ಭಾನುವಾರ, ಮೇ 22, 2022
25 °C

ಉಕ್ರೇನ್‌ ಬಿಕ್ಕಟ್ಟು: 8,500 ಸೈನಿಕರನ್ನು ಸಜ್ಜುಗೊಳಿಸಿದ ಅಮೆರಿಕ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್:‌ ಉಕ್ರೇನ್‌ನಲ್ಲಿ ಬಿಕ್ಕಟ್ಟು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕವು 8,500 ಸೈನಿಕರನ್ನೊಳಗೊಂಡ ಸೇನೆಯನ್ನು ಸೋಮವಾರ ಸಜ್ಜುಗೊಳಿಸಿದೆ. ರಷ್ಯಾದ ಒತ್ತಡ ಕ್ರಮಗಳ ವಿರುದ್ಧ ಪಾಶ್ಚಿಮಾತ್ಯ ರಾಷ್ಟ್ರಗಳು ಏಕತೆಯನ್ನು ಕಾಪಾಡಿಕೊಳ್ಳಬೇಕು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಕರೆ ನೀಡಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು, ಉಕ್ರೇನ್‌ ಮೇಲೆ ಆಕ್ರಮಣ ಮಾಡುವ ಯಾವುದೇ ಉದ್ದೇಶವಿಲ್ಲ ಎಂದು ಹೇಳುತ್ತಿದ್ದಾರೆ. ಆದಾಗ್ಯೂ, ರಷ್ಯಾ 2014ರಲ್ಲಿಯೇ ವಶಕ್ಕೆ ಪಡೆದಿರುವ ಕ್ರಿಮಿಯಾ ಪ್ರದೇಶದಲ್ಲಿ 1 ಲಕ್ಷ ಸೈನಿಕರನ್ನು ನಿಯೋಜಿಸಲಾಗಿದೆ. ಹೀಗಾಗಿ, ಉಕ್ರೇನ್ ಮೇಲೆ ರಷ್ಯಾ ಪೂರ್ಣಪ್ರಮಾಣದ ದಾಳಿ ನಡೆಸುವ ಬಗ್ಗೆ ಆತಂಕಕ್ಕೊಳಗಾಗದಂತೆ ಮಿತ್ರರಾಷ್ಟ್ರಗಳನ್ನು ಬೈಡನ್‌ ಒತ್ತಾಯಿಸಿದ್ದಾರೆ.

'ಅಮೆರಿಕ ಸೇನೆಯ 8,500 ಸೈನಿಕರನ್ನು ಅತ್ಯಂತ ಜಾಗರೂಕವಾಗಿರುವಂತೆ ಸನ್ನದ್ಧಗೊಳಿಸಲಾಗಿದೆ. ಆದರೆ, ಇನ್ನೂ ನಿಯೋಜನೆಗೊಳಿಸಿಲ್ಲ. ನ್ಯಾಟೊ ಪಡೆ ಕಾರ್ಯಾಚರಣೆ ಆರಂಭಿಸಿದರೆ, ಬೆಂಬಲ ನೀಡುವ ಸಲುವಾಗಿ ಬಹುತೇಕ ಸೈನಿಕರನ್ನು ಬಳಸಿಕೊಳ್ಳಲಾಗುವುದು' ಎಂದು ಪೆಂಟಗಾನ್‌ ವಕ್ತಾರ ಜಾನ್‌ ಕಿರ್ಬಿ ತಿಳಿಸಿದ್ದಾರೆ.

'ನಾವು ನಮ್ಮ ಜವಾಬ್ದಾರಿಯನ್ನು ನ್ಯಾಟೊ ಜೊತೆಗೆ ಗಂಭೀರವಾಗಿ ನಿರ್ವಹಿಸಲಿದ್ದೇವೆ. ಇದು ಪುಟಿನ್‌ ಅವರಿಗೆ ಸ್ಪಷ್ಟ ಸಂದೇಶವನ್ನು ರವಾನಿಸಲಿದೆ' ಎಂದೂ ಹೇಳಿದ್ದಾರೆ.

ಭದ್ರತೆಯನ್ನು ಹೆಚ್ಚಿಸಲು ಜೆಟ್‌ಗಳು ಹಾಗೂ ಸೇನಾ ನೌಕೆಗಳನ್ನು ಕಳುಹಿಸುತ್ತಿರುವುದಾಗಿ ನ್ಯಾಟೊ ಸಹ ತಿಳಿಸಿದೆ.

ಉಕ್ರೇನ್‌ ಅನ್ನು ನ್ಯಾಟೊ ಒಕ್ಕೂಟಕ್ಕೆ ಸೇರಿಸಲಾಗುವುದಿಲ್ಲ ಎಂಬುದನ್ನು ಖಾತ್ರಿಪಡಿಸುವಂತೆ ರಷ್ಯಾ ಬೇಡಿಕೆ ಇಟ್ಟಿದೆ. ಇದನ್ನು ತಿರಸ್ಕರಿಸಿರುವ ಅಮೆರಿಕ ಮತ್ತು ನ್ಯಾಟೊ, ಉಕ್ರೇನ್‌ ಮೇಲೆ ಆಕ್ರಮಣ ಮಾಡಿದರೆ, ಆರ್ಥಿಕ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ರಷ್ಯಾಗೆ ಎಚ್ಚರಿಕೆ ನೀಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು