ಎಲ್ಲೆಡೆ ಹಬ್ಬದ ಸಡಗರ, ವ್ಯಾಪಾರ ಭರಪೂರ

ಚಿಕ್ಕಬಳ್ಳಾಪುರ: ಗಣೇಶ ಚತುರ್ಥಿ ಮುನ್ನಾದಿನವಾದ ಬುಧವಾರ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಭರಾಟೆ ಬಲು ಜೋರಾಗಿತ್ತು. ಹಬ್ಬದ ಕಾರಣ ಹೂವು, ಹಣ್ಣಿನ ಬೆಲೆಯಲ್ಲಿ ಕೊಂಚ ಹೆಚ್ಚಳವಾಗಿತ್ತು.

ಬಿ.ಬಿ.ರಸ್ತೆಯ ಇಕ್ಕೆಲಗಳಲ್ಲಿ ಬೆಳಿಗ್ಗೆಯಿಂದಲೇ ಗಣಪತಿ ಮೂರ್ತಿಗಳ ವ್ಯಾಪಾರ ಜೋರಾಗಿ ನಡೆದಿತ್ತು. ಮನೆಯಲ್ಲಿ ಇಡುವ ಪುಟಾಣಿ ಮೂರ್ತಿಯಿಂದ ಹಿಡಿದು ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ದೊಡ್ಡ ಮೂರ್ತಿಗಳ ವ್ಯಾಪಾರದ ಚೌಕಾಸಿ ಎಲ್ಲೆಡೆ ಕಂಡುಬಂತು.

ವರಮಹಾಲಕ್ಷ್ಮೀ ಹಬ್ಬದ ಸಮಯದಲ್ಲಿ ಗಗನಮುಖಿಯಾಗಿದ್ದ ಹೂವುಗಳ ಬೆಲೆ ಇಳಿಕೆಯಾಗಿದೆಯಾದರೂ ಬುಧವಾರ ಮಾರುಕಟ್ಟೆಯಲ್ಲಿ ಸಾಮಾನ್ಯ ದಿನಕ್ಕಿಂತಲೂ ತುಸು ಹೆಚ್ಚೇ ಇತ್ತು. ಕನಕಾಂಬರ ಒಂದು ಕೆ.ಜಿಗೆ ಗರಿಷ್ಠ ₹ 800, ಅದೇ ರೀತಿ ಮಲ್ಲಿಗೆ ಹೂವು ₹ 1,000ಕ್ಕೆ, ಕಾಕಡ ₹ 600, ಸೇವಂತಿಗೆ ₹ 120, ರೋಸ್‌ ₹ 160, ಬಟನ್ಸ್ ₹ 120ರ ಗಡಿಯಲ್ಲಿ ಮಾರಾಟವಾಗುತ್ತಿದ್ದವು.

ಹಣ್ಣುಗಳ ಪೈಕಿ ಏಲಕ್ಕಿ ಬಾಳೆ ಹೊರತುಪಡಿಸಿದಂತೆ ಉಳಿದ ಹಣ್ಣುಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಆಸ್ಟ್ರೇಲಿಯಾದಿಂದ ಆಮದುಗೊಂಡ ವಾಷಿಂಗ್ಟನ್ ಸೇಬು ಒಂದು ಕೆ.ಜಿಗೆ ಗರಿಷ್ಠ ₹ 180, ಶಿಮ್ಲಾ ಸೇಬು ₹ 100, ಕಿತ್ತಳೆಹಣ್ಣು ₹ 80, ದಾಳಿಂಬೆ ₹ 80ಕ್ಕೆ ಮಾರಾಟವಾಗುತ್ತಿದ್ದವು.

ಏಲಕ್ಕಿ ಬಾಳೆ ಕೆ.ಜಿ.ಗೆ ₹ 90 ರಂತೆ ಮಾರಾಟವಾಗುತ್ತಿತ್ತು. ಪಚ್ಚೆ ಬಾಳೆ ₹ 35ವರೆಗೆ ಬಿಕರಿಯಾಗುತ್ತಿತ್ತು. ಫೈನಾಫಲ್‌ ಒಂದು ಜೋಡಿಗೆ ಗಾತ್ರಕ್ಕೆ ಅನುಸಾರವಾಗಿ ₹ 40 ರಿಂದ ₹ 70ರ ವರೆಗೆ ಮಾರಾಟ ಮಾಡಲಾಗುತ್ತಿತ್ತು. ಚಿಕ್ಕ ಬಾಳೆಕಂದು ಜೋಡಿಗೆ ₹ 30, ದೊಡ್ಡ ಕಂದುಗಳು ₹ 50 ರಂತೆ ಮಾರಾಟವಾಗುತ್ತಿದ್ದವು.

ಇನ್ನು ಬಜಾರ್ ರಸ್ತೆ, ಎಂ.ಜಿ.ರಸ್ತೆ, ಸಂತೆ ಮಾರುಕಟ್ಟೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಬೀದಿಬದಿ ಹಬ್ಬದ ವ್ಯಾಪಾರ ಬೆಳಿಗ್ಗೆಯಿಂದಲೇ ಆರಂಭಗೊಂಡಿತು. ಸಂಜೆಯ ಹೊತ್ತಿಗಾಗಲೇ ಮಾರುಕಟ್ಟೆ ಪ್ರದೇಶಗಳಲ್ಲಿ ಜನದಟ್ಟಣೆ ಹೆಚ್ಚಾಗಿ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿತ್ತು. ಹಬ್ಬದ ವಹಿವಾಟು ರಾತ್ರಿಯ ತನಕವೂ ಮುಂದುವರಿದಿತ್ತು.

ರಸ್ತೆಯ ಇಕ್ಕೆಲಗಳಲ್ಲಿ ಹಣ್ಣು, ಹೂವು, ತೆಂಗಿನಕಾಯಿ, ಗರಿಕೆ ಪತ್ರೆ, ಬಾಳೆಕಂದು, ಮಾವಿನಸೊಪ್ಪು, ಸಿಹಿ ತಿನಿಸುಗಳ ತಾತ್ಕಾಲಿಕ ಅಂಗಡಿ ತೆರೆದ ವ್ಯಾಪಾರಸ್ಥರು, ರಸ್ತೆಯಲ್ಲಿ ಸಾಗುತ್ತಿದ್ದ ಗ್ರಾಹಕರನ್ನು ತಮ್ಮತ್ತ ಸೆಳೆಯುವಲ್ಲಿ ಪೈಪೋಟಿ ನಡೆಸಿದ್ದರು.

ಪ್ರಮುಖ ಸುದ್ದಿಗಳು