ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇದು ಬ್ರಾಹ್ಮಿನ್ ಜೀನ್ಸ್.. ಒಂದು ಫೋಟೊ, 6.3 ಮಿಲಿಯನ್ ರೀಚ್! ಏನಿದು ಚರ್ಚೆ?

ಬೆಂಗಳೂರು ಮೂಲದ ಕಂಟೆಂಟ್ ಮಾರ್ಕೆಟಿಂಗ್ ಕಂಪನಿಯ ಸಿಇಒ ಎಂದು ಹೇಳಿಕೊಂಡಿರುವ ಅನುರಾಧಾ ತಿವಾರಿ ಎನ್ನುವರು ಎಕ್ಸ್‌ನಲ್ಲಿ ಎಬ್ಬಿಸಿದ ಚರ್ಚೆ
Published 26 ಆಗಸ್ಟ್ 2024, 13:59 IST
Last Updated 26 ಆಗಸ್ಟ್ 2024, 13:59 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ಯಾವ ವಿಚಾರ ಯಾವಾಗ ಸದ್ದು ಮಾಡುತ್ತದೆ ಎಂಬುದು ಹೇಳುವುದು ಕಷ್ಟ. ಅದರಲ್ಲೂ ಎಕ್ಸ್ (ಟ್ವಿಟರ್‌) ನಲ್ಲಿ ಪ್ರಕಟಗೊಳ್ಳುವ ಸಂಗತಿಗಳು ಬರೀ ತಮ್ಮ ಸುತ್ತಮುತ್ತ ಅಲ್ಲದೇ ರಾಜ್ಯ, ದೇಶ, ವಿದೇಶದಲ್ಲೂ ಭಾರಿ ಸದ್ದು ಮಾಡುತ್ತವೆ.

ಇದೀಗ ಎಕ್ಸ್‌ನಲ್ಲಿ ಮಹಿಳೆಯೊಬ್ಬರು ಹಂಚಿಕೊಂಡ ಫೋಟೋ ಹಾಗೂ ಅದಕ್ಕೆ ಸೇರಿಸಿದ ಎರಡು ಪದಗಳ ಶೀರ್ಷಿಕೆ ಟ್ವಿಟರ್‌ನಲ್ಲಿ ದೊಡ್ಡ ಅಲೆ ಎಬ್ಬಿಸಿದೆ.

ಬೆಂಗಳೂರು ಮೂಲದ ಕಂಟೆಂಟ್ ಮಾರ್ಕೆಟಿಂಗ್ ಕಂಪನಿಯ ಸಿಇಒ ಎಂದು ಹೇಳಿಕೊಂಡಿರುವ ಅನುರಾಧಾ ತಿವಾರಿ ಎನ್ನುವರು ತಮ್ಮ ಎಕ್ಸ್‌ ತಾಣದ ವೆರಿಫೈಡ್ ಖಾತೆಯಲ್ಲಿ ಆಗಸ್ಟ್ 22 ಗುರುವಾರ ಮಧ್ಯಾಹ್ನ 12.29 ಕ್ಕೆ ಫೋಟೊ, ಶೀರ್ಷಿಕೆ ಇರುವ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು.

ಅದರಲ್ಲಿ ಸ್ಕೂಟರ್ ಜೊತೆ ಏಳನೀರು ಹೀರುತ್ತಾ ಅನುರಾಧಾ ಅವರು ನಿಂತಿದ್ದಾರೆ. ಆ ಫೋಟೊಕ್ಕೆ ಬ್ರಾಹ್ಮಿನ್ ಜೀನ್ಸ್ (ಬ್ರಾಹ್ಮಣ ವಂಶವಾಹಿ ತನ್ನದು ಎಂಬರ್ಥದಲ್ಲಿ) ಶೀರ್ಷಿಕೆ ಹಾಕಿದ್ದರು.

ಸದ್ಯ ಈ ಪೋಸ್ಟ್ ಎಕ್ಸ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಪರ ವಿರೋಧದ ಅಭಿಪ್ರಾಯಗಳು ದಾಖಲಾಗುತ್ತಿವೆ. ಐದೇ ದಿನದಲ್ಲಿ ಈ ಪೋಸ್ಟ್ ಬರೋಬ್ಬರಿ 6.3 ಮಿಲಿಯನ್ (63 ಲಕ್ಷ) ಜನರಿಗೆ ರೀಚ್ ಆಗಿದೆ. 4.9 ಸಾವಿರಕ್ಕೂ ಅಧಿಕ ಕಮೆಂಟ್‌ಗಳು ಬಂದಿವೆ. 31 ಸಾವಿರಕ್ಕೂ ಅಧಿಕ ಜನ ಪೋಸ್ಟ್ ಅನ್ನು ಲೈಕ್ ಮಾಡಿದ್ದಾರೆ.

ಬ್ರಾಹ್ಮಿನ್ ಜೀನ್ಸ್.. ಡೀಲ್ ವಿತ್ ಇಟ್

ತಮ್ಮ ಪೋಸ್ಟ್ ವಿವಾದವಾಗುತ್ತಿದ್ದಂತೆಯೇ ಮತ್ತೊಂದಿಷ್ಟು ಸರಣಿ ಟ್ವೀಟ್ ಮಾಡಿರುವ ಅವರು, ‘ಯಾವುದೇ ಮೀಸಲಾತಿ ಸೌಲಭ್ಯಗಳನ್ನು ಪಡೆಯದೇ ಮೇಲೆ ಬಂದಿರುವ ನಮ್ಮ ಜನರು ತಾವು ಬ್ರಾಹ್ಮಣರು ಎಂದು ಹೇಳಿಕೊಳ್ಳಲು ಹೆಮ್ಮೆಪಡಬೇಕು‘ ಎಂದು ಹೇಳಿದ್ದಾರೆ.

‘ನಮ್ಮ ಪೂರ್ವಜರು ನಮಗೆ ಏನೂ ನೀಡದೇ ಹೋದರು. ನಾವು ಬಾಡಿಗೆ ಮನೆಯಲ್ಲಿದ್ದೇವೆ. ನಾನು ಶೇ 95 ಅಂಕ ತೆಗೆದರೂ ನನಗೆ ಉನ್ನತ ಕೋರ್ಸ್ ಕಲಿಯಲು ಪ್ರವೇಶ ಸಿಗಲಿಲ್ಲ. ಆರ್ಥಿಕವಾಗಿ ಉತ್ತಮರಾಗಿದ್ದರು ಮೀಸಲಾತಿ ಅಡಿ ಶೇ 60ರ ಅಂಕ ತೆಗೆದವರಿಗೂ ಪ್ರವೇಶ ಸಿಕ್ಕಿವೆ. ಪರಿಸ್ಥಿತಿ ಹೀಗಿದ್ದಾಗ ಮೀಸಲಾತಿಯಿಂದ ನೀನಗೇನು ಕಷ್ಟ ಎಂದು ಕೇಳುತ್ತೀರಾ?’ ಎಂದು ಪ್ರಶ್ನಿಸಿದ್ದಾರೆ.

‘ಮೀಸಲಾತಿ ಹೆಸರಿನಡಿ ಹಿಂದೂಗಳನ್ನು ಒಡೆಯಲಾಗುತ್ತಿದೆ. ಈಗ ಮೀಸಲಾತಿಯನ್ನು ಕೊನೆಗಾಣಿಸುವ ಸಮಯ ಬಂದಿದೆ’ ಎಂದು ಅವರು ಯೋಗಿ ಆದಿತ್ಯನಾಥ್ ಅವರ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ.

‘ಬ್ರಾಹ್ಮಣ ಎಂದು ಹೇಳಿದಾಕ್ಷಣ ನಿಜವಾದ ಜಾತಿವಾದಿಗಳು ಎದ್ದು ಕೂರುತ್ತಾರೆ. ಮೀಸಲಾತಿಯಿಂದ ನಾವು ಮೇಲೆ ಬಂದಿಲ್ಲ. ಎಲ್ಲವನ್ನೂ ಕಷ್ಟಪಟ್ಟು ಸಂಪಾದಿಸಿದ್ದೇವೆ. ನಾವು ಇಂತಹ ಪರಂಪರೆಯಿಂದ ಬಂದವರೆಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಇದೆ. ಡೀಲ್ ವಿತ್ ಇಟ್’ ಎಂದು #Brahmingenes, #ProudBrahmin ಅಭಿಯಾನ ಆರಂಭಿಸಿದ್ದಾರೆ.

‘ಪ್ರಸ್ತುತ ಬ್ರಾಹ್ಮಣರು ತಮ್ಮ ಪೂರ್ತಿ ಹೆಸರು ಹೇಳಿಕೊಳ್ಳಲು ಭಯಪಡುತ್ತಿದ್ದಾರೆ. ನಾವೇಕೆ ಹೆದರಬೇಕು. ನಮ್ಮನ್ನು ರಾಜಕಾರಣಿಗಳು, ಜಾತಿ ಹೋರಾಟಗಾರರು ವಿಲನ್‌ಗಳನ್ನಾಗಿ ಮಾಡಿದ್ದಾರೆ’ ಎಂದು ಅನುರಾಧಾ ಮತ್ತೊಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ.

‘ಹೆಮ್ಮೆಯ ದಲಿತ, ಹೆಮ್ಮೆಯ ಮುಸ್ಲಿಂ, ಹೆಮ್ಮೆಯ ಆದಿವಾಸಿ ಎಂದರೆ ನಡೆಯುತ್ತದೆ. ಹೆಮ್ಮೆಯ ಬ್ರಾಹ್ಮಣ ಎಂದರೆ ಸಮಸ್ಯೆ ಶುರುವಾಗುತ್ತಲ್ಲವಾ?’ ಎಂದು ಪ್ರಶ್ನಿಸಿದ್ದಾರೆ.

ಅನುರಾಧಾ ಅವರ ಈ ಟ್ವೀಟ್‌ಗೆ ಎಕ್ಸ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸೇರಿದಂತೆ ಅನೇಕ ಸೋಶಿಯಲ್ ಮೀಡಿಯಾಗಳಲ್ಲಿ ಅನೇಕರು ಚರ್ಚೆ ನಡೆಸಿದ್ದಾರೆ. #Brahmingenes ಬೆಂಬಲಿಸುವವರು ಜನಿವಾರ ಇರುವ ಫೋಟೊ ಹಾಕಿ #ProudBrahmin ಎಂದು ಹೇಳುತ್ತಿದ್ದಾರೆ.

ಶ್ರೇಷ್ಠತೆಯ ತೋರಿಕೆ ಹಾಗೂ ಮೂರ್ಖತನದ ಪ್ರದರ್ಶನ

ಇನ್ನೂ ಕೆಲವರು ಅನುರಾಧಾ ಅವರನ್ನು ಟೀಕಿಸಿದ್ದಾರೆ. ‘ನೀವೊಬ್ಬ ಜಾತಿವಾದಿ ಎಂಬುದನ್ನು ಸಾರಿ ಸಾರಿ ಹೇಳುತ್ತಿದ್ದೀರಾ ಅಷ್ಟೇ’ ಎಂದಿದ್ದಾರೆ.

‘ಹಾಗಿದ್ದರೇ ಜಾತಿ ಗಣತಿ ನಡೆಸಲಿ ಬಿಡಿ’ ಎಂದು ಕೆಲವರು ಅನುರಾಧಾ ಅವರಿಗೆ ತಿವಿದಿದ್ದಾರೆ.

‘ಇದು ಶ್ರೇಷ್ಠತೆಯ ತೋರಿಕೆ ಹಾಗೂ ಮೂರ್ಖತನದ ಪ್ರದರ್ಶನ. ನಿಮ್ಮ ಉನ್ನತ ಪರಂಪರೆಯ ನಡುವೆಯೂ ನೀವು ಏಕೆ ಸಾಧಾರಣವಾಗಿ ಉಳಿದಿರಿ ಎಂಬುದು ನಿಮ್ಮ ಪೋಸ್ಟ್ ನೋಡಿದರೆ ಗೊತ್ತಾಗುತ್ತದೆ’ ಎಂದು ದೀ‍ಪಾಲಿ ಸಿಂಗ್ ಎನ್ನುವರು ಹೇಳಿದ್ದಾರೆ.

‘ಅನುರಾಧಾ ಅವರು ತಮ್ಮ ಜಾತಿವಾದಿತನವನ್ನು ಎತ್ತಿ ತೋರಿಸುತ್ತಿದ್ದಾರೆ’ ಎಂದು ಹಲವರು ಹೇಳಿದ್ದಾರೆ.

ಲೇಖನ ಚೇತನ್ ಭಗತ್ ಪ್ರತಿಕ್ರಿಯಿಸಿ, ‘ಜಾತಿಗಳನ್ನು ಬೆಳೆಸಿದಷ್ಟೂ ಕ್ರೋಢಿಕೃತ ಹಿಂದೂ ಮತಗಳು ಒಡೆಯುತ್ತವೆ. ದೇಶದಲ್ಲಿ ಪ್ರತಿ ಪಕ್ಷಗಳು ಇದನ್ನು ಅರ್ಥ ಮಾಡಿಕೊಂಡು ಆಟವಾಡುತ್ತಿವೆ. #Brahmingenes ಅಭಿಯಾನವೂ ಸಹ ಆ ನಿಟ್ಟಿನಲ್ಲಿ ತೋರುವಂತದ್ದು’ ಎಂದು ಟ್ವೀಟ್ ಮಾಡಿದ್ದಾರೆ.

ಅಂದಹಾಗೆ ಅನುರಾಧಾ ತಿವಾರಿ ಅವರಿಗೆ ಎಕ್ಸ್‌ ತಾಣದಲ್ಲಿ 60 ಸಾವಿರಕ್ಕೂ ಹೆಚ್ಚು ಫಾಲೋವರ್‌ಗಳಿದ್ದಾರೆ. ಅವರು 2022ರಲ್ಲೂ ಟ್ವಿಟರ್‌ನಲ್ಲಿ ಮೀಸಲಾತಿ ವಿರುದ್ಧ ಹೇಳಿಕೆ ನೀಡಿದ್ದರು. ಇವಾಗಿನ ಪೋಸ್ಟ್ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT