ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pandora Papers: ಸಚಿನ್, ಶಕೀರಾ ಸೇರಿ ಜಗತ್ತಿನ ಗಣ್ಯರ ಹೂಡಿಕೆ ದಾಖಲೆಗಳು ಸೋರಿಕೆ

Last Updated 4 ಅಕ್ಟೋಬರ್ 2021, 8:33 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಜಗತ್ತಿನ ಹತ್ತಾರು ರಾಷ್ಟ್ರಗಳ ಹಾಲಿ ಮತ್ತು ಮಾಜಿ ಮುಖಂಡರು, ರಾಜಕಾರಣಿಗಳು, ಸೆಲೆಬ್ರಿಟಿಗಳು, ಧಾರ್ಮಿಕ ಮುಖಂಡರು, ಡ್ರಗ್‌ ಡೀಲರ್‌ಗಳು ಹಾಗೂ ಅಧಿಕಾರಿಗಳ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳು ಸೋರಿಕೆಯಾಗಿವೆ. 'ಪಂಡೋರಾ ಪೇಪರ್ಸ್‌' ಎಂದು ಕರೆಯಲಾಗುತ್ತಿರುವ ಈ ದಾಖಲೆಗಳಲ್ಲಿ ಭಾರತ ಸೇರಿದಂತೆ 91 ರಾಷ್ಟ್ರಗಳ ಪ್ರಮುಖ ವ್ಯಕ್ತಿಗಳಿಗೆ ಸಂಬಂಧಿಸಿದ ರಹಸ್ಯ ವಿವರಗಳು ಇರುವುದಾಗಿ ವರದಿಯಾಗಿದೆ. ಹೊರರಾಷ್ಟ್ರಗಳಲ್ಲಿ ಮಾಡಿರುವ ರಹಸ್ಯ ಹೂಡಿಕೆಗಳ ಮಾಹಿತಿ ಬಹಿರಂಗವಾಗಿದೆ.

ವಾಷಿಂಗ್ಟನ್‌ ಪೋಸ್ಟ್‌, ಬಿಬಿಸಿ ಹಾಗೂ ದಿ ಗಾರ್ಡಿಯನ್‌ ಸೇರಿದಂತೆ 150 ಮಾಧ್ಯಮಗಳ, 117 ರಾಷ್ಟ್ರಗಳ ಸುಮಾರು 600 ಪತ್ರಕರ್ತರು ಪಂಡೋರಾ ಪೇಪರ್ಸ್‌ ತನಿಖೆಯಲ್ಲಿ ಭಾಗಿಯಾಗಿದ್ದಾರೆ. ಜಗತ್ತಿನಾದ್ಯಂತ ಇರುವ 14 ಹಣಕಾಸು ಸೇವಾ ಕಂಪನಿಗಳ ಸುಮಾರು 11.9 ದಶಲಕ್ಷ ದಾಖಲೆಗಳು ಸೋರಿಕೆಯಾಗಿವೆ. ತನಿಖಾ ಪತ್ರಕರ್ತರ ಅಂತರರಾಷ್ಟ್ರೀಯ ಒಕ್ಕೂಟವು (ಐಸಿಐಜೆ) ಭಾನುವಾರ ವರದಿ ಬಿಡುಗಡೆ ಮಾಡಿದೆ.

ಭಾರತದ ಕ್ರಿಕೆಟ್‌ ದೇವರು ಸಚಿನ್ ತೆಂಡೂಲ್ಕರ್‌, ಪಾಂಪ್‌ ಮ್ಯೂಸಿಕ್‌ ತಾರೆ ಶಕೀರಾ, ಸೂಪರ್‌ಮಾಡೆಲ್ ಕ್ಲೌಡಿಯಾ ಶಿಫರ್‌, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೆಸರುಗಳಿರುವುದು ಪತ್ತೆಯಾಗಿದೆ. ಉದ್ಯಮಿ ಅನಿಲ್‌ ಅಂಬಾನಿಗೆ ಸೇರಿದ 1.3 ಬಿಲಿಯನ್‌ ಡಾಲರ್‌ (ಅಂದಾಜು ₹9,640 ಕೋಟಿ) ಮೌಲ್ಯದ ಸಾಗರೋತ್ತರ ವ್ಯವಹಾರಗಳ ವಿವರಗಳೂ ಇದರಲ್ಲಿವೆ.

ಏನಿದು ಪಂಡೋರಾ?

ಗ್ರೀಕ್‌ ಪುರಾಣಗಳ ಪ್ರಕಾರ, ಪಂಡೋರಾ; ಅಗ್ನಿ ದೇವರಿಂದ ಸೃಷ್ಟಿಯಾದ ಮೊದಲ ಮಹಿಳೆ. ಆಕೆಗೆ ರಹಸ್ಯವಾದ ಪೆಟ್ಟಿಗೆಯೊಂದನ್ನು ಕೊಟ್ಟಿರುತ್ತಾರೆ ಹಾಗೂ ಅದರಲ್ಲಿ ಎಲ್ಲ ದುಷ್ಟ ಶಕ್ತಿಗಳನ್ನೂ ಅಡಗಿಸಿಡಲಾಗಿರುತ್ತದೆ. ಅದನ್ನು ತೆರೆಯದಂತೆ ಎಚ್ಚರಿಕೆ ನೀಡಲಾಗಿರುತ್ತದೆ. ಕುತೂಹಲ ತಾಳಲಾರದೆ, ಪಂಡೋರಾ ಆ ಪೆಟ್ಟಿಯನ್ನು ತೆರೆಯುತ್ತಿದ್ದಂತೆ ಕೆಟ್ಟ ಶಕ್ತಿಗಳು ಜಗತ್ತಿನಲ್ಲಿ ಹರಡಿಕೊಳ್ಳುತ್ತವೆ. ಅದಕ್ಕೆ ಪಂಡೋರಾಬಾಕ್ಸ್‌ ಎಂಬ ಹೆಸರಿದೆ.

ಭ್ರಷ್ಟರು ಮತ್ತು ಗಣ್ಯ ವ್ಯಕ್ತಿಗಳು ಮುಚ್ಚುಮರೆಯಲ್ಲಿ ನಡೆಸುತ್ತಿರುವ ವ್ಯವಹಾರಗಳನ್ನು ಕಾಪಿಟ್ಟುಕೊಳ್ಳಲು ಹೊರರಾಷ್ಟ್ರಗಳ ಖಾತೆಗಳನ್ನು ಬಳಸಿಕೊಂಡಿರುವ ಕುರಿತು ರಹಸ್ಯ ದಾಖಲೆಗಳು ಲಭ್ಯವಾಗಿದೆ. ಅದೇ ಕಾರಣಕ್ಕೆ ಈ ದಾಖಲೆಗಳಿಗೆ 'ಪಂಡೋರಾ ಪೇಪರ್ಸ್‌' ಎಂದು ಕರೆಯಲಾಗಿದೆ.

ಯಾರೆಲ್ಲರ ದಾಖಲೆಗಳು ಬಹಿರಂಗ...

ಜಗತ್ತಿನ 330ಕ್ಕೂ ಹೆಚ್ಚು ಹಾಲಿ ಮತ್ತು ಮಾಜಿ ರಾಜಕಾರಣಿಗಳು, ಗಣ್ಯರ ರಹಸ್ಯ ಖಾತೆಗಳು ದಾಖಲೆಗಳು ಸೋರಿಕೆಯಾಗಿವೆ. ಜೋರ್ಡನ್‌ನ ರಾಜ ಅಬ್ದುಲ್ಲಾ II, ಇಂಗ್ಲೆಂಡ್‌ನ ಮಾಜಿ ಪ್ರಧಾನಿ ಟೋನಿ ಬ್ಲೇರ್‌, ಜೆಕ್‌ ರಿಪಬ್ಲಿಕನ್‌ ಪ್ರಧಾನಿ ಆ್ಯಂಡ್ರೆಜ್‌ ಬಾಬಿಸ್‌, ಕೀನ್ಯಾದ ಅಧ್ಯಕ್ಷ ಉಹುರು ಕೀನ್ಯಾಟಾ, ಈಕ್ವೆಡಾರ್‌ ಅಧ್ಯಕ್ಷ ಗಿಲೆರ್ಮೊ ಲಾಸೊ ಹಾಗೂ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಮಾಜಿ ಸಹವರ್ತಿಗಳ ದಾಖಲೆಗಳಿರುವುದು ತನಿಖೆಯಲ್ಲಿ ಪತ್ತೆಯಾಗಿವೆ.

ಕೋಟ್ಯಧಿಪತಿ ಉದ್ಯಮಿ, ಹೂಡಿಕೆದಾರರಾದ ಟರ್ಕಿಯ ಎರ್ಮನ್‌ ಇಲಿಕಕ್‌, ರೆನಾಲ್ಡ್ಸ್‌ ಆ್ಯಂಡ್‌ ರೆನಾಲ್ಡ್ಸ್‌ ಸಾಫ್ಟವೇರ್‌ ಕಂಪನಿಯ ಮಾಜಿ ಸಿಇಒ ರಾಬರ್ಟ್‌ ಟಿ.ಬ್ರುಕ್‌ಮ್ಯಾನ್‌ ಅವರಿಗೆ ಸಂಬಂಧಿಸಿದ ದಾಖಲೆಗಳೂ ಇವೆ.

ಆಸ್ತಿಯನ್ನು ಮುಚ್ಚಿಡುವ ಹಾಗೂ ತೆರಿಗೆ ತಪ್ಪಿಸುವ ಕಾರಣಗಳಿಗಾಗಿಯೇ ಬಹುತೇಕ ಖಾತೆಗಳನ್ನು ಸೃಷ್ಟಿಸಿರುವುದು ಗುರುತಿಸಲಾಗಿದೆ. 1970ರಿಂದ ಸೃಷ್ಟಿಯಾಗಿರುವ ಖಾತೆಗಳ ದಾಖಲೆಗಳ ಲಭ್ಯವಾಗಿದ್ದು, ಹೆಚ್ಚಿನ ದಾಖಲೆಗಳು 1996ರಿಂದ 2020ರ ನಡುವಿನ ವ್ಯವಹಾರಗಳಿಗೆ ಸಂಬಂಧಿಸಿದ್ದಾಗಿವೆ. ಈ ದಾಖಲೆಗಳ ಪ್ರಮಾಣ ಸುಮಾರು 3 ಟೆರಾಬೈಟ್‌ಗಳಷ್ಟಿದೆ. ಅಂದರೆ, ಸ್ಮಾರ್ಟ್‌ಫೋನ್‌ನ ಸುಮಾರು 7,50,000 ಫೋಟೊಗಳಿಗೆ ಸಮ. ಜಗತ್ತಿನಾದ್ಯಂತ 38 ಬೇರೆ ಬೇರೆ ಸ್ಥಳಗಳ 14 ವಿವಿಧ ಹಣಕಾಸು ಸೇವಾ ಕಂಪನಿಗಳಿಂದ ಈ ದಾಖಲೆಗಳು ಸೋರಿಕೆಯಾಗಿವೆ.

ಸೌತ್‌ ಡಕೋಟಾದಲ್ಲಿ 81, ಫ್ಲೋರಿಡಾದಲ್ಲಿ 37 ಟ್ರಸ್ಟ್‌ಗಳು, ಬ್ರಿಟಿಷ್‌ ವರ್ಜಿನ್‌ ಐಲ್ಯಾಂಡ್ಸ್‌, ಸೀಶೆಲ್ಸ್‌, ಹಾಂಕಾಂಗ್‌ ಸೇರಿದಂತೆ 'ತೆರಿಗೆ ಉಳಿಸುವ ಸ್ವರ್ಗಗಳಲ್ಲಿ' ಹೂಡಿಕೆ ಅಥವಾ ವಹಿವಾಟು ಖಾತೆಗಳು ಸೃಷ್ಟಿಯಾಗಿವೆ.

ಇದೇ ಪತ್ರಕರ್ತರ ತಂಡವು 2016ರಲ್ಲಿ ರಹಸ್ಯ ದಾಖಲೆಗಳನ್ನು ಒಳಗೊಂಡ 'ಪನಾಮಾ ಪೇಪರ್ಸ್‌' ಬಿಡುಗಡೆ ಮಾಡಿತ್ತು. ಪನಾಮಾ ಪೇಪರ್ಸ್‌ ದಾಖಲೆಗಳ ಸಂಗ್ರಹ ಪ್ರಮಾಣ ಸುಮಾರು 2.6 ಟೆರಾಬೈಟ್ಸ್‌ಗಳಿತ್ತು.

* ಜೋಡರ್ನ್‌ನ ದೊರೆ ಅಬ್ದುಲ್ಲಾ 2: ಸುಮಾರು ಮೂರು ಡಜನ್‌ ಶೆಲ್‌ ಕಂಪನಿಗಳ ಸಹಾಯದಿಂದ 1995ರಿಂದ 2017ರ ನಡುವೆ ಅಮೆರಿಕ ಹಾಗೂ ಇಂಗ್ಲೆಂಡ್‌ನಲ್ಲಿ 106 ಮಿಲಿಯನ್‌ ಡಾಲರ್‌ ಮೌಲ್ಯದ ಮನೆಗಳನ್ನು ಖರೀದಿಸಿದ್ದಾರೆ.

* ಟೋನಿ ಬ್ಲೇರ್‌ ಸುಮಾರು 4,00,000 ಡಾಲರ್‌ ಆಸ್ತಿ ತೆರಿಗೆ ಉಳಿಸಿಕೊಂಡಿದ್ದಾರೆ.

* ಚೆಕ್‌ ಪ್ರಧಾನಿ ಆ್ಯಂಡ್ರೆಜ್‌ 2009ರಲ್ಲಿ ಶೆಲ್‌ ಕಂಪನಿಗಳ ಮೂಲಕ ಫ್ರಾನ್ಸ್‌ನಲ್ಲಿ 22 ಮಿಲಿಯನ್‌ ಡಾಲರ್‌ ಮೌಲ್ಯದ ಆಸ್ತಿ ಖರೀದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT