ಅಮೆರಿಕದಲ್ಲಿ ಟಿಕ್ಟಾಕ್ ಮತ್ತೆ ಚಾಲ್ತಿಗೆ, ಹೊಸ ಕಟ್ಟುನಿಟ್ಟಿನ ನಿಯಮಗಳು ಜಾರಿ

ವಾಷಿಂಗ್ಟನ್: ಸಾಮಾಜಿಕ ತಾಣಗಳಿಂದ ದೇಶದ ಭದ್ರತೆಗೆ ಆತಂಕ ಎದುರಾಗುತ್ತಿರುವ ಬಗ್ಗೆ ಒಂದೊಂದೇ ರಾಷ್ಟ್ರಗಳು ಕಾನೂನು ಕ್ರಮ ಕೈಗೊಳ್ಳಲು ಆರಂಭಿಸಿವೆ. ಈಗಾಗಲೇ ಭಾರತದಲ್ಲಿ ಟಿಕ್ಟಾಕ್ಅನ್ನು ನಿಷೇಧಿಸಲಾಗಿದೆ. ಹೊಸ ಐಟಿ ಕಾನೂನನ್ನು ರಚಿಸಿರುವ ಭಾರತ ಸರ್ಕಾರ ಟ್ವಿಟರ್, ವಾಟ್ಸ್ಆ್ಯಪ್, ಫೇಸ್ಬುಕ್ ಮತ್ತಿತರ ಸಾಮಾಜಿಕ ತಾಣಗಳಿಗೆ ಮೂಗುದಾರ ಅಳವಡಿಸಿದೆ.
ಆದರೆ ಅಮೆರಿಕದ ಜೋ ಬೈಡನ್ ನೇತೃತ್ವದ ಸರ್ಕಾರ ಟಿಕ್ಟಾಕ್ ಮೇಲಿನ ನಿಷೇಧವಾನ್ನು ಹಿಂತೆಗೆದುಕೊಂಡಿದ್ದು, ಹೊಸ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ನೂತನ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಮಾಡಿರುವ ಜೋ ಬೈಡನ್, ನಿಷೇಧಿತ ಟಿಕ್ಟಾಕ್, ವೀಚಾಟ್ ಮತ್ತು ಇತರ ಎಂಟು ಆ್ಯಪ್ಗಳಿಗೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.
ಕೊರೊನಾ ಸೋಂಕು ಚೀನಾದ ಉಹಾನ್ನಿಂದ ಬಂದಿದ್ದು ಎಂಬ ಅನುಮಾನ ದಟ್ಟಗೊಂಡಂತೆ, ಚೀನಾದ ಮಿತಿಮೀರಿದ ವರ್ತನೆಗೆ ಪಾಠ ಕಲಿಸಲು ವಿಶ್ವದ ಹಲವು ರಾಷ್ಟ್ರಗಳು ಅಲ್ಲಿನ ಆ್ಯಪ್ಗಳನ್ನು ನಿಷೇಧಿಸಿ ಕಾನೂನು ಜಾರಿ ಮಾಡಿವೆ.
ನೈಜೀರಿಯಾದಲ್ಲಿ ಟ್ವಿಟರ್ ನಿಷೇಧ, ಬೆಂಗಳೂರಿನ ‘ಕೂ’ ಆ್ಯಪ್ ಬಳಕೆಗೆ ಸಮ್ಮತಿ
ಅಮೆರಿಕದಲ್ಲಿ ಬಳಕೆಯಾಗುತ್ತಿರುವ ಮೊಬೈಲ್ ಮತ್ತು ಲ್ಯಾಪ್ಟಾಪ್ ಅಪ್ಲಿಕೇಷನ್ಗಳನ್ನು ಮತ್ತು ಇತರ ಸಾಫ್ಟ್ವೇರ್ಗಳನ್ನು ಚೀನಾದಲ್ಲಿ ಕುಳಿತ ವ್ಯಕ್ತಿ ನಿಯಂತ್ರಿಸುವುದರಿಂದ ರಾಷ್ಟ್ರದ ಆಂತರಿಕ ವಿಚಾರಗಳು ಸೋರಿಕೆಯಾಗುವ ಸಾಧ್ಯತೆ ಹೆಚ್ಚು. ಇದು ರಾಷ್ಟ್ರದ ಭದ್ರತೆಗೆ ಅಪಾಯಕಾರಿ. ಅಮೆರಿಕದ ಆರ್ಥಿಕತೆ ಮತ್ತು ವಿದೇಶಾಂಗ ನೀತಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಡೊನಾಲ್ಡ್ ಟ್ರಂಪ್ ಅಂದಿನ ಕಾರ್ಯನಿರ್ವಾಹಕ ಆದೇಶದಲ್ಲಿ ತಿಳಿಸಿದ್ದರು.
ಚೀನಾ ಕಂಪನಿಗಳ ಆ್ಯಪ್ಗಳಾದ ಟಿಕ್ಟಾಕ್. ಅಲಿಪೇ, ಕ್ಯಾಮ್ಸ್ಕ್ಯಾನರ್, ಕ್ಯೂಕ್ಯೂ ವ್ಯಾಲೆಟ್, ಶೇರ್ಇಟ್, ಟೆನ್ಸೆಂಟ್ ಕ್ಯೂಕ್ಯೂ, ವಿಮೇಟ್, ವಿಚಾಟ್ ಪೇ ಮತ್ತು ಡಬ್ಳ್ಯುಪಿಎಸ್ ಆಫೀಸ್ ಮೇಲಿನ ನಿಷೇಧ ತೆರವಾಗಿದೆ.
ಬಡ ರಾಷ್ಟ್ರಗಳಿಗೆ ಫೈಜರ್ ಲಸಿಕೆಯ 50 ಕೋಟಿ ಡೋಸ್ ದೇಣಿಗೆ: ಬೈಡನ್ ನಿರ್ಧಾರ
ಭಾರತದಲ್ಲಿ ಅತಿಹೆಚ್ಚು ಸಂಖ್ಯೆಯ ಟಿಕ್ಟಾಕ್ ಬಳಕೆದಾರರು ಇದ್ದರು. ಟಿಕ್ಟಾಕ್ ಮೇಲಿನ ನಿಷೇಧ ತೆರವಾಗಬಹುದು ಎಂದು ಅನೇಕ ಬಳಕೆದಾರರು ಕಾದಿದ್ದರು. ಕ್ರಮೇಣ ರೀಲ್ಸ್, ಮೊಜೊ ಇನ್ನಿತರ ಶಾರ್ಟ್ ವಿಡಿಯೊ ಪ್ಲಾಟ್ಫಾರ್ಮ್ಗಳತ್ತ ಮುಖಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.