ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿನಿಯಾದಲ್ಲಿ ಮಾರಕ ಮಾರ್ಬರ್ಗ್‌ ಸೋಂಕು: ಏನಿದರ ಲಕ್ಷಣ, ಎಲ್ಲಿಯ ಮೂಲ?

Last Updated 10 ಆಗಸ್ಟ್ 2021, 14:53 IST
ಅಕ್ಷರ ಗಾತ್ರ

ಜಿನೀವಾ: ಪಶ್ಚಿಮ ಆಫ್ರಿಕಾದ ರಾಷ್ಟ್ರ ಗಿನಿಯಾದಲ್ಲಿ ಇದೇ ಮೊದಲ ಬಾರಿಗೆ ಮಾರ್ಬರ್ಗ್‌ ವೈರಸ್‌ ಸೋಂಕು ಕಾಣಿಸಿಕೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ಘೋಷಿಸಿದೆ.

ಗಿನಿಯಾದ ದಕ್ಷಿಣ ಪ್ರಾಂತ್ಯ ಗುಕೆಕೆಡೌ ಎಂಬಲ್ಲಿ ಮೃತಪಟ್ಟವ್ಯಕ್ತಿಯೊಬ್ಬರಲ್ಲಿ ಸೋಂಕು ಇದ್ದದ್ದು ದೃಢವಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವಿಶ್ವಸಂಸ್ಥೆ ಹೇಳಿದೆ. ಈ ವ್ಯಕ್ತಿ ಸಂಪರ್ಕಕ್ಕೆ ಬಂದಿದ್ದ ನಾಲ್ವರನ್ನು ಪತ್ತೆ ಮಾಡುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಮಾರ್ಬರ್ಗ್‌ ವೈರಸ್‌ ಸೋಂಕು ವ್ಯಾಪಕವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ಅದರ ಅರ್ಥ, ನಾವು ವೈರಸ್‌ ಅನ್ನು ಅದರ ಮೂಲದಲ್ಲೇ ನಿಯಂತ್ರಿಸಬೇಕು’ ಎಂದು ಆರೋಗ್ಯ ಸಂಸ್ಥೆಯ ಆಫ್ರಿಕಾ ಪ್ರಾದೇಶಿಕ ನಿರ್ದೇಶಕ ಡಾ ಮತ್ಶಿದಿಸೋ ಮೋತಿ ಅಭಿಪ್ರಾಯಪಟ್ಟಿದ್ದಾರೆ.

‘ತೀವ್ರ ರಕ್ತಸ್ರಾವ, ತೀವ್ರಜ್ವರ ಉಂಟು ಮಾಡುವ ಅತ್ಯಂತ ಮಾರಕವೂ, ಸಾಂಕ್ರಾಮಿಕವೂ ಆಗಿರುವ ಮಾರ್ಬರ್ಗ್ ಗಿನಿಯಾದಲ್ಲಿ ಇದೇ ಮೋದಲ ಬಾರಿಗೆ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲ, ಪಶ್ಚಿಮ ಆಫ್ರಿಕಾದಲ್ಲಿ ಪತ್ತೆಯಾಗಿರುವುದೂ ಇದೇ ಮೊದಲು’ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಮಾರ್ಬರ್ಗ್ ವೈರಾಣುವು ಎಬೊಲಾ ವೈರಾಣು ಕುಟುಂಬ ವರ್ಗಕ್ಕೆ ಸೇರಿದ್ದಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಗಿನಿಯಾದಲ್ಲಿ ಕಾಣಿಸಿಕೊಂಡಿದ್ದ ಎಬೊಲಾ ಎರಡನೇ ಅಲೆಯು ಎರಡು ತಿಂಗಳ ಹಿಂದೆಯಷ್ಟೇ ಅಂತ್ಯಗೊಂಡಿತ್ತು. ಈ ವಿಚಾರವನ್ನು ವಿಶ್ವ ಆರೋಗ್ಯ ಸಂಸ್ಥೆ ಅತ್ಯಂತ ಸಂಭ್ರಮದಿಂದ ಘೋಷಿಸಿತ್ತು. ಆದರೆ, ಎಬೊಲಾ ಅಂತ್ಯಗೊಂಡ ಬೆನ್ನಿಗೇ ಮಾರ್ಬರ್ಗ್‌ ಕಾಣಿಸಿಕೊಂಡಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ರೋಗದ ಲಕ್ಷಣಗಳು

ಅಧಿಕ ಜ್ವರ, ತೀವ್ರ ತಲೆನೋವು ಮತ್ತು ತೀವ್ರ ಅಸ್ವಸ್ಥತೆ ಮಾರ್ಬರ್ಗ್‌ ಸೋಂಕಿನ ಆರಂಭಿಕ ಲಕ್ಷಣಗಳು. ಇದರ ಜೊತೆಗೆ, ವಾಕರಿಕೆ, ವಾಂತಿ, ಎದೆ ನೋವು, ಗಂಟಲು ನೋವು, ಹೊಟ್ಟೆ ನೋವು ಮತ್ತು ಅತಿಸಾರ ಬೇಧಿ ನಂತರ ಕಾಣಿಸಿಕೊಳ್ಳಬಹುದು. ರೋಗಲಕ್ಷಣಗಳು ತೀವ್ರವಾದ ನಂತರ, ಕಾಮಾಲೆ, ಮೇದೋಜೀರಕ ಗ್ರಂಥಿಯ ಉರಿಯೂತ, ತೂಕದಲ್ಲಿ ಅತಿಯಾದ ನಷ್ಟ, ಸನ್ನಿ, ಆಘಾತ, ಪಿತ್ತಜನಕಾಂಗದ ವೈಫಲ್ಯ, ತೀವ್ರ ರಕ್ತಸ್ರಾವ ಮತ್ತು ಬಹು ಅಂಗಗಳ ವೈಫಲ್ಯ ಸಂಭವಿಸಬಹುದು ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಸಂಸ್ಥೆ (ಸಿಡಿಸಿ) ಹೇಳಿದೆ.

ಪತ್ತೆಯಾಗಿದ್ದು ಎಲ್ಲಿ? ಯಾವಾಗಾ?

ಮಾರ್ಬರ್ಗ್ ವೈರಸ್ ಅನ್ನು 1967 ರಲ್ಲಿ ಮೊದಲ ಬಾರಿಗೆ ಗುರುತಿಸಲಾಯಿತು. ಈ ಸಾಂಕ್ರಾಮಿಕವು ಜರ್ಮನಿಯ ಮಾರ್ಬರ್ಗ್, ಫ್ರಾಂಕ್‌ಫರ್ಟ್ ಮತ್ತು ಬೆಲ್‌ಗ್ರೇಡ್, ಯುಗೊಸ್ಲಾವಿಯದ (ಈಗ ಸೆರ್ಬಿಯಾ) ಪ್ರಯೋಗಾಲಯಗಳಿಂದ ಏಕಕಾಲದಲ್ಲಿ ಹೊಮ್ಮಿತ್ತು. ಈ ಪ್ರಯೋಗಾಲಯಗಳ ಒಟ್ಟು 31 ಮಂದಿ ಸೋಂಕಿತರಾಗಿದ್ದರು. ಇದರಲ್ಲಿ 7 ಮಂದಿ ಮೃತಪಟ್ಟಿದ್ದರು.

ಆಫ್ರಿಕನ್‌ ಫ್ರೂಟ್‌ ಬ್ಯಾಟ್‌ (ಬಾವಲಿಗಳು) ಈ ವೈರಸ್‌ನ ವಾಹಕಗಳಾಗಿವೆ ಎಂದು ಸಿಡಿಸಿಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT