ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋ ಬೈಡನ್‌ ಜೊತೆಗಿನ ಮುಖಾಮುಖಿ ಚರ್ಚೆಯಿಂದ ಹಿಂದೆ ಸರಿದ ಡೊನಾಲ್ಡ್‌ ಟ್ರಂಪ್‌

Last Updated 9 ಅಕ್ಟೋಬರ್ 2020, 3:18 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದಲ್ಲಿ ಅ.15ರಂದು ನಡೆಯಬೇಕಿದ್ದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಗಳ ಚರ್ಚೆಯಲ್ಲಿ ಭಾಗವಹಿಸಲು ಟ್ರಂಪ್‌ ಗುರುವಾರ ನಿರಾಕರಿಸಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿಗಳ ಚರ್ಚಾ ಆಯೋಗವು ಅ.15ರಂದು ಮಿಯಾಮಿಯಲ್ಲಿ ಟೌನ್‌ ಹಾಲ್‌ ಚರ್ಚೆ ಆಯೋಜಿಸಿತ್ತು. ಇದರಲ್ಲಿ ಟ್ರಂಪ್‌ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡನ್‌ ಅವರನ್ನು ಎದುರಾಗಬೇಕಿತ್ತು. ಆದರೆ, ಅಧ್ಯಕ್ಷ ಟ್ರಂಪ್‌ ಅವರಿಗೆ ಕೋವಿಡ್‌ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಅದನ್ನು ‘ವರ್ಚುವಲ್‌’ ಆಗಿ ನಡೆಸಲು ಆಯೋಗ ತೀರ್ಮಾನಿಸಿತು. ಇದರಿಂದ ಕೆರಳಿರುವ ಟ್ರಂಪ್‌ ಚರ್ಚೆಯನ್ನು ಹೀಗಳೆದಿದ್ದಾರೆ. ಅಲ್ಲದೆ, ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದು ಖಂಡತುಂಡವಾಗಿ ಹೇಳಿದ್ದಾರೆ.

‘ವರ್ಚುವಲ್‌ ಚರ್ಚೆಯಲ್ಲಿ ನನ್ನ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಅದು ಚರ್ಚೆಯೇ ಅಲ್ಲ. ಕಂಪ್ಯೂಟರ್ ಹಿಂದೆ ಕುಳಿತು ಚರ್ಚೆ ಮಾಡುವುದೆಂದರೆ ಹಾಸ್ಯಾಸ್ಪದ. ಅದು ಒಪ್ಪುವಂಥದ್ದಲ್ಲ,’ ಎಂದು ಟ್ರಂಪ್ ‘ಫಾಕ್ಸ್ ಬಿಸಿನೆಸ್’ ವಾಹಿನಿಯ ಸಂದರ್ಶನದಲ್ಲಿ ನಿರೂಪಕಿ ಮಾರಿಯಾ ಬಾರ್ಟಿರೊಮೊ ಅವರಿಗೆ ತಿಳಿಸಿದ್ದಾರೆ.

ಭೌತಿಕ ಉಪಸ್ಥಿತಿ ಇರುವ ಸಭೆಯ ಸುರಕ್ಷತೆ ಬಗ್ಗೆ ಸದಸ್ಯರೇ ಆಕ್ಷೇಪ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಅಧ್ಯಕ್ಷರ ಚರ್ಚೆಯ ಆಯೋಗವು ಚರ್ಚೆಯನ್ನು ವರ್ಚುವಲ್‌ ಆಗಿ ಮಾರ್ಪಡಿಸಿತ್ತು. ಸ್ಪರ್ಧಿಗಳು ತಾವಿರುವಲ್ಲಿಂದಲೇ ಚರ್ಚೆಯಲ್ಲಿ ಭಾಗವಹಿಸಬಹುದು ಎಂದು ಹೇಳಿತ್ತು.

ವರ್ಚುವಲ್‌ ಆಗಿ ಮಾರ್ಪಾಡಾಗಿದ್ದ ಚರ್ಚೆಯಲ್ಲಿ ಭಾಗವಹಿಸಲು ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡನ್‌ ಅವರು ಸಮ್ಮತಿಸಿದ್ದರು.

ಎರಡು ನೇರಾ ನೇರಾ ಚರ್ಚೆ ನಡೆಯಲಿ: ಟ್ರಂಪ್‌

ವರ್ಚುವಲ್‌ ಆಗಿ ಆಯೋಜನೆಯಾಗಿದ್ದ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ ನಂತರ, ಟ್ರಂಪ್‌ ಅವರು ಜೋ ಬೈಡನ್‌ ಅವರೊಂದಿಗೆ ಎರಡು ಮುಖಾಮುಖಿ ಚರ್ಚೆ ಬಯಸಿದ್ದಾರೆ. ಅ. 22 ರಂದು ಒಂದು ಚರ್ಚೆ ಮತ್ತು ಚುನಾವಣೆಗೂ ಮೊದಲು ಕೊನೆಯ ಸಭೆ ನಡೆಯಬೇಕು. ಇದು ನೇರಾನೇರ ಚರ್ಚೆಯಾಗಿಬೇಕು ಎಂದು ಟ್ರಂಪ್‌ ಅವರ ಪ್ರಚಾರ ಉಸ್ತುವಾರಿಗಳು ಹೇಳಿದರು.

ಆದರೆ, ಟ್ರಂಪ್‌ ಅವರ ಪ್ರಸ್ತಾವವನ್ನು ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡನ್‌ ಅವರ ಪ್ರಚಾರ ತಂಡ ನಿರಾಕರಿಸಿದೆ. ಮನ ಬಂದಂತೆ ಚರ್ಚೆಯ ವೇಳಾಪಟ್ಟಿ ಬದಲಿಸುವುದಕ್ಕೆ ತಮ್ಮ ಸಹಮತವಿಲ್ಲ ಎಂದು ಹೇಳಿಕೊಂಡಿದೆ.

ಅದೇ ದಿನ ಟ್ರಂಪ್‌ ಇಲ್ಲದೆ ಚರ್ಚೆ: ಬೈಡನ್‌

ಅಕ್ಟೋಬರ್ 15ರ ವರ್ಚುವಲ್ ಚರ್ಚೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದರೂ, ಅದೇ ದಿನ ರಾತ್ರಿ ಟ್ರಂಪ್‌ ಅನುಪಸ್ಥಿತಿಯಲ್ಲೇ ಟೌನ್ ಹಾಲ್ ಕಾರ್ಯಕ್ರಮವನ್ನು ನಡೆಸಲು ಡೆಮಾಕ್ರಾಟಿಕ್ ಅಭ್ಯರ್ಥಿ ಜೋ ಬೈಡನ್‌ ನಿರ್ಧರಿಸಿದ್ದಾರೆ.

ಶನಿವಾರದಿಂದ ಟ್ರಂಪ್‌ ಪ್ರಚಾರಕ್ಕೆ ಹೋಗಬಹುದು

ಇದೆಲ್ಲದರ ಮಧ್ಯೆ, ಟ್ರಂಪ್‌ ಆರೋಗ್ಯದ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ಶ್ವೇತಭವನದ ವೈದ್ಯರ ತಂಡ, ಟ್ರಂಪ್ ಅವರು ಇದೇ ಶನಿವಾರದಿಂದ ಪ್ರಚಾರ ಸಭೆಗಳಲ್ಲಿ ಭಾಗವಹಿಸಬಹುದು ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT