ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ: ಬಿಜೆಪಿ ಮಾಜಿ ಶಾಸಕ ನೆಹರು ಓಲೇಕಾರ ಕಾಂಗ್ರೆಸ್‌ ಸೇರ್ಪಡೆ

Published 1 ಮೇ 2024, 15:33 IST
Last Updated 1 ಮೇ 2024, 15:33 IST
ಅಕ್ಷರ ಗಾತ್ರ

ಹಾವೇರಿ: 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ, ಒಂದು ವರ್ಷದಿಂದ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದ ಬಿಜೆಪಿ ಮಾಜಿ ಶಾಸಕ ನೆಹರು ಓಲೇಕಾರ ಅವರು ಬುಧವಾರ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. 

ಯಾದಗಿರಿಯಲ್ಲಿ ಬುಧವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಓಲೇಕಾರ ಕಾಂಗ್ರೆಸ್ ಸೇರಿದ್ದಾರೆ.

ಮತದಾನಕ್ಕೆ ಇನ್ನು 5 ದಿನ ಬಾಕಿ ಇರುವಾಗ ಓಲೇಕಾರ ಕಾಂಗ್ರೆಸ್‌ ಸೇರ್ಪಡೆ ಆಗಿದ್ದರಿಂದ ಯಾರಿಗೆ ಲಾಭ, ಯಾರಿಗೆ ನಷ್ಟ ಎಂಬ ಬಗ್ಗೆ ಕ್ಷೇತ್ರದಲ್ಲಿ ಚರ್ಚೆ ಶುರುವಾಗಿದೆ. ಕೆಲ ದಿನಗಳ ಹಿಂದೆ ಬಿಜೆಪಿಯ ಚುನಾವಣಾ ಪ್ರಚಾರ ಸಭೆಗೆ ಬರಲಿದ್ದಾರೆ ಎಂಬ ವದಂತಿ ಹರಡಿತ್ತು. ಆಗ ಬಿಜೆಪಿಯ ಇಬ್ಬರು ಮಾಜಿ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಬ್ಯಾಡಗಿ ಕ್ಷೇತ್ರದಿಂದ ಒಂದು ಬಾರಿ, ಹಾವೇರಿ ಎಸ್ಸಿ ಮೀಸಲು ಕ್ಷೇತ್ರದಿಂದ ಎರಡು ಬಾರಿ ಗೆದ್ದಿರುವ ನೆಹರು ಓಲೇಕಾರ ಅವರಿಗೆ ಕಳೆದ ವಿಧಾನಸಭೆ ಟಿಕೆಟ್ ಕೈತಪ್ಪಿತ್ತು. ಜಿಲ್ಲೆಯವರೇ ಆದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದಾಗ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣ ಓಲೇಕಾರ ಅವರಿಗೆ ಟಿಕೆಟ್‌ ಕೈತಪ್ಪಿತ್ತು ಎನ್ನಲಾಗಿದೆ.

‘ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಬಂದಿದ್ದಾರೆ. ರಾಜಕೀಯ ಸ್ಥಿತ್ಯಂತರ ಸಹಜ ಪ್ರಕ್ರಿಯೆ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಬಂದರೂ ಸರಿಪಡಿಸಿಕೊಂಡು ಹೋಗುತ್ತೇವೆ. ನಮ್ಮ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತಿಸುತ್ತೇವೆ’ ಎಂದು ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ತಿಳಿಸಿದ್ದಾರೆ. 

‘ಬಸವರಾಜ ಬೊಮ್ಮಾಯಿ ಅವರ ಸ್ವಜನ ಪಕ್ಷಪಾತ, ಸರ್ವಾಧಿಕಾರಿ ಧೋರಣೆಯಿಂದ ಬೇಸತ್ತು ನಾನು ಕಾಂಗ್ರೆಸ್ ಸೇರಿದ್ದೇನೆ. ಪಕ್ಷದಲ್ಲಿ ನನ್ನನ್ನು ಕಡೆಗಣಸಿದ್ದಕ್ಕೆ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸಿದ್ಧಾಂತ ಒಪ್ಪಿಕೊಂಡು ಹೋಗಿದ್ದೇನೆ’ ಎಂದು ಮಾಜಿ ಶಾಸಕ ನೆಹರು ಓಲೇಕಾರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT