ಭಾನುವಾರ, ಅಕ್ಟೋಬರ್ 17, 2021
22 °C

ಜಗತ್ತಿನ ಮೊದಲ ಮಲೇರಿಯಾ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ

ನ್ಯೂಯಾರ್ಕ್‌ ಟೈಮ್ಸ್‌ Updated:

ಅಕ್ಷರ ಗಾತ್ರ : | |

Prajavani

ಜಿನೀವಾ: ಪ್ರತಿ ವರ್ಷ ಲಕ್ಷಾಂತರ ಜನರ ಸಾವಿಗೆ ಕಾರಣವಾಗುತ್ತಿರುವ ಮಲೇರಿಯಾ ವಿರುದ್ಧ ಹೋರಾಟಕ್ಕೆ ಲಸಿಕೆ ಅಭಿವೃದ್ಧಿಯಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅನುಮೋದನೆ ದೊರೆತಿದೆ. 'ಇದೊಂದು ಐತಿಹಾಸಿಕ ಘಟನೆ' ಎಂದು ಬಣ್ಣಿಸಲಾಗಿದೆ.

5 ವರ್ಷಕ್ಕಿಂತ ಕಡಿಮೆ ವಯಸ್ಸಿನ 2,60,000ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ ಪ್ರತಿ ವರ್ಷ ಸುಮಾರು 5,00,000 ಮಂದಿ ಮಲೇರಿಯಾದಿಂದ ಸಾವಿಗೀಡಾಗುತ್ತಿದ್ದಾರೆ. ಆಫ್ರಿಕಾ ಭಾಗದಲ್ಲಿ ಗರಿಷ್ಠ ಸಾವು ಸಂಭವಿಸುತ್ತಿದೆ.

'ಮಸ್ಕಿರಿಕ್ಸ್‌ (Mosquirix)' ಹೆಸರಿನ ಲಸಿಕೆಯು ಮೊದಲ ಮಲೇರಿಯಾ ಲಸಿಕೆ ಮಾತ್ರವೇ ಅಲ್ಲದೆ; ಯಾವುದೇ ಪರಾವಲಂಬಿ ಜೀವಿಯಿಂದ ಉಂಟಾಗುವ ರೋಗಗಳನ್ನೂ ತಡೆಯುತ್ತದೆ. ವೈರಸ್‌ ಅಥವಾ ಬ್ಯಾಕ್ಟೀರಿಯಾಗಿಂತಲೂ ಪರಾವಲಂಬಿ ಜೀವಿಗಳು ಮತ್ತಷ್ಟು ಸಂಕೀರ್ಣವಾಗಿದ್ದು, ಮಲೇರಿಯಾ ತಡೆ ಲಸಿಕೆಗಾಗಿ ಕಳೆದ 100 ವರ್ಷಗಳಿಂದಲೂ ಪ್ರಯತ್ನ ನಡೆಯುತ್ತಿದೆ.

ಅನಾಫಿಲಿಸ್‌ ಸೊಳ್ಳೆ ಕಡಿತದಿಂದ ಮನುಷ್ಯನ ದೇಹ ಸೇರುವ ಪ್ಲಾಸ್ಮೋಡಿಯಾ ರೋಗ ನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಮಾರಣಾಂತಿಕವಾದ ಫಾಲ್ಸಿಪರಮ್‌ ಮಲೇರಿಯಾ ತರುತ್ತದೆ. ಗ್ಲ್ಯಾಕ್ಸೊಸ್ಮಿತ್‌ಕ್ಲೈನ್‌ ಕಂಪನಿಯು ಮಲೇರಿಯಾ ತಡೆಗಟ್ಟುವ ಹೊಸ ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆ.

ಬುಧವಾರ ವಿಶ್ವ ಆರೋಗ್ಯ ಸಂಸ್ಥೆಯು ಮಲೇರಿಯಾ ಲಸಿಕೆಗೆ ಅನುಮೋದನೆ ನೀಡಿದ್ದು, ಈ ಮೊದಲ ಲಸಿಕೆಯನ್ನು ಆಫ್ರಿಕಾದಾದ್ಯಂತ ಮಕ್ಕಳಿಗೆ ನೀಡುವಂತೆ ಆಗ್ರಹಿಸಿದೆ. 'ಸುರಕ್ಷಿತವಾದ ಮಲೇರಿಯಾ ಲಸಿಕೆ ಸಿದ್ಧವಾಗಿದೆ, ಅದು ಪರಿಣಾಮಕಾರಿಯೂ ಹಾಗೂ ವಿತರಣೆಗೆ ಸಜ್ಜಾಗಿಯೂ ಇರುವುದು 'ಐತಿಹಾಸಿಕ ಘಟನೆಯಾಗಿದೆ'' ಎಂದು ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಮಲೇರಿಯಾ ಕಾರ್ಯಕ್ರಮದ ನಿರ್ದೇಶಕ ಡಾ.ಪೆಡ್ರೊ ಅಲಾನ್ಸೊ ಹೇಳಿದ್ದಾರೆ.

ಮುಂದುವರಿದ ರಾಷ್ಟ್ರಗಳಲ್ಲಿ ಮಲೇರಿಯಾ ಅಪರೂಪವಾಗಿದೆ. ಅಮೆರಿಕದಲ್ಲಿ ಪ್ರತಿ ವರ್ಷ ಸುಮರು 2,000 ಪ್ರಕರಣಗಳು ದಾಖಲಾಗುತ್ತಿವೆ, ಅದರಲ್ಲಿ ಹೆಚ್ಚಿನವು ಹೊರ ರಾಷ್ಟ್ರಗಳಿಂದ ಬಂದಿರುವವರಲ್ಲಿ ಕಾಣಿಸಿಕೊಂಡಿದೆ.

ಕ್ಲಿನಿಕಲ್‌ ಪ್ರಯೋಗದಲ್ಲಿ ಲಸಿಕೆಯು ಮೊದಲ ವರ್ಷದಲ್ಲಿ ಹಲವು ರೀತಿಯ ಮಲೇರಿಯಾಗಳನ್ನು ಶೇ 50ರಷ್ಟು ಪರಿಣಾಮಕಾರಿಯಾಗಿ ತಡೆಗಟ್ಟಿದೆ. ಅಧ್ಯಯನಗಳ ಪ್ರಕಾರ, ಅತಿ ಹೆಚ್ಚು ಮಲೇರಿಯಾ ಪ್ರಕರಣಗಳಿರುವ ರಾಷ್ಟ್ರಗಳಿಗೆ ಲಸಿಕೆ ಪೂರೈಕೆಯಾದರೆ, 54 ಲಕ್ಷ ಪ್ರಕರಣಗಳು ಹಾಗೂ 23,000 ಮಕ್ಕಳ ಸಾವು ತಡೆಯಬಹುದಾಗಿದೆ.

ಆಫ್ರಿಕಾದ ಉಪ–ಸಹರಾ ವಲಯದಲ್ಲಿ ಪ್ರತಿ ವರ್ಷ ಒಬ್ಬ ವ್ಯಕ್ತಿ ಸರಾಸರಿ ಆರು ಬಾರಿ ಮಲೇರಿಯಾಗೆ ಒಳಗಾಗುತ್ತಿದ್ದಾರೆ. ಪದೇ ಪದೇ ವ್ಯಕ್ತಿ ಅಥವಾ ಮಕ್ಕಳಲ್ಲಿ ಮಲೇರಿಯಾ ಕಾಣಿಸಿಕೊಳ್ಳುವುದರಿಂದ ದೇಹದ ರೋಗ ನಿರೋಧಕ ಶಕ್ತಿ ವ್ಯವಸ್ಥೆಯನ್ನು ಶಾಶ್ವತವಾಗಿ ಬದಲಿಸಿಬಿಡುತ್ತದೆ. ಅದರಿಂದಾಗಿ ದೇಹದಲ್ಲಿ ಶಕ್ತಿ ಕುಂದುತ್ತದೆ ಹಾಗೂ ಬಹುಬೇಗ ಇತರೆ ರೋಗಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚುತ್ತದೆ.

5 ವರ್ಷ ವಯಸ್ಸಿನೊಳಗಿನ ಮಕ್ಕಳಿಗೆ 'ಮಸ್ಕಿರಿಕ್ಸ್‌ ಲಸಿಕೆಯ' ಮೂರು ಡೋಸ್‌ ನೀಡಲಾಗಿದೆ. 18 ತಿಂಗಳ ಬಳಿಕ ನಾಲ್ಕನೇ ಡೋಸ್‌ ಲಸಿಕೆ ನೀಡಲಾಗಿದೆ. ಕೀನ್ಯಾ, ಮಾಲಾವಿ ಹಾಗೂ ಘಾನಾದಲ್ಲಿ ಲಸಿಕೆಯ ಪ್ರಯೋಗ ನಡೆಸಲಾಗಿದೆ. ಈಗಾಗಲೇ 23 ಲಕ್ಷಕ್ಕೂ ಹೆಚ್ಚು ಡೋಸ್‌ ಲಸಿಕೆ ಹಾಕಲಾಗಿದ್ದು, 8 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಇದರಿಂದಾಗಿ ಮಲೇರಿಯಾದಿಂದ ಮಕ್ಕಳ ರಕ್ಷಣೆ ಪ್ರಮಾಣವು ಶೇ 90ರಷ್ಟಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು