ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

NASA Moon Mission | ಆರ್ಟೆಮಿಸ್ ಬಾಹ್ಯಾಕಾಶ ಒಪ್ಪಂದ

Published 30 ಮೇ 2024, 0:30 IST
Last Updated 30 ಮೇ 2024, 0:30 IST
ಅಕ್ಷರ ಗಾತ್ರ

ಚಂದಿರನ ಅಂಗಳದೊಳಗೆ ಪ್ರವೇಶಿಸಲು ಹಲವು ದೇಶಗಳು ಇಚ್ಛಿಸುತ್ತಿವೆ. ಈ ನಿಟ್ಟಿನಲ್ಲಿ ಒಟ್ಟು ಬಾಹ್ಯಾಕಾಶ ಮತ್ತು ಮನುಕುಲದ ಸುರಕ್ಷತೆಗೆ ಹಾಗೂ ಡೇಟಾಗಳ ಹಂಚಿಕೆಗೆ ಸಂಬಂಧಿಸಿದಂತೆ ಒಂದು ರೂಪುರೇಷೆಗಳಿಗೆ ಬದ್ಧರಾಗಿರಬೇಕು ಎಂಬ ನಿಟ್ಟಿನಲ್ಲಿ ನಾಸಾ ಒಂದು ಒಪ್ಪಂದ ತಂದಿದೆ. ಅದುವೇ ಆರ್ಟೆಮಿಸ್ ಒಪ್ಪಂದ.

ಆರ್ಟೆಮಿಸ್ ಬಾಹ್ಯಾಕಾಶ ಒಪ್ಪಂದಕ್ಕೆ ಇತ್ತೀಚೆಗೆ ಸ್ಲೋವೇನಿಯಾ ಮತ್ತು ಲಿಥುವೇನಿಯಾ ದೇಶಗಳು ಸಹಿ ಹಾಕಿದ್ದು, ಈ ಒಪ್ಪಂದಕ್ಕೆ ಸಹಿ ಹಾಕಿದ ದೇಶಗಳಲ್ಲಿ ಸ್ಲೋವೇನಿಯಾ 39 ಮತ್ತು ಲಿಥುವೇನಿಯಾ 40ನೇ ದೇಶವಾಗಿದೆ.

ಇದೇ ಏಪ್ರಿಲ್‌ನಲ್ಲಿ ವಾಷಿಂಗ್ಟನ್‌ನ ನಾಸಾ ಪ್ರಧಾನ ಕಚೇರಿಯಲ್ಲಿ ಕೆಲವು ದೇಶಗಳು ಆರ್ಟೆಮಿಸ್ ಒಪ್ಪಂದಗಳಿಗೆ ಸಹಿ ಹಾಕಿದ್ದು, ಈ ಮೂಲಕ ಸ್ವೀಡನ್ ಒಪ್ಪಂದಕ್ಕೆ ಸಹಿಹಾಕಿದ 37ನೇ ದೇಶ ಹಾಗೂ ಸ್ವಿಟ್ಜರ್ಲೆಂಡ್ 38ನೇ ದೇಶ ಎನಿಸಿಕೊಂಡಿದ್ದವು.ಈ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಈ ದೇಶಗಳು ತಮ್ಮ ಚಂದ್ರಯಾನ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಪರಸ್ಪರ ಸಹಕಾರದ ಮತ್ತು ಜವಾಬ್ದಾರಿಯುತ ನಡವಳಿಕೆಗೆ ಬದ್ಧವಾಗಿರುತ್ತವೆ. ಇದು ನಾಸಾದ ಆರ್ಟೆಮಿಸ್ ಕಾರ್ಯಕ್ರಮಕ್ಕೆ ಸೇರ್ಪಡೆಯಾಗಲು ಬೇಕಾದ ಪೂರ್ವ ಅಗತ್ಯಗಳಲ್ಲಿ ಒಂದು. ಸಹಿ ಹಾಕಿದ ದೇಶಗಳೆಲ್ಲವೂ ಚಂದ್ರಯಾನ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದಿಲ್ಲವಾದರೂ, ಈ ವಿಸ್ತರಣೆಯು ಯುಎಸ್ಎ ಮತ್ತು ಯುರೋಪಿನ ನಡುವಿನ ಬಾಹ್ಯಾಕಾಶ ಚಟುವಟಿಕೆಗಳ ಸಹಕಾರಕ್ಕೆ ಸಂಬಂಧಿಸಿದಂತೆ ಒಂದು ಗಮನಾರ್ಹ ಹೆಜ್ಜೆಯನ್ನು ಸೂಚಿಸುತ್ತದೆ.

ಯುರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್‌ಎ)ಯ 22 ಸದಸ್ಯ ದೇಶಗಳಲ್ಲಿ 16 ದೇಶಗಳು ಈಗ ಈ ಒಪ್ಪಂದಕ್ಕೆ ಸಹಿ ಹಾಕಿದಂತಾಗಿದ್ದು, ಚಂದ್ರನಲ್ಲಿಗೆ ಮಾನವರನ್ನು ಕಳುಹಿಸುವ ಮಹತ್ವಾಕಾಂಕ್ಷಿ ಗುರಿಯೆಡೆಗೆ ಈ ದೇಶಗಳ ಸಮಾನ ಬದ್ಧತೆಯನ್ನು ಇದು ಎತ್ತಿಹಿಡಿಯುತ್ತದೆ.

ಆರ್ಟೆಮಿಸ್ ಒಪ್ಪಂದಗಳು

ಮೊದಲಿಗೆ, ಆರ್ಟೆಮಿಸ್ ಒಪ್ಪಂದಗಳಿಗೆ ಅಕ್ಟೋಬರ್ 13, 2020ರಂದು ಎಂಟು ಸ್ಥಾಪಕ ದೇಶಗಳಾದ ಆಸ್ಟ್ರೇಲಿಯಾ, ಕೆನಡಾ, ಇಟಲಿ, ಜಪಾನ್, ಲುಕ್ಸೆಂಬರ್ಗ್, ಯುಎಇ, ಯುಕೆ ಮತ್ತು ಯುಎಸ್ಎ ಸಹಿ ಹಾಕಿದ್ದವು. ಇದೊಂದು ಹಣಕಾಸಿನ ಬದ್ಧತೆ ಇಲ್ಲದಿರುವ ಒಪ್ಪಂದವಾಗಿದ್ದು, ಇದರ ಅಡಿಯಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳು ಶಾಂತಿಯುತ ಉದ್ದೇಶಗಳಿಗಾಗಿರುತ್ತವೆ.

ಒಪ್ಪಂದಗಳ ಉದ್ದೇಶ

ಈ ಒಪ್ಪಂದಗಳ ಉದ್ದೇಶವು ವಾಸ್ತವಿಕ ತತ್ವಗಳು, ಮಾರ್ಗದರ್ಶಿ ಸೂತ್ರಗಳು ಮತ್ತು ಉತ್ತಮ ಅಭ್ಯಾಸಗಳ ಮೂಲಕ ಬಾಹ್ಯಾಕಾಶದ ನಾಗರಿಕ ಅನ್ವೇಷಣೆ ಮತ್ತು ಬಳಕೆಯ ಅಭ್ಯಾಸಗಳನ್ನು ಮತ್ತಷ್ಟು ಸುಧಾರಿಸುವುದು ಮತ್ತು ಆ ಕುರಿತು ಒಂದು ಸಮಾನ ದೃಷ್ಟಿಯನ್ನು ಹೊಂದುವುದು ಹಾಗೂ ಆರ್ಟೆಮಿಸ್ ಕಾರ್ಯಕ್ರಮವನ್ನು ಮುಂದುವರಿಸುವುದು. ಬಾಹ್ಯಾಕಾಶ ಚಟುವಟಿಕೆಗಳನ್ನು ನಡೆಸುವಾಗ ಕಾರ್ಯಾಚರಣೆಗಳ ಸುರಕ್ಷತೆ ಹೆಚ್ಚಿಸುವುದು, ಅನಿಶ್ಚಿತತೆಯನ್ನು ಕಡಿಮೆ ಮಾಡುವುದು ಮತ್ತು ಬಾಹ್ಯಾಕಾಶದ ಸುಸ್ಥಿರ ಬಳಕೆಗೆ ಉತ್ತೇಜಿಸುವುದಾಗಿದೆ. ಈ ಒಪ್ಪಂದಗಳು ಮೇಲೆ ವಿವರಿಸಿದ ತತ್ವ ಮತ್ತು ಉದ್ದೇಶಗಳಿಗೆ ಒಂದು ರಾಜಕೀಯ ಬದ್ಧತೆಯನ್ನು ಪ್ರತಿನಿಧಿಸುತ್ತವೆ. ಇವುಗಳಲ್ಲಿ ಹಲವು ತತ್ವಗಳು- ಬಾಹ್ಯಾಕಾಶ ಒಪ್ಪಂದ (Outer Space Treaty) ಮತ್ತು ಇತರ ಸಂಬಂಧಿತ ಒಪ್ಪಂದಗಳಲ್ಲಿ ಅಡಕವಾಗಿರುವ ಮುಖ್ಯವಾದ ಗುರಿಗಳನ್ನು ಕಾರ್ಯರೂಪಕ್ಕೆ ತರುವುದಕ್ಕೆ ಸಂಬಂಧಿಸಿವೆ.
ಈ ಒಪ್ಪಂದಗಳಲ್ಲಿ ನಿಗದಿಪಡಿಸಲಾಗಿರುವ ತತ್ವಗಳು, ಸಹಿ ಹಾಕಿದ ಪ್ರತಿ ದೇಶದ ನಾಗರಿಕ ಬಾಹ್ಯಾಕಾಶ ಸಂಸ್ಥೆಗಳು ನಡೆಸುವ ನಾಗರಿಕ ಬಾಹ್ಯಾಕಾಶ ಚಟುವಟಿಕೆಗಳಿಗೆ ಅನ್ವಯಿಸುತ್ತವೆ. ಈ ಚಟುವಟಿಕೆಗಳು ಚಂದ್ರ, ಮಂಗಳ, ಧೂಮಕೇತುಗಳು, ಉಲ್ಕೆಗಳು, ಅವುಗಳ ಮೇಲ್ಮೈ ಮತ್ತು ಹೊರಮೈ ಸೇರಿ ಚಂದ್ರ ಅಥವಾ ಮಂಗಳದ ಕಕ್ಷೆಗಳು, ಭೂಮಿ ಮತ್ತು ಚಂದ್ರ ವ್ಯವಸ್ಥೆಯ ಲಾಗ್ರೇಂಜಿಯನ್ (lagrangian) ಬಿಂದುಗಳು, ಈ ಆಕಾಶಕಾಯಗಳ ನಡುವಿನ ಸಂಚಾರ ಸ್ಥಳಗಳು- ಹೀಗೆ ಎಲ್ಲಿ ಬೇಕಾದರಲ್ಲಿ ನಡೆಯಬಹುದು. ಸಹಿ ಹಾಕಿದ ದೇಶಗಳೆಲ್ಲವೂ ಕಾರ್ಯಕ್ರಮ ಯೋಜನೆ ಮತ್ತು ತಮ್ಮ ಪರವಾಗಿರುವ ಸಂಸ್ಥೆಗಳು ಸೇರಿದಂತೆ, ಎಲ್ಲಾ ಕಾರ್ಯಾಚರಣೆಗಳಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ತಮ್ಮದೇ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಈ ಒಪ್ಪಂದದಲ್ಲಿ ವಿವರಿಸಿರುವ ತತ್ವಗಳನ್ನು ಅನುಷ್ಠಾನಗೊಳಿಸಲಿವೆ.

ಪಾಲುದಾರ ದೇಶಗಳ ಜವಾಬ್ದಾರಿಗಳು

ತಮ್ಮ ಧೋರಣೆಗಳು ಮತ್ತು ಯೋಜನೆಗಳನ್ನು ಸಾರ್ವಜನಿಕವಾಗಿ ವಿವರಿಸುವ ಮೂಲಕ ಪಾಲುದಾರ ದೇಶಗಳು ಪಾರದರ್ಶಕತೆಯ ತತ್ವಗಳನ್ನು ಪಾಲಿಸಬೇಕು. ಪಾಲುದಾರ ದೇಶಗಳು ಮುಕ್ತವಾಗಿರುವ ಅಂತರರಾಷ್ಟ್ರೀಯ ಗುಣಮಟ್ಟವನ್ನು ಬಳಸಬೇಕು ಮತ್ತು ಆಗತ್ಯ ಬಿದ್ದಾಗ ಹೊಸ ಗುಣಮಟ್ಟವನ್ನು ಅಭಿವೃದ್ಧಿಪಡಿಸಬೇಕು. ಪರಸ್ಪರ ಪೂರಕವಾದ ವ್ಯವಸ್ಥೆಗಳನ್ನು ಬೆಂಬಲಿಸಲು ಪ್ರಯತ್ನಿಸಬೇಕು.

ಪಾಲುದಾರ ದೇಶಗಳು ಯಾವುದೇ ಸಂದರ್ಭದಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಗಗನಯಾನಿಗಳಿಗೆ ಸಾಧ್ಯವಿರುವ ಎಲ್ಲಾ ನೆರವು ನೀಡಲು ಬದ್ಧರಾಗಿರಬೇಕು. ನೋಂದಣಿ ಒಪ್ಪಂದಕ್ಕೆ ಅನುಗುಣವಾಗಿ, ಯಾವ ಆಕಾಶಕಾಯಕ್ಕೆ ಯಾರು ನೋಂದಣಿ ಮಾಡಬೇಕು ಎಂಬುದನ್ನು ನಿರ್ಧರಿಸಬೇಕು.

ಆರ್ಟೆಮಿಸ್ ಯಾತ್ರೆಯಿಂದ ಇಡೀ ಪ್ರಪಂಚಕ್ಕೆ ಪ್ರಯೋಜನವಾಗುವಂತೆ, ಪಾಲುದಾರ ದೇಶಗಳು ತಮ್ಮೆಲ್ಲಾ ವೈಜ್ಞಾನಿಕ ದತ್ತಾಂಶಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಸದಸ್ಯ ದೇಶಗಳು ತಮ್ಮ ಬಾಹ್ಯಾಕಾಶ ಚಟುವಟಿಕೆಗಳ ಕುರಿತು ವಿಶ್ವಸಂಸ್ಥೆಗೆ ತಿಳಿಸಬೇಕು.
ಪಾಲುದಾರ ದೇಶಗಳು ಬಾಹ್ಯಾಕಾಶದಲ್ಲಿ ಹಾನಿಕಾರಕ ಮಧ್ಯಪ್ರವೇಶದಿಂದ ದೂರ ಉಳಿಯಬೇಕು ಮತ್ತು ಬಾಹ್ಯಾಕಾಶದ ಶಾಂತಿಯುತ ಬಳಕೆಗಳ ಕುರಿತ ವಿಶ್ವಸಂಸ್ಥೆಯ ಸಮಿತಿ (UNCOPUOS)ಯ ಬಾಹ್ಯಾಕಾಶ ತ್ಯಾಜ್ಯ ತಗ್ಗಿಸುವಿಕೆಯ ಕುರಿತ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಬೇಕು.

ಬಾಹ್ಯಾಕಾಶದ ಶಾಂತಿಯುತ ಬಳಕೆಗಳ ಕುರಿತ ವಿಶ್ವಸಂಸ್ಥೆಯ ಸಮಿತಿ

ಬಾಹ್ಯಾಕಾಶದ ಶಾಂತಿಯುತ ಬಳಕೆಗಳ ಕುರಿತ ವಿಶ್ವಸಂಸ್ಥೆಯ ಸಮಿತಿಯನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 1959ರಲ್ಲಿ ಸ್ಥಾಪಿಸಲಾಯಿತು.

ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಗಾಗಿ ಇಡೀ ಮಾನವ ಕುಲಕ್ಕೆ ಲಾಭವಾಗುವಂತೆ ಬಾಹ್ಯಾಕಾಶದ ಅನ್ವೇಷಣೆ ಮತ್ತು ಬಳಕೆಯನ್ನು ನಿರ್ದೇಶಿಸುವ ಉದ್ದೇಶದಿಂದ ಈ ಸಮಿತಿಯನ್ನು ಸ್ಥಾಪಿಸಲಾಯಿತು. ಬಾಹ್ಯಾಕಾಶದ ಶಾಂತಿಯುತ ಬಳಕೆಯಲ್ಲಿ ಅಂತರರಾಷ್ಟ್ರೀಯ ಸಹಕಾರದ ಪರಿಶೀಲನೆ, ವಿಶ್ವಸಂಸ್ಥೆಯು ಕೈಗೊಳ್ಳಬಹುದಾದ ಬಾಹ್ಯಾಕಾಶ ಸಂಬಂಧಿ ಚಟುವಟಿಕೆಗಳ ಅಧ್ಯಯನ, ಬಾಹ್ಯಾಕಾಶ ಅಧ್ಯಯನ ಕಾರ್ಯಕ್ರಮಗಳಿಗೆ ಉತ್ತೇಜನ ನೀಡುವುದು,

ಬಾಹ್ಯಾಕಾಶ ಅನ್ವೇಷಣೆಯಿಂದ ಉಂಟಾಗುವ ಕಾನೂನು ಸಮಸ್ಯೆಗಳ ಅಧ್ಯಯನ ಮುಂತಾದ ಜವಾಬ್ದಾರಿಗಳನ್ನು ಈ ಸಮಿತಿಗೆ ನೀಡಲಾಗಿತ್ತು. ಈ ಸಮಿತಿಯಲ್ಲಿ ಎರಡು ಉಪಸಂಸ್ಥೆಗಳಿವೆ: 1.ವೈಜ್ಞಾನಿಕ ಮತ್ತು ತಾಂತ್ರಿಕ ಉಪಸಮಿತಿ, 2. ಕಾನೂನು ಉಪಸಮಿತಿ. ಇವೆರಡನ್ನೂ 1961ರಲ್ಲಿ ಸ್ಥಾಪಿಸಲಾಯಿತು.

ಈ ಸಮಿತಿಯು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಾಲ್ಕನೇ ಸಮಿತಿಗೆ ವರದಿ ಮಾಡುತ್ತದೆ. ಅದು ಬಾಹ್ಯಾಕಾಶದ ಶಾಂತಿಯುತ ಬಳಕೆಗಳಲ್ಲಿ ಅಂತರರಾಷ್ಟ್ರೀಯ ಸಹಕಾರದ ಕುರಿತು ವಾರ್ಷಿಕ ಗೊತ್ತುವಳಿಯನ್ನು ಅಂಗೀಕರಿಸುತ್ತದೆ.

ಭಾರತಕ್ಕೆ ಆಗಬಹುದಾದ ಲಾಭವೇನು ?

ಆರ್ಟೆಮಿಸ್ ಒಪ್ಪಂದಗಳ ಪ್ರಕಾರ ಭಾರತವು ಸಮಾನ ನಿಯಮಾವಳಿಗೆ ಒಳಪಟ್ಟು, ಯುಎಸ್ಎ ನಡೆಸುವ ಚಂದ್ರ ಮತ್ತು ಇತರ ಆಕಾಶಕಾಯಗಳ ಅನ್ವೇಷಣೆ ಮತ್ತು ಸಂಶೋಧನೆಯ ಆರ್ಟೆಮಿಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು.

ವಿಶೇಷವಾಗಿ ಇಲೆಕ್ಟ್ರಾನಿಕ್ಸ್ ಸೇರಿದಂತೆ ಬಾಹ್ಯಾಕಾಶ ಕ್ಷೇತ್ರದಲ್ಲಿನ ತಂತ್ರಜ್ಞಾನಗಳ ಆಮದಿನ ಮೇಲೆ ಇರುವ ನಿರ್ಬಂಧಗಳ ಸಡಿಲಿಕೆಗೆ ಈ ಒಪ್ಪಂದವು ದಾರಿಮಾಡಿಕೊಡುತ್ತದೆ. ಯುಎಸ್ಎಯ ಮಾರುಕಟ್ಟೆಗಳಿಗಾಗಿ ಸಾಧನಗಳ ಅಭಿವೃದ್ಧಿ ಮತ್ತು ಆವಿಷ್ಕಾರ ನಡೆಸುವ ಮೂಲಕ ಭಾರತೀಯ ಕಂಪನಿಗಳು ಲಾಭ ಪಡೆಯಬಹುದು.

ಇನ್ನಷ್ಟು ವೈಜ್ಞಾನಿಕ ಕಾರ್ಯಕ್ರಮಗಳಲ್ಲಿ ಜಂಟಿಯಾಗಿ ಭಾಗವಹಿಸಲು ಭಾರತಕ್ಕೆ ಇದು ಅವಕಾಶ ಮಾಡಿಕೊಡಲಿದೆ. ಮಾನವ ಸಹಿತ ಗಗನಯಾನ ಸೇರಿದಂತೆ ದೂರಗಾಮಿ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೆ ಒಂದು ಸಮಾನ ಮಾನದಂಡವನ್ನೂ ಭಾರತವು ಹೊಂದಲಿದೆ. ಮೈಕ್ರೋ ಇಲೆಕ್ಟ್ರಾನಿಕ್ಸ್, ಕ್ವಾಂಟಮ್, ಬಾಹ್ಯಾಕಾಶ ಭದ್ರತೆ ಮುಂತಾದ ಹೆಚ್ಚು ಕಾರ್ಯವ್ಯೂಹಾತ್ಮಕವಾದ ಕ್ಷೇತ್ರಗಳಲ್ಲಿ ಯುಎಸ್ಎ ಜೊತೆಗೆ ಭಾರತದ ಭಾಗವಹಿಸುವಿಕೆಯು ಹೆಚ್ಚಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT