ಶನಿವಾರ, ಮೇ 21, 2022
25 °C
ಪತ್ನಿಯದು ಅಂತಿಮವಾಗಿ ಭಾರತಕ್ಕೆ ಮರಳುವ ಯೋಜನೆ- ಬ್ರಿಟನ್‌ ಹಣಕಾಸು ಸಚಿವ ರಿಷಿ ಸುನಕ್‌

ಟೀಕಿಸುವ ಭರದಲ್ಲಿ ಪತ್ನಿ ಮೇಲೆ ಕಳಂಕ ಬೇಡ: ಬ್ರಿಟನ್‌ ಹಣಕಾಸು ಸಚಿವ ರಿಷಿ ಸುನಕ್‌

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ಲಂಡನ್‌ (ರಾಯಿಟರ್ಸ್): ‘ಪತ್ನಿ ಅಕ್ಷತಾ ಮೂರ್ತಿ ತನ್ನ ತಾಯ್ನಾಡು ಭಾರತವನ್ನು ಪ್ರೀತಿಸುತ್ತಾಳೆ. ವಿವಾಹದ ಕಾರಣಕ್ಕೆ ಅವರು ತಾಯ್ನಾಡಿನ ಜೊತೆಗಿನ ಬಾಂಧವ್ಯ ಕಡಿದುಕೊಳ್ಳಲು ಬಯಸುವುದಿಲ್ಲ’ ಎಂದು ಬ್ರಿಟನ್‌ನ ಹಣಕಾಸು ಸಚಿವ ರಿಷಿ ಸುನಕ್‌ ಹೇಳಿದ್ದಾರೆ.

ತೆರಿಗೆ ವಿನಾಯಿತಿ ಪಡೆಯಲು ಅಕ್ಷತಾ ನಿವಾಸಿಯೇತರ (ನಾನ್‌ ಡೊಮಿಸೈಲ್‌) ಸ್ಥಾನಮಾನ ಉಳಿಸಿಕೊಂಡಿದ್ದಾರೆ ಎಂಬ ಟೀಕೆಗಳಿಗೆ ಉತ್ತರಿಸಿದ ಅವರು, ‘ಪತ್ನಿ ಅಕ್ಷತಾ ಅಂತಿಮವಾಗಿ ತಂದೆ–ತಾಯಿ ನೋಡಿಕೊಳ್ಳಲು ಭಾರತಕ್ಕೇ ತೆರಳುವ ಚಿಂತನೆ ಹೊಂದಿದ್ದಾರೆ’ ಎಂದರು. 

‘ನನ್ನ ಪತ್ನಿ ವಿದೇಶಿಯರು ಎಂಬ ಕಾರಣಕ್ಕೆ ತೆರಿಗೆ ವಿಷಯದಲ್ಲಿ ಗೊಂದಲ ಆಗಿರಬಹುದು. ಮುಕ್ತ ಮನಸ್ಸಿನ ಜನರು ವಸ್ತು ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ’ ಎಂದು ‘ದ ಸನ್‌’ ದೈನಿಕಕ್ಕೆ ನೀಡಿದ ಸಂದರ್ಶನದಲ್ಲಿ ರಿಷಿ ಸುನಕ್‌ ಹೇಳಿದ್ದಾರೆ.

ರಿಷಿ ಸುನಕ್‌ ಅವರ ಪತ್ನಿ ಅಕ್ಷತಾ ಮೂರ್ತಿ ಭಾರತೀಯರಾಗಿದ್ದು, ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ. ಇನ್ಫೋಸಿಸ್‌ನಲ್ಲಿ ಶೇ 0.93ರಷ್ಟು ಪಾಲನ್ನು ಅವರು ಹೊಂದಿದ್ದಾರೆ.

ಬ್ರಿಟನ್‌ನ ಕಾಯ್ದೆಯಂತೆ ನಿವಾಸಿಯೇತರ ಸ್ಥಾನಮಾನ ಹೊಂದಿರುವವರು ವಿದೇಶಗಳಲ್ಲಿ ಗಳಿಸಿದ ಆದಾಯಕ್ಕೆ ತೆರಿಗೆಯನ್ನು ಪಾವತಿಸುವಂತಿಲ್ಲ. ತೆರಿಗೆ ಪಾವತಿಸಿಲ್ಲ ಎಂಬುದು ಬ್ರಿಟನ್‌ನಲ್ಲಿ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

ಸದ್ಯ ಬ್ರಿಟನ್‌ನಲ್ಲಿ ಹಣಕಾಸು ಸಚಿವರಾಗಿರುವ ರಿಷಿ ಸುನಕ್, ರಾಷ್ಟ್ರ ರಾಜಕಾರಣದಲ್ಲಿ ಪ್ರಭಾವಿಯಾಗಿದ್ದಾರೆ. ಭವಿಷ್ಯದ ಪ್ರಧಾನಿ ಎಂದು ಅವರು ಬಿಂಬಿತರಾಗಿದ್ದಾರೆ. ಇದೇ ಕಾರಣಕ್ಕೆ ರಾಜಕೀಯ ವಿರೋಧಿಗಳು ಅವರ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

‘ಪತ್ನಿ ಅಕ್ಷತಾ ಅವರು ಇಂಗ್ಲೆಂಡ್‌ನಲ್ಲಿ ಸಂಪಾದಿಸುವ ಪ್ರತಿ ರೂಪಾಯಿಗೂ ತೆರಿಗೆ ಪಾವತಿಸಿದ್ದಾರೆ. ವಿದೇಶಗಳಲ್ಲಿ ಉದಾಹರಣೆಗೆ ಭಾರತದಲ್ಲಿ ಗಳಿಸುವ ಪ್ರತಿ ರೂಪಾಯಿಗೂ ಅವರು ಪೂರ್ಣ ತೆರಿಗೆ ಪಾವತಿಸುತ್ತಾರೆ. ನನ್ನ ಪತ್ನಿ ಭಾರತದಲ್ಲಿ ಜನಿಸಿದ್ದಾರೆ ಮತ್ತು ಅಲ್ಲಿಯೇ ಬೆಳೆದಿದ್ದಾರೆ ಎಂಬುದನ್ನು ಗಮನಿಸಬೇಕು’ ಎಂದು ಹೇಳಿದ್ದಾರೆ.   

‘ವಿರೋಧ ಪಕ್ಷಗಳು ನನ್ನ ಪತ್ನಿ ಮತ್ತು ಮಾವ ಅವರ ಆಸ್ತಿಯನ್ನು ಉಲ್ಲೇಖಿಸಿ ನನ್ನ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಆದರೆ, ಚುನಾಯಿತರಲ್ಲದ, ಕುಟುಂಬದ ಸದಸ್ಯರನ್ನು ಗುರಿಯಾಗಿಸಿ ಟೀಕಿಸುವುದು ಸಲ್ಲದು’ ಎಂದು ಸುನಕ್‌ ಪ್ರತಿಪಾದಿಸಿದ್ದಾರೆ. ‘ನನ್ನ ಮೇಲೆ ಕಳಂಕ ಹೊರಿಸುವ ಭರದಲ್ಲಿ ಪತ್ನಿಯ ಮೇಲೆ ಕಳಂಕ ಹೊರಿಸುವುದು ಸರಿಯಲ್ಲ, ಅಲ್ಲವೇ?’ ಎಂದೂ ಪ್ರಶ್ನಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು