ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ವಾರ ದಾಟಿದ ಸಮರ, ಬೆದರಿಸಿದರೆ ಅಣ್ವಸ್ತ್ರ ದಾಳಿ: ರಷ್ಯಾ ಎಚ್ಚರಿಕೆ

ಕೀವ್‌ ಸುತ್ತುವರಿಯುವ ಪ್ರಯತ್ನದಲ್ಲೂ ಹಿನ್ನಡೆ ಕಂಡ ರಷ್ಯಾ
Last Updated 23 ಮಾರ್ಚ್ 2022, 19:46 IST
ಅಕ್ಷರ ಗಾತ್ರ

ಕೀವ್‌: ಯಾವುದೇ ರಾಷ್ಟ್ರದಿಂದ ಬೆದರಿಕೆ ಎದುರಾದರೆ ಆ ರಾಷ್ಟ್ರದ ವಿರುದ್ಧ ಅಣ್ವಸ್ತ್ರ ಬಳಸದೇ ಇರಲಾಗದು ಎಂದು ರಷ್ಯಾವು ಉಕ್ರೇನ್‌ ಮತ್ತು ಅದನ್ನು ಬೆಂಬಲಿಸುವ ರಾಷ್ಟ್ರಗಳಿಗೆ ಬುಧವಾರ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಅಲ್ಲದೆ, ಶಾಂತಿ ಮಾತುಕತೆಯನ್ನು ಅಮೆರಿಕ ದುರ್ಬಲಗೊಳಿಸುತ್ತಿದೆ ಎಂದು ಅದು ವಾಗ್ದಾಳಿ ನಡೆಸಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಮುಖ್ಯ ವಕ್ತಾರ ಡಿಮಿಟ್ರಿ ಪೆಸ್ಕೊವ್‌‘ಸಿಎನ್‌ಎನ್‌’ಗೆ ನೀಡಿರುವ ಸಂದರ್ಶನ‌ದಲ್ಲಿ ಈ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಉಕ್ರೇನ್‌ನಲ್ಲಿ ನಡೆಸುತ್ತಿರುವ ವಿಶೇಷ ಸೇನಾ ಕಾರ್ಯಾಚರಣೆಯಲ್ಲಿ ರಷ್ಯಾ ಇನ್ನೂ ಗುರಿ ಸಾಧಿಸಿಲ್ಲ ಎನ್ನುವುದನ್ನು ಒಪ್ಪಿಕೊಂಡ ಅವರು, ಈ ಯುದ್ಧದಲ್ಲಿ ರಷ್ಯಾ ಪರಮಾಣು ಶಸ್ತ್ರಾಸ್ತ್ರಗಳ ಮೊರೆ ಹೋಗಬಹುದೆಂಬುದನ್ನು ಮಾತ್ರ ಅಲ್ಲಗಳೆಯಲು ಅವರು ನಿರಾಕರಿಸಿದರು.

ವಿಶೇಷ ಸೇನಾ ಕಾರ್ಯಾಚರಣೆಗೆ ಅನುಮತಿ ನೀಡಿದಾಗಲೇ ಪುಟಿನ್ ಅವರು, ‘ರಷ್ಯಾಕ್ಕೆ ಬೆದರಿಕೆ ಒಡ್ಡುವ ರಾಷ್ಟ್ರಗಳ ವಿರುದ್ಧ ಅಣ್ವಸ್ತ್ರ ಬಳಸಲು ಹಿಂಜರಿಯಲ್ಲ. ನಮ್ಮ ದಾರಿಗೆ ಯಾರಾದರೂ ಎದುರು ನಿಲ್ಲಲು ಪ್ರಯತ್ನಿಸಿದರೂ ಅಥವಾ ನಮ್ಮ ದೇಶ ಮತ್ತು ನಮ್ಮ ಜನರಿಗೆ ಬೆದರಿಕೆಗಳನ್ನು ಹಾಕಿದರೂ ರಷ್ಯಾದ ತಕ್ಷಣದ ಪ್ರತಿಕ್ರಿಯೆ ಹೇಗಿರಲಿದೆ ಎಂದರೆ ನಿಮ್ಮ ಇಡೀ ಇತಿಹಾಸದಲ್ಲಿ ನೀವು ಕಂಡರಿಯದ ಪರಿಣಾಮದ್ದಾಗಿರುತ್ತದೆ’ ಎಂದು ರಷ್ಯಾ ಎದುರು ನಿಲ್ಲುವ ರಾಷ್ಟ್ರಗಳಿಗೆ ಕಠಿಣ ಎಚ್ಚರಿಕೆ ಕೊಟ್ಟಿದ್ದರು.

ರಷ್ಯಾದ ರಕ್ಷಣಾ ಅಧಿಕಾರಿಗಳೊಂದಿಗೆ ವರ್ಚುವಲ್‌ ಸಭೆ ನಡೆಸಿದ ಪೆಸ್ಕೊವ್‌, ‘ನ್ಯಾಟೊ ರಾಷ್ಟ್ರಗಳ ಅಧಿಕಾರಿಗಳು ನಮ್ಮ ದೇಶದ ಬಗ್ಗೆ ಆಕ್ರಮಣಕಾರಿಹೇಳಿಕೆಗಳನ್ನು ನೀಡಲು ಅವಕಾಶ ಕಲ್ಪಿಸಿದ್ದಾರೆ. ಹಾಗಾಗಿ ರಕ್ಷಣಾ ಸಚಿವರು ಮತ್ತು ಸೇನಾಪಡೆಗಳ ಮುಖ್ಯಸ್ಥರಿಗೆ ರಷ್ಯಾದ ಸೇನೆಯ ಪ್ರತಿರೋಧ ಪಡೆಗಳನ್ನು ಸನ್ನದ್ಧವಾಗಿರಿಸಲು ಆದೇಶಿಸಿದ್ದೇವೆ’ ಎಂದರು.

ಉಕ್ರೇನ್‌ ಮೇಲಿನ ಸೇನಾ ಕಾರ್ಯಾಚರಣೆಯಲ್ಲಿ ಈವರೆಗೆ ಪುಟಿನ್‌ ಏನನ್ನು ಸಾಧಿಸಿದ್ದಾರೆ ಎನ್ನುವ ಪ್ರಶ್ನೆಗೆ ‘ಹೌದು, ಮೊದಲನೆಯದಾಗಿ ಇನ್ನೂ ಏನನ್ನೂ ಸಾಧಿಸಿಲ್ಲ. ಆದರೆ, ನಮ್ಮ ಉದ್ದೇಶಗಳಿಗೆ ಅನುಗುಣವಾಗಿಯೋಜನೆಗಳು ‌ಸರಿಯಾದ ದಿಕ್ಕಿನಲ್ಲೇ ಸಾಗಿವೆ’ ಎಂದು ಹೇಳಿದರು. ಈ ಹೇಳಿಕೆಗೆ ಪುಷ್ಟಿ ಎಂಬಂತೆ, ಉಕ್ರೆನ್‌ ರಾಜಧಾನಿ ಕೀವ್‌ ನಗರವನ್ನು ವಶಪಡಿಸಿಕೊಳ್ಳುವ ರಷ್ಯಾದ ಬಯಕೆ ಈಡೇರಿಲ್ಲ, ಮಾತ್ರವಲ್ಲದೆ, ಕೀವ್‌ಗೆ ಮುತ್ತಿಗೆ ಹಾಕುವ ಪ್ರಯತ್ನಕ್ಕೂ ಯಶಸ್ಸು ದೊರೆತಿಲ್ಲ.

ಅಮೆರಿಕ ಉಕ್ರೇನ್‌ ಕೈಕಟ್ಟಿ ಹಾಕಿದೆ: ‘ಸಂಘರ್ಷ ಶಮನದ ಮಾತುಕತೆ ಕಠಿಣವಾಗಿದೆ. ಉಕ್ರೇನ್‌ ನಿರಂತರ ತನ್ನ ನಿಲುವು ಬದಲಾಯಿಸುತ್ತಿದೆ ಮಾತುಕತೆಗೆ ಒಪ್ಪಿಕೊಳ್ಳದಂತೆ ಉಕ್ರೇನನ್ನು ಅಮೆರಿಕ ತಡೆಯುತ್ತಿರುವುದು ಸ್ಪಷ್ಟ. ನಮ್ಮನ್ನು ಸಾಧ್ಯವಾದಷ್ಟು ಸೇನಾ ಕಾರ್ಯಾಚರಣೆಯಲ್ಲೇ ಮುಂದುವರಿಸುವುದು ಅಮೆರಿಕದ ಬಯಕೆ’ ಎಂದುರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಬುಧವಾರ ಕಿಡಿಕಾರಿದರು.

ಅಮೆರಿಕ ಟೀಕೆ: ರಷ್ಯಾದ ಅಣ್ವಸ್ತ್ರದಾಳಿಯ ಅಪಾಯಕಾರಿ ಹೇಳಿಕೆಯನ್ನು ಅಮೆರಿಕ ವಕ್ತಾರ ಜಾನ್‌ ಕಿರ್ಬಿ ಖಂಡಿಸಿದ್ದಾರೆ. ಉಕ್ರೇನ್‌ ನೆಲದಲ್ಲಿ ರಷ್ಯಾ ನಡೆಸುತ್ತಿರುವ ಯುದ್ಧಾಪರಾಧಗಳಲ್ಲಿ ರಾಸಾಯನಿಕ ಮತ್ತು ಜೈವಿಕ ಶಸ್ತ್ರಾಸ್ತ್ರಗಳೂ ಬಳಕೆಯಾಗಬಹುದೆಂದು ಅಮೆರಿಕ ಅಧ್ಯಕ್ಷ ಬೈಡನ್‌ ಎಚ್ಚರಿಸಿರುವುದನ್ನು ಅವರು ನೆನಪಿಸಿದರು.

ಹಸಿವಿನಲ್ಲಿ ಒಂದು ಲಕ್ಷ ನಾಗರಿಕರು
ರಷ್ಯಾ ಪಡೆಗಳು ಪ್ರಮುಖ ಕಾರ್ಯತಂತ್ರದ ಬಂದರು ನಗರ ಮರಿಯುಪೊಲ್‌ ಮೇಲೆ ಬುಧವಾರ ಕೂಡ ನಿರಂತರ ಬಾಂಬ್‌ ಮತ್ತು ಶೆಲ್‌ ದಾಳಿ ನಡೆಸಿವೆ. ಈ ನಗರದಲ್ಲಿ ಸಿಲುಕಿಕೊಂಡಿರುವ ಸುಮಾರು ಒಂದು ಲಕ್ಷ ಜನರು ಅಮಾನವೀಯ ಪರಿಸ್ಥಿತಿಯಲ್ಲಿದ್ದಾರೆ. ಹಲವು ಜನರು ಹಸಿವಿನಿಂದ ನರಳುತ್ತಿದ್ದಾರೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಆರೋಪಿಸಿದರು.

ಅಜೊವಾ ಸಮುದ್ರದಲ್ಲಿ ಬೀಡುಬಿಟ್ಟಿರುವ ರಷ್ಯಾದ ಏಳು ಸಮರ ನೌಕೆಗಳು ಮರಿಯುಪೊಲ್‌ ನಗರವನ್ನೇ ಗುರಿಯಾಗಿಸಿಕೊಂಡು ಕ್ಷಿಪಣಿ, ಶೆಲ್‌ ದಾಳಿ ನಡೆಸುತ್ತಿವೆ.

ಶರಣಾಗತಿಯನ್ನು ತಿರಸ್ಕರಿಸಿದ ಬೆನ್ನಲ್ಲೇ ರಷ್ಯಾ ಪಡೆಗಳು ಮರಿಯುಪೊಲ್‌ ನಗರದ ಮೇಲೆ ರಷ್ಯಾ ಪಡೆಗಳು ಭೀಕರ ದಾಳಿಗಿಳಿದಿವೆ. ಜನರಿಗೆ ಆಹಾರ, ನೀರು, ಔಷಧ ಸಿಗದಂತೆ ಮಾಡಿವೆ ಎಂದು ಉಕ್ರೇನ್‌ ಸೇನೆ ಹೇಳಿದೆ.

ನ್ಯಾಟೊ ನಿಯೋಜನೆ ಹೆಚ್ಚಳ ಸಾಧ್ಯತೆ
ಬ್ರಸೆಲ್ಸ್ (ಎಎಫ್‌ಪಿ): ರಷ್ಯಾದಿಂದ ಭೀಕರ ದಾಳಿ ಎದುರಿಸುತ್ತಿರುವ ಉಕ್ರೇನ್‌ಗೆ ನೆರವಾಗುವ ಉದ್ದೇಶದಿಂದ, ಪೂರ್ವ ಭಾಗದ ನ್ಯಾಟೊ ಸದಸ್ಯ ದೇಶಗಳಿಗೆ ಇನ್ನಷ್ಟು ಪಡೆಗಳನ್ನು ಕಳುಹಿಸಲು ಸಿದ್ಧತೆ ನಡೆಯುತ್ತಿದೆ. ಸೇನಾ ನಿಯೋಜನೆ ಹೆಚ್ಚಿಸುವ ಕುರಿತು ಗುರುವಾರ ತುರ್ತು ಸಭೆ ನಡೆಯಲಿದೆ ಎಂದು ನ್ಯಾಟೊಪಡೆಗಳ ಮುಖ್ಯಸ್ಥ ಜೆನ್ಸ್ ಸ್ಟೋಲ್ಟೆನ್‌ಬರ್ಗ್‌ ಹೇಳಿದ್ದಾರೆ.

ಪೂರ್ವಭಾಗದ ನ್ಯಾಟೊ ಸದಸ್ಯ ದೇಶಗಳಾದ ಬಲ್ಗೇರಿಯಾ, ಹಂಗೆರಿ, ರೊಮೇನಿಯಾ ಹಾಗೂ ಸ್ಲೊವಾಕಿಯಾಗಳಿಗೆ ನಾಲ್ಕು ಸಮರ ಪಡೆಗಳನ್ನು ಕಳುಹಿಸುವ ಸಂಬಂಧ ಗುರುವಾರ ಸಹಿ ಬೀಳುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ. ನ್ಯಾಟೊ ಪಡೆಯ ಸಾವಿರಾರು ಸೈನಿಕರನ್ನು ರಷ್ಯಾದ ಗಡಿಗಳಿಗೆ ಈಗಾಗಲೇ ಕಳುಹಿಸಲಾಗಿದೆ. ನಾಲ್ಕು ವಾರಗಳ ಯುದ್ಧದಲ್ಲಿ ರಷ್ಯಾದ 7 ಸಾವಿರದಿಂದ 15 ಸಾವಿರ ಸೈನಿಕರು ಮೃತಪಟ್ಟಿದ್ದಾರೆ ಎಂದು ನ್ಯಾಟೊ ಬುಧವಾರ ಹೇಳಿದೆ.

*
ರಷ್ಯಾದ ಪೈಲಟ್‌ಗಳಿಗಿಂತಲೂ ರಷ್ಯಾ ಟಿ.ವಿ ಸುದ್ದಿ ನಿರೂಪಕರು ಅಪಾಯಕಾರಿ. ಪೈಲಟ್‌ಗಳು ಗುಂಡು ಹಾರಿಸಬಹುದು. ಆದರೆ, ಅವರು ಅಣು ದಾಳಿಗೆ ಪ್ರಚೋದಿಸಿ ನಿಶ್ಚಿಂತೆಯಿಂದ ನಿದ್ದೆ ಮಾಡುತ್ತಾರೆ.
-ಡಿಮಿಟ್ರೊ ಕುಲೆಬಾ, ಉಕ್ರೇನ್‌ ವಿದೇಶಾಂಗ ಸಚಿವ

**

28ನೇ ದಿನದ ಬೆಳವಣಿಗೆಗಳು

* ಚೆರ್ನೊಬಿಲ್ ಅಣು ವಿದ್ಯುತ್ ಸ್ಥಾವರದಲ್ಲಿನ ವಿಕಿರಣ ತ್ಯಾಜ್ಯಗಳ ನಿರ್ವಹಣೆಗೆ ಸ್ಥಾಪಿಸಿದ್ದ ಹೊಸ ಪ್ರಯೋಗಾಲಯವನ್ನುರಷ್ಯಾ ಪಡೆಗಳು ಲೂಟಿ ಮಾಡಿ, ಶೆಲ್‌ ದಾಳಿಯಿಂದ ನಾಶಪಡಿಸಿವೆ

* ಹಾಸ್ಟೊಮೆಲ್‌ ಮತ್ತು ಇರ್ಪಿನ್‌ ನಗರಗಳ ಮೇಲೆ ರಷ್ಯಾ ಮಂಗಳವಾರ ನಡು ರಾತ್ರಿ ನಿಷೇಧಿತ ಫಾಸ್ಫರಸ್‌ ಬಾಂಬ್‌ ದಾಳಿ ನಡೆಸಿದೆ– ಇರ್ಪಿನ್‌ ಮೇಯರ್‌ ಓಲೆಕ್ಸಾಂದರ್‌ ಮಾರ್ಕುಶಿನ್‌ ಹೇಳಿಕೆ

* ಸ್ನೇಹಿತವಲ್ಲದ ದೇಶಗಳುರಷ್ಯಾದ ಇಂಧನ ಖರೀದಿಗೆ ರೂಬಲ್‌ ಮೂಲಕವೇ ಹಣ ಪಾವತಿಸಬೇಕು, ಈ ಬದಲಾವಣೆ ಒಂದು ವಾರದೊಳಗೆ ಜಾರಿಯಾಗಬೇಕು– ವ್ಲಾಡಿಮಿರ್‌ ಪುಟಿನ್‌ ಆದೇಶ

* ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿ ಮರು ಸ್ಥಾಪಿಸಲು ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಜತೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುಯಲ್‌ ಮ್ಯಾಕ್ರಾನ್‌ ಮಾತುಕತೆ ನಡೆಸಿದರು

* ರಷ್ಯಾದ ಯುದ್ಧ ವಿಮಾನಗಳು ಮತ್ತು ಟ್ಯಾಂಕ್‌ಗಳನ್ನು ಹೊಡೆದುರುಳಿಸಲು ಶಸ್ತ್ರಾಸ್ತ್ರಗಳು ಶೀಘ್ರ ಖಾಲಿಯಾಗುತ್ತಿವೆ ಎಂದಿರುವ ಉಕ್ರೇನ್‌, ಮತ್ತಷ್ಟು ಶಸ್ತ್ರಾಸ್ತ್ರ ಪೂರೈಸುವಂತೆಜರ್ಮನಿ ಮತ್ತು ಫ್ರಾನ್ಸ್‌ಗೆ ಮನವಿ ಮಾಡಿದೆ

* ಜಿ–20 ಸದಸ್ಯ ರಾಷ್ಟ್ರಗಳ ಗುಂಪಿನಿಂದ ರಷ್ಯಾವನ್ನು ಹೊರಗೆ ಹಾಕಲು ಕೆಲವು ರಾಷ್ಟ್ರಗಳು ಒತ್ತಾಯಿಸಿವೆ. ಚೀನಾ ಇದಕ್ಕೆ ನಿರಾಕರಿಸಿದೆ

* ಪೋಲೆಂಡ್‌ನಲ್ಲಿ ನಡೆಯಲಿರುವ ನ್ಯಾಟೊ ಸಮ್ಮೇಳನಕ್ಕೆ ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ವರ್ಚುವಲ್‌ ಮೂಲಕ ಭಾಗವಹಿಸಲಿದ್ದಾರೆ

* ರಷ್ಯಾದ ರಾಜತಾಂತ್ರಿಕರನ್ನು ಉಚ್ಚಾಟಿಸುವುದಾಗಿ ಪೋಲೆಂಡ್‌ ಘೋಷಿಸಿದೆ

* ರಷ್ಯಾದ ಕ್ಷಿಪಣಿ ಕೀವ್‌ ನಗರದ ಆಹಾರ ಗೋದಾಮನ್ನು ಧ್ವಂಸಗೊಳಿಸಿದೆ

* ಕೀವ್‌ ನಗರ ಮತ್ತು ಚೆರ್ನಿವ್‌ ನಡುವಿನ ಪ್ರಮುಖ ಸಂಪರ್ಕ ಸೇತುವೆಯನ್ನು ರಷ್ಯಾ ಪಡೆಗಳು ಸ್ಫೋಟಿಸಿವೆ. ಚೆರ್ನಿವ್‌ನಲ್ಲಿ ವಿದ್ಯುತ್ ಸ್ಥಗಿತವಾಗಿದ್ದು, ನಾಗರಿಕರಿಗೆ ಆಹಾರವೂ ಇಲ್ಲದಂತಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT