ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update: ಇಂಗ್ಲೆಂಡ್‌ನಲ್ಲಿ 2ನೇ ಹಂತದ ಅಲೆ ಭೀತಿ, 41,821 ಸಾವು

Last Updated 19 ಸೆಪ್ಟೆಂಬರ್ 2020, 3:13 IST
ಅಕ್ಷರ ಗಾತ್ರ

ಲಂಡನ್: ಇಂಗ್ಲೆಂಡ್ ಇದೀಗ ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಹಂತದ ಅಲೆಯ ಪ್ರಾರಂಭವನ್ನು ಎದುರಿಸುತ್ತಿದೆ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ತಿಳಿಸಿದ್ದು, ಇದನ್ನು ತಡೆಯಲು ಕಠಿಣ ಅಂತರ ಕಾಪಾಡಿಕೊಳ್ಳುವ ನಿರ್ಬಂಧಗಳನ್ನು ಹೇರುವ ಸುಳಿವನ್ನು ನೀಡಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಇಂಗ್ಲೆಂಡ್‌ನಲ್ಲಿ 4,322 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಇದು ಮೇ ತಿಂಗಳಿಂದೀಚೆಗೆ ಅತಿ ಹೆಚ್ಚಿನ ಏಕದಿನ ಹೆಚ್ಚಳವಾಗಿದೆ ಎಂದು ಆರೋಗ್ಯ ಮತ್ತು ಸಾಮಾಜಿಕ ಆರೈಕೆ ಇಲಾಖೆಯು ಶುಕ್ರವಾರ ಮಾಹಿತಿ ನೀಡಿದೆ.

ಕೋವಿಡ್-19 ಎರಡನೇ ಅಲೆಯು ಎದುರಾಗುತ್ತಿರುವುದನ್ನು ನೋಡುತ್ತಿದ್ದೇವೆ. ನಾವು ಫ್ರಾನ್ಸ್‌ನಲ್ಲಿ ನೋಡಿದ್ದೇವೆ, ಸ್ಪೇನ್‌ನಲ್ಲಿ ನೋಡಿದ್ದೇವೆ... ಹೀಗಿರುವಾಗ ಕೋವಿಡ್‌ನ ಎರಡನೇ ಅಲೆಯನ್ನು ಈ ದೇಶದಲ್ಲಿ ನೋಡುವುದು ಅನಿವಾರ್ಯವಾಗಿದೆ ಎಂದು ಸುದ್ದಿಗಾರರೊಂದಿಗೆ ಜಾನ್ಸನ್ ತಿಳಿಸಿದ್ದಾರೆ.

ಎರಡನೇ ಬಾರಿಗೆ ಲಾಕ್‌ಡೌನ್‌ ಹೇರಿಕೆಯನ್ನು ಬಯಸುತ್ತಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ಆದರೆ ಸ್ಪಷ್ಟವಾಗಿ ಏನಾಗುತ್ತಿದೆ ಎಂಬುದನ್ನು ನೀವು ನೋಡಿದಾಗ, ನಾವು ಸೋಮವಾರ ಜಾರಿಗೆ ತಂದಿರುವ 'ಆರು ನಿಯಮ'ಗಳಿಗಿಂತಲೂ ಕಠಿಣವಾದುದನ್ನು ನಾವು ಮುಂದುವರಿಸಬೇಕೇ ಎಂಬುದನ್ನು ನೋಡಬೇಕಾಗಿದೆ. ಸದ್ಯ ಇಂಗ್ಲೆಂಡ್‌ನಲ್ಲಿರುವ ಆರಕ್ಕೂ ಹೆಚ್ಚು ಜನರು ಸೇರುವ ಸಾಮಾಜಿಕ ಕೂಟಗಳ ಮೇಲಿನ ನಿಷೇಧದ ಕುರಿತು ಪ್ರಧಾನಿ ಉಲ್ಲೇಖಿಸಿದ್ದಾರೆ.

ಕಳೆದ ಎರಡು ವಾರಗಳಲ್ಲಿ, ದೇಶದ ಪರೀಕ್ಷೆ ಮತ್ತು ಪತ್ತೆಹಚ್ಚುವಿಕೆ ಸೇವೆಯಲ್ಲಿನ ವೈಫಲ್ಯಗಳ ಕುರಿತು ಸರ್ಕಾರವು ಟೀಕೆಗಳನ್ನು ಎದುರಿಸುತ್ತಿದ್ದು, ಸೇವೆಯು ವಿಳಂಬವಾಗುತ್ತಿದೆ. ಪರೀಕ್ಷೆಗೆ ಒಳಪಡಲು ವ್ಯಕ್ತಿಗಳಿಗೆ ನೂರಾರು ಮೈಲುಗಳಷ್ಟು ಪ್ರಯಾಣಿಸಲು ಸೂಚನೆ ನೀಡಲಾಗಿದೆ ಎಂದು ವರದಿಯಾಗಿದೆ.

ವಿಶ್ವದಾದ್ಯಂತ ಒಟ್ಟು 3,03,93,591 ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ 2,06,79,272 ಜನರು ಸೋಂಕಿನಿಂದ ಗುಣಮುಖರಾಗಿದ್ದರೆ. ಈವರೆಗೆ ಸೋಂಕಿನಿಂದ 9,50,344 ಮಂದಿ ಮೃತಪಟ್ಟಿದ್ದಾರೆ.

ಕೊರೊನಾ ವೈರಸ್‌ ಸೋಂಕಿನಿಂದ ಸಾವಿಗೀಡಾದವರು ಹಾಗೂ ಒಟ್ಟು ಪ್ರಕರಣಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಒಟ್ಟು 67,22,699 ಪ್ರಕರಣಗಳು ವರದಿಯಾಗಿವೆ. ಒಟ್ಟಾರೆ 1,98,484 ಜನರು ಸಾವಿಗೀಡಾಗಿದ್ದು, 25,56,465 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿರುವ ಭಾರತದಲ್ಲಿ 52,14,677 ಜನರಿಗೆ ಸೋಂಕು ತಗುಲಿದ್ದು, 41,12,551 ಜನರು ಗುಣಮುಖರಾಗಿದ್ದಾರೆ. ಈವರೆಗೆ 84,372 ಜನರು ಮೃತಪಟ್ಟಿದ್ದಾರೆ.

ಸಾವಿನ ಪ್ರಮಾಣದಲ್ಲಿ ಭಾರತಕ್ಕಿಂತ ಮುಂದಿರುವ ಬ್ರೆಜಿಲ್‌‌ನಲ್ಲಿ 44,95,183 ಜನರಿಗೆ ಸೋಂಕು ತಗುಲಿದ್ದರೆ, 38,97,539 ಜನರು ಚೇತರಿಸಿಕೊಂಡಿದ್ದಾರೆ.

ಇನ್ನುಳಿದಂತೆ ರಷ್ಯಾದಲ್ಲಿ 10,86,955, ಪೆರುವಿನಲ್ಲಿ 7,50,098, ಕೊಲಂಬಿಯಾದಲ್ಲಿ 7,43,945 ಮತ್ತು ಮೆಕ್ಸಿಕೊದಲ್ಲಿ 6,88,954 ಜನರಿಗೆ ಸೋಂಕು ತಗುಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT