‘ಮಕ್ಕಳಿಗೆ ಪಠ್ಯಪುಸ್ತಕಗಳನ್ನೇ ಓದಲು ಸಮಯವಿಲ್ಲ, ಇನ್ನು ಬೇರೆ ಪುಸ್ತಕಗಳನ್ನು ಯಾವಾಗ ಓದುತ್ತಾರೆ’ ಎನ್ನುವ ಮಾತು ಪೋಷಕರು, ಶಿಕ್ಷಕರಿಂದ ಆಗಾಗ ಕೇಳಿಬರುತ್ತದೆ. ಆದರೆ ಬಾಲ್ಯದಲ್ಲೇ ಓದುವ ರುಚಿ ಹತ್ತಿಸಿಕೊಂಡವರು ಮಾತ್ರ ಪಠ್ಯ ಮತ್ತು ಪಠ್ಯೇತರ ಪುಸ್ತಕಗಳನ್ನು ಓದುತ್ತಾ ಹಾಯಾಗಿದ್ದಾರೆ.

ಪುಸ್ತಕ ಮೇಳವೊಂದರಲ್ಲಿ ಓದಿನಲ್ಲಿ ಮಗ್ನರಾಗಿರುವ ಮಕ್ಕಳು

ನಾನು ಚಿಕ್ಕವಳಿದ್ದಾಗ ನನ್ನ ತಂದೆಯ ಕಂಪ್ಯೂಟರಿನಲ್ಲಿ ಪಂಚತಂತ್ರ, ತೆನಾಲಿ ರಾಮ ಸೇರಿದಂತೆ ವಿವಿಧ ಕಥೆಗಳನ್ನು ನೋಡುತ್ತಿದ್ದೆ. ನಂತರ ಅಕ್ಷರ ಕಲಿಯಲು ಪ್ರಾರಂಭಿಸಿದಾಗ, ಚಿತ್ರಸಹಿತ ಕಥೆ ಪುಸ್ತಕಗಳನ್ನು ಓದಲು ಶುರು ಮಾಡಿದೆ. ಅವುಗಳ ಅರ್ಥ ತಿಳಿಯುತ್ತ, ಪುಸ್ತಕ ಓದುವ ಕುತೂಹಲ ಬೆಳೆಯಿತು. ಬರುಬರುತ್ತ ಮಹಾನ್ ನಾಯಕರು, ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆ ಓದಲು ಶುರು ಮಾಡಿದೆ. ಶಾಲೆಯ ಪಠ್ಯಪುಸ್ತಕಗಳಿಗಿಂತ ನನಗೆ ಪಠ್ಯೇತರ ಪುಸ್ತಕಗಳನ್ನು ಓದುವ ಹವ್ಯಾಸ ಹೆಚ್ಚು. ಪ್ರತಿ ದಿನ ನಿದ್ದೆ ಮಾಡುವ ಮೊದಲಿಗೆ ಪುಸ್ತಕ ಓದುವ ಅಭ್ಯಾಸವಿದೆ.--ಮಹತಿ ಪಿ.
ಅಕ್ಷರ ಕಲಿತ ದಿನದಿಂದ ಶಾಲೆಯ ಪುಸ್ತಕದ ಜೊತೆಗೆ ಬೇರೆ ಪುಸ್ತಕಗಳನ್ನೂ ಓದಲು ಶುರು ಮಾಡಿದೆ ಎನ್ನುವುದಕ್ಕಿಂತ ಓದುವ ಅಭ್ಯಾಸವನ್ನು ಹೆತ್ತವರು ಮಾಡಿಸಿದರು. ನನ್ನ ಮೊದಲ ಓದು ಡಿಸ್ನಿ ರಾಜಕುಮಾರಿಯರ ಕಥೆಗಳಿಂದ ಶುರುವಾಯ್ತು. ನಿಧಾನವಾಗಿ ಇಷ್ಟದ ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳು ಓದಲು ಶುರು ಮಾಡಿದೆ. ಸುಧಾಮೂರ್ತಿ ಅವರ ಎಲ್ಲಾ ಪುಸ್ತಕಗಳನ್ನೂ ಓದಿರುವೆ. ಹಾಗೆ ಜಾರೋನಿಮೋ, ಮ್ಯಾಜಿಕ್ ಟ್ರೀ, ಡೇವಿಡ್ ವಿಲಿಯಮ್ಸ್, ಎನಿಡ್ ಬ್ಲಿಯಟನ್, ರೊಲ್ ಧಾಲ್ ಪುಸ್ತಕಗಳು, ಮಹಿಳಾ ಸಾಧಕಿಯರ ರೆಬೆಲ್ ಗರ್ಲ್ ಸಿರೀಸ್, ವಿಮೆನ್ ಸೈಂಟಿಸ್ಟ್ಸ್ ಆಫ್ ಇಂಡಿಯಾ, ಗರ್ಲ್ಸ್ ಹೂ ರಾಕ್ ದಿ ವರ್ಲ್ಡ್, ಕೆಮಿಸ್ಟ್ರಿ ಫಾರ್ ಬ್ರೇಕ್ಫಾಸ್ಟ್, ಗ್ರೀನ್ ಹುಮೋರ್ ಜೊತೆಗೆ ವಿಜ್ಞಾನದ ಎನ್ಸೈಕ್ಲೊಪೀಡಿಯ, ಆಟೊಮಿಕ್ ಹ್ಯಾಬಿಟ್ ನಂತಹ ಸೆಲ್ಫ್ ಹೆಲ್ಪ್ ಪುಸ್ತಕಗಳು. ಹೀಗೆ ನನ್ನ ಓದು ವಿಸ್ತರವಾಗುತ್ತಾ ಹೋಗಿದೆ. ತೀರಾ ಇತ್ತೀಚೆಗೆ ಗ್ರೀಕ್ ಮೈಥಾಲಜಿ ಪುಸ್ತಕ ಕೂಡ ಆಸಕ್ತಿಯಿಂದ ಓದುತ್ತಿರುವೆ.-ಅನನ್ಯ, ಮೂಕನಹಳ್ಳಿ
ನಾನು ನಾಲ್ಕನೇ ತರಗತಿ ವಿದ್ಯಾರ್ಥಿ. ನಮ್ಮೂರಿನ ಗ್ರಾಮ ಪಂಚಾಯಿತಿಯ ಗ್ರಂಥಾಲಯದಲ್ಲಿ ಓದುತ್ತೇನೆ. ದಿ ಸಿಂಗಿಂಗ್ ಡಾಂಕಿ ಅನ್ನುವ ಪುಸ್ತಕ ಓದಿರುವೆ. ಅದು ಭಾರಿ ಖುಷಿ ಕೊಟ್ಟಿತು. ಕತ್ತೆ ಅಂತ ಬೈಯ್ಯುವುದು ಮಾತ್ರ ಗೊತ್ತಿತ್ತು. ಹಾಡುವ ಕತ್ತೆ ಅಂದಾಗ ಸಹಜವಾಗಿಯೇ ಕುತೂಹಲ ಹುಟ್ಟಿತು. ಗ್ರಂಥಾಲಯದಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಯ ಪುಸ್ತಕಗಳು ಸಿಗುತ್ತವೆ. ರಸ್ಕಿನ್ ಬರೆದ ಮಕ್ಕಳ ಕಥೆಗಳು ಇಷ್ಟ. ಪುಸ್ತಕಗಳೊಂದಿಗೆ ದಿನಪತ್ರಿಕೆ, ವಾರಪತ್ರಿಕೆಗಳನ್ನೂ ಓದುತ್ತೇನೆ.-ಕುಮಾರಸ್ವಾಮಿ, ಹೊಸಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.