ಗುರುವಾರ , ಆಗಸ್ಟ್ 18, 2022
26 °C

ರಷ್ಯಾ–ಉಕ್ರೇನ್ ಸಂಘರ್ಷ: ಸೋತಿರುವ ನಗರಗಳನ್ನು ಮರಳಿ ಗೆಲ್ಲುತ್ತೇವೆ –ಝೆಲೆನ್‌ಸ್ಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೀವ್‌: ರಷ್ಯಾ ಎದುರು ಸೋತಿರುವ ಎಲ್ಲ ನಗರಗಳನ್ನು ಮರಳಿ ಗೆಲ್ಲುತ್ತೇವೆ ಎಂದಿರುವ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರು, ಯುದ್ಧವನ್ನು ಸಹಿಸಿಕೊಳ್ಳುವುದು ಭಾವನಾತ್ಮಕವಾಗಿ ಕಷ್ಟವಾಗುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ.

ಶನಿವಾರ ರಾತ್ರಿ ವಿಡಿಯೊ ಬಿಡುಗಡೆ ಮಾಡಿರುವ ಝೆಲೆನ್‌ಸ್ಕಿ ಅವರು, ಕಳೆದ 24 ಗಂಟೆಗಳಲ್ಲಿ ರಷ್ಯಾದ 45 ಕ್ಷಿಪಣಿಗಳು ಮತ್ತು ರಾಕೆಟ್‌ಗಳು ಉಕ್ರೇನ್‌ ಮೇಲೆ ಅಪ್ಪಳಿಸಿವೆ. ಇದು ಜನರ ಉತ್ಸಾಹಗುಂದಿಸುವ ವಿನಾಶಕಾರಿ ಪ್ರಯತ್ನ ಎಂದು ದೂರಿದ್ದಾರೆ.

'ನಮ್ಮ ನಗರಗಳಾದ ಸೆವೆಯೆರೊಡೊನೆಟ್‌ಸ್ಕ್, ಡೊನೆಟ್‌ಸ್ಕ್‌, ಲುಹಾನ್‌ಸ್ಕ್‌ಗಳನ್ನು ಮರಳಿ ವಶಪಡಿಸಿಕೊಳ್ಳಲಿದ್ದೇವೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೆವೆಯೆರೊಡೊನೆಟ್‌ಸ್ಕ್ ನಗರ ರಷ್ಯಾ ವಶವಾಗಿರುವ ಬಗ್ಗೆ ಝೆಲೆನ್‌ಸ್ಕಿ ಇದೇ ಮೊದಲ ಬಾರಿಗೆ ಉಲ್ಲೇಖಿಸಿದ್ದಾರೆ. ರಷ್ಯಾ ಪಡೆಗಳು ಈ ನಗರವನ್ನು ಕ್ರೂರ ಹೋರಾಟದ ಬಳಿಕ ಶನಿವಾರ ಹಿಡಿತಕ್ಕೆ ಪಡೆದಿವೆ.

'ಈ ಹಂತದಲ್ಲಿ ಯುದ್ಧವು ಆಧ್ಯಾತ್ಮಿಕ ಮತ್ತು ಭಾವನಾತ್ಮಕವಾಗಿ ತುಂಬಾ ಕಠಿಣವಾಗಿದೆ. ಯುದ್ಧವು ಯಾವಾಗ ಕೊನೆಯಾಗುತ್ತದೆ, ಇನ್ನೆಷ್ಟು ಹೊಡೆತ ನೀಡುತ್ತದೆ, ಇನ್ನೆಷ್ಟು ನಷ್ಟ ಉಂಟು ಮಾಡುತ್ತದೆ ಮತ್ತು ನಾವು ವಿಜಯ ಸಾಧಿಸಲು ಇನ್ನೂ ಎಷ್ಟು ಪ್ರಯತ್ನ ಬೇಕಾಗಬಹುದು ಎಂಬುದರ ಅರಿವಿಲ್ಲ' ಎಂದು ನೋವಿನಿಂದ ನುಡಿದಿದ್ದಾರೆ.

ಉಕ್ರೇನ್‌ಗೆ ಹೆಚ್ಚಿನ ಶಸ್ತ್ರಾಸ್ತ್ರಗಳ ಅಗತ್ಯವಿದೆ ಎಂದು ಹೇಳಿರುವ ಝೆಲೆನ್‌ಸ್ಕಿ, ರಷ್ಯಾದ ವಿರುದ್ಧದ ನಿರ್ಬಂಧಗಳು ನಮ್ಮ ಮೇಲಿನ ಆಕ್ರಮಣ ತಡೆಯಲು ಸಾಕಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪೂರ್ವ ಉಕ್ರೇನ್‌ನಲ್ಲಿರುವ ಮತ್ತೊಂದು ನಗರ 'ಲೈಸಿಚಾನ್‌ಸ್ಕ್‌' ವಶಪಡಿಸಿಕೊಳ್ಳಲು ರಷ್ಯಾ ಪಡೆಗಳು ಪ್ರಯತ್ನಿಸುತ್ತಿವೆ ಎಂದೂ ವರದಿಯಾಗಿದೆ. ಕೆಲವು ವಾರಗಳಿಂದ ಹೋರಾಟ ನಡೆಸುತ್ತಿರುವ ಉಕ್ರೇನ್ ಪಡೆಗಳು ಇಲ್ಲಿಂದ ತೆರಳಲು ಪ್ರಾರಂಭಿಸಿವೆ ಎಂದು ಉಕ್ರೇನ್‌ನ ಪ್ರಾದೇಶಿಕ ಸೇನಾ ಗವರ್ನರ್ ಸೆರ್‌ಹಿಯ್‌ ಹೈಡೇ ಶನಿವಾರ ತಿಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು