ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಕ್ ನ್ಯೂಸ್ ಗುರು ಅಭಿಷೇಕ್‍ ಮಿಶ್ರಾಗೆ ಕಾಂಗ್ರೆಸ್ ರಕ್ಷಣೆ ನೀಡುತ್ತಿರುವುದೇಕೆ?

Last Updated 9 ಫೆಬ್ರುವರಿ 2019, 16:18 IST
ಅಕ್ಷರ ಗಾತ್ರ

ನವದೆಹಲಿ:ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಸುಳ್ಳು ಸುದ್ದಿಗಳಿಂದಾಗಿ ದೇಶದಲ್ಲಿ ವ್ಯಕ್ತಿಗಳ ಮೇಲೆಗುಂಪು ಹಲ್ಲೆ ಪ್ರಕರಣಗಳು ಹೆಚ್ಚುತ್ತಿದ್ದಂತೆ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಆದೇಶಿಸಿತ್ತು.
ಸುಳ್ಳು ಸುದ್ದಿ ಸೃಷ್ಟಿಸಿ ಅದನ್ನು ಹರಿಬಿಡುವ ಜನರ ಮಾಹಿತಿಸಂಗ್ರಹಿಸಲು ವಿಶೇಷ ಕಾರ್ಯ ಪಡೆ ರಚಿಸುವಂತೆ ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ನಿರ್ದೇಶಿಸಿತ್ತು.ಆದಾಗ್ಯೂ, ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೇರಿರುವ ಕಾಂಗ್ರೆಸ್ ಸರ್ಕಾರ ಮಾತ್ರ ಇದಕ್ಕೆ ತದ್ವಿರುದ್ಧ ಕಾರ್ಯವನ್ನು ಮಾಡುತ್ತಿದೆ. ಈ ಬಗ್ಗೆ ನ್ಯೂಸ್ ಲಾಂಡ್ರಿ ಪ್ರಕಟಿಸಿದ ವರದಿ ಹೀಗಿದೆ.

ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವಬದಲು ಮಧ್ಯ ಪ್ರದೇಶದಲ್ಲಿರುವ ಕಾಂಗ್ರೆಸ್ ಸರ್ಕಾರ ಫೇಕ್ ನ್ಯೂಸ್‍ಗಳ ಸೃಷ್ಟಿಕರ್ತ 21ರ ಹರೆಯದ ಅಭಿಷೇಕ್ ಮಿಶ್ರಾಗೆ ಪೊಲೀಸ್ ರಕ್ಷಣೆ ನೀಡಿ ಕಾಪಾಡುತ್ತಿದೆ.

ಯಾರು ಈ ಅಭಿಷೇಕ್ ಮಿಶ್ರಾ?
ViralinIndia.net ಎಂಬ ವೆಬ್‍ಸೈಟ್ ಮತ್ತು ತಮ್ಮ ಟ್ವಿಟರ್ ಖಾತೆ ಮೂಲಕ ಸುಳ್ಳು ಸುದ್ದಿ ಹಬ್ಬಿಸುವ ವ್ಯಕ್ತಿ ಎಂದು ಮಿಶ್ರಾ ಮೇಲೆ ಆರೋಪವಿದೆ.ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ಶಿವರಾಜ್ ಸಿಂಗ್ ಚೌಹಾಣ್ ಅವರ ಬಗ್ಗೆ ನಿಂದನಾತ್ಮಕ ಮತ್ತು ಸುಳ್ಳು ಸುದ್ದಿ ಪ್ರಕಟಿಸಿದ ಆರೋಪದಲ್ಲಿ 2016 ನವೆಂಬರ್‌ನಲ್ಲಿ ಮಿಶ್ರಾನನ್ನು ದೆಹಲಿ ಪೊಲೀಸರ ಸೈಬರ್ ಸೆಲ್ ವಶ ಪಡಿಸಿತೊಂಡಿತ್ತು.ಮಿಶ್ರಾ ಪ್ರಕಟಿಸಿದ ಸುದ್ದಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ದೆಹಲಿ ಮೂಲದ ಮಹಿಳೆಯೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಈತನನ್ನು ಬಂಧಿಸಿದ್ದರು. ಭೋಪಾಲದ ಕೊಹಿಫಿಜಾ ಪ್ರದೇಶದಲ್ಲಿರುವ ಬಾಡಿಗೆ ಮನೆಯಿಂದ ಮಿಶ್ರಾ ಅವರನ್ನು ಬಂಧಿಸಿ ಸ್ಥಳೀಯ ಕೋರ್ಟಿಗೆ ಹಾಜರು ಪಡಿಸಲಾಗಿತ್ತು.7 ದಿನಗಳ ಕಾಲ ಪೊಲೀಸ್ ವಶದಲ್ಲಿದ್ದ ಮಿಶ್ರಾ ಜನವರಿ 29ರಂದು ಜಾಮೀನು ಪಡೆದು ಹೊರಬಂದಿದ್ದರು.

ಮಿಶ್ರಾ ಮಧ್ಯಪ್ರದೇಶದ ಕಾಂಗ್ರೆಸ್ ನೇತಾರರೊಂದಿಗೆ ಮತ್ತು ಕಾಂಗ್ರೆಸ್ ಐಟಿ ಸೆಲ್‍ ಜತೆ ನಿಕಟ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.ಪೊಲೀಸರು ಈತನನ್ನು ಬಂಧಿಸಿದ್ದಾರೆ ಎಂದು ತಿಳಿದ ಕೂಡಲೇ ಮಧ್ಯಪ್ರದೇಶ ಸರ್ಕಾರದ ಗೃಹ ಸಚಿವಾಲಯದೆಹಲಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿತ್ತು.ರಾಜ್ಯ ಪೊಲೀಸರಿಗೆ ತಿಳಿಸದೆ ದೆಹಲಿ ಪೊಲೀಸರು ಮಿಶ್ರಾನನ್ನು ಬಂಧಿಸಿದ್ದನ್ನು ಖಂಡಿಸಿ ಗೃಹ ಸಚಿವಾಲಯಈ ಪತ್ರ ಬರೆದಿತ್ತು.

ಈ ವಿಷಯಕ್ಕೆ ಸಂಬಂಧಿಸಿ ಮಧ್ಯಪ್ರದೇಶದ ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯದ ಜಂಟಿ ನಿರ್ದೇಶಕ ಸುರೇಶ್ ಗುಪ್ತಾ ಅವರು ಮಾಧ್ಯಮ ಪ್ರಕಟಣೆಯನ್ನೂ ನೀಡಿದ್ದರು.ಸರ್ಕಾರದ ಆಪ್ತ ಮೂಲಗಳ ಪ್ರಕಾರ ಮಿಶ್ರಾ ಜನವರಿ29ರಂದು ಬಂಧಮುಕ್ತರಾಗಿ ಭೋಪಾಲ್‍ಗೆ ಬಂದಿದ್ದಾರೆ.ಫೆಬ್ರುವರಿ 1ರಂದು ಮುಖ್ಯಮಂತ್ರಿ ಕಮಲ್ ನಾಥ್, ಮಿಶ್ರಾ ಅವರನ್ನು ಮಂತ್ರಾಲಯ ವಲ್ಲಭ್ ಭವನ್‍ಗೆ ಆಮಂತ್ರಿಸಿದ್ದರು.ಅಲ್ಲಿ ನೂತನ ಡಿಜಿಪಿ ವಿಕೆ ಸಿಂಗ್ ಅವರ ಉಪಸ್ಥಿತಿಯಲ್ಲಿ ಮಿಶ್ರಾ ಅವರಿಗೆ ಪೊಲೀಸ್ ರಕ್ಷಣೆ ನೀಡುವ ಬಗ್ಗೆ ಸಿಎಂ ನಿರ್ದೇಶನ ನೀಡಿದ್ದರು.

ಮಿಶ್ರಾಗೆ ಪೊಲೀಸ್ ರಕ್ಷಣೆ ಯಾಕೆ?
ಮಿಶ್ರಾಗೆ ಪೊಲೀಸ್ ರಕ್ಷಣೆ ಯಾಕೆ? ಎಂದು ನ್ಯೂಸ್ ಲಾಂಡ್ರಿ ಹಲವಾರು ಉನ್ನತ ಅಧಿಕಾರಿಗಳಲ್ಲಿ ಕೇಳಿದಾಗ ಇದಕ್ಕೆ ಯಾರೂ ಸ್ಪಷ್ಟ ಉತ್ತರ ನೀಡಿಲ್ಲ. ತಾನು ಮನವಿ ಮಾಡಿದ್ದರಿಂದ ನನಗೆ ಪೊಲೀಸ್ ರಕ್ಷಣೆ ನೀಡಲಾಗಿದೆ ಎಂದು ಮಿಶ್ರಾ ಹೇಳುತ್ತಿದ್ದಾರೆ. ನಾನು ಮುಖ್ಯಮಂತ್ರಿಯವರಿಗೆ ಲಿಖಿತ ಮನವಿ ಸಲ್ಲಿಸಿದ್ದು, ಅವರೇ ಡಿಜಿಪಿ ಮತ್ತು ರಾಜ್ಯ ಗುಪ್ತದಳ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.
ತಾನು ಪಕ್ಷೇತರ ಎಂದು ಹೇಳಿಕೊಳ್ಳುವ ಮಿಶ್ರಾ, ನನಗೆ ಕಾಂಗ್ರೆಸ್ ಪಕ್ಷದೊಂದಿಗೆ ನಂಟು ಇಲ್ಲ ಎಂದಿದ್ದಾರೆ. ಆದರೆ ಅವರ ಫೇಸ್‍ಬುಕ್ ಖಾತೆ ನೋಡಿದರೆ ಅದರಲ್ಲಿ ರಾಹುಲ್ ಗಾಂಧಿ ಮತ್ತು ಕಮಲ್ ನಾಥ್ ಜತೆ ತೆಗೆದುಕೊಂಡ ಫೋಟೊಗಳಿವೆ.

ಮಿಶ್ರಾ ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಾ?
ಮಿಶ್ರಾ ಅವರViralinIndia.net ಎಂಬವೆಬ್‍ಸೈಟ್‍ನ ಫೇಸ್‍ಬುಕ್ ಪುಟ ನೋಡಿದರೆ ಇದಕ್ಕೆ ಉತ್ತರ ಸಿಗುತ್ತದೆ.ViralinIndia.net ಎಂಬ ವೆಬ್‍ಸೈಟ್ ಕಳೆದ ತಿಂಗಳಿನಿಂದ ರದ್ದು ಆಗಿದೆ.ದುರಪಯೋಗದ ಹಿನ್ನೆಲೆಯಲ್ಲಿ ಈ ವೆಬ್‍ಸೈಟ್ ರದ್ದು ಆಗಿದ್ದು, ಈ ವೆಬ್‍ಸೈಟ್‍ಗೆ 10 ಕೋಟಿ ಓದುಗರಿದ್ದಾರೆ ಎಂದು ಹೇಳಲಾಗುತ್ತಿದೆ.

2015ರಲ್ಲಿ ಆರಂಭಿಸಿದ ಈತನ ಫೇಸ್‍ಬುಕ್ ಪುಟದಲ್ಲಿರುವ ಮಾಹಿತಿ ಪ್ರಕಾರ ViralinIndia.net ವೆಬ್‍ಸೈಟನ್ನು 5 ಕೋಟಿ ಮಂದಿ ಪ್ರತಿದಿನ ಓದುತ್ತಾರೆ.ಇದರಲ್ಲಿ ಕೆಲವು ಸುದ್ದಿಗಳಿಗೆ 5 ಲಕ್ಷಕ್ಕಿಂತಲೂಹೆಚ್ಚು ಲೈಕ್ ಸಿಗುತ್ತದೆ. ಇದೇ ಸುದ್ದಿಯನ್ನು ಟ್ವೀಟ್ ಕೂಡಾ ಮಾಡಲಾಗುತ್ತದೆ.

ಮಿಶ್ರಾನ ಟ್ವಿಟರ್ ಖಾತೆ —@meamabhishek ಗೆ 64,000 ಮಂದಿ ಫಾಲೋವರ್‌ಗಳಿದ್ದಾರೆ. ದೆಹಲಿ ಪೊಲೀಸರು ಈತನನ್ನು ಬಿಡುಗಡೆ ಮಾಡಿದ ನಂತರ ಈತ ಎಲ್ಲ ಪೋಸ್ಟ್ ಗಳನ್ನು ಡಿಲೀಟ್ ಮಾಡಿದ್ದಾರೆ.

ViralinIndia.net ವೆಬ್‍ಸೈಟ್‍ನ ಟ್ವಿಟರ್ ಹ್ಯಾಂಡಲ್ನಿಂದ ಟ್ವೀಟ್ ಮಾಡಿದ ಮತ್ತು ಅದನ್ನುರೀಟ್ವೀಟ್ ಮಾಡಿದ ಕೆಲವೊಂದು ಪೋಸ್ಟ್ ಗಳು ಇಲ್ಲಿವೆ

1. ದಲಿತ ವಿದ್ಯಾರ್ಥಿಗಳು ರಾಷ್ಟ್ರಪತಿ ರಾಮ ನಾಥ್ ಕೋವಿಂದ್ ಅವರಿಂದ ಪದಕ ಸ್ವೀಕರಿಸಲು ನಿರಾಕರಿಸಿದರು.ಕ್ಷಮಿಸಿ, ನಾವು ನಿಮ್ಮಿಂದ ಪದಕಗಳನ್ನು ಸ್ವೀಕರಿಸುವುದಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

2.ಬಿಜೆಪಿ ನೇತಾರರೊಬ್ಬರು ಅಪ್ಪ ಮಗಳ ಸಂಬಂಧಕ್ಕೆ ಚ್ಯುತಿ ತಂದಿದ್ದಾರೆ.


3. ಮನಮೋಹನ್ ಸಿಂಗ್ ಅವರನ್ನು ಗಡ್ಡ ಮೀಸೆ ಇಲ್ಲದೆ ತೋರಿಸಿದ್ದಕ್ಕಾಗಿ ಸಿಖ್ ಸಮುದಾಯ ರೊಚ್ಚಿಗೆದ್ದು, ಅನುಪಮ್ ಖೇರ್ ಅವರಿಗೆ ಬುದ್ಧಿ ಕಲಿಸಲು ಮುಂದಾಗಿದ್ದಾರೆ.

4. ವಾಸ್ತವ್ಯಕ್ಕೆ ಹೋಟೆಲ್ ಸಿಗದ ಕಾರಣ ಮೋದಿ ಕಾಂಗ್ರೆಸ್ ನೇತಾರ ಸಿಂಧ್ಯಾ ಅರಮನೆಯಲ್ಲಿ ತಂಗಿದ್ದಾರೆ.


5. ಭಾರತೀಯ ಸೇನೆಯನ್ನು ಅವಮಾನಿಸಿ ಪೇಚಿಗೆ ಸಿಲುಕಿದ ಮೋದಿ

ಈ ವೆಬ್‍ಸೈಟ್‍ನಲ್ಲಿ ಪ್ರಕಟವಾದ ಸುದ್ದಿ ಬಗ್ಗೆ ನ್ಯೂಸ್ ಲಾಂಡ್ರಿ, ಮಿಶ್ರಾ ಅವರಲ್ಲಿ ಮಾತನಾಡಿದಾಗ ಅವರ ಉತ್ತರ ಹೀಗಿತ್ತು,
ಮೊದಲನೆಯದಾಗಿ ಫೇಕ್ ನ್ಯೂಸ್ ಬಗ್ಗೆ ಯಾವುದೇ ನಿಯಮಗಳು ಇಲ್ಲ.ಹಾಗಾಗಿ ನಾನು ಸುಳ್ಳು ಸುದ್ದಿ ಸೃಷ್ಟಿಸಿದ್ದೇನೆ ಎಂದು ಯಾರು ಬೇಕಾದರೂ ಆಪಾದನೆ ಮಾಡಬಹುದು. ಬೇರೆ ಯಾರಾದರೂ ಸುಳ್ಳು ಸುದ್ದಿ ಸೃಷ್ಟಿ ಮಾಡಿ ಅದು ನಾನು ಮಾಡಿದ್ದುಎಂದು ಆರೋಪ ಹೊರಿಸಬಹುದು.ಅದಕ್ಕೆ ಯಾವ ಕಾನೂನುಗಳೂ ಇಲ್ಲ.

ಹಾಗಾದರೆ ನಿಮ್ಮನ್ನು ಬಂಧಿಸಿದ್ದು ಯಾಕೆ?
ನಾನು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ್ದೇನೆ ಎಂಬ ಆರೋಪದಲ್ಲಿ ನನ್ನನ್ನು ಬಂಧಿಸಲಾಗಿತ್ತು.ನಾನು ಯಾವ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದೇನೆ ಎಂಬುದು ನನಗೆ ಗೊತ್ತಿಲ್ಲ.

ಒಂದೂವರೆ ವರ್ಷದ ಹಿಂದೆ, ಮಿಶ್ರಾ ಅವರು ಚಂದ್ರನಲ್ಲಿ ನಮಾಜ್ ಮಾಡಲಾಗಿದೆ ಎಂಬ ಸುದ್ದಿ ಪ್ರಕಟಿಸಿದ್ದರು.ಈ ಬಗ್ಗೆ ಪ್ರತಿಕ್ರಿಯಿಸಿದ ಮಿಶ್ರಾ, ಟೈಮ್ಸ್ ಆಫ್ ಇಂಡಿಯಾದ ಮೂರ್ಖ ಪತ್ರಕರ್ತರು ಅದನ್ನು ಫೇಕ್ ಎಂದು ಹೇಳಿದರು.ಆ ಸುದ್ದಿ ಸತ್ಯ.ನಾಸಾ ಬಿಡುಗಡೆ ಮಾಡಿದ ವಿಡಿಯೊ ಯೂಟ್ಯೂಬ್‍ನಲ್ಲಿದೆ.ಅಮೆರಿಕದ ಪತ್ರಕರ್ತರೊಬ್ಬರು ಚಂದ್ರನಲ್ಲಿಗೆ ಹೋಗಿ ಅಲ್ಲಿ ನಮಾಜ್ ಮಾಡಿದ್ದರು.ನಿಮಗೆ ಅಗತ್ಯವಿದ್ದರೆ ನಾನು ಆ ಯೂಟ್ಯೂಬ್ ವಿಡಿಯೊ ತೋರಿಸುತ್ತೇನೆ ಎಂದು ನಾನು ನ್ಯಾಯಾಧೀಶರಲ್ಲಿಯೂ ಹೇಳಿದ್ದೆ.
ಇದೆಲ್ಲವೂ ಬಿಜೆಪಿ ಮಾಡುತ್ತಿರುವ ರಾಜಕೀಯ ಆಟಗಳು.ಚುನಾವಣೆ ಸಮೀಪಿಸುತ್ತಿದೆಯಲ್ಲಾ, ಹಾಗಾಗಿ ಅವರು ನನ್ನನ್ನು ಬಂಧಿಸಿದರು.

ಏತನ್ಮಧ್ಯೆ, ಈತನ ಮೇಲಿರುವ ಇನ್ನಿತರ ಆರೋಪಗಳ ಬಗ್ಗೆ ಕೇಳಿದಾಗ ಉತ್ತರಿಸಲು ನಿರಾಕರಿಸಿದ ಮಿಶ್ರಾ, ಈ ಬಗ್ಗೆ ನಾನು ನ್ಯಾಯಾಲಯದಲ್ಲಿ ಹೇಳುತ್ತೇನೆ ಎಂದಿದ್ದಾರೆ.
ViralinIndia.net ನಲ್ಲಿ ಪ್ರಕಟವಾದ ಸುದ್ದಿಯೊಂದು ಹೀಗಿದೆ.


ಅರಬ್ ದೊರೆ ತಮ್ಮ ಶಿಷ್ಟಾಚಾರ ಸಂಹಿತೆ ಉಲ್ಲಂಘಿಸಿ ರಾಹುಲ್ ಗಾಂಧಿಯನ್ನು ಯುಎಇ ಸರ್ಕಾರದ ಫೈಟರ್ ಜೆಟ್ ನಲ್ಲಿ ಭಾರತಕ್ಕೆ ಕಳುಹಿಸಿದ್ದರು.ಈ ಬಗ್ಗೆ ಕೇಳಿದಾಗ ಮಿಶ್ರಾ, ರಾಹುಲ್ ಗಾಂಧಿ ದುಬೈ ಸರ್ಕಾರದ ವಿಮಾನದಲ್ಲಿ ಬಂದಿದ್ದರು.ಅದು ಯಾವ ರೀತಿಯ ವಿಮಾನ ಬೇಕಾದರೂ ಆಗಿರುತ್ತದೆ ಎಂದಿದ್ದಾರೆ.

ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಮೋದಿಯನ್ನು ನಿರುಪಯೋಗಿ ಪ್ರಧಾನಿ ಎಂದಿದ್ದಾರೆ- ಈ ಸುದ್ದಿ ಬಗ್ಗೆ ಕೇಳಿದಾಗ ಸಿಡಿಮಿಡಿಗೊಂಡ ಮಿಶ್ರಾ, ಊರ್ಜಿತ್ ಪಟೇಲ್ ಮತ್ತು ಮೋದಿಗೆ ಸಂಬಂಧಿಸಿದ ಯಾವುದೇ ಸುದ್ದಿಯನ್ನು ನಾನು ಪೋಸ್ಟ್ ಮಾಡಿಲ್ಲ, ನಮ್ಮ ವೆಬ್‍ಸೈಟ್‍ನಲ್ಲಿ ಬೇರೆಯವರು ಈ ಸುದ್ದಿಯನ್ನು ಹಾಕಿಲ್ಲ ಎಂದು ನೀವು ಹೇಗೆ ಹೇಳುತ್ತೀರಾ? ಇದೊಂದು ಫೇಕ್ ಸ್ಕ್ರೀನ್ ಶಾಟ್ ಎಂದು ಉತ್ತರಿಸಿದ್ದಾರೆ.

ಅಮಿತ್ ಶಾ ಮತ್ತು ಅರುಣ್ ಜೇಟ್ಲಿ ಚುನಾವಣೆಯಲ್ಲಿ ಸೋತ ಶಿವರಾಜ್ ಕುಮಾರ್ ಅವರನ್ನು ಅವಮಾನಿಸಿದರು ಎಂಬ ಸುದ್ದಿ ಇದೇ ವೆಬ್‍ಸೈಟ್‍ನಲ್ಲಿ ಪ್ರಕಟವಾಗಿದೆ.ಅಮಿತ್ ಶಾ ಬೋಲೆ ಪೀಚೆ ಹಟ್ ಶಿವರಾಜ್, ಜೇಟ್ಲಿ ನೇ ಭಿ ಝಟ್ಕಾ ಹಾಥ್ (ಅಮಿತ್ ಶಾ ಹೇಳಿದರು ಹಿಂದೆ ಸರಿ ಶಿವರಾಜ್, ಜೇಟ್ಲಿ ಕೂಡಾ ಕೈ ಹಿಡಿದು ಹಿಂದೆಳೆದರು) ಎಂಬ ಶೀರ್ಷಿಕೆ ನೀಡಿ ಫೋಟೊವೊಂದನ್ನು ಪ್ರಕಟಿಸಲಾಗಿದೆ.ಈ ಬಗ್ಗೆ ಮಿಶ್ರಾ ಅವರಲ್ಲಿ ಕೇಳಿದಾಗ ಇದು ನಮ್ಮ ಪೋಸ್ಟ್ ಅಲ್ಲ, ನಾವು ಪತ್ರಿಕಾದಿಂದ ತೆಗೆದು ಪ್ರಕಟಿಸಿದ್ದೇವೆ ಎಂದಿದ್ದಾರೆ. ಈ ಬಗ್ಗೆ ಪತ್ರಿಕಾ ವನ್ನು ಪರಿಶೀಲಿಸಿದಾಗ ಅದರಲ್ಲಿ ಇಂಥದೊಂದು ಸುದ್ದಿ ಪ್ರಕಟವಾಗಿಲ್ಲ.

ಜನವರಿ 31ರಂದು ಫ್ಯಾಕ್ಟ್ ಚೆಕಿಂಗ್ ವೆಬ್‍ಸೈಟ್ ಬೂಮ್, ಮಿಶ್ರಾ ಅವರ ಸಂದರ್ಶನ ನಡೆಸಿತ್ತು. The Rise And Fall of Fake News Site ‘Viral In Indiaಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಈ ಲೇಖನದಲ್ಲಿ ಮಿಶ್ರಾ ಅವರ ವೆಬ್‍ಸೈಟ್‍ನಲ್ಲಿ ಪ್ರಕಟವಾದ ಹಲವಾರು ಸುದ್ದಿಗಳ ಫ್ಯಾಕ್ಟ್ ಚೆಕ್ ಮಾಡಿತ್ತು ಬೂಮ್.
ನಮ್ಮ ಸಂವಾದದ ನಡುವೆ ಮಿಶ್ರಾ ಅವರು ತಾನು ಸತ್ಯವಾದ ಸುದ್ದಿಗಳನ್ನೇ ಪ್ರಕಟಿಸುತ್ತಿದ್ದೆ ಎಂದು ವಾದಿಸಿ, ಫ್ಯಾಕ್ಟ್ ಚೆಕ್ ಮಾಡುವ ಬೂಮ್ ಮತ್ತು ಆಲ್ಟ್ ನ್ಯೂಸ್ ಗೆ ತಕ್ಕ ಪಾಠ ಕಲಿಸುತ್ತೇನೆ ಎಂದು ಮೂರು ನಾಲ್ಕು ಬಾರಿ ಹೇಳಿದ್ದಾರೆ. ನನ್ನ ವೆಬ್‍ಸೈಟ್‍ನಲ್ಲಿ ಪ್ರಕಟವಾದ ಸುದ್ದಿಗಳು ಸುಳ್ಳು ಎಂದು ಹೇಳಿ ಫ್ಯಾಕ್ಟ್ ಚೆಕಿಂಗ್ ವೆಬ್‍ಸೈಟ್‍ಗಳು ಜನರ ದಾರಿ ತಪ್ಪಿಸುತ್ತಿವೆ ಎಂದು ಮಿಶ್ರಾ ಆರೋಪಿಸಿದ್ದಾರೆ.

ನನ್ನ ಬಗ್ಗೆ ಯಾರ ಬಳಿಯೂ ಸಾಕ್ಷ್ಯಗಳಿಲ್ಲ. ಫೇಕ್ ನ್ಯೂಸ್ ಬಗ್ಗೆ ಭಾರತದಲ್ಲಿ ಯಾವುದೇ ಕಾನೂನುಗಳಿಲ್ಲ.ಹಾಗಾಗಿ ಯಾರಿಗೆ ಬೇಕಾದರೂ ನನ್ನ ಮೇಲೆ ಆಪಾದನೆ ಹೊರಿಸಬಹುದು ಅಂತಾರೆ ಮಿಶ್ರಾ.

ಬೂಮ್ ನಿರ್ವಾಹಕ ಸಂಪಾದಕಿ ಜೆನ್ಸಿ ಜೇಕಬ್ ಮತ್ತು ಆಲ್ಟ್ ನ್ಯೂಸ್ ನ ಪ್ರತೀಕ್ ಸಿನ್ಹಾ ಅವರನ್ನು ಸಂಪರ್ಕಿಸಿದ ನ್ಯೂಸ್ ಲಾಂಡ್ರಿ ಮಿಶ್ರಾ ಬಗ್ಗೆ ಕೇಳಿದಾಗ, ಆತ ತಪ್ಪಾದ ಮಾಹಿತಿಯನ್ನು ಹಬ್ಬಿಸುತ್ತಿದ್ದಾನೆ ಎಂದು ಇವರು ಹೇಳಿದ್ದಾರೆ.

ಮಿಶ್ರಾ ಅಪಾಯಕಾರಿ, ನಾವು ಅವರಲ್ಲಿ ಮಾತನಾಡಿದಾಗ ತಿಳಿದು ಬಂದಿದ್ದೇನೆಂದರೆ ಆತನಿಗೆ ಪಶ್ಚಾತಾಪವೇ ಇಲ್ಲ.ಆತ ಮಾಡಿದ 10 ಫೇಕ್‍ ಸುದ್ದಿಗಳನ್ನೇ ಉದಾಹರಣೆಯಾಗಿ ತೋರಿಸಿದಾಗ ಆತನಿಗೆ ಅದೆಲ್ಲ ಆಟಾಟೋಪ.ಇಂಥಾ ಸುದ್ದಿ ಮಾಡುವುದಕ್ಕೆ ಆತ ಪತ್ರಿಕಾಧರ್ಮವನ್ನು ಅನುಸರಿಸುತ್ತಿಲ್ಲ. ಆತ ಪ್ರಚಾರಕ್ಕಾಗಿ ಏನಾದರೂ ಬರೆದು ಪ್ರಕಟಿಸುತ್ತಾನೆ, ಜನರು ಓದುತ್ತಾರೆ.ಆನ್‍ಲೈನ್‍ನಲ್ಲಿ ಈ ರೀತಿ ತಪ್ಪು ಮಾಹಿತಿ ಪ್ರಕಟಿಸುವುದರ ಬಗ್ಗೆ ಆತನಿಗೆ ಯಾವುದೇ ರೀತಿಯ ಪಶ್ಚಾತಾಪ ಇಲ್ಲ ಎಂದು ಬೂಮ್ ನಿರ್ವಾಹಕ ಸಂಪಾದಕಿ ಜೆನ್ಸಿ ಜೇಕಬ್ ಹೇಳಿದ್ದಾರೆ.

ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಸ್ವತಂತ್ರ ಭಾರತದಲ್ಲಿ ಇಲ್ಲಿವರಗೆ ಕಂಡ ಮಹಾ ಭ್ರಷ್ಟ ಪ್ರಧಾನಿ ಮೋದಿ ಎಂದು ಬರೆದಿದ್ದರು ಎಂಬ ಸುದ್ದಿಯನ್ನು ಜನವರಿ 12ರಂದು ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಮಾಡಿತ್ತು. I Support Ravish Kumar ಎಂಬ ಫೇಸ್ ‍ಬುಕ್ ಪೇಜ್‍ನಲ್ಲಿ ಈ ಸುದ್ದಿ ಪೋಸ್ಟ್ ಮಾಡಲಾಗಿತ್ತು.ಆ ಫೇಸ್‍ಬುಕ್ ಪುಟಕ್ಕೆ ಮಿಶ್ರಾ ಅವರೇ ಅಡ್ಮಿನ್ ಅಂತಾರೆ ಆಲ್ಟ್ ನ್ಯೂಸ್‍ನ ಪ್ರತೀಕ್ ಸಿನ್ಹಾ.ಅಷ್ಟೇ ಅಲ್ಲದೆ I Support Mamata Banerjee, I Support Rajdeep Sardesai, I Support Barkha Dutt ಮೊದಲಾದ ಫೇಸ್‍ಬುಕ್ ಪುಟಗಳನ್ನೂ ಮಿಶ್ರಾ ಅವರೇ ನಿರ್ವಹಿಸುತ್ತಿದ್ದಾರೆ.

ಈ ರೀತಿಯ ಪುಟಗಳನ್ನು ಸೃಷ್ಟಿಸುವುದರಿಂದ ಈತ ಬಿಜೆಪಿ ವಿರೋಧಿಗಳನ್ನು ಒಗ್ಗೂಡಿಸಿ ಅವರಿಗೆ ತಪ್ಪಾದ ಮಾಹಿತಿಯನ್ನು ನೀಡುತ್ತಿದ್ದಾನೆ. ಇಲ್ಲಿರುವ ಕೆಲವು ಪುಟಗಳಿಗೆ ದಶಲಕ್ಷ ಫಾಲೋವರ್‌ಗಳಿದ್ದಾರೆ. ಆ ಪುಟಗಳಿಗೆ ಸಿಗುವ ಆ್ಯಡ್ ಕ್ಲಿಕ್ ಗಳಿಂದ ಈತ ದುಡ್ಡು ಮಾಡುತ್ತಾನೆ.ಪಕ್ಷದಿಂದ ಆತನಿಗೆ ದುಡ್ಡು ಸಿಗುತ್ತದೋ ಇಲ್ಲವೋ ಎಂದು ಗೊತ್ತಿಲ್ಲ.ಆತನಿಗೆ ವಿಚಾರಧಾರೆ ಎಂಬುದು ಇದೆ ಎಂಬುದು ನಾನು ನಂಬಲಾರೆ.ಶೀಘ್ರ ಹಣ ಗಳಿಕೆ ಹೇಗೆ ಎಂಬುದೇ ಆತನ ಜೀವನದ ಗುರಿ ಅಂತಾರೆ ಪ್ರತೀಕ್ ಸಿನ್ಹಾ.

ಅಲೋಕ್ ವರ್ಮಾ ಅವರ ರಾಜೀನಾಮೆ ಪತ್ರದ ಬಗ್ಗೆ ಮಿಶ್ರಾ ಅವರಲ್ಲಿ ಬೂಮ್ ಕೇಳಿದಾಗ, ವರ್ಮಾ ಅವರು ನನ್ನಲ್ಲಿ ಖುದ್ದಾಗಿ ಹೇಳಿದ್ದರು ಎಂಬುದು ಮಿಶ್ರಾ ಉತ್ತರ!

ಅಲೋಕ್ ವರ್ಮಾ ಅವರ ರಾಜೀನಾಮೆ ಪತ್ರದಲ್ಲಿ ಮೋದಿ ಅವರ ಹೆಸರಿನ ಪ್ರಸ್ತಾಪವೇ ಇಲ್ಲ ಅಂತಾರೆ ಪ್ರತೀಕ್ ಸಿನ್ಹಾ.ಅಭಿಷೇಕ್ ಮಿಶ್ರಾ ತಪ್ಪು ಮಾಹಿತಿಗಳನ್ನು ಪದೇ ಪದೇ ನೀಡುತ್ತಿರುತ್ತಾರೆ. ಈತನ ಫೇಸ್‍ಬುಕ್ ಪುಟದಲ್ಲಿರುವ ತಪ್ಪು ಮಾಹಿತಿಗಳು ರಾಜಕೀಯಕ್ಕೆ ಸಂಬಂಧಿಸಿದ್ದವುಗಳಾಗಿವೆ.
ದ್ವೇಷ ಬಿತ್ತುವ ಸುದ್ದಿಗಳಲ್ಲದೇ ಇದ್ದರೆ ತಪ್ಪು ಮಾಹಿತಿಗಳು ಅಷ್ಟೊಂದು ಅಪಾಯಕಾರಿ ಏನೂ ಅಲ್ಲ. ಆದರೆ ಕಾಲ ಕ್ರಮೇಣ ಅವುಗಳ ಪರಿಣಾಮ ಕಾಣಿಸಿಕೊಳ್ಳುತ್ತದೆ.ರಾಜಕೀಯ ಪ್ರಚಾರಕ್ಕಾಗಿ ಮಿಶ್ರಾ ಇದನ್ನೆಲ್ಲಾ ಮಾಡುತ್ತಿದ್ದಾರೆ, ಇದು ಒಳ್ಳೆಯದಲ್ಲ ಎಂದು ಪ್ರತೀಕ್ ಸಿನ್ಹಾ ಅಭಿಪ್ರಾಯ ಪಟ್ಟಿದ್ದಾರೆ.

2018ರ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡುವುದಾಗಿ ಹೇಳಿ ಆಮೇಲೆ ನಿರಾಕರಿಸಲ್ಪಟ್ಟ ವ್ಯಾಪಂ ವಿಶಿಲ್ ಬ್ಲೋವರ್ ಆನಂದ್ ರಾಯ್ ಅವರನ್ನು ನ್ಯೂಸ್ ಲಾಂಡ್ರಿ ಸಂಪರ್ಕಿಸಿದೆ.ಅಚ್ಚರಿಯೇನೆಂದರೆ ಆನಂದ್ ರಾಯ್ ಕೂಡಾ ಮಿಶ್ರಾ ಅವರ ಬೆಂಬಲಕ್ಕೆ ನಿಂತಿದ್ದಾರೆ.ಸುಳ್ಳು ಸುದ್ದಿ ಬಗ್ಗೆ ನಮ್ಮ ದೇಶದಲ್ಲಿ ಯಾವುದೇ ಕಾನೂನು ಇಲ್ಲ. ತಾಂತ್ರಿಕವಾಗಿ ಯಾರು ಬೇಕಾದರೂ ಮಿಶ್ರಾ ಮೇಲೆ ಆರೋಪ ಹೊರಿಸಬಹುದು.ಬಿಜೆಪಿ ಕೂಡಾ ಇಂಥಾ ಸುದ್ದಿಗಳನ್ನು ಸೃಷ್ಟಿಸುವುದರಲ್ಲಿ ತೊಡಗಿದೆ. ಹೀಗಿರುವಾಗ ಕಾಂಗ್ರೆಸ್ ಪರವಾಗಿ ಮಾಡಿದರೆ ತಪ್ಪೇನು ಅಂತಾರೆ ರಾಯ್.

ಮಿಶ್ರಾ ವಿರುದ್ಧವಿರುವ ದೂರುಗಳು
ದೆಹಲಿ ಪೊಲೀಸ್ ಸೈಬರ್ ಸೆಲ್‍ನ ಡಿಸಿಪಿ ಅನ್ಯೇಶ್ ರಾಯ್ ಪ್ರಕಾರ ದೆಹಲಿ ಮೂಲದ ಮಹಿಳೆಯೊಬ್ಬರು ಮಿಶ್ರಾ ವಿರುದ್ಧ ದೂರು ನೀಡಿದ್ದಾರೆ. ಮಿಶ್ರಾ ಅವರು ಧಾರ್ಮಿಕ ವಿಷಯಕ್ಕೆ ಸಂಬಂಧಿಸಿದ ಕೆಟ್ಟ ಅಭಿರುಚಿಯ, ದುರುದ್ದೇಶದಿಂದ ಕೂಡಿದ ವಿಷಯಗಳನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಈ ದೂರಿನ ಪ್ರಕಾರ ನಾವು ನಮ್ಮ ಕರ್ತವ್ಯ ನಿರ್ವಹಿಸಿ, ಆತನನ್ನು ಬಂಧಿಸಿದೆವು.
ಮಿಶ್ರಾ ಅವರಿಂದ10 ಲ್ಯಾಪ್ ಟಾಪ್‍ಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಮಿಶ್ರಾ ಅವರಿಗೆ ವಿವಿಧ ಫ್ಲಾಟ್‍ಫಾರಂನಲ್ಲಿ 4 ದಶಲಕ್ಷದಷ್ಟು ಫಾಲೋವರ್ ಗಳಿದ್ದಾರೆ.ಈ ರೀತಿಯ ವ್ಯಕ್ತಿಗಳ ಮುಖ್ಯ ಉದ್ದೇಶ ಏನಿರುತ್ತದೆ ಎಂದರೆ ಸಾಮಾಜಿಕ ಮಾಧ್ಯಮಗಳಲ್ಲಿ ಖಾತೆ ತೆರೆದು ಅದರಲ್ಲಿ ಪ್ರಚೋದಿತ, ಕೀಳು ಮಟ್ಟದ ಪೋಸ್ಟ್ ಗಳನ್ನು ಹಾಕಿ ಫಾಲೋವರ್‍‍ಗಳನ್ನು ಹೆಚ್ಚಿಸುವುದು, ಫೇಸ್‍ಬುಕ್ ಪುಟದ ಟ್ರಾಫಿಕ್ ಹೆಚ್ಚಾದ ಕೂಡಲೇ ಜಾಹೀರಾತುಗಳನ್ನು ಬಳಸಿ ಹಣ ಸಂಪಾದನೆ ಮಾಡುವುದು ಇಲ್ಲವೇ ಪಟ್ಟಭದ್ರ ಹಿತಾಸಕ್ತಿಗಾಗಿ ಬಳಕೆ ಮಾಡುವುದು.
ಮಿಶ್ರಾ ಮೊದಮೊದಲು ಜಾಹೀರಾತು ಬಳಸುತ್ತಿದ್ದರು.ಆಮೇಲೆ ಅವರು ಪಟ್ಟಭದ್ರ ಹಿತಾಸಕ್ತಿಗಾಗಿ ಅದನ್ನು ಬಳಸುವ ಮೂಲಕ ದುಡ್ಡು ಮಾಡಲು ಆರಂಭಿಸಿದರು. ಆತನಿಗೆ ಎಷ್ಟು ಸಂಪಾದನೆ ಸಿಗುತ್ತದೆ ಎಂಬುದರ ಬಗ್ಗೆ ನಮಗೆ ಮಾಹಿತಿ ಇಲ್ಲ ಯಾಕೆಂದರೆ ದುಡ್ಡು, ಬ್ಯಾಂಕ್ ಮೂಲಕ ಪಾವತಿಯಾಗುವುದಿಲ್ಲ, ಆದಾಗ್ಯೂ, ನಾವು ತನಿಖೆ ಮುಂದುವರಿಸಿದ್ದು, ಶೀಘ್ರದಲ್ಲೇ ಹೆಚ್ಚಿನ ಮಾಹಿತಿಗಳನ್ನು ಪಡೆಯುತ್ತೇವೆ ಎಂದು ರಾಯ್ ಹೇಳಿದ್ದಾರೆ.

ಮಿಶ್ರಾಗೆ ಪೊಲೀಸ್ ರಕ್ಷಣೆ ನೀಡುತ್ತಿರುವುದು ಯಾಕೆ?
ಇದೇ ಪ್ರಶ್ನೆಯನ್ನು ನ್ಯೂಸ್ ಲಾಂಡ್ರಿ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಮತ್ತು ಗೃಹ ಸಚಿವ ಬಾಲ ಬಚ್ಚನ್ ಅವರಲ್ಲಿ ಕೇಳಿದೆ. ಆದರೆ ಇವರಿಬ್ಬರೂ ಈ ಪ್ರಶ್ನೆಗೆ ಉತ್ತರಿಸಲು ಸಿಗಲಿಲ್ಲ,

ಮಧ್ಯಪ್ರದೇಶದ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಅಶೋಕ್ ಬರ್ನವಾಸ್ ಅವರಲ್ಲಿ ಇದೇ ಪ್ರಶ್ನೆ ಕೇಳಿದಾಗ, ಮುಖ್ಯ ಮಂತ್ರಿಯವರು ಈ ಪ್ರಶ್ನೆಗೆ ಉತ್ತರಿಸವುದಿಲ್ಲ.ನೀವು ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯವನ್ನು ಸಂಪರ್ಕಿಸಿ. ಈ ಬಗ್ಗೆ ನಾವು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ.

ಮಧ್ಯಪ್ರದೇಶದ ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯದ ಜಂಟಿ ನಿರ್ದೇಶಕ ಸುರೇಶ್ ಗುಪ್ತಾ ಅವರನ್ನು ಸಂಪರ್ಕಿಸಿದಾಗ, ಮಿಶ್ರಾಗೆ ಪೊಲೀಸ್ ರಕ್ಷಣೆ ನೀಡುವುದರಲ್ಲಿ ನಮ್ಮದೇನೂ ಪಾತ್ರವಿಲ್ಲ.ಗೃಹ ಸಚಿವಾಲಯ ಕಳುಹಿಸಿದ ನಿರ್ದೇಶನ ಬಗ್ಗೆ ನಾವು ಪ್ರಕಟಣೆ ನೀಡಿದ್ದೆವು. ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ದೆಹಲಿ ಪೊಲೀಸರು ಆತನನ್ನು ಬಂಧಿಸಿದ್ದರ ಬಗ್ಗೆ ಮಾತ್ರ ನಮ್ಮ ಪ್ರಕಟಣೆ ಆಗಿತ್ತು. ಇದಕ್ಕಿಂತ ಹೆಚ್ಚಿನದ್ದೇನೂ ಇಲ್ಲ, ಆತ ಒಳ್ಳೆಯವನೋ ಕೆಟ್ಟವನೋ ನಮಗೆ ಗೊತ್ತಿಲ್ಲ.ಆತನ ಏನು ಮಾಡಿದ್ದಾನೆ ಎಂಬುದನ್ನು ಪತ್ತೆ ಹಚ್ಚುವ ಕೆಲಸ ತನಿಖಾ ತಂಡ ಮತ್ತು ಸೈಬರ್ ಸೆಲ್‍ನದ್ದು ಎಂದಿದ್ದಾರೆ.

ಮಿಶ್ರಾಗೆ ಪೊಲೀಸ್ ರಕ್ಷಣೆ ನೀಡುತ್ತಿರುವುದು ಯಾಕೆ? ಎಂದು ಮಧ್ಯಪ್ರದೇಶದ ಕಾಂಗ್ರೆಸ್ ವಕ್ತಾರ ನರೇಂದರ ಸಲುಜಾ ಅವರಲ್ಲಿ ಕೇಳಿದಾಗ ಅವರು ಈ ಪ್ರಶ್ನೆಗೆ ಉತ್ತರಿಸಿಲ್ಲ
ಡಿಜಿಪಿ ವಿಕೆ ಸಿಂಗ್ ಅವರಲ್ಲಿಯೂ ಇದೇ ಪ್ರಶ್ನೆ ಕೇಳಿದಾಗ, ಬೆದರಿಕೆ ಇರುವ ಜನರಿಗೆ ಪೊಲೀಸ್ ರಕ್ಷಣೆ ನೀಡಲಾಗುತ್ತಿದೆ.ಭೋಪಾಲ್‍ನ ಪೊಲೀಸ್ ವರಿಷ್ಠಾಧಿಕಾರಿಯು ಮಿಶ್ರಾಗೆ ಪೊಲೀಸ್ ರಕ್ಷಣೆ ಒದಗಿಸಿದ್ದಾರೆ.ನೀವು ಅವರನ್ನೇ ಕೇಳಿ ಎಂದಿದ್ದಾರೆ.
ನ್ಯೂಸ್ ಲಾಂಡ್ರಿ ಭೋಪಾಲ್‍ನ ಪೊಲೀಸ್ ವರಿಷ್ಠಾಧಿಕಾರಿ ಜಯದೀಪ್ ಪ್ರಸಾದ್ ಅವರಲ್ಲಿ ಈ ಪ್ರಶ್ನೆ ಕೇಳಿದಾಗ ಅವರು ಪ್ರತಿಕ್ರಯಿಸಲು ನಿರಾಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT