ಶುಕ್ರವಾರ, ಅಕ್ಟೋಬರ್ 22, 2021
29 °C

ಮರಳಿದ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಸೇವೆ: ಟ್ವಿಟರ್‌ನಲ್ಲಿ ಮುಗಿಯದ ಟ್ರೆಂಡ್‌!

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಮ್‌ ಆ್ಯಪ್‌ಗಳು–ಪ್ರಾತಿನಿಧಿಕ ಚಿತ್ರ

ವಾಷಿಂಗ್ಟನ್‌: ನಿತ್ಯದ ಬಹುತೇಕ ಸಂವಹನಗಳಿಗೆ ಮೆಸೇಜಿಂಗ್‌ ಅಪ್ಲಿಕೇಷನ್‌ಗಳ ಮೊರೆ ಹೋಗಿರುವವರು ಸೋಮವಾರ ಸಂಜೆಯಿಂದ ಫೇಸ್‌ಬುಕ್‌ ಸಮೂಹದ ಆ್ಯಪ್‌ಗಳಿಗೆ 'ಶಾಪ' ಹಾಕಿದ್ದಾರೆ! ಟ್ವಿಟರ್‌ಗೆ ಬಂದ ಬಳಕೆದಾರರು ಫೇಸ್‌ಬುಕ್‌ ಮೆಸೆಂಜರ್‌, ವಾಟ್ಸ್‌ಆ್ಯಪ್‌ ಹಾಗೂ ಇನ್‌ಸ್ಟಾಗ್ರಾಮ್‌ ಆ್ಯಪ್‌ಗಳ ಬಳಕೆಯಲ್ಲಿ ವ್ಯತ್ಯಯ ಎದುರಾಗಿರುವುದನ್ನು ಹೇಳಿಕೊಂಡರು. ಕೆಲವರು ಸಿಟ್ಟಿಗೆದ್ದು ಫೇಸ್‌ಬುಕ್‌ ಅಳಿಸಿ ಹಾಕುವಂತೆ ಟ್ರೆಂಡ್ ಸೃಷ್ಟಿಸಿದರು, ಇನ್ನೂ ಕೆಲವರು ಮೀಮ್ಸ್‌ ಹರಿಬಿಟ್ಟರು...ಈ ನಡುವೆ 'ವ್ಯತ್ಯಯ ಸರಿಪಡಿಸಲಾಗಿದೆ, ಅಡಚಣೆಗೆ ವಿಷಾದಿಸುತ್ತೇವೆ' ಎಂದು ಫೇಸ್‌ಬುಕ್‌ ಪ್ರಕಟಿಸಿದೆ.

ಜಾಗತಿಕವಾಗಿ ಫೇಸ್‌ಬುಕ್‌ನ ಸಾಮಾಜಿಕ ಮಾಧ್ಯಮ ಆ್ಯಪ್‌ಗಳಲ್ಲಿ ವ್ಯತ್ಯಯ ಎದುರಾಗುತ್ತಿದ್ದಂತೆ ಅಮೆರಿಕ ಷೇರುಪೇಟೆಯಲ್ಲಿ ಫೇಸ್‌ಬುಕ್‌ ಷೇರು ಬೆಲೆ ಶೇ 5ರಷ್ಟು ಕುಸಿತ ಕಂಡಿತು. ಆ್ಯಪ್‌ಗಳ ಸೇವೆ ಪುನರಾರಂಭವಾಗುತ್ತಿದ್ದಂತೆ ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್ಬರ್ಗ್ ಕ್ಷಮೆಯಾಚಿಸಿದ್ದಾರೆ.

 

'ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌, ವಾಟ್ಸ್‌ಆ್ಯಪ್‌ ಮತ್ತು ಮೆಸೆಂಜರ್‌ ಆನ್‌ಲೈನ್‌ಗೆ ಮರಳುತ್ತಿವೆ. ಇಂದು ಎದುರಾದ ವ್ಯತ್ಯಯಕ್ಕೆ ಕ್ಷಮೆಕೋರುತ್ತೇನೆ... ನೀವು ಕಾಳಜಿ ವಹಿಸುವ ವ್ಯಕ್ತಿಗಳೊಂದಿಗೆ ಸದಾ ಸಂಪರ್ಕದಲ್ಲಿರಲು ನಮ್ಮ ಸೇವೆಗಳ ಮೇಲೆ ನೀವು ಎಷ್ಟು ಅವಲಂಬಿತರಾಗಿರುವಿರಿ ಎಂದು ನನಗೆ ತಿಳಿದಿದೆ' ಎಂದು ಜುಕರ್ಬರ್ಗ್ ಪೋಸ್ಟ್‌ ಮಾಡಿದ್ದಾರೆ.

 

'ದೊಡ್ಡ ಜನ ಸಮೂಹ ಮತ್ತು ವ್ಯಾಪಾರಗಳು ಜಗತ್ತಿನಾದ್ಯಂತ ನಮ್ಮ ಮೇಲೆ ಅವಲಂಬಿತರಾಗಿದ್ದಾರೆ: ಕ್ಷಮೆಯಿರಲಿ. ನಮ್ಮ ಆ್ಯಪ್‌ಗಳು ಮತ್ತು ಸೇವೆಗಳನ್ನು ಮರಳಿ ತರಲು ಸಾಕಷ್ಟು ಪ್ರಯತ್ನಿಸುತ್ತಿದ್ದೇವೆ ಹಾಗೂ ಈಗ ಅವುಗಳ ಕಾರ್ಯಾಚರಣೆ ಆರಂಭವಾಗಿದೆ... ' ಎಂದು ಫೇಸ್‌ಬುಕ್‌ ಟ್ವೀಟಿಸಿದೆ.

 

 

ಸರ್ವರ್‌ ಡೌನ್‌, ಡಿಲೀಟ್‌ ಫೇಸ್‌ಬುಕ್‌ ಹ್ಯಾಷ್‌ಟ್ಯಾಗ್‌ಗಳು ಟ್ವಿಟರ್‌ನಲ್ಲಿ ಇನ್ನೂ ಟ್ರೆಂಡಿಂಗ್‌ನಲ್ಲಿವೆ. ಐದಾರು ಗಂಟೆಗಳು ಫೇಸ್‌ಬುಕ್ ಆ್ಯಪ್‌ಗಳಲ್ಲಿ ವ್ಯತ್ಯಯ ಎದುರಾಗಿತ್ತು.

 

350 ಕೋಟಿಗೂ ಹೆಚ್ಚು ಜನರು ಫೇಸ್‌ಬುಕ್‌ ಮತ್ತು ಅದರ ಆ್ಯಪ್‌ಗಳನ್ನು ಬಳಸಿ ಸಂವಹನ ಹಾಗೂ ವ್ಯಾಪಾರಗಳನ್ನು ನಡೆಸುತ್ತಿದ್ದಾರೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ಪ್ರಕಟಿಸಿದೆ.

 

 

 

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು