ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಂಕ ಮರೆಸುವ ಸವಿಸವಿ ನೆನಪು..

Last Updated 7 ಆಗಸ್ಟ್ 2020, 19:31 IST
ಅಕ್ಷರ ಗಾತ್ರ

ಕೊರೊನಾ ಸೋಂಕಿನ ಭಯ, ಹಣಕಾಸಿನ ಸಮಸ್ಯೆ, ಐಸೊಲೇಷನ್, ಮುಂದೇನು ಎಂಬ ಅನಿಶ್ಚಿತ ಪರಿಸ್ಥಿತಿಯ ಮಧ್ಯೆ ಹಲವರಿಗೆ ಸಮಾಧಾನ ನೀಡುವ ವಿಷಯ ಯಾವುದು ಗೊತ್ತೇ? ಅದು ಬಾಲ್ಯದಲ್ಲಿ ಆಡಿದ ಆಟಗಳನ್ನು ಮತ್ತೆ ಆಡುವುದು, ಚಿಕ್ಕಂದಿನಲ್ಲಿನ ಹವ್ಯಾಸಗಳನ್ನು ಪುನಃ ಅಳವಡಿಸಿಕೊಳ್ಳುವುದು.

ಇಪ್ಪತ್ತಾರರ ಹರೆಯದ ನೀತು ದಿವೇಕರ್‌ ಟಿ.ವಿಯಲ್ಲಿ ‘ಟಾಮ್‌ ಆ್ಯಂಡ್‌ ಜೆರ‍್ರಿ’ ಕಾರ್ಟೂನ್‌ ಶೋ ನೋಡಲು ಶುರು ಮಾಡಿದಾಗ ಮನೆಯವರೆಲ್ಲ ಆಕೆಯನ್ನು ಛೇಡಿಸಿ ನಕ್ಕರು. ಆದರೆ ಅವರ ಹಾಸ್ಯದ ಮಾತುಗಳಿಗೆ ಕಿವಿಗೊಡದ ನೀತು, ಒತ್ತಡ ಕಡಿಮೆ ಮಾಡುವ ಆ ಧಾರಾವಾಹಿಯನ್ನು ನಿತ್ಯ ಒಂದು ತಾಸಿನ ಕಾಲ ನೋಡುವುದನ್ನು ಮಾತ್ರ ಬಿಟ್ಟಿಲ್ಲ.

‘ಕೋವಿಡ್‌–19 ಕುರಿತ ಸುದ್ದಿ ಓದುವುದರಿಂದ ಆತಂಕ, ಒತ್ತಡ ಉಂಟಾಗುತ್ತದೆ. ಆದರೆ ಈ ಕಾರ್ಟೂನ್‌ ನೋಡಿದರೆ ಬಾಲ್ಯದ ಸವಿ ನೆನಪುಗಳಿಂದ ಅಭದ್ರತೆಯ ಭಾವನೆ ಮಾಯವಾಗುತ್ತದೆ’ ಎನ್ನುತ್ತಾಳೆ ನೀತು.

ಎಚ್‌ಆರ್‌ ಕನ್ಸಲ್ಟೆನ್ಸಿಯಲ್ಲಿ ಕೆಲಸ ಮಾಡುವ 31ರ ದಿಯಾ ರಾನಡೆ ಕೂಡ ತಾನು ಶಾಲೆಗೆ ಹೋಗುವ ದಿನಗಳಲ್ಲಿ ಮಾಡುತ್ತಿದ್ದ ಪೇಂಟಿಂಗ್‌, ಸಂಗೀತ ಎಂದೆಲ್ಲ ಬ್ಯುಸಿಯಾಗಿದ್ದಾಳೆ. ‘ಸದ್ಯದ ಪರಿಸ್ಥಿತಿ ಉಂಟು ಮಾಡುತ್ತಿರುವ ಭಯದಿಂದ ಪಾರಾಗಲು ಇಂತಹ ಚಟುವಟಿಕೆಗಳು ಒಳ್ಳೆಯದು. ಇಂತಹ ಹವ್ಯಾಸದಲ್ಲಿ ತೊಡಗಿಸಿಕೊಂಡರೆ ಎಲ್ಲವನ್ನೂ ಮರೆತುಬಿಡಬಹುದು’ ಎನ್ನುತ್ತಾಳೆ ಆಕೆ.

ಲಾಕ್‌ಡೌನ್‌, ಐಸೊಲೇಷನ್‌ ಎನ್ನುವುದು ಕೆಲವರಿಗೆ ಹೊಸದನ್ನು ಕಲಿಯಲು ನೆರವಾದರೆ, ಇನ್ನು ಕೆಲವರಿಗೆ ಈ ರೀತಿ ಬಾಲ್ಯದ ದಿನಗಳಿಗೆ ಮರಳುವುದು ಅಥವಾ ಬಾಲ್ಯದ ದಿನಗಳು ನೆನಪಾಗುವಂತಹ ಚಟುವಟಿಕೆಗಳನ್ನು ಮಾಡುವುದು ಸದ್ಯದ ಒತ್ತಡ ನಿವಾರಿಸಿಕೊಳ್ಳಲು ಇರುವ ಸುಲಭ ಮಾರ್ಗ. ಇಂತಹ ಚಟುವಟಿಕೆಗಳು ಒಂದು ರೀತಿಯ ಉತ್ಕಟ ಭಾವುಕತೆ (ನಾಸ್ಟಾಲ್ಜಿಯ)ಯ ಲೋಕಕ್ಕೆ ಕರೆದೊಯ್ಯುತ್ತವೆ. ಬಾಲ್ಯದ ನೆನಪುಗಳಿಗೆ ಆತುಕೊಳ್ಳುವುದು ಕೊಂಚ ಸಮಾಧಾನ ನೀಡಬಲ್ಲದು ಎನ್ನುವುದು ತಜ್ಞರ ಅಂಬೋಣ.

ಹಿಂದೆ ಓದಿದ ಪುಸ್ತಕಗಳನ್ನೇ ಓದುವುದು, ಪೇಂಟಿಂಗ್‌ ಮಾಡುವುದು, ನಮ್ಮ ಸೃಜನಶೀಲತೆಯನ್ನು ತೋರ್ಪಡಿಸುವ ಚಟುವಟಿಕೆ ಮಾಡುವುದರಿಂದ ಒಳಗೊಳಗೇ ಹೆಪ್ಪುಗಟ್ಟಿರುವ ಭಾವನೆಗಳನ್ನು ಹೊರಹಾಕಬಹುದು. ಇದು ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆಗಳನ್ನು ತುಂಬುತ್ತದೆ. ಹಾಗೆಯೇ ಇತರರ ಜೊತೆ ಸುಲಭವಾಗಿ ಬೆರೆಯಬಹುದು.

ಹಳೆಯ ಧಾರಾವಾಹಿಗಳ ವೀಕ್ಷಣೆ
ಈ ರೀತಿ ಸದ್ಯದ ಸಂಕೀರ್ಣತೆಯನ್ನು ಮರೆಯುವ ಇನ್ನೊಂದು ಸುಲಭ ವಿಧಾನವೆಂದರೆ ಹಳೆಯ ಟಿವಿ ಧಾರಾವಾಹಿಗಳನ್ನು ನೋಡುವುದು. ಕೊರೊನಾ ಸೋಂಕು ಹರಡಲು ಶುರುವಾದಾಗಿನಿಂದ ದೂರದರ್ಶನ ಹಾಗೂ ಕೆಲವು ಖಾಸಗಿ ಟಿವಿ ಚಾನೆಲ್‌ಗಳು ಮಹಾಭಾರತ, ರಾಮಾಯಣ, ಬುನಿಯಾದ್‌, ನುಕ್ಕಡ್‌ ಮೊದಲಾದ ಮೂರು ದಶಕಗಳ ಹಿಂದಿನ ಧಾರಾವಾಹಿಗಳನ್ನು ಮರುಪ್ರಸಾರ ಮಾಡಲು ಶುರುಮಾಡಿದವು. ವೀಕ್ಷಕರೂ ಇಂಥವುಗಳನ್ನು ಮುಗಿಬಿದ್ದು ನೋಡಿದರು.

‘ನಾನು ಚಿಕ್ಕವಳಿದ್ದಾಗ ತಂದೆ–ತಾಯಿ, ಅಜ್ಜ– ಅಜ್ಜಿಯ ಜೊತೆ ಕೂತು ಮಹಾಭಾರತ ಧಾರಾವಾಹಿ ವೀಕ್ಷಿಸಿದ್ದೆ. ಆಗಷ್ಟೇ ಬಣ್ಣದ ಟಿವಿ ಮನೆಗೆ ಬಂದಿತ್ತು’ ಎನ್ನುವ ಟೆಕಿ ಶ್ರೀನಿವಾಸ್‌ ಮೂರ್ತಿ, ‘ಈ ಧಾರಾವಾಹಿ ವೀಕ್ಷಿಸಿದಾಗ 30 ವರ್ಷಗಳ ಹಿಂದೆ ಕಳೆದ ಬಾಲ್ಯದ ನೆನಪಾಗುತ್ತದೆ. ಕೊಂಚ ಸಮಯವಾದರೂ ಖುಷಿ ಎನಿಸುತ್ತದೆ’ ಎಂದು ನೆನಪುಗಳನ್ನು ಬಿಚ್ಚಿಡುತ್ತಾರೆ.

ಇನ್ನು ಕೆಲವರು ಹಳೆಯ ಫೋಟೊ ಆಲ್ಬಂ ತಿರುವಿ ಹಾಕುವುದು, ಮಕ್ಕಳೊಂದಿಗೆ ಹಳೆಯ ಕಾಲದ ಅಳಗುಳಿ ಮನೆ, ಹಾವು– ಏಣಿ ಆಟ ಆಡುವುದರ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಇಂತಹ ಭಾವುಕ ಸನ್ನಿವೇಶಗಳು, ಚಟುವಟಿಕೆಯಲ್ಲಿ ತೊಡಗಿಕೊಳ್ಳುವವರಿಗೆ ಸಾವಿನ ಕುರಿತ ಭಯವೂ ಕಡಿಮೆ ಎಂಬುದು ಉತ್ತರ ಡಕೋಟ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಿಂದಲೂ ಸಾಬೀತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT