ಭಾನುವಾರ, ಜೂನ್ 26, 2022
25 °C

ಲಾಹೋರ್‌ನಲ್ಲಿ ಪೆಟ್ರೋಲ್ ಇಲ್ಲ, ಎಟಿಎಂನಲ್ಲಿ ದುಡ್ಡಿಲ್ಲ: ಮಾಜಿ ಕ್ರಿಕೆಟಿಗ ಹಫೀಜ್

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕ್ರಿಕೆಟ್‌ ಸಂಬಂಧಿತ ವಿಚಾರಗಳಲ್ಲಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ ಹಲವು ಸಂದರ್ಭಗಳಲ್ಲಿ ಚಾಟಿ ಬೀಸಿದ್ದ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಹಫೀಜ್‌, ಈಗ ದೇಶದ ದುಸ್ಥಿತಿಯ ಬಗ್ಗೆ ಪ್ರಶ್ನೆ ಮುಂದಿಟ್ಟಿದ್ದಾರೆ. ಪಾಕಿಸ್ತಾನದಲ್ಲಿ ಸಾಮಾನ್ಯ ವ್ಯಕ್ತಿಯು ಎದುರಿಸುತ್ತಿರುವ ಸಮಸ್ಯೆಗಳನ್ನು ತೆರೆದಿಟ್ಟಿದ್ದಾರೆ

'ಲಾಹೋರ್‌ನ ಯಾವುದೇ ಪೆಟ್ರೋಲ್‌ ಕೇಂದ್ರಗಳಲ್ಲಿ ಪೆಟ್ರೋಲ್‌ ಲಭ್ಯವಿಲ್ಲ? ಎಟಿಎಂಗಳಲ್ಲಿ ನಗದು ಲಭ್ಯವಿಲ್ಲ? ರಾಜಕೀಯ ನಿರ್ಧಾರಗಳಿಂದ ಸಾಮಾನ್ಯ ಜನರೇಕೆ ಸಮಸ್ಯೆ ಅನುಭವಿಸಬೇಕು,' ಎಂದು ಮೊಹಮ್ಮದ್‌ ಹಫೀಜ್‌ ಟ್ವೀಟಿಸಿದ್ದಾರೆ. ಅದರಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಹಾಗೂ ಹಾಲಿ ಪ್ರಧಾನಿ ಶಹಬಾಜ್‌ ಶರೀಫ್‌ ಸೇರಿ ನಾಲ್ವರು ರಾಜಕಾರಣಿಗಳನ್ನು ಟ್ಯಾಗ್ ಮಾಡಿದ್ದಾರೆ.‌

ಇಮ್ರಾನ್‌ ಖಾನ್‌ ಪದಚ್ಯುತಿಯ ಬಳಿಕ ಈ ವರ್ಷ ಏಪ್ರಿಲ್‌ನಲ್ಲಿ ಶಹಬಾಜ್‌ ಶರೀಫ್‌ ಪಾಕಿಸ್ತಾನದ 23ನೇ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಪಾಕಿಸ್ತಾನ ಆರ್ಥಿಕ ಹಿಂಜರಿತ, ಹಣದುಬ್ಬರ, ಬೆಲೆ ಏರಿಕೆ ಸಮಸ್ಯೆಗಳನ್ನು ಎದುರಿಸುತ್ತಿದೆ.

ಮೊಹಮ್ಮದ್‌ ಹಫೀಜ್‌ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನ ಎಲ್ಲ ಮೂರು ಮಾದರಿಗಳಲ್ಲಿ ಆಡಿದ್ದಾರೆ. ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕತ್ವವನ್ನೂ ವಹಿಸಿದ್ದರು. ಇದೇ ವರ್ಷ ಜನವರಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. 

ಇದನ್ನೂ ಓದಿ:

ಟೆಸ್ಟ್ ಕ್ರಿಕೆಟ್‌ಗೆ ಹಫೀಜ್ 2018ರಲ್ಲಿ ವಿದಾಯ ಹೇಳಿದ್ದರು. 2019ರ ವಿಶ್ವಕಪ್‌ ಟೂರ್ನಿಯ ನಂತರ ಏಕದಿನ ತಂಡದಲ್ಲಿ ಅವರಿಗೆ ಅವಕಾಶ ನೀಡಿರಲಿಲ್ಲ. 55 ಟೆಸ್ಟ್, 218 ಏಕದಿನ ಮತ್ತು 119 ಟ್ವೆಂಟಿ20 ಪಂದ್ಯಗಳನ್ನು ಅವರು ಆಡಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ 3,652 ರನ್ ಗಳಿಸಿರುವ ಅವರು 53 ವಿಕೆಟ್ ಉರುಳಿಸಿದ್ದಾರೆ. ಏಕದಿನ ಮಾದರಿಯಲ್ಲಿ 6,614 ರನ್‌ ಕಲೆ ಹಾಕಿದ್ದು 139 ವಿಕೆಟ್ ಉರುಳಿಸಿದ್ದಾರೆ. ಟ್ವೆಂಟಿ20 ಕ್ರಿಕೆಟ್‌ನಲ್ಲಿ 2514 ರನ್‌ಗಳೊಂದಿಗೆ ಪಾಕಿಸ್ತಾನ ಪರವಾಗಿ ಗರಿಷ್ಠ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. 61 ವಿಕೆಟ್‌ಗಳು ಈ ಮಾದರಿಯಲ್ಲಿ ಅವರ ಖಾತೆಯಲ್ಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು