ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧಕಾಲದ ಧಾನ್ಯ ಸಾಗಣೆ ಒಪ್ಪಂದಕ್ಕೆ ಮರಳಿದ ರಷ್ಯಾ

ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ನಡೆದಿದ್ದ ಕರಾರು; ಪುಟಿನ್ ಮನವೊಲಿಸಿದ ಟರ್ಕಿಯೆ
Last Updated 2 ನವೆಂಬರ್ 2022, 14:20 IST
ಅಕ್ಷರ ಗಾತ್ರ

ಕೀವ್‌ (ಎಪಿ/ರಾಯಿಟರ್ಸ್‌): ಉಕ್ರೇನ್‌ನಿಂದ ಆಹಾರ ಧಾನ್ಯ ಸುಗಮ ರಫ್ತಿಗೆ ಅವಕಾಶ ಕಲ್ಪಿಸುವ ವಿಶ್ವಸಂಸ್ಥೆ ಮಧ್ಯಸ್ಥಿಕೆಯ ಯುದ್ಧಕಾಲದ ಒಪ್ಪಂದದಿಂದ ಹೊರಗುಳಿಯುವ ಬೆದರಿಕೆ ಹಾಕಿದ್ದ ರಷ್ಯಾ ಮನಸು ಬದಲಾಯಿಸಿದೆ. ಟರ್ಕಿಯೆ ಮಧ್ಯಸ್ಥಿಕೆ ವಹಿಸಿ, ರಷ್ಯಾ ಅಧ್ಯಕ್ಷ ಪುಟಿನ್‌ ಮನವೊಲಿಸಿದ ಪರಿಣಾಮ ಬುಧವಾರ ಈ ಮಹತ್ವದ ಬೆಳವಣಿಗೆ ನಡೆದಿದೆ.

ವಿಶ್ವಸಂಸ್ಥೆ ಮತ್ತು ಟರ್ಕಿಯೆ ಮಧ್ಯಸ್ಥಿಕೆಯಲ್ಲಿ ನಡೆದ ಯುದ್ಧಕಾಲದ ಧಾನ್ಯ ರಫ್ತು ಒಪ್ಪಂದದಲ್ಲಿ ಪುನಃ ಭಾಗಿಯಾಗಲು ರಷ್ಯಾ ಒಪ್ಪಿಗೆ ಸೂಚಿಸಿದೆ ಎಂದು ರಷ್ಯಾದ ರಕ್ಷಣಾ ಸಚಿವ ಸರ್ಗಿ ಶೋಯಿಗು ಅವರು ಟರ್ಕಿಯೆ ರಕ್ಷಣಾ ಸಚಿವ ಹುಲುಸಿ ಆಕಾರ್‌ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಅಲ್ಲದೆ ಒ‍ಪ್ಪಂದದಲ್ಲಿ ಮುಂದುವರಿಯುವುದಾಗಿ ರಷ್ಯಾ ಹೇಳಿದೆ. ಈ ಒಪ್ಪಂದವು ಉಕ್ರೇನಿನ ಲಕ್ಷಾಂತರ ಟನ್ ಆಹಾರಧಾನ್ಯದ ರಫ್ತಿಗೆ ಅವಕಾಶ ಕಲ್ಪಿಸಿತ್ತು ಎಂದು ಟರ್ಕಿಯೆ ಅಧ್ಯಕ್ಷರಿಸೆಪ್‌ ತಯ್ಯಿಪ್‌ ಎರ್ಡೊಗನ್‌ ಹೇಳಿದರು.

ಈ ಒಪ್ಪಂದವು ಸೊಮಾಲಿಯಾ, ಜಿಬೌಟಿ ಮತ್ತು ಸುಡಾನ್ ಸೇರಿ ಆಫ್ರಿಕಾದ ರಾಷ್ಟ್ರಗಳಿಗೆ ಆಹಾರ ಧಾನ್ಯಗಳ ಸಾಗಣೆಗೆ ಆದ್ಯತೆ ನೀಡಲಿದೆ ಎಂದು ಎರ್ಡೊಗನ್ ಹೇಳಿದರು.

ಶ್ರೀಮಂತ ರಾಷ್ಟ್ರಗಳಲ್ಲಿ ಆಹಾರ ಧಾನ್ಯ ದಾಸ್ತಾನು ಮುಗಿಯುತ್ತಿರುವಾಗಲೇ ರಷ್ಯಾ ಯುದ್ಧಕಾಲದ ಧಾನ್ಯ ರಫ್ತು ಕಾರಿಡಾರ್‌ನಿಂದ ಹೊರಗುಳಿಯುವ ಬೆದರಿಕೆ ಹಾಕಿತ್ತು. ಕಾರಣ ಉಕ್ರೇನ್‌ ಸೇನೆಯು ಪಾಶ್ಚಿಮಾತ್ಯ ಶಸ್ತ್ರಾಸ್ತ್ರಗಳ ನೆರವಿನಿಂದ ತನ್ನ ಕಪ್ಪು ಸಮುದ್ರದ ನೌಕೆಯ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ರಷ್ಯಾ ಒಪ್ಪಂದ ಬಹಿಷ್ಕರಿಸುವ ನಿರ್ಧಾರ ಪ್ರಕಟಿಸಿತ್ತು. ಇದರಿಂದ ಜಾಗತಿಕ ಆಹಾರ ಭದ್ರತೆ, ಇಂಧನ ಮತ್ತು ರಸಗೊಬ್ಬರ ಪೂರೈಕೆ ಸಮಸ್ಯೆ ಉಲ್ಬಣಿಸಲಿದೆ ಎಂದು ಭಾರತ ಕೂಡ ಕಳವಳ ವ್ಯಕ್ತಪಡಿಸಿತ್ತು.

ಧಾನ್ಯ ರಫ್ತು ಕಾರಿಡಾರ್‌ ಒಪ್ಪಂದಕ್ಕೆ ರಷ್ಯಾ ಪುನಃ ಮರಳುವಂತೆ ಮಾಡುವಲ್ಲಿ ಶ್ರಮಿಸಿರುವ ವಿಶ್ವಸಂಸ್ಥೆ ಮತ್ತು ಟರ್ಕಿಯೆ ಪ್ರಯತ್ನಕ್ಕೆ ಉಕ್ರೇನ್‌ ಅಭಾರಿಯಾಗಿದೆ ಎಂದು ಉಕ್ರೇನಿನ ಹಿರಿಯ ಅಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.

ಹೆಸರು ಬಹಿರಂಗಪಡಿಸಲು ನಿರಾಕರಿಸಿರುವ ಅಧಿಕಾರಿಗಳು, ‘ಮಾಸ್ಕೊದ ಈ ನಿರ್ಧಾರದ ಹಿಂದೆ ಟರ್ಕಿಯೆ ಒತ್ತಡವಿದೆ’ ಎಂದು ಹೇಳಿದ್ದಾರೆ.

ಮೂಲಸೌಕರ್ಯ ಸಚಿವ ಅಲೆಕ್ಸಾಂಡರ್‌ ಕುಬ್ರಾಕೊವ್‌ ಅವರು ‘ಟರ್ಕಿಯೆ ಅಧ್ಯಕ್ಷ ರಿಸೆಪ್‌ ತಯ್ಯಿಪ್‌ ಎರ್ಡೊಗನ್‌ ಮತ್ತು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರೆಸ್‌ ಅವರು ವಹಿಸಿದ ಪಾತ್ರಕ್ಕೆ ಅಭಾರಿಯಾಗಿದ್ದೇವೆ’ ಎಂದಿದ್ದಾರೆ.

ರಷ್ಯಾದ ಮಿಲಿಟರಿ ಉಪಗ್ರಹ ಉಡಾವಣೆ
ಮಾಸ್ಕೊ (ರಾಯಿಟರ್ಸ್‌):
ಮಿಲಿಟರಿ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಸೇರಿಸಲು ಸೋಯುಜ್ ರಾಕೆಟ್ ಅನ್ನು ರಷ್ಯಾ ಬುಧವಾರ ಉಡಾವಣೆ ಮಾಡಿದೆ.

ಸೋಯುಜ್ -2.1ಬಿ ಮಧ್ಯಮ ವರ್ಗದ ಉಡಾವಣಾ ರಾಕೆಟ್‌ ಅನ್ನು ಪ್ಲೆಸೆಟ್‌ಸ್ಕ್‌ ಕಾಸ್ಮೊಡ್ರೋಮ್‌ನಿಂದ ಬೆಳಿಗ್ಗೆ 9:48ಕ್ಕೆ ಬಾಹ್ಯಾಕಾಶಕ್ಕೆ ಹಾರಿಸಲಾಯಿತು ಎಂದು ರಕ್ಷಣಾ ಸಚಿವಾಲಯದ ಮಾಹಿತಿ ಉಲ್ಲೇಖಿಸಿರಷ್ಯಾದ ಸುದ್ದಿ ಸಂಸ್ಥೆಗಳುವರದಿ ಮಾಡಿವೆ. ಈ ಉಪಗ್ರಹದ ಉದ್ದೇಶದ ಬಗ್ಗೆ ಸಚಿವಾಲಯ ವಿವರ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT