ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಕ್ರೋಶಾದಿಂದ ಹೆಣೆದ ಕಸೂತಿ ಉದ್ಯಮ: ಮಹಿಳಾ ಉದ್ಯಮಿಗಳ ಯಶೋಗಾಥೆ
ಕ್ರೋಶಾದಿಂದ ಹೆಣೆದ ಕಸೂತಿ ಉದ್ಯಮ: ಮಹಿಳಾ ಉದ್ಯಮಿಗಳ ಯಶೋಗಾಥೆ
Published 26 ಆಗಸ್ಟ್ 2023, 0:59 IST
Last Updated 26 ಆಗಸ್ಟ್ 2023, 0:59 IST
ಅಕ್ಷರ ಗಾತ್ರ
ಆಗಸ್ಟ್‌ 30ರಂದು ಕಿರು ಉದ್ಯಮಗಳ ದಿನವನ್ನಾಗಿ ಆಚರಿಸಲಾಗುತ್ತದೆ.  ಹೆಣ್ಮಕ್ಕಳಿಗೆ ಒಂದಿಲ್ಲೊಂದರಲ್ಲಿ ಆಸಕ್ತಿ, ಕೌಶಲ ಇರುವುದು ಸಹಜ. ಅವು ಹವ್ಯಾಸವಾಗಿಯೂ ಇರಬಹುದು. ಇಂಥ ಆಸಕ್ತಿ, ಕಾಳಜಿಗಳು  ಆದಾಯ ತರುವ ಉದ್ಯಮವಾಗಿ ರೂಪುಗೊಂಡರೆ ಇದಕ್ಕಿಂತ ಖುಷಿಯೇನಿದೆ. ಗೊತ್ತಿರುವ ಕೌಶಲ, ಅಲ್ಪ ಬಂಡವಾಳ, ಕಡಿಮೆ ಮಾನವಸಂಪನ್ಮೂಲ ಬಳಸಿ  ಕಿರುಉದ್ಯಮ ಸ್ಥಾಪಿಸಿದ ಹಲವು ಹೆಣ್ಣುಮಕ್ಕಳ ಸಾಹಸಗಾಥೆ ಇಲ್ಲಿದೆ. 

ಚಿಕ್ಕವಳಿದ್ದಾಗ ಅಮ್ಮ ಮಾಡುತ್ತಿದ್ದ ಕರಕುಶಲತೆಗಳನ್ನು ಆಸಕ್ತಿಯಿಂದ ಕಲಿತು, ಅದನ್ನೇ ಹವ್ಯಾಸವಾಗಿಸಿಕೊಂಡವರು ಮಂಗಳೂರಿನ ಅಚಲಾ. ಮದುವೆಯಾದ ಮೇಲೆ ಮೇಲೆ, ಅಡುಗೆ, ಮಗನ ವಿದ್ಯಾಭ್ಯಾಸದ ಜೊತೆಗೆ ಕಸೂತಿ, ಕ್ರೋಶಾ ನಿಟ್ಟಿಂಗ್‌ ಮಾಡಲು ಆರಂಭಿಸಿದರು. ಮನೆಯ ಸೋಫಾಗಳಿಗೆಲ್ಲ ಅಚಲಾ ಅವರ ಕಸೂತಿಯದೇ ಹೊದಿಕೆ ಆಕರ್ಷಣೆಯಾದವು. ಕ್ರೋಶಾದಿಂದ ಆಲಂಕಾರಿಕ ವಸ್ತುಗಳನ್ನು ಮಾಡಿ ಮನೆಗೆ ಬಂದ ನೆಂಟರಿಗೆ, ಮಕ್ಕಳಿಗೆ ಉಡುಗೊರೆ ನೀಡಿ ಖುಷಿ ಪಡಿಸಿದರು. ಮಗ ಓದು ಮುಗಿಸಿ ಕೆಲಸಕ್ಕೆ ಹೋದ ಮೇಲೆ ಅಮ್ಮನಿಗಾಗಿ ಮೊಬೈಲ್‌ ತಂದು ಕೊಟ್ಟಿದ್ದು, ಅಚಲಾ ಅವರ ಕರಕುಶಲತೆ ಹೊರಪ್ರಪಂಚಕ್ಕೆ ಪರಿಚಯವಾಗಲು ದಾರಿಯಾಯಿತು. ಫೇಸ್‌ಬುಕ್‌ ಪೇಜ್‌ ‘ಅಚಿಲಿಯಾ’ ಆರಂಭಿಸಿ ಅಲ್ಲಿ ಆರ್ಡರ್‌ಗಳನ್ನು ಪಡೆದು ಪೂರೈಸಲು ಶುರುವಿಟ್ಟರು.

ಅಚಲಾ ಸುಧೀರ್
ಅಚಲಾ ಸುಧೀರ್

ಯುಎಸ್‌ಎ, ಯುಕೆ. ಜರ್ಮನಿ, ಆಸ್ಟ್ರೇಲಿಯಾಗೂ ಅಚಲಾ ಅವರ ಕ್ರೋಶಾ ಕಲಾಕೃತಿಗಳು ರವಾನೆಯಾಗಿವೆ. 2021ರಲ್ಲಿ ಇನ್ನರ್‌ವೀಲ್‌ ಏರ್ಪಡಿಸಿದ್ದ ವಸ್ತುಪ್ರದರ್ಶನದಲ್ಲಿ ಪಾಲ್ಗೊಂಡು ಮನ್ನಣೆ ಪಡೆದರು. ಟೈ(TiE) ಏರ್ಪಡಿಸಿದ್ದ ಕೌಶಲ 2022 ಪ್ರದರ್ಶನದಲ್ಲಿ ಒಳ್ಳೆ ವ್ಯಾಪಾರದೊಂದಿಗೆ ‘ಬೆಸ್ಟ್‌ ಪ್ರೆಸೆಂಟೇಷನ್‌’ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡರು. ಹೆಣ್ಣೆ ಆಗಲಿ; ಗಂಡೇ ಆಗಲಿ. ಯಾವುದಾದರು ಹವ್ಯಾಸವನ್ನು ಬೆಳೆಸಿಕೊಂಡರೆ ಇಳಿವಯಸ್ಸಿನಲ್ಲಿ ಚಿಂತೆ, ಮಾನಸಿಕ ಖಿನ್ನತೆಯನ್ನು ತಪ್ಪಿಸಬಹುದು. ಜೊತೆಗೆ ಗಳಿಕೆಯನ್ನೂ ಹೊಂದಬಹುದು ಎಂಬುದು ಅಚಲಾ ಅವರ ಅನಿಸಿಕೆ. 

ಖಾರಾ ಇಂಗು–ಮೆಣಸು ಸಿಹಿ ತಂತು
ಗಂಡ ಆಫೀಸಿಗೆ ಮಗಳು ಶಾಲೆಗೆ ಹೊರಟ ಮೇಲೆ ಮಂಗಲಾ ರಾಗ್‌ ಹೆಗಡೆ ಮನೆಯಲ್ಲಿ ಏಕಾಂಗಿ. ಮೂಲ ಸಿದ್ದಾಪುರವಾದರೂ ನೆಲೆ ನಿಂತಿರುವುದು ಬೆಂಗಳೂರಲ್ಲಿ. ಮನೆಯಲ್ಲಿ ಅಡುಗೆ ಮಾಡಿ ಉಳಿದ ಸಮಯದಲ್ಲಿ ಅಮ್ಮ ಅಜ್ಜಿ ಹಾಗೂ ಸಂಬಂಧಿಯಿಂದ ಕಲಿತ ಸಾಂಪ್ರದಾಯಿಕ ಅಡುಗೆ ಇಂಗು ಮೆಣಸು ಮಾಡಿ ಸ್ನೇಹಿತರಿಗೂ ಹಂಚಿದರು. ರುಚಿ ಕಂಡವರು ಭೇಷ್‌ ಎಂದಾಗ ಮಂಗಲಾಗೆ ಇನ್ನಿ‌ಲ್ಲದ ಖುಷಿ. ಫೇಸ್‌ಬುಕ್‌ನಲ್ಲಿ ಎಲ್ಲರೂ ಇವರ ಇಂಗು–ಮೆಣಸನ್ನು ಒಪ್ಪಿ ಆರ್ಡರ್‌ ನೀಡಲು ಆರಂಭಿಸಿದರು. ಕೆಲವರು ಫೇಸ್‌ಬುಕ್‌ನಲ್ಲಿ ಫೀಡ್‌ಬ್ಯಾಕ್‌ ಪೋಸ್ಟ್‌ ಮಾಡಿದಾಗ ಒಂದೇ ದಿನ 15 ಮಂದಿಯಿಂದ ಆರ್ಡರ್‌ ಬಂದಿತು. ಸ್ನೇಹಿತೆ ಚೈತನ್ಯಾ ಸಲಹೆ ಮೇರೆಗೆ ಇಂಗುಮೆಣಸು ಲೇಬಲ್‌ನೊಂದಿಗೆ ಫೇಸ್‌ಬುಕ್‌ ಮಾರ್ಕೆಟ್‌ನಲ್ಲಿ ವ್ಯಾಪಾರಕ್ಕೆ ಮಂಗಲಾ ಮುಂದಾದರು. ಗ್ರಾಂ ಲೆಕ್ಕದಲ್ಲಿ ಆರಂಭವಾದ ಇಂಗು ಮೆಣಸು ಉತ್ಪಾದನೆ ಇಂದು 135ಕೆಜಿ ದಾಟಿದೆ. ಸದ್ಯಕ್ಕೆ 565 ಮಂದಿ ಇಂಗು–ಮೆಣಸಿಗೆ ಕಾಯಂ ಗ್ರಾಹಕರಿದ್ದಾರೆ. ಮನೆಯಲ್ಲಿ ಒಬ್ಬಳಿಗೆ ಸಮಯ ಹೋಗದು ಬೇಜಾರು ಎನ್ನುತ್ತಿದ್ದ ಮಂಗಲಾಗೆ ಇಂದು ಕೈತುಂಬಾ ಕೆಲಸವನ್ನು ಇಂಗು ಮೆಣಸು ಕೊಟ್ಟಿದೆ. ಇಂಗುಮೆಣಸು ತಯಾರಿಸುವುದು ತುಸು ಕಷ್ಟವೇ ಆಗಿದ್ದರೂ ಮನೆಯಿಂದಲೇ ಕೈತುಂಬಾ ಆದಾಯ ತಂದು ಕೊಟ್ಟಿದೆ. ಎಲ್ಲ ಕೆಲಸವೂ ಕಷ್ಟವೇ. ಆದರೆ ಇಷ್ಟಪಟ್ಟು ಮಾಡಿದರೆ ಅದರಲ್ಲೂ ಸಂತಸ ಕಾಣಬಹುದು ಎಂಬುದು ಇವರ ಧ್ಯೇಯವಾಕ್ಯ.  
ಮಂಗಲಾ ರಾಗ್‌ ಹೆಗಡೆ
ಮಂಗಲಾ ರಾಗ್‌ ಹೆಗಡೆ
ಬಣ್ಣ ಹಚ್ಚುವುದೇ ಬಂಡವಾಳವಾದಾಗ..
ಬರ್ಥಡೇ ಪಾರ್ಟಿ ಇರಲಿ. ಕಾಲೇಜು ಕಾರ್ಯಕ್ರಮಗಳಿರಲಿ. ಹ್ಯಾಲೋವೀನ್ ಪಾರ್ಟಿಯಿರಲಿ. ಹಳದಿ–ಮೆಹಂದಿ ಮದುವೆ ಸಂದರ್ಭವೇ ಇರಲಿ.  ಸುಮತಿಯ ಫೇಸ್‌ ಪೇಂಟಿಂಗ್‌ಗೆ ಭಾರಿ ಬೇಡಿಕೆ. ಫೇಸ್‌ ಪೇಂಟಿಂಗ್‌ ಟ್ರೆಂಡಿಂಗ್‌ ಆಗುತ್ತಿದೆ. ಈ ಟ್ರೆಂಡಿಂಗನ್ನು ಹುಬ್ಬಳ್ಳಿಯ ಸುಮತಿ ದಾನಿ ಸದ್ಬಳಕೆ ಮಾಡಿಕೊಂಡಿದ್ದಾರೆ. ವಿಶೇಷವಾಗಿ ಮಕ್ಕಳು ಸುಮತಿ ಅವರ ಕೈಯಿಂದ ಮುಖ ಕೈಗಳ ಮೇಲೆ ಚಿತ್ರ ಬಿಡಿಸಿಕೊಂಡು ಖುಷಿಪಡುತ್ತಾರೆ.  ಬಾಲ್ಯದಿಂದಲೂ ಸುಮತಿಗೆ ಬಣ್ಣಗಳು ಅಂದರೆ ಅಚ್ಚುಮೆಚ್ಚು. ಚಿತ್ರಕಲೆಯಲ್ಲಿ ಅತೀವ ಆಸಕ್ತಿ. ಮುಂದೆ ಅದುವೇ ಹವ್ಯಾಸವಾಯಿತು.  ಬಣ್ಣಗಳ ಮೇಲಿನ ಆಸಕ್ತಿ ಮುಂದುವರೆದು ರೋಗಿಗಳಿಗೆ ಯಾವುದೇ ಔಷಧಿಯಿಲ್ಲದೆ ಬಣ್ಣಗಳಿಂದ ಗುಣಪಡಿಸಬಲ್ಲ ಬಣ್ಣ ಚಿಕಿತ್ಸೆ (ಕ್ರೊಮೊ ಥೆರಪಿ)ಯಿಂದಲೂ ಆದಾಯ ಕಂಡುಕೊಂಡರು. ಬಾಲ್ಯದ ಆಸಕ್ತಿ ಇಂದು 20ರ ಹರೆಯದಲ್ಲೇ ಸುಮತಿಗೆ ಫೇಸ್‌ ಪೇಂಟಿಂಗ್‌ ಮೂಲಕ ಪ್ರಸಿದ್ಧಿ ತಂದುಕೊಟ್ಟಿದೆ.  ಪಿಡಿಲೈಟ್ ಕಂಪನಿಯ ಅಡಿಯಲ್ಲಿ ಭಾರತದ ಕಿರಿಯ ಕಲಾ ಶಿಕ್ಷಕ ಎಂಬ ಹೆಮ್ಮೆ ಸುಮತಿಯದ್ದು. ‘ಟೈ‘ (TiE) ಸಂಘಟನೆ ಇವರ ಮುಖವರ್ಣಿಕೆ ಕಲೆಯನ್ನು ಪ್ರೋತ್ಸಾಹಿಸಿ ಪುಟ್ಟ ಉದ್ಯಮಿಯ ಪಟ್ಟ ಕಟ್ಟಿಕೊಟ್ಟಿದೆ.  
ಸುಮತಿ
ಸುಮತಿ
 ಸೀರೆಗೂ ಸಂತೆ!
ದಕ್ಷಿಣ ಕನ್ನಡದ ಮೂಲ್ಕಿ ಮೂಲದ ಶಿಲ್ಪಾ ಶೆಟ್ಟಿ ಉದ್ಯಮಿಯಾದದ್ದು ಸೋಜಿಗ. ಓದಿ ಕೆಲಸದಲ್ಲಿದ್ದರೂ ಇವರು ಕೊನೆಯಲ್ಲಿ ಹಿಡಿದಿದ್ದು ಇವರಾಸಕ್ತಿಯ ಸೀರೆ ಸೆರಗನ್ನ. ಹುಬ್ಬಳ್ಳಿಯ ಕೋಅಪರೇಟಿವ್‌ ಬ್ಯಾಂಕ್‌ನಲ್ಲಿ 18 ವರ್ಷ ಕೆಲಸ ಮಾಡಿದ್ದರೂ ಅದರಲ್ಲಿ ತೃಪ್ತಿ ಕಾಣಲಿಲ್ಲ. ಮೊದಲಿನಿಂದಲೂ ಸುಂದರ ಸೀರೆ ಆಯ್ಕೆ ಮಾಡುವುದು ವಿಭಿನ್ನ ಬಗೆಯ ಸೀರೆ ಉಡುವುದು ಅದರಿಂದ ಸ್ನೇಹಿತರಿಂದ ಬಂಧುಗಳಿಂದ ಮೆಚ್ಚುಗೆ ಪಡೆಯುವುದು ಇವರ ಪ್ಯಾಷನ್‌. ಸೀರೆ ಮೇಲೆ ಇವರಿಗಿರುವ ಅಭಿರುಚಿ ಮನಗಂಡ ಸ್ನೇಹಿತೆಯರು ಬಂಧುಗಳು ಶಿಲ್ಪಾ ಅವರ ಹತ್ತಿರವೇ ಸೀರೆ ತರಿಸಲು ಶುರು ಮಾಡಿದರು. ಮುಂದೆ ಅದನ್ನು ಅರೆಕಾಲಿಕ ವ್ಯಾಪಾರವನ್ನಾಗಿಸಿಕೊಂಡರು. ದಿನಗಳೆದಂತೆ ಸೀರೆ ವ್ಯಾಪಾರದಲ್ಲೇ ಲಾಭ ಕಂಡುಕೊಂಡಾಗ ತಿಂಗಳ ಸಂಬಳದ ಕೆಲಸಕ್ಕೆ ರಾಜೀನಾಮೆ ನೀಡಿ ಹೊರಬಂದರು. ಸ್ವತಂತ್ರ ಉದ್ಯಮಿಯಾಗುವತ್ತ ಅಡಿಯಿಟ್ಟರು. ನಡುನಡುವೆ ಎದುರಾದ ಅಪಾಯಗಳನ್ನು ನಷ್ಟವನ್ನು ಎದುರಿಸಿ ಅದರಿಂದ ಹಿಂಜರಿಯದೇ ಮುಂದೆ ಸಾಗುತ್ತಲೇ ಉಳಿದರು. ಅವರ ಉದ್ಯಮ ಸಿರಿ ಸಿಲ್ಕ್‌ ಎಂಬ ಹೆಸರಿನಡಿ ಗ್ರಾಹಕರ ಮನಗೆದ್ದಿತು. ಬೆಲೆಗೆ ತಕ್ಕುದಾದ ಗುಣಮಟ್ಟದ ರೇಶ್ಮೆ ಸೀರೆಗಳಿಗೆ ಇವರ ಗ್ರಾಹಕರೇ ಜಾಹೀರಾತುದಾರರಾದರು. ಬ್ರ್ಯಾಂಡ್‌ ಆದರು. ಸದ್ಯಕ್ಕೆ ಕರ್ನಾಟಕ ಭಾರತ ಮತ್ತು ವಿದೇಶಗಳಲ್ಲಿ 2500+ ಗ್ರಾಹಕರನ್ನು ಹೊಂದಿದ್ದಾರೆ. ಉದ್ಯಮ ಬೆಳೆಸಲು ವ್ಯಾಟ್ಸ್ಆ್ಯಪ್‌ ಫೇಸ್‌ಬುಕ್‌ ಇನ್‌ಸ್ಟಾಗ್ರಾಂ ಅನ್ನೂ ಬಳಸಿಕೊಂಡಿದ್ದಾರೆ. ಸೀರೆ ವ್ಯಾಪಾರ ಸಕ್ಸಸ್‌ ಆಗುತ್ತಿದ್ದಂತೆ ಇವರು ಸಮಾಜಕ್ಕೆ ಪರಿಸರಸ್ನೇಹಿ ಉತ್ಪನ್ನ ಜಾಗೃತಿಯ ಬಗ್ಗೆ ಯೋಚಿಸಿದರು. ದೇಸಿ ಮತ್ತು ಪರಿಸರ ಸ್ನೇಹಿ ಉತ್ಪನ್ನಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಗ್ರಾಮೀಣ ಕರಕುಶಲತೆಯನ್ನು ಉತ್ತೇಜಿಸಲು ಮತ್ತು ಸಣ್ಣ ಕುಶಲಕರ್ಮಿಗಳಿಗೆ ಮಾರುಕಟ್ಟೆ ಒದಗಿಸಲು ಸಿರಿ ಪರಂಪರಾ ಮಳಿಗೆಯನ್ನು ತೆರೆದರು. ಅಲ್ಲಿ ಎಲ್ಲ ಬಗೆಯ ಸಾಂಪ್ರದಾಯಿಕ ಕರಕುಶಲ ವಸ್ತುಗಳು ಕೈಮಗ್ಗ ಮತ್ತು ದೇಸಿ ಉತ್ಪನ್ನಗಳನ್ನು ಒಂದೇ ಚಾವಣಿಯಲ್ಲಿ ಲಭ್ಯವಾಗುವಂತೆ ಮಾಡಿದರು.  ಇವರೀಗ ಹುಬ್ಬಳ್ಳಿಯ ಟೈ ಯುನಿಟ್‌ನ ಸಂಚಾಲಕಿಯಾಗಿ ಸೇವೆ ನಿಭಾಯಿಸುತ್ತಿದ್ದಾರೆ.
ಶಿಲ್ಪಾ ಶೆಟ್ಟಿ
ಶಿಲ್ಪಾ ಶೆಟ್ಟಿ
ಮಹಿಳಾ ಉದ್ಯಮಿಗಳಿಗೆ ಸಲಹೆಗಳು
  • ಆತ್ಮವಿಶ್ವಾಸ ಸಕಾರಾತ್ಮಕ ಚಿಂತನೆ ಜೊತೆಗಿರಲಿ

  • ಉತ್ಸಾಹವನ್ನು ವ್ಯಾಪಾರವಾಗಿಸಿದರೆ ಅದು ವ್ಯವಹಾರವನ್ನು ಪ್ರೀತಿಸಲು ಸಹಾಯ ಮಾಡುತ್ತದೆ

  • ಉದ್ಯಮ ಆರಂಭಕ್ಕೆ ಸಣ್ಣ ಮೊತ್ತದ ಹೂಡಿಕೆ ಇರಲಿ. ದೊಡ್ಡಮೊತ್ತದ ಸಾಲ ಬೇಡ

  • ಆರಂಭದಲ್ಲಿ ಸ್ಥಳದ ಬಾಡಿಗೆ ಮತ್ತು ಒಳಾಂಗಣಕ್ಕಾಗಿ ಹೆಚ್ಚು ಖರ್ಚು ಮಾಡಬೇಡಿ. ಆ ಪ್ರಕ್ರಿಯೆ ಹಂತ ಹಂತವಾಗಿರಲಿ

  • ನೇರ ಗ್ರಾಹಕರು ಮತ್ತು ಅವರ ಅವಶ್ಯಕತೆಗಳೊಂದಿಗೆ ಮಾರುಕಟ್ಟೆಯನ್ನು ಸಂಪರ್ಕಿಸಿ.

  • ಪೈಪೋಟಿಗೆ ಬಿದ್ದು ಉದ್ದರಿಗೆ (ಕ್ರೆಡಿಟ್‌) ನೀಡಬೇಡಿ. ಕ್ಲೀರ್ ಕ್ಯಾಶ್ & ಕ್ಯಾರಿ ವ್ಯವಹಾರ ಉತ್ತಮ

  • ಸಣ್ಣ ಮಾರ್ಜಿನ್ ದೊಡ್ಡ ಔಟ್ರೀಚ್ ಮೇಲೆ ಕೇಂದ್ರೀಕರಿಸಿ

  • ಗ್ರಾಹಕರ ಇತರ ನಗರಗಳಿಗೆ ಸಂಪರ್ಕ ಸಾಧಿಸಲು ಉಚಿತ ಸಾಮಾಜಿಕ ಮಾಧ್ಯಮವನ್ನು ನಿಮ್ಮ ಜಾಹೀರಾತು ಚಾನಲ್‌ನಂತೆ ಬಳಸಿ.

  • ನಿಷ್ಠಾವಂತರಾಗಿರಿ ಉತ್ತಮ ಸೇವೆಯನ್ನು ಒದಗಿಸಿ

  • ಗ್ರಾಹಕರಿಗೆ ಅನನ್ಯ ಉತ್ಪನ್ನಗಳನ್ನು ನೀಡಿ

  • ಜಾಹೀರಾತುಗಳಿಗಾಗಿ ದೊಡ್ಡ ಮೊತ್ತ ವ್ಯಯಿಸದಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT