡುತ್ತದೆ. ಏಕೆಂದರೆ ಮಸೂರಗಳು ದುಂಡಗೆ ಇರುವುದರಿಂದ, ಬಿಂಬದ ಅಂಚುಗಳು ಅಸ್ಪಷ್ಟವಾಗಿ ಮೂಡುತ್ತವೆ. ಅಲ್ಲಿ ಬಣ್ಣಗಳು ಕಾಣಿಸುತ್ತವೆ. ಮೂರು ಆಯಾಮದ ವಸ್ತುಗಳ ಚಿತ್ರಗಳು ನೈಜವಾಗಿ ಮೂಡುವುದಿಲ್ಲ.

ಫಾನ್ ತಂಡ ಈ ದೋಷವನ್ನು ನಿವಾರಿಸಲು ಪಿನ್ಹೋಲ್ ತಂತ್ರವನ್ನು ಬಳಸಿದೆ. ಅತ್ಯಂತ ತೆಳುವಾದ ಅಲ್ಯುಮಿನಿಯಂ ಹಾಳೆಯ ಮೇಲೆ ಹತ್ತು ನ್ಯಾನೋಮೀಟರು ಅಂತರದಲ್ಲಿ ರಂಧ್ರಗಳನ್ನು ಕೊರೆದು, ಅವುಗಳ ಅಡಿಯಲ್ಲಿ ಬೆಳಕಿಗೆ ಸ್ಪಂದಿಸಿ, ವಿದ್ಯುತ್ ಉತ್ಪಾದಿಸುವ ಗ್ಯಾಡೊಲೀನಿಯಂ ಹಾಗೂ ತಾಮ್ರದ ಇನ್ನೊಂದು ತೆಳು ಹಾಳೆಯನ್ನು ಹೊಂದಿಸಿದೆ. ಇವನ್ನು ವಿಶೇಷ ತಂತ್ರಗಳನ್ನು ಬಳಸಿ ಜಾಣತನದಿಂದ ರೂಪಿಸಿದ್ದಾರೆ. ಹೀಗೆ ತಯಾರಾದ ವಕ್ರವಾದ ನೂರ ಇಪ್ಪತ್ತೊಂದು ರಂಧ್ರಗಳಿರುವ ಕಣ್ಣು ಸ್ಪಷ್ಟವಾದ ಚಿತ್ರವನ್ನು ಮೂಡಿಸುತ್ತದೆಯಂತೆ. ನಡುವೆ ಇರುವ ಜಾಗೆಯ ನೆರಳು ಬೀಳದಂತೆ, ರಂಧ್ರಗಳ ನಡುವಿನ ದೂರವನ್ನು ಇವರು ಗಣಿತೀಯವಾಗಿ ಲೆಕ್ಕ ಹಾಕಿದ್ದಾರೆ. ಹೀಗೆ ರೂಪಿಸಿದ ಎರಡು ಅರೆಗೋಲಗಳನ್ನು ಜೋಡಿಸಿ ಥೇಟ್ ನೊಣದ ಕಣ್ಣನ್ನೇ ಅಣಕಿಸುವ ಸಾಧನವನ್ನೂ ರೂಪಿಸಿದ್ದಾರೆ. ಇದರ ದೃಷ್ಟಿ ಮನುಷ್ಯರದ್ದಕ್ಕಿಂತ ಒಂದೂವರೆ ಪಟ್ಟು ಹೆಚ್ಚು. ಮನುಷ್ಯರು ತಾವು ದಿಟ್ಟಿಯಿಟ್ಟ ವಸ್ತುವಿನ ಆಚೀಚೆ ಸುಮಾರು ನಲವತ್ತೈದು ಡಿಗ್ರಿಗಳಷ್ಟು ಮಾತ್ರ ಸ್ಪಷ್ಟವಾಗಿ ನೋಡಬಲ್ಲರು. ಈ ಕಣ್ಣುಗಳು ಎಪ್ಪತ್ತು ಡಿಗ್ರಿಗಳಷ್ಟು ಆಚೀಚಿನ ದೃಶ್ಯಗಳನ್ನು ಕಾಣಬಲ್ಲವಂತೆ.

ನೊಣದ ಕಣ್ಣಿಗೆ ಇನ್ನೊಂದು ವಿಶೇಷವಿದೆ. ವಿಶಾಲವಾದ, ಸ್ಪಷ್ಟವಾದ ಚಿತ್ರವನ್ನು ಅದು ರೂಪಿಸುವುದಷ್ಟೆ ಅಲ್ಲ. ಹಾರುವಾಗಲೇ ಇನ್ನೊಂದು ಹಾರುವ ವಸ್ತುವಿನ ಚಲನೆಯನ್ನು ನಿಖರವಾಗಿ ಗುರುತಿಸಬಲ್ಲುದು. ಹೀಗಾಗಿಯೇ ನೊಣವನ್ನು ಹಿಡಿಯುವುದು ಕಷ್ಟ. ಬೆನ್ನ ಹಿಂದಿನ ಚಿತ್ರವೂ ಅದಕ್ಕೆ ಗೊತ್ತಾಗುವುದರಿಂದ ಅದು ಸುಲಭವಾಗಿ ತಪ್ಪಿಸಿಕೊಳ್ಳುತ್ತದೆ. ಹಾಗೆಯೇ ಹಾರುತ್ತ ಸಮೀಪಿಸುವ ವಸ್ತುಗಳನ್ನೂ ಅದು ಗುರುತಿಸಿ, ಹಾದಿ ಬದಲಿಸಿಕೊಳ್ಳುತ್ತದೆ. ಡ್ರೋನುಗಳಿಗೂ ಇದೇ ಸೌಲಭ್ಯವನ್ನು ಈ ಕಣ್ಣುಗಳು ಒದಗಿಸಬಲ್ಲುವೇ ಎಂದು ಫಾನ್ ತಂಡ ಪರೀಕ್ಷಿಸಿದೆ. ಚಚ್ಚೌಕದ ಮಾರ್ಗದಲ್ಲಿ ಚಲಿಸುತ್ತಿರುವ ನಾಲ್ಕು ಕಾಲಿನ ರೋಬಾಟಿಗೆ ದೀಪವನ್ನು ಹೊಂದಿಸಿ ನಡೆಯಲು ಬಿಟ್ಟಿದ್ದಾರೆ. ಡ್ರೋನ್ ಒಂದಕ್ಕೆ ಪಿನ್ಹೋಲ್ ಕಣ್ಣನ್ನು ಲಗತ್ತಿಸಿ, ದೀಪವಿರುವತ್ತ ಸಾಗುವಂತೆ ನಿರ್ದೇಶಿಸಿದ್ದಾರೆ. ಅನಂತರ ಅದು ಹೋದಲ್ಲೆಲ್ಲ ನಾಗಾಲಿಯನ್ನು ಡ್ರೋನು ತನ್ನಂತಾನೇ ಹಿಂಬಾಲಿಸುವುದನ್ನು ಖಚಿತಪಡಿಸಿಕೊಂಡಿದ್ದಾರೆ.

ಫಾನ್ ತಂಡ ರೂಪಿಸಿರುವ ಕಣ್ಣುಗಳಲ್ಲಿ ಇದೀಗ ಕೇವಲ ನೂರಿಪ್ಪತ್ತು ಒಮಟೀಡಿಯಗಳಿವೆಯಷ್ಟೆ. ಸಾವಿರಾರು ಒಮಟೀಡಿಯ ಇರುವ ಕಣ್ಣುಗಳನ್ನು ಸೃಷ್ಟಿಸಿದರೆ ಇನ್ನಷ್ಟು ಸ್ಪಷ್ಟವಾದ ಚಿತ್ರ ನೀಡುವ ಕಣ್ಣುಗಳು ಸಾಧ್ಯವಾಗಬಹುದು. ಆದರೆ ಅಷ್ಟು ಸೂಕ್ಷ್ಮವಾದ ರಂಧ್ರಗಳಿಗೆ ತಂತಿಗಳನ್ನು ಜೋಡಿಸುವ ಕೌಶಲವನ್ನು ಸುಧಾರಿಸಬೇಕು. ಹಾಗಾದಾಗ ಇಂತಹ ಮಸೂರಗಳೇ ಇಲ್ಲದ ನೊಣದ ಕಣ್ಣುಗಳಂತಹ ರೋಬೋಟ್‌ ಕಣ್ಣುಗಳು, ಕ್ಯಾಮೆರಾಗಳು ಸೃಷ್ಟಿಯಾದಾವು. ಅತಿ ವೇಗದಲ್ಲಿ ಸಾಗುವ ಕ್ರಿಕೆಟ್ ಬಾಲಿನ ಹಿಂದೆಯೇ ಸಾಗುವ ರೋಬೋಟ್‌ ಕ್ಯಾಮೆರಾಗಳೂ ಸಾಧ್ಯವಾಗಬಹುದು. ದೇವಾಲಯವೊಂದರಲ್ಲಿ ನೆರಳು ಮೂಡಿಸುವ ತಂತ್ರವೇ ನವನವೀನ ರೋಬೋಟ್‌ ಕಣ್ಣಿಗೂ ಕಾರಣವಾಗಿರುವುದು ವಿಜ್ಞಾನದ ಬೆರಗು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT